Advertisement

ಪೋಷಕರನ್ನು ನಿರ್ಲಕ್ಷಿಸುವವರ ವಿರುದ್ದ ಕಠಿಣ ಕ್ರಮ

04:49 PM Apr 24, 2022 | Niyatha Bhat |

ಶಿವಮೊಗ್ಗ: ಪೋಷಕರಿಂದ ಆಸ್ತಿ, ಅಂತಸ್ತು ಮತ್ತಿತರ ಎಲ್ಲಾ ಸೌಲಭ್ಯವನ್ನು ಪಡೆದು, ಅಂತಿಮವಾಗಿ ವಯಸ್ಕರಾದ ಪೋಷಕರನ್ನು ನಿರಾಶ್ರಿತರನ್ನಾಗಿಸಿ ಬೀದಿಗೆ ತಳ್ಳುವ ಮಕ್ಕಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ದೂರು ದಾಖಲಿಸುವಂತೆ ಜಿಲ್ಲಾಧಿಕಾರಿ ಡಾ| ಆರ್.ಸೆಲ್ವಮಣಿ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಶನಿವಾರ ತಮ್ಮ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅನುಷ್ಠಾನದಲ್ಲಿರುವ ವಿವಿಧ ಕಾರ್ಯಕ್ರಮಗಳ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜೀವನದ ಸಂಧ್ಯಾಕಾಲದಲ್ಲಿ ಪೋಷಕರನ್ನು ರಕ್ಷಿಸಬೇಕಾದ ಮಕ್ಕಳು ತಮ್ಮ ಹೆತ್ತವರನ್ನು ನಿರ್ಲಕ್ಷಿಸುತ್ತಿರುವುದು ಅಕ್ಷಮ್ಯ ಎಂದ ಅವರು, ಸಂಬಂಧಿತ ಇಲಾಖಾ ಅಧಿಕಾರಿಗಳು ಸರ್ಕಾರದ ನೆರವಿನೊಂದಿಗೆ ಸ್ಥಳೀಯ ಸಂಘ-ಸಂಸ್ಥೆಗಳ ಸಹಕಾರವನ್ನು ಪಡೆದು, ಸಂತ್ರಸ್ತರ ನೆರವಿಗೆ ಧಾವಿಸುವಂತೆ ಸೂಚಿಸಿದರು. ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅಲ್ಲಲ್ಲಿ ಬಾಲ್ಯ ವಿವಾಹಗಳು ನಡೆಯುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಬಾಲ್ಯವಿವಾಹವನ್ನು ಪ್ರೋತ್ಸಾಹಿಸುವ, ಪ್ರೇರೇಪಿಸುವ ಹಾಗೂ ಬಾಲ್ಯವಿವಾಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಪ್ರತಿಯೊಬ್ಬರ ಮೇಲೂ ದೂರು ದಾಖಲಿಸಬೇಕು. ಇದರಲ್ಲಿ ವಿವಾಹ ಆಮಂತ್ರಣ ಮುದ್ರಿಸಿದ ಮುದ್ರಕರನ್ನು ಸೇರಿಸಿ ದೂರು ದಾಖಲಿಸಬೇಕೆಂದರು.

ಬಾಲ್ಯವಿವಾಹ ನಿಯಂತ್ರಿಸುವಲ್ಲಿ ಎಲ್ಲರೂ ಶ್ರಮಿಸಬೇಕು. ವಿಶೇಷವಾಗಿ ಮಕ್ಕಳ ಪೋಷಕರು ತಮ್ಮ ಮಕ್ಕಳ ಉಜ್ವಲ ಭವಿಷ್ಯದ ಬಗ್ಗೆ ಗಮನ ಹರಿಸಬೇಕು. ಬಾಲ್ಯವಿವಾಹದಂತಹ ಪ್ರಕರಣಗಳು ನಡೆಯುವ ಮುನ್ನ ಸ್ಥಳೀಯವಾಗಿರುವ ಶಾಲಾ ಶಿಕ್ಷಕರು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಗಮನ ಹರಿಸಿ ನಿಯಂತ್ರಣಕ್ಕೆ ಮುಂದಾಗಬೇಕೆಂದರು.

ಆರೋಗ್ಯ ಇಲಾಖೆಯ ಆರ್‌.ಸಿ.ಎಚ್. ಲೈನ್‌ ಲಿಸ್ಟ್‌ನಲ್ಲಿ ದಾಖಲಾಗಿರುವ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಗತಿ ಮಾಹಿತಿಯಲ್ಲಿ ದಾಖಲಾಗಿರುವ ಗರ್ಭಿಣಿ-ಬಾಣಂತಿಯರ, ಜನಿಸಿದ ಮಕ್ಕಳ ಅಂಕಿ-ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ವ್ಯತ್ಯಾಸಗಳಿವೆ. ಇದನ್ನು ಸರಿದೂಗಿಸಲು ಮಹಿಳಾ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಮನೆ- ಮನೆ ಭೇಟಿ ಮಾಡಿ ಸಮೀಕ್ಷೆ ನಡೆಸಿ, ಸಭೆಗೆ ವರದಿ ನೀಡುವಂತೆ ಸೂಚಿಸಿದರು.

Advertisement

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಧನದೊಂದಿಗೆ ಅನೇಕ ಸ್ವಯಂ ಸೇವಾ ಸಂಸ್ಥೆಗಳು ವಿವಿಧ ಯೋಜನೆಯ ಅನುಷ್ಠಾನಕ್ಕಾಗಿ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಅಲ್ಲಿನ ಕಾರ್ಯಚಟುವಟಿಕೆಗಳನ್ನು ಖುದ್ದು ಭೇಟಿ ನೀಡಿ ಪರಿಶೀಲಿಸಬೇಕು. ಬಾಲ ನ್ಯಾಯ ಮಂಡಳಿಯಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ 6 ತಿಂಗಳುಗಳಿಗಿಂತ ಹೆಚ್ಚಿನ ಸಮಯದಿಂದ ಇತ್ಯರ್ಥವಾಗದೆ ಬಾಕಿ ಉಳಿದಿರುವ ಪ್ರಕರಣಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಹಾಗೂ ಕಾಯ್ದೆಯ ಸಮರ್ಪಕ ಅನುಷ್ಠಾನಕ್ಕೆ ಶ್ರಮಿಸುವಂತೆ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿದ್ದ ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ಅವರು ಮಾತನಾಡಿ, ಜಿಲ್ಲೆಯ ವಿವಿಧ ತಾಲೂಕುಗಳಲ್ಲಿನ ಅಂಗನವಾಡಿಗಳ ನೂತನ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದ್ದು, ಕಟ್ಟಡಗಳು ನಿರ್ಮಾಣ ಹಂತದಲ್ಲಿವೆ. ಆದರೆ, ಕೊರತೆಯಾಗಿರುವ ಅನುದಾನದಿಂದಾಗಿ ಕಟ್ಟಡಗಳು ಅಪೂರ್ಣ ಸ್ಥಿತಿಯಲ್ಲಿವೆ. ಈ ಕಟ್ಟಡ ಕಾಮಗಾರಿಗಳು ಪೂರ್ಣಗೊಳ್ಳಲು ಕೊರತೆಯಿರುವ ಅನುದಾನವನ್ನು ಜಿಪಂನಿಂದಲೇ ಭರಿಸಿ ಪೂರ್ಣಗೊಳಿಸಲಾಗುವುದು ಎಂದರು.

ಸಭೆಯಲ್ಲಿ ಪರಿವರ್ತನಾ ಸಂಸ್ಥೆಯ ನಿರ್ದೇಶಕ ಶಂಕರಪ್ಪ, ಜಿಪಂ ಉಪಕಾರ್ಯದರ್ಶಿ ಟಿ. ಮಲ್ಲಿಕಾರ್ಜುನ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಜಿ.ಜಿ. ಸುರೇಶ್‌, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ನಾಗರಾಜ್‌, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ರೇಖಾ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next