ಪಣಜಿ: ಪ್ರವಾಸೋದ್ಯಮ ಇಲಾಖೆ ಇತ್ತೀಚೆಗೆ ಘೋಷಿಸಿದ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತಿದೆ ಮತ್ತು ಕಳೆದ ಹತ್ತು ದಿನಗಳಲ್ಲಿ ಸುಮಾರು 100 ಪ್ರಕರಣಗಳಿಗೆ ತಲಾ 5 ರಿಂದ 10 ಸಾವಿರ ರೂ. ದಂಡ ವಿಧಿಸಲಾಗಿದೆ ಎಂದು ಗೋವಾ ರಾಜ್ಯ ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ನಿಖಿಲ್ ದೇಸಾಯಿ ಮಾಹಿತಿ ನೀಡಿದ್ದಾರೆ. ಅಕ್ರಮ ವ್ಯವಹಾರ ನಡೆಸುವ ದಲ್ಲಾಳಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಪಣಜಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಕೆಲ ದಿನಗಳ ಹಿಂದೆ ಅರೋಸ್ಸಿಂ ಬೀಚ್‍ಗೆ ವಾಹನ ತೆಗೆದುಕೊಂಡು ಹೋದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಕ್ರಮದ ಮೂಲಕ ಪ್ರಥಮ ಬಾರಿಗೆ ಕ್ರಮ ಕೈಗೊಂಡಿದ್ದು, ಮುಂದೆ ರಾಜ್ಯದಲ್ಲಿ ಕಾನೂನು ಉಲ್ಲಂಘನೆಯನ್ನು ಸಹಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶ ನೀಡಲಾಗುವುದು ಎಂದರು.
ಈ ವ್ಯಕ್ತಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಈಗ ವಿಚಾರಣೆಗೆ ಹಾಜರಾಗಬೇಕಿದೆ. ಪ್ರವಾಸಿಗರು ಗೋವಾಕ್ಕೆ ಬಂದು ಏನು ಬೇಕಾದರೂ ಮಾಡುವ ಮನೋಭಾವ ಬದಲಿಸಿಕೊಳ್ಳಬೇಕು. ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದರೆ ಪ್ರವಾಸೋದ್ಯಮದ ಉದ್ಯೋಗಿಗಳು ಧ್ವನಿ ಎತ್ತಬೇಕು ಎಂದು ಮನವಿ ಮಾಡಿದರು.
ಪ್ರವಾಸೋದ್ಯಮ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುತ್ತಿರುವುದರಿಂದ ಇದು ತಕ್ಷಣವೇ ಯಶಸ್ವಿಯಾಗುತ್ತದೆ ಎಂದು ಭಾವಿಸುವುದು ಮೂಲಭೂತವಾಗಿ ತಪ್ಪು. ಏಕೆಂದರೆ ಈಗಷ್ಟೇ ಶುರುವಾಗಿದೆ. ಕಡಿಮೆ ಅವಧಿಯಲ್ಲೂ ತಕ್ಕಮಟ್ಟಿಗೆ ಅನುಷ್ಠಾನವಾಗಿದೆ. ಬೀಚ್‍ನಲ್ಲಿ ವಾಹನ ಚಾಲನೆ ಬಹುತೇಕ ಸ್ಥಗಿತಗೊಂಡಿದೆ. ಪ್ರವಾಸೋದ್ಯಮ ಪೊಲೀಸರ ಕೊರತೆಯ ನಡುವೆಯೂ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ನೋಂದಣಿ ಇಲ್ಲದೆ ವ್ಯವಹರಿಸುವ ಹೋಟೆಲ್‍ಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತಿದೆ. ವಾರಕ್ಕೆ ಎರಡು ಬಾರಿಯಾದರೂ ನೋಂದಣಿಯಾಗದ ಹೋಟೆಲ್ ಗಳನ್ನು ಇಲಾಖೆ ತಪಾಸಣೆ ನಡೆಸುತ್ತಿದೆ. ಈ ಸಂಬಂಧ ಹೋಟೆಲ್ ಗಳಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ನೋಂದಣಿ ಮಾಡದಿದ್ದಲ್ಲಿ ನೀರು, ವಿದ್ಯುತ್ ಸಂಪರ್ಕವನ್ನು ಸೀಲ್ ಮಾಡಿ ಸಂಪರ್ಕ ಕಡಿತಗೊಳಿಸಲಾಗುವುದು. ಅಲ್ಲದೆ, ಕರಾವಳಿ ಪ್ರದೇಶಗಳಲ್ಲಿನ ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸಲಾಗುತ್ತಿದೆ ಎಂದು ಹೇಳಿದರು.