Advertisement

ಜಿಎಸ್‌ಟಿ ಶೇ.18 ಮಿತಿಗೆ ಕೇಂದ್ರಕ್ಕೆ ಒತ್ತಡ ತನ್ನಿ

12:37 PM Oct 29, 2017 | Team Udayavani |

ಹುಬ್ಬಳ್ಳಿ: ಕೇಂದ್ರ ಸರಕಾರ ಜಾರಿಗೊಳಿಸಿರುವ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಯಿಂದ ಉದ್ಯಮ-ವ್ಯಾಪಾರ ವಲಯಕ್ಕೆ ಸಂಕಷ್ಟ ಎದುರಾಗಿದ್ದು, ಜಿಎಸ್‌ಟಿ ಗರಿಷ್ಠ ಶೇ. 18ಕ್ಕಿಂತ ಹೆಚ್ಚಾಗದಂತೆ ಕೇಂದ್ರ ಸರಕಾರದ ಮೇಲೆ ಒತ್ತಡ ತರಲು ಉದ್ಯಮ ವಲಯ ಮುಂದಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿಜಯ ಕುಲಕರ್ಣಿ ಹೇಳಿದರು. 

Advertisement

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಧಾರವಾಡ ಹಾಗೂ ಹಾವೇರಿ ಜಿಲ್ಲೆಗಳ ಕೈಗಾರಿಕಾ ಕೇಂದ್ರ, ಕಾನ್ಫಡರೇಶನ್‌ ಆಫ್ ಇಂಡಿಯನ್‌ ಇಂಡಸ್ಟ್ರಿ ಮತ್ತು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಇಲ್ಲಿನ ಹೋಟೆಲ್‌ ಡೆನಿಸನ್ಸ್‌ನಲ್ಲಿ ಶನಿವಾರ ಆಯೋಜಿಸಿದ್ದ ವೆಂಡರ್‌ ಡೆವಲಪ್‌ಮೆಂಟ್‌ ಹಾಗೂ ಹೂಡಿಕೆದಾರರ ಸಮಾವೇಶ ರೋಡ್‌ ಶೋ ಉದ್ಘಾಟಿಸಿ ಅವರು ಮಾತನಾಡಿದರು. 

ಜಿಎಸ್‌ಟಿ ವಿಚಾರದಲ್ಲಿ ರಾಜಕೀಯವಾಗಿ ಯಾವುದೇ ಆರೋಪ ಮಾಡುತ್ತಿಲ್ಲ. ಈ ಹಿಂದೆ ಯುಪಿಎ ಸರಕಾರದಲ್ಲಿ ಜಿಎಸ್‌ಟಿ ತೆರಿಗೆ ಗರಿಷ್ಠ ಶೇ. 18ರಷ್ಟು ಮೀರದಂತೆ ಯೋಜಿಸಲಾಗಿತ್ತು. ಇದೀಗ ಜಾರಿಗೊಂಡಿರುವ ಜಿಎಸ್‌ಟಿ ಭಯಾನಕವಾಗಿದೆ ಎಂದರು.  

ಕೃಷಿ ಸಂಸ್ಕರಣೆ ಉದ್ಯಮ ಬರಲಿ: ಜಿಲ್ಲೆಯಲ್ಲಿ ಕೃಷಿ ಸಂಸ್ಕರಣೆ ಆಧಾರಿತ ಉದ್ಯಮಗಳ ಸ್ಥಾಪನೆ ಅವಶ್ಯವಾಗಿದ್ದು, ಉದ್ಯಮಿಗಳು ಈ ನಿಟ್ಟಿನಲ್ಲಿ ಆದ್ಯತೆ ನೀಡಬೇಕು. ಇಂತಹ ಉದ್ಯಮ ಆರಂಭವಾದರೆ ರೈತರ ಉತ್ಪನ್ನಗಳಿಗೆ ಉತ್ತಮ ದರ ದೊರೆಯಲಿದೆ. ಜಿಲ್ಲೆಯಲ್ಲಿ ಉದ್ಯಮ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಾಣ ಮಾಡಲಾಗಿದೆ. 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಮಹಿಳಾ ಉದ್ಯಮ ಬೆಳವಣಿಗೆಗೆ ಒತ್ತು ನೀಡಿದ್ದು, ಜಿಲ್ಲೆಯಲ್ಲಿ ಮಹಿಳೆಯರ ಉದ್ಯಮಕ್ಕೆ ಪ್ರತ್ಯೇಕ ಜಮೀನು ಹಾಗೂ ಕಡಿಮೆ ಬಡ್ಡಿಯಲ್ಲಿ ಸಾಲ ಸೌಲಭ್ಯ ನೀಡಲಾಗುತ್ತಿದೆ ಎಂದರು. 

Advertisement

ವಾಕರಸಾ ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ ಮಾತನಾಡಿ, ಕೈಗಾರಿಕಾ ವಲಯಕ್ಕೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ಸಂಸ್ಥೆ ಸಿದ್ಧವಿದ್ದು, ಬಸ್‌ ತಂಗುದಾಣಗಳ ನಿರ್ಮಾಣಕ್ಕೆ ಸ್ಥಳಾವಕಾಶ ನೀಡಬೇಕು. ಸಾರಿಗೆ ವ್ಯವಸ್ಥೆ ಬೇಕೆಂದು ಪ್ರಸ್ತಾವನೆ ಸಲ್ಲಿಸಿದರೆ ಸ್ಪಂದನೆಗೆ ಸಿದ್ಧರಿದ್ದೇವೆ ಎಂದು ತಿಳಿಸಿದರು. ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಶಶಿಕಲಾ ಕವಲಿ ಮಾತನಾಡಿದರು. 

ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ವೇದವ್ಯಾಸ ಕೌಲಗಿ, ಕೆಸಿಸಿಐ ಅಧ್ಯಕ್ಷ ರಮೇಶ ಪಾಟೀಲ, ಗೌರವ ಕಾರ್ಯದರ್ಶಿ ಸಿದ್ದೇಶ್ವರ ಕಮ್ಮಾರ, ಕೆಟಿಪಿಒ ವ್ಯವಸ್ಥಾಪಕ ನಿರ್ದೇಶಕ ಡಾ| ಎಸ್‌. ಎಚ್‌. ವೀರಣ್ಣ, ಧಾರವಾಡ-ಹಾವೇರಿ ಜಿಲ್ಲೆಗಳ ವಿವಿಧ ಅಧಿಕಾರಿಗಳು ಇದ್ದರು. ಧಾರವಾಡ ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಪಿ. ನಾಗೇಶ ಪ್ರಾಸ್ತಾವಿಕ ಮಾತನಾಡಿದರು. 

Advertisement

Udayavani is now on Telegram. Click here to join our channel and stay updated with the latest news.

Next