Advertisement

ಮಾವುತನೊಂದಿಗೆ ಉದ್ದಟತನ: ಯುವಕನಿಗೆ ಕಪಾಳಮೋಕ್ಷ

11:34 AM Oct 21, 2018 | Team Udayavani |

ಮೈಸೂರು: ದಸರಾ ಆನೆಗಳ ಬಳಿಗೆ ಅತಿಕ್ರಮ ಪ್ರವೇಶ ಮಾಡಿದ್ದಲ್ಲದೆ, ಮಾವುತನೊಂದಿಗೆ ಉದ್ದಟತನದಿಂದ ವರ್ತಿಸಿದ ಯುವಕರಿಗೆ ಮಾವುತರು ಹಾಗೂ ಕಾವಾಡಿಗಳು ಕಪಾಳ ಮೋಕ್ಷ ಮಾಡಿ ಬುದ್ಧಿ ಕಲಿಸಿದ ಘಟನೆ ಅರಮನೆ ಆವರಣದಲ್ಲಿ ನಡೆಯಿತು. 

Advertisement

ಜಂಬೂಸವಾರಿ ಮುಗಿದ ಹಿನ್ನೆಲೆಯಲ್ಲಿ ಅರಮನೆಗೆ ಬೇಟಿ ನೀಡಿದ ಹಲವು ಪ್ರವಾಸಿಗರು ಅರಮನೆಯಲ್ಲಿರುವ ದಸರಾ ಆನೆಗಳನ್ನು ವೀಕ್ಷಿಸಲು ಮುಗಿಬಿದ್ದರು. ಪ್ರವಾಸಿಗರು ಆನೆಗಳ ಹತ್ತಿರಕ್ಕೆ ತೆರಳಿ ಅವುಗಳಿಗೆ ತೊಂದರೆ ನೀಡಬಾರದೆಂಬ ಕಾರಣಕ್ಕೆ ಬ್ಯಾರಿಕೇಡ್‌ಗಳನ್ನು ಅಳವಡಿಸಿ, ಹಗ್ಗ ಕಟ್ಟಲಾಗಿತ್ತು. ಹೀಗಾಗಿ ಆನೆಗಳನ್ನು ನೋಡಲು ಬರುತ್ತಿದ್ದ ಪ್ರವಾಸಿಗರು ದೂರದಿಂದಲೇ ಆನೆಗಳ ಫೋಟೋ ತೆಗೆದುಕೊಂಡು ಖುಷಿಪಟ್ಟರು.

ಈ ನಡುವೆ ಹೊರಗಿನಿಂದ ಬಂದಿದ್ದ ಮೂವರು ಯುವಕರು, ಆನೆಗಳ ಬಳಿ ಕಟ್ಟಿದ್ದ ಹಗ್ಗವನ್ನು ದಾಟಿ ಮುಂದೆ ಹೋಗಿ, ಬಲರಾಮ ಆನೆಗೆ ಕಬ್ಬು ನೀಡುತ್ತಿದ್ದರು. ಒಬ್ಬ ಕಬ್ಬು ನೀಡಿದರೆ ಉಳಿದವರು ಆ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯುತ್ತಿದ್ದರು. 

ಇದನ್ನು ಕಂಡ ಬಲರಾಮನ ಮಾವುತ ತಿಮ್ಮ ಕೂಡಲೇ ಸ್ಥಳಕ್ಕೆ ತೆರಳಿ, ಆನೆಯ ಬಳಿ ಹೋಗಲು ಯಾರು ಹೇಳಿದ್ದು, ಹಗ್ಗ ಕಟ್ಟಿದ್ದರೂ ಏಕೆ ಒಳ ಹೋಗಿದ್ದು ಎಂದು ಪ್ರಶ್ನಿಸಿ ದೂರ ಸರಿಯುವಂತೆ ಹೇಳಿದ್ದಾನೆ. ಈ ವೇಳೆ ಮಾವುತ ತಿಮ್ಮನೊಂದಿಗೆ ಉದ್ದಟತನದಿಂದ ವರ್ತಿಸಿದ ಯುವಕನೊಬ್ಬ, ಆನೆಯೇ ಸುಮ್ಮನಿದೆ ನೀನೇನು ಕೂಗುತ್ತೀಯಾ, ಆನೆಗೆ ನಾವೇನು ಮಾಡಿದ್ದೇವೆ.

ಪೋಟೋ ತೆಗೆಯುವವರೆಗೆ ಸುಮ್ಮನಿರು ಎಂದಿದ್ದಾನೆ. ಇದರಿಂದ ಕೆರಳಿದ ತಿಮ್ಮಾ, ಆನೆಗಳ ಬಳಿ ಯಾರೂ ಹೋಗಬಾರದು, ಅವುಗಳಿಗೆ ಏನಾದರೂ ಹೆಚ್ಚು ಕಡಿಮೆಯಾದರೆ ಏನು ಮಾಡುವುದು ಎಂದು ಹೇಳಿ ದೂರು ತಳ್ಳಿದರು. ಈ ಸಮಯದಲ್ಲಿ ಯುವಕರ ಗುಂಪು ತಿಮ್ಮನ ಬಟ್ಟೆ ಹಿಡಿದು, ಎಳೆದಾಡಿ ಆತನ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ. 

Advertisement

ಇದನ್ನು ಗಮನಿಸಿದ ಇನ್ನಿತರೆ ಮಾವುತರು ಹಾಗೂ ಕಾವಾಡಿಗಳು ಒಂದುಗೂಡಿ ಯುವಕರಿಗೆ ಬುದ್ದಿ ಹೇಳಿದ್ದಾರೆ. ಆದರೂ ಸುಮ್ಮನಾಗದ ಯುವಕರು ತಮ್ಮ ಉದ್ದಟತನದ ವರ್ತನೆಯನ್ನು ಮುಂದುವರಿಸಿದ ವೇಳೆ ಯುವಕರಿಗೆ ಕಪಾಳ ಮೋಕ್ಷ ಮಾಡಿ, ಬುದ್ದಿ ಕಲಿಸಿದ್ದಾರೆ.

ಇದರಿಂದ ಯುವಕರು ಹಾಗೂ ಮಾವುತರು-ಕಾವಾಡಿಗಳ ನಡುವೆ ಮಾತಿನ ಚಕಮಕಿ ಉಂಟಾಗಿತ್ತು. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು, ಎರಡು ಗುಂಪನ್ನು ಸಮಾಧಾನಪಡಿಸಿ ಕಳುಹಿಸಿದರು. ಈ ಎಲ್ಲಾ ಘಟನೆಗಳು ನಡೆದ ಬಳಿಕ ಆನೆಗಳ ಹತ್ತಿರಕ್ಕೆ ಯಾರು ಹೋಗದಂತೆ ಮತ್ತೂಂದು ಹಗ್ಗ ಕಟ್ಟಿ, ಸ್ಥಳಕ್ಕೆ ಪೊಲೀಸ್‌ ಪೇದೆಗಳನ್ನು ನಿಯೋಜಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next