ಹಾಸನ: ಅಕ್ರಮ ಮರಳು ಮತ್ತು ಕಲ್ಲು ಗಣಿಗಾರಿಕೆ ಅನಧಿಕೃತವಾಗಿ ಸಾಗಾಣಿಕೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಕಲ್ಲು ಗಣಿಗಾರಿಕೆ ಗುತ್ತಿಗೆಯ ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಅಕ್ರಮ ಮರಳು ಸಾಗಣೆ ನಿಯಂತ್ರಿಸಲು ಅಧಿಕಾರಿಗಳು ನಿಗಾ ವಹಿಸಬೇಕು. ಸಾಗಾಣಿಕೆ ನಡೆಸುವವರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಜರುಗಿಸಬೇಕೆಂದು ನಿರ್ದೇಶನ ನೀಡಿದರು. ಹಾಸನ ಜಿಲ್ಲಾ ವ್ಯಾಪ್ತಿಯಲ್ಲಿ ಮಂಜೂರು ಮಾಡಿರುವ ಮರಳು ಗುತ್ತಿಗೆ ಪ್ರದೇಶದಿಂದ ಮರಳನ್ನು ಎತ್ತುವಳಿ ಮಾಡಿ ಗ್ರಾಹಕರಿಗೆ ಇಂದಿನಿಂದಲೇ ಮರಳು ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈಗಾಗಲೇ ಜಿಲ್ಲೆಯಲ್ಲಿ ಸ್ಥಾಪಿಸಲಾಗಿರುವ ಪೊಲೀಸ್, ವಾಣಿಜ್ಯ ತೆರಿಗೆ, ಅರಣ್ಯ ಹಾಗೂ ಅಬಕಾರಿ ಚೆಕ್‌ಪೋರ್ಸ್ ಗಳಲ್ಲಿ ಮರಳು ಸಾಗಿಸುವ ತಪಾಸಣೆಗೆ ಒಳಪಡಿಸಬೇಕು. ಅಕ್ರಮ ಮರಳು ಸಾಗಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಚೆಕ್ ಪೋಸ್ಟ್‌ಗಳಲ್ಲಿ ಮರಳು ವಾಹನ ತಪಾಸಣೆ ಮಾಡುತ್ತಿರುವ ಬಗ್ಗೆ ಮೇಲ್ವಿಚಾರಣೆ ಮಾಡಬೇಕು ಎಂದರು.
ತನಿಖಾ ಠಾಣೆಗಳಿಗೆ ಸಿಬ್ಬಂದಿ ನಿಯೋಜಿಸಿ, ರಾತ್ರಿ ಮತ್ತು ಹಗಲು ಪಾಳೆಯದಲ್ಲಿ ರಸ್ತೆಯಲ್ಲಿ ಮರಳು ಸಾಗಾಣಿಕೆ ಮಾಡುವ ವಾಹನಗಳ ತಪಾಸಣೆ ಕೈಗೊಳ್ಳಬೇಕು. ಅಕ್ರಮವಾಗಿ ಮರಳು ಸಾಗಿಸುವ ವಾಹನ ಕೂಡಲೇ ಜಪ್ತಿ ಮಾಡಬೇಕು ಎಂದು ಸೂಚನೆ ನೀಡಿದರು.
ಜಿಲ್ಲೆಯ ಕ್ರಷರ್ ಘಟಕಗಳಲ್ಲಿ ಪರಿಸರ ಮಾಲಿನ್ಯ ನಿಯಂತ್ರಣಾ ನಿಯಮ ಪಾಲಿಸುತ್ತಿರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮತ್ತು ಅಲ್ಲಿಯ ಸ್ಥಳೀಯ ಜನರಿಗೆ ಯಾವುದೇ ತೊಂದರೆಯಾಗದಂತೆ ಕಾರ್ಯನಿರ್ವಹಿಸಲು ಕ್ರಷರ್ ನ ಮಾಲಿಕರಿಗೆ ತಿಳಿಸಿ ಎಂದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜ್, ಬಿ.ಎನ್.ನಂದಿನಿ, ತಹಶೀಲ್ದಾರ್ ನಟೇಶ್, ಹಿರಿಯ ಭೂ ವಿಜ್ಞಾನಿ ನಾಗರಾಜ್ ಮತ್ತಿತರರು ಇದ್ದರು.