ರಾಮನಗರ: ಜಿಲ್ಲೆಯಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆ ಹಿಂದೆಂದೂ ಕಾಣದಷ್ಟು ರಂಗು ಪಡೆದುಕೊಂಡಿದೆ. ಹೀಗಾಗಿ, ಚುನಾವಣೆಯಲ್ಲಿ ಅಕ್ರಮಗಳು ಹೆಚ್ಚಾಗಿವೆ. ಅಕ್ರಮಗಳಿಗೆ ಕಡಿವಾಣ ಹಾಕಲು ಮುಂದಾಗಿರುವ ಜಿಲ್ಲಾ ಚುನಾವಣಾಧಿಕಾರಿಗಳ ತಂಡ ಹದ್ದಿನ ಕಣ್ಣಿರಿಸಿದ್ದು, ಹಿಂದೆಂದೂ ಕಾಣದಷ್ಟು ಪ್ರಕರಣಗಳನ್ನು ದಾಖಳಿಸುವ ಮೂಲಕ ಎಲ್ಲರಲ್ಲಿ ಅಚ್ಚರಿ ಮೂಡಿಸಿದೆ.
ಹೌದು, ಜಿಲ್ಲೆಯಲ್ಲಿ ಚುನಾವಣೆ ಪ್ರಕ್ರಿಯೆ ಆರಂಭಗೊಂಡಾಗಿನಿಂದ ಇಲ್ಲಿಯವರೆಗೆ 52 ಪ್ರಕರಣಗಳು ದಾಖಲಾದ್ದು, ಸುಮಾರು 3 ಕೋಟಿ ರೂ.ನಷ್ಟು ಹಣ ವಶಪಡಿಸಿಕೊಳ್ಳಲಾಗಿದೆ. ರಾಮನಗರ ಜಿಲ್ಲೆ ರಚನೆಯಾದ ಬಳಿಕ ಮೂರು ಲೋಕಸಭಾ ಚುನಾವಣೆ, ಒಂದು ಲೋಕಸಭಾ ಉಪಚುನಾವಣೆ, ಮೂರು ವಿಧಾನಸಭಾ ಚುನಾವಣೆ, ನಾಲ್ಕು ವಿಧಾನಸಭಾ ಉಪಚುನಾವಣೆಗಳನ್ನು ಎದುರಿಸಿದೆಯಾ ದರೂ, ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದಂತೆ ಇಷ್ಟೊಂದು ಪ್ರಕರಣಗಳು ಹಿಂದೆಂದೂ ದಾಖಲಾಗಿರಲಿಲ್ಲ ಎಂಬುದು ಇಲ್ಲಿ ಗಮನಾರ್ಹ.
ಅಧಿಕಾರಿಗಳು, ಸಾರ್ವಜನಿಕರ ಕಣ್ಗಾವಲು: ಈ ಬಾರಿಯ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಚಟುವಟಿಕೆಯ ವಿರುದ್ಧ ಚುನಾವಣಾ ಅಧಿಕಾರಿಗಳು ಹದ್ದಿನ ಕಣ್ಣಿರಿಸಿದ್ದಾರೆ. ಚುನಾವಣೆಗೆ ಸಂಬಂಧಿಸಿದಂತೆ ಎಲ್ಲವನ್ನು ಕೂಲಂಕುಷವಾಗಿ ಗಮನಿಸಿ ಪ್ರಕರಣ ದಾಖಲು ಮಾಡಲು ಮುಂದಾಗುತ್ತಿರುವ ಜಿಲ್ಲಾ ಮಟ್ಟದ ಅಧಿಕಾರಿಗಳು ಜಿಲ್ಲೆಯಲ್ಲಿ ಅಕ್ರಮ ಎಸಗಿದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುತ್ತಿದ್ದಾರೆ. ಇನ್ನು ಅಧಿಕಾರಿಗಳ ಜೊತೆಗೆ ಸಾರ್ವಜನಿಕರೂ ಜಾಗೃತರಾಗಿದ್ದು, ಮತದಾನ ಅಕ್ರಮಗಳ ವಿರುದ್ಧ ದೂರು ನೀಡಲು ಮುಂದಾಗಿರುವ ಪರಿಣಾಮ ಚುನಾವಣಾ ಅಕ್ರಮಗಳ ವಿರುದ್ಧ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿವೆ.
52 ಕೇಸುಗಳು ದಾಖಲು: ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮತದಾರರಿಗೆ ಪ್ರಲೋಭನೆ, ಸಾಮಾಜಿಕ ಜಾಲತಾಣದಲ್ಲಿ ಅವಹೇಳನಾಕಾರಿ ಪೋಸ್ಟ್‌ಗಳು, ಚುನಾವಣಾ ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಮೊದಲಾದ ಪ್ರಕರಣಗಳಿಗೆ ಸಂಬಂಧಿಸಿದಂತೆ ಇದುವರೆಗೆ 52 ಪ್ರಕರಣಗಳನ್ನು ದಾಖಲಿಸಲಾಗಿದೆ. ಜಿಲ್ಲಾ ಗಡಿಭಾಗದಲ್ಲಿ ಸ್ಥಾಪಿಸಿರುವ ಚೆಕ್‌ಪೋಸ್ಟ್ ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸುತ್ತಿದ್ದು, ಚುನಾವಣೆ ಹಿಂದಿನ ದಿನ ಇನ್ನಷ್ಟು ಪ್ರಕರಣಗಳು ದಾಖಲಾಗುವ ಸಾದ್ಯತೆ ಇದೆ.
2.59 ಕೋಟಿ ರೂ. ಹಣ ವಶ: ಜಿಲ್ಲೆಯಲ್ಲಿ ಚುನಾವಣಾ ಹಿನ್ನೆಲೆಯಲ್ಲಿ ಅಕ್ರಮವಾಗಿ ಹಣ ಸಾಗಾಣಿಕೆ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 2.59 ಕೋಟಿ ರೂ. ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಚನ್ನಪಟ್ಟಣ ತಾಲೂಕಿನ ಜಗದಾಪುರ ಗ್ರಾಮದ ಬಳಿ ಸ್ಥಾಪಿಸಿದ್ದ ಅಂತರ್ ಜಿಲ್ಲಾ ಗಡಿ ಚೆಕ್ ಪೋಸ್ಟ್‌ನಲ್ಲಿ ವಶಪಡಿಸಿಕೊಂಡ 38 ಲಕ್ಷ ರೂ, ಮತ್ತು ಹಾರೋಹಳ್ಳಿಯಲ್ಲಿ ಯಾವುದೇ ದಾಖಲೆ ಇಲ್ಲದೆ ಎಟಿಎಂಗೆ ಹಣ ಹಾಕುವ ವಾಹನದಲ್ಲಿ ಸಾಗಾಣಿಕೆ ಮಾಡುತ್ತಿದ್ದ 1.97 ಕೋಟಿ ರೂ. ಸೇರಿದ್ದು, ಈ ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
38 ಸಾವಿರ ಲೀ. ಮದ್ಯ ವಶ: ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟದ ವಿರುದ್ಧ ನಿಗಾವಹಿಸಿರುವ ಚುನಾವಣಾ¨ ಅಧಿಕಾರಿಗಳು ಇದುವರೆಗೆ 38.45 ಲೀಟರ್‌ನಷ್ಟು ಅಕ್ರಮ ಮದ್ಯವನ್ನು ವಶಪಡಿಸಿಕೊಂಡಿ ದ್ದಾರೆ. ಅಕ್ರಮ ಮದ್ಯದ ವಿರುದ್ಧ ಅಬಕಾರಿ ಮತ್ತು ಪೊಲೀಸ್ ಇಲಾಖೆ ಪ್ರತ್ಯೇಕವಾಗಿ ಕಾರ್ಯಾಚರಣೆ ನಡೆಸುತ್ತಿದೆ. ಮದ್ಯದ ಜೊತೆಗೆ ಇವೆರಡೂ ಇಲಾಖೆಗಳು 21 ಗ್ರಾಂ ಎಂಎಂಡಿ, 4.50 ಕೆ.ಜಿ. ಗಾಂಜಾವನ್ನು ವಶಪಡಿಸಿಕೊಂಡಿವೆ. ಒಂದೆಡೆ ಚುನಾವಣೆಯಲ್ಲಿ ಅಕ್ರಮಗಳನ್ನು ನಡೆಸಲು ಅಭ್ಯರ್ಥಿಗಳು ಸಿದ್ದತೆ ಮಾಡಿಕೊಳ್ಳುತ್ತಿದ್ದರೆ ಅಕ್ರಮಗಳಿಗೆ ಕಡಿವಾಣ ಹಾಕಲು ಅಧಿಕಾರಿಗಳು ಕಾನೂನು ಕ್ರಮ ಜರುಗಿಸುತ್ತಿದ್ದಾರೆ. ಮತದಾನದ ಮುನ್ನಾದಿನ ವ್ಯಾಪಕವಾಗಿ ಆಮೀಷಗಳು ಹರಿದಾಡಲಿದ್ದು ಚುನಾವಣಾ ಅಧಿಕಾರಿಗಳು ಯಾವರೀತಿ ಕ್ರಮ ಕೈಗೊಳ್ಳುವರು ಎಂಬುದನ್ನು ಕಾದು ನೋಡಬೇಕಿದೆ.
55 ಟನ್ ಅಕ್ಕಿ ವಶ: ರಾಜಕೀಯ ಪಕ್ಷಗಳು ಒಂದೆಡೆ ಚುನಾವಣಾ ಅಕ್ರಮದಲ್ಲಿ ನಿರತವಾಗಿದ್ದರೆ, ಮತ್ತೂಂದೆಡೆ ಜಿಲ್ಲಾಡಳಿತ ಅಕ್ರಮಗಳ ಪತ್ತೆಗೆ ಕ್ರಮಕೈಗೊಂಡಿದೆ. ಜಿಲ್ಲೆಯಲ್ಲಿ ಕಾಳಸಂತೆಗೆ ಮಾರಾಟ ಮಾಡಲು ಹೋಗುತ್ತಿದ್ದ ಸುಮಾರು 55 ಟನ್ ಪಡಿತರ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ. ಇಷ್ಟೇ ಅಲ್ಲದೆ 480 ಮಿಲ್ಕ್ಕ್ಯಾನ್‌ಗಳು, 80 ಡಿನ್ನರ್ ಸೆಟ್, 440 ಊಟದ ಬಾಕ್ಸ್, 20ತವಾ, 105 ಡ್ರೆಸ್ ಮೆಟೀರಿಯಲ್, 113 ಸೀರೆ ಸೇರಿದಂತೆ ಮತದಾರರಿಗೆ ನೀಡಲು ಸಿದ್ದಪಡಿಸಿದ್ದರು.
– ಸು.ನಾ.ನಂದಕುಮಾರ್