Advertisement

ಮೂಲ್ಕಿ: ಹತ್ತು ಚೆಕ್‌ ಪೋಸ್ಟ್‌ಗಳಲ್ಲಿ ಬಿಗಿ ತಪಾಸಣೆ

02:40 AM Jul 13, 2017 | Karthik A |

ಹಳೆಯಂಗಡಿ: ಬಂಟ್ವಾಳದಲ್ಲಿ ನಡೆದ ಕೊಲೆ, ಹಲ್ಲೆ, ಪ್ರತಿಭಟನೆಯ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ 144 ಸೆಕ್ಷನ್‌ ನಿಷೇಧಾಜ್ಞೆ ವಿಧಿಸಲಾಗಿದ್ದು, ಮೂಲ್ಕಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲೂ ಹೋಬಳಿಯ ಸುಮಾರು 10 ಕಡೆಗಳಲ್ಲಿ ಚೆಕ್‌ಪೋಸ್ಟ್‌ ನಿರ್ಮಿಸಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಮೂಲ್ಕಿ ಬಳಿ ರಾಷ್ಟ್ರೀಯ ಹೆದ್ದಾರಿ 66ರ ಜಿಲ್ಲೆಯ ಗಡಿಭಾಗವಾದ ಬಪ್ಪನಾಡು ಸೇತುವೆ, ಕೊಲ್ನಾಡು, ಹಳೆಯಂಗಡಿ, ಕಾರ್ನಾಡು ಗಾಂಧಿ ಮೈದಾನದ ಬಳಿ, ಎಸ್‌. ಕೋಡಿ ಜಂಕ್ಷನ್‌, ಇಂದಿರಾ ನಗರ, ಪಕ್ಷಿಕೆರೆ, ಕಿನ್ನಿಗೋಳಿ ಮತ್ತು ಠಾಣೆಯ ಗಡಿಭಾಗವಾದ ಮೂರು ಕಾವೇರಿ, ಏಳಿಂಜೆ ಪಟ್ಟೆ ಕ್ರಾಸ್‌ನಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗಿದೆ. ಪ್ರತಿಯೊಂದರಲ್ಲೂ ಮೂರರಿಂದ ನಾಲ್ಕು ಮಂದಿ ಪೊಲೀಸ್‌ ಮತ್ತು ಗೃಹ ರಕ್ಷಕ ದಳದ ಸಿಬಂದಿಯನ್ನು ನಿಯೋಜಿಸಲಾಗಿದೆ. ಶಂಕಾಸ್ಪದ ವಾಹನಗಳ ತಪಾಸಣೆ ನಡೆಸಿ, ನೋಂದಾಯಿಸಿಕೊಳ್ಳಲು ಠಾಣೆಯ ಎಎಸ್‌ಐಗಳಿಗೆ ಉಸ್ತುವಾರಿ ನೀಡಲಾಗಿದೆ.

Advertisement

ದ್ವಿಚಕ್ರ ವಾಹನಗಳ ಮೇಲೆ ಕಣ್ಣು
ದಿನದ ಆರಂಭದಲ್ಲಿ ಬೆಳಗ್ಗೆ ಬಪ್ಪನಾಡಿನ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ನಡೆಸಿದರೇ, ಅನಂತರ ಹಳೆಯಂಗಡಿ, ಕೊಲ್ನಾಡಿಗೆ ಸ್ಥಳಾಂತರವಾಗುತ್ತದೆ. ಮಧ್ಯಾಹ್ನದ ಅನಂತರ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ತಪಾಸಣೆ ನಡೆಯುತ್ತದೆ. ಸಂಜೆಯಿಂದ ರಾತ್ರಿಯವರೆಗೆ ನಿರ್ದಿಷ್ಟ ಪಟ್ಟಣ ಪ್ರದೇಶದಲ್ಲಿ ನಿಗಾವಹಿಸಲಾಗುತ್ತಿದೆ. ಎಲ್ಲ ಚೆಕ್‌ಪೋಸ್ಟ್‌ಗಳಲ್ಲಿ ದ್ವಿಚಕ್ರ ವಾಹನಗಳನ್ನು ತೀವ್ರ ತಪಾಸಣೆಗೆ ಒಳಪಡಿಸಲಾಗುತ್ತಿದೆ. ದ್ವಿಚಕ್ರ ವಾಹನದ ಸೀಟ್‌ಗಳನ್ನೂ ತೆಗೆದು ಪರೀಕ್ಷಿಸಲಾಗುತ್ತಿದೆ. ಕೆಲವು ವಾಹನ ಸವಾರರು ಜೆರ್ಕಿನ್‌ ತೊಟ್ಟುಕೊಂಡಿದ್ದರೆ ಅದನ್ನೂ ತಪಾಸಣೆಗೆ ಒಳಪಡಿಸಲಾಗುತ್ತಿದೆ.

ಮಾರಕಾಯುಧಗಳಿಗಾಗಿ ಶೋಧ
ಸಂಶಯಾಸ್ಪದರು ತಮ್ಮ ವಾಹನಗಳಲ್ಲಿ ಚಾಕು, ಚೂರಿ, ತಲ್ವಾರ್‌, ದೊಣ್ಣೆ, ಚೈನ್‌ನಂತಹ ಮಾರಕಾಯುಧಗಳು, ಮೆಣಸಿನ ಹುಡಿಗಳು ಇಟ್ಟುಕೊಳ್ಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ತಪಾಸಣೆ ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಎಲ್ಲ ಹಲ್ಲೆ ಮತ್ತು ಕೊಲೆ ಪ್ರಕರಣದಲ್ಲಿ ದುಷ್ಕರ್ಮಿಗಳು ಹೆಚ್ಚಾಗಿ ದ್ವಿಚಕ್ರ ವಾಹನಗಳನ್ನೇ ಬಳಸಿದ್ದರು ಮತ್ತು ಇಂಥ ಮಾರಕಾಸ್ತ್ರಗಳೇ ಬಳಕೆಯಾಗಿದ್ದವು. ಹೀಗಾಗಿ ದ್ವಿಚಕ್ರ ವಾಹನ ತಪಾಸಣೆ ನಡೆಸಲಾಗುತ್ತಿದೆ.

ಗ್ರಾಮ ಬೀಟ್‌ಗೂ ಎಚ್ಚರ
ಪ್ರತೀ ಠಾಣೆಯಲ್ಲಿ ಜಾರಿಗೆ ಬಂದಿರುವ ಗ್ರಾಮ ಪೊಲೀಸ್‌ ಬೀಟ್‌ನ ಸಮಿತಿ ಸದಸ್ಯರಿಗೂ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಗ್ರಾಮದಲ್ಲಿ ಸಂಶಯಿತ ಚಟುವಟಿಕೆ ಕಂಡು ಬಂದರೆ ಅಥವಾ ಅಕ್ರಮವಾಗಿ ಕೂಟವನ್ನು ಕಟ್ಟಿಕೊಂಡು ಕಾರ್ಯಪ್ರವೃತ್ತರಾಗಿದ್ದರೆ ಆಯಾ ಗ್ರಾಮ ಬೀಟ್‌ನ ಪೊಲೀಸರಿಗೆ ಮಾಹಿತಿ ನೀಡಲು ಸೂಚಿಸಲಾಗಿದೆ.

ಶಾಂತಿ ಸುವ್ಯವಸ್ಥೆಗೆ ಕ್ರಮ
ಮೂಲ್ಕಿ ಠಾಣಾ ವ್ಯಾಪ್ತಿಯ 10 ಗ್ರಾ.ಪಂ. ಹಾಗೂ ಒಂದು ನಗರ ಪಂಚಾಯತ್‌ನಲ್ಲಿ 10 ಚೆಕ್‌ ಪೋಸ್ಟ್‌ಗಳನ್ನು ಅಳವಡಿಸಿದ್ದು, ಸಿಬಂದಿಯನ್ನು ನಿಯೋಜಿಸಲಾಗಿದೆ. ಕಮಿಷನರೇಟ್‌ ಆದೇಶದಂತೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಮೂಲ್ಕಿಯಲ್ಲಿ ಶಾಂತಿ ಸುವ್ಯವಸ್ಥೆಯನ್ನು ಸಂಪೂರ್ಣವಾಗಿ ಕಾಯ್ದುಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
– ಅನಂತ ಪದ್ಮನಾಭ, ಇನ್‌ಸ್ಪೆಕ್ಟರ್‌, ಮೂಲ್ಕಿ ಠಾಣೆ

Advertisement
Advertisement

Udayavani is now on Telegram. Click here to join our channel and stay updated with the latest news.

Next