Advertisement

Ranji; ಅಗರ್ವಾಲ್‌ ಶತಕ: 144 ರನ್‌ ಮುನ್ನಡೆಯಲ್ಲಿ ಕರ್ನಾಟಕ

02:08 AM Oct 29, 2024 | Team Udayavani |

ಪಾಟ್ನಾ: ಒಂದು ದಿನದ “ಮಳೆ ಬ್ರೇಕ್‌’ ಬಳಿಕ ಪುನರಾರಂಭಗೊಂಡ ಬಿಹಾರ ವಿರುದ್ಧದ ರಣಜಿ ಪಂದ್ಯದಲ್ಲಿ ಕರ್ನಾಟಕ ಮೇಲುಗೈ ಸಾಧಿಸಿದೆ. ನಾಯಕ ಮಾಯಾಂಕ್‌ ಅಗರ್ವಾಲ್‌ ಅವರ ಶತಕ ಸಾಹಸದಿಂದ 7 ವಿಕೆಟಿಗೆ 287 ರನ್‌ ಗಳಿಸಿದ್ದು, 144 ರನ್‌ ಮುನ್ನಡೆಯಲ್ಲಿದೆ.

Advertisement

ಕರ್ನಾಟಕ ವಿಕೆಟ್‌ ನಷ್ಟವಿಲ್ಲದೆ 16 ರನ್‌ ಮಾಡಿದಲ್ಲಿಂದ ದಿನದಾಟ ಮುಂದುವರಿಸಿತು. ಆದರೆ ಆರಂಭಿಕರಾದ ನಿಕಿನ್‌ ಜೋಸ್‌ (16) ಮತ್ತು ಸುಜಯ್‌ ಸಾತೇರಿ (10) ಬೇಗನೇ ಪೆವಿಲಿಯನ್‌ ಸೇರಿಕೊಂಡರು. ಈ ಹಂತದಲ್ಲಿ ಕ್ರೀಸ್‌ ಇಳಿದ ಮಾಯಾಂಕ್‌ ಅಗರ್ವಾಲ್‌ ಕಪ್ತಾನನ ಆಟದ ಮೂಲಕ ತಂಡವನ್ನು ಆಧರಿಸಿ ನಿಂತರು. 51ನೇ ಓವರ್‌ ತನಕ ಕ್ರೀಸ್‌ ಆಕ್ರಮಿಸಿಕೊಂಡ ಅವರು 105 ರನ್ನುಗಳ ಅಮೋಘ ಕೊಡುಗೆ ಸಲ್ಲಿಸಿದರು. 131 ಎಸೆತಗಳ ಈ ಆಟದಲ್ಲಿ 12 ಬೌಂಡರಿ ಒಳಗೊಂಡಿತ್ತು.

ಅಗರ್ವಾಲ್‌ ಅವರಿಗೆ ಸ್ಮರಣ್‌ ಆರ್‌. (37) ಮತ್ತು ಮನೀಷ್‌ ಪಾಂಡೆ (56) ಉತ್ತಮ ಬೆಂಬಲವಿತ್ತರು. ಇವರಿಬ್ಬರೊಂದಿಗೆ 3ನೇ ವಿಕೆಟಿಗೆ 80 ರನ್‌, 4ನೇ ವಿಕೆಟಿಗೆ ಭರ್ತಿ 100 ರನ್‌ ಜತೆಯಾಟ ನಿಭಾಯಿಸಿದರು. ಅಭಿನವ್‌ ಮನೋಹರ್‌ ಕೂಡ 37 ರನ್‌ ಕೊಡುಗೆ ಸಲ್ಲಿಸಿದರು. ಇವರಲ್ಲಿ ಪಾಂಡೆ ಆಟ ಅತ್ಯಂತ ಆಕ್ರಮಣಕಾರಿಯಾಗಿತ್ತು. 56 ರನ್ನಿಗೆ ಕೇವಲ 55 ಎಸೆತ ತೆಗೆದುಕೊಂಡರು. ಸಿಡಿಸಿದ್ದು 5 ಬೌಂಡರಿ ಹಾಗೂ 2 ಸಿಕ್ಸರ್‌.

ದಿನದ ಕೊನೆಯ ಓವರ್‌ನಲ್ಲಿ ಅಭಿನವ್‌ ಮನೋಹರ್‌, ಮಾಯಾಂಕ್‌ ಅಗರ್ವಾಲ್‌ ಮತ್ತು ವಿಜಯ್‌ಕುಮಾರ್‌ ವೈಶಾಖ್‌ ವಿಕೆಟ್‌ ಉರುಳಿಸಿದ ಹಿಮಾಂಶು ಸಿಂಗ್‌ ಕರ್ನಾಟಕದ ಬೃಹತ್‌ ಮುನ್ನಡೆಯ ಯೋಜನೆಗೆ ದೊಡ್ಡದೊಂದು ಬ್ರೇಕ್‌ ಹಾಕಿದರು. ಹಿಮಾಂಶು ಸಾಧನೆ 51ಕ್ಕೆ 4 ವಿಕೆಟ್‌. ಶಕಿಬ್‌ ಹುಸೇನ್‌ 2, ವೈಭವ್‌ ಸೂರ್ಯವಂಶಿ ಒಂದು ವಿಕೆಟ್‌ ಕೆಡವಿದರು.

ಮಂಗಳವಾರದ ಆಟದಲ್ಲಿ ಇನ್ನಷ್ಟು ಮುನ್ನಡೆ ಸಾಧಿಸಿ, ಘಾತಕ ಬೌಲಿಂಗ್‌ ಪ್ರದರ್ಶಿಸಿದರೆ ಕರ್ನಾಟಕ ಈ ಪಂದ್ಯವನ್ನು ಗೆಲ್ಲುವ ಸಾಧ್ಯತೆ ಇದೆ.
ಸಂಕ್ಷಿಪ್ತ ಸ್ಕೋರ್‌: ಬಿಹಾರ-143. ಕರ್ನಾಟಕ-7 ವಿಕೆಟಿಗೆ 287 (ಅಗರ್ವಾಲ್‌ 105, ಪಾಂಡೆ 56, ಸ್ಮರಣ್‌ 37, ಅಭಿನವ್‌ 37, ಹಿಮಾಂಶು 51ಕ್ಕೆ 4, ಶಕಿಬ್‌ 86ಕ್ಕೆ 2).

Advertisement

ತ್ರಿಪುರವನ್ನು ನಿಯಂತ್ರಿಸಿದ ಮುಂಬಯಿ
ಅಗರ್ತಲಾ: ಆರಂಭಕಾರ ಜೀವನ್‌ಜೋತ್‌ ಸಿಂಗ್‌ ಅವರ ಶತಕದ ಹೊರತಾಗಿಯೂ ಎಲೈಟ್‌ ಎ ರಣಜಿ ಪಂದ್ಯದಲ್ಲಿ ತ್ರಿಪುರವನ್ನು ನಿಯಂತ್ರಿಸುವಲ್ಲಿ ಮುಂಬಯಿ ಯಶಸ್ವಿಯಾಗಿದೆ.

ಮುಂಬಯಿಯ 450 ರನ್ನುಗಳ ದೊಡ್ಡ ಮೊತ್ತಕ್ಕೆ ಜವಾಬು ನೀಡಿದ ತ್ರಿಪುರ 302ಕ್ಕೆ ಆಲೌಟ್‌ ಆಯಿತು. 148 ರನ್‌ ಮುನ್ನಡೆ ಬಳಿಕ ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿರುವ ಮುಂಬಯಿ 7 ರನ್ನಿಗೆ 2 ವಿಕೆಟ್‌ ಉದುರಿಸಿಕೊಂಡಿದೆ. ಒಟ್ಟು 155 ರನ್‌ ಮುನ್ನಡೆಯಲ್ಲಿದೆ.
ತ್ರಿಪುರ ಮೊತ್ತದಲ್ಲಿ ಜೀವನ್‌ಜೋತ್‌ ಸಿಂಗ್‌ ಗಳಿಕೆ 118 ರನ್‌ (188 ಎಸೆತ, 15 ಬೌಂಡರಿ). ಮಧ್ಯಮ ಸರದಿಯ ಶ್ರೀಧಾಮ್‌ ಪೌಲ್‌ 52 ಮತ್ತು ನಾಯಕ ಮನ್‌ದೀಪ್‌ ಸಿಂಗ್‌ ಅಜೇಯ 62 ರನ್‌ ಮಾಡಿದರು.

ಮುಂಬಯಿಯ ಆಫ್ಸ್ಪಿನ್ನರ್‌ ಹಿಮಾಂಶು ಸಿಂಗ್‌ 65 ರನ್ನಿಗೆ 6 ವಿಕೆಟ್‌ ಉರುಳಿಸಿ ಭರ್ಜರಿ ಯಶಸ್ಸು ಗಳಿಸಿದರು. ಶಮ್ಸ್‌ ಮುಲಾನಿ 88 ರನ್‌ ವೆಚ್ಚದಲ್ಲಿ 3 ವಿಕೆಟ್‌ ಉರುಳಿಸಿದರು.
ಸಂಕ್ಷಿಪ್ತ ಸ್ಕೋರ್‌: ಮುಂಬಯಿ-450 ಮತ್ತು 2 ವಿಕೆಟಿಗೆ 7. ತ್ರಿಪುರ-302 (ಜೀವನ್‌ಜೋತ್‌ 118, ಮನ್‌ದೀಪ್‌ ಅಜೇಯ 62, ಶ್ರೀಧಾಮ್‌ 52, ಹಿಮಾಂಶು 65ಕ್ಕೆ 6, ಮುಲಾನಿ 88ಕ್ಕೆ 3).

Advertisement

Udayavani is now on Telegram. Click here to join our channel and stay updated with the latest news.

Next