Advertisement

ತಪ್ಪಿತಸ್ಥರ ವಿರುದ್ಧ ಕಠಿನ ಕ್ರಮ: ರಮಾನಾಥ ರೈ

01:03 PM May 19, 2017 | Team Udayavani |

ಗುರುಪುರ ನದಿಯ ನೀರು ಕಲುಷಿತ ಪ್ರಕರಣ
ಬಜಪೆ: ಮರವೂರು ಡ್ಯಾಮ್‌ನ ಕೆಳಭಾಗದಲ್ಲಿ ಗುರುಪುರ ನದಿಯ ನೀರು ಕಲುಷಿತಗೊಂಡಿರುವ ಕುರಿತು ಅಧಿಕಾರಿಗಳಿಂದ ಸಮಗ್ರ ತನಿಖೆ ನಡೆಸಲಾಗುವುದು ಹಾಗೂ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.

Advertisement

ಅವರು ಗುರುವಾರ ಜಿಲ್ಲಾಧಿಕಾರಿ ಡಾ| ಕೆ.ಜಿ. ಜಗದೀಶ್‌ ಮತ್ತು ಶಾಸಕ ಅಭಯಚಂದ್ರ ಜೈನ್‌ ಅವರ ಜತೆ ಮರವೂರಿಗೆ 
ಭೇಟಿ ನೀಡಿ ಕಲುಷಿತಗೊಂಡಿರುವ ಗುರುಪುರ ನದಿಯ ನೀರನ್ನು ಪರಿಶೀಲಿಸಿದರು. ಅಧಿಕಾರಿಗಳೂ ಜತೆಗಿದ್ದರು.

5 ದಿನಗಳೊಳಗೆ ಅಧಿಕಾರಿಗಳಿಂದ ವರದಿ ತರಿಸಲಾಗುವುದು. ತಜ್ಞ ವಿಜ್ಞಾನಿಯ ಮೂಲಕ ತನಿಖೆ ನಡೆಸಲಾಗುವುದು; ಇದಕ್ಕೆ ಎನ್‌ಐಟಿಕೆ ಸಹಾಯವನ್ನು ಪಡೆಯಲಾಗುವುದು ಎಂದು ಸಚಿವ ರೈ ವಿವರಿಸಿದರು.

ಮೀನುಗಳ ಸಾವು
ನೀರು ಕಲುಷಿತಗೊಂಡು ಮೀನುಗಳು ಸತ್ತಿವೆ. ಇದರ ಬಗ್ಗೆಯೂ ತನಿಖೆ ನಡೆಸಿ 5 ದಿನಗಳಲ್ಲಿ ವರದಿ ಕೊಡುವಂತೆ ಪರಿಸರ ಇಲಾಖೆಯ ಅಧಿಕಾರಿಗಳಿಗೆ ಮತ್ತು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ನದಿಯ ನೀರನ್ನು ಶುದ್ಧೀಕರಣ ಮಾಡುವ ಬಗ್ಗೆಯೂ ಚರ್ಚೆ ನಡೆಸಿ ಕ್ರಮ ತೆಗೆದುಕೊಳ್ಳಲಾಗುವುದು. ಇದೇ ಪ್ರಥಮ ಬಾರಿ ಈ ಪ್ರದೇಶದಲ್ಲಿ ನದಿಯ ನೀರು ಇಷ್ಟೊಂದು ಕಲುಷಿತಗೊಂಡಿದೆ. ಇದರಿಂದ ಪರಿಸರದ ನಿವಾಸಿಗಳಿಗೆ ತೊಂದರೆಯಾಗಿದೆ. ಈಗಾಗಲೇ ನೀರಿನ ಮಾದರಿಯನ್ನು ಪರೀಕ್ಷೆಗೆ ಕೊಂಡೊಯ್ಯಲಾಗಿದೆ ಎಂದು ರೈ ತಿಳಿಸಿದರು.

ನೀರು ಕಲುಷಿತವಾಗಲು ಕೈಗಾರಿಕೆಗಳು ಕಾರಣ ಎನ್ನಲಾಗುತ್ತಿದೆ. ಕಾರಣ ಯಾರೇ ಆಗಿದ್ದರೂ ಅವರ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಶಾಸಕ ಕೆ. ಅಭಯಚಂದ್ರ ಜೈನ್‌ ತಿಳಿಸಿದರು.

Advertisement

ಕುಡಿಯುವ ನೀರು ಅಬಾಧಿತ
14 ಗ್ರಾಮಗಳಿಗೆ ಪೂರೈಸಲಾಗುವ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗಿಲ್ಲ. ವೆಂಟೆಡ್‌ ಡ್ಯಾಂನಲ್ಲಿ ಶೇಖರಣೆಯಾಗಿರುವ ನೀರು ಕಲುಷಿತವಾಗಿಲ್ಲ. ನೀರನ್ನು ದಿನಾ ಪರೀಕ್ಷೆ ಮಾಡಲಾಗುತ್ತಿದೆ. ನದಿಗೆ ತ್ಯಾಜ್ಯ ಬಿಟ್ಟು ಅದನ್ನು ಕಲುಷಿತವನ್ನಾಗಿಸಿದವರ ಮೇಲೆ ಕಠಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ| ಕೆ.ಜಿ. ಜಗದೀಶ್‌ ಅವರು ತಿಳಿಸಿದರು.

ಮಂಗಳೂರು ಮೇಯರ್‌ ಕವಿತಾ ಸನಿಲ್‌, ಕಮಿಷನರ್‌ ಮೊಹಮದ್‌ ನಝೀರ್‌, ಮಳವೂರು ಗ್ರಾಮ ಪಂಚಾಯತ್‌  ಅಧ್ಯಕ್ಷ ಗಣೇಶ್‌ ಅರ್ಬಿ, ಉಪಾಧ್ಯಕ್ಷೆ ವನಜಾ ಶೆಟ್ಟಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next