Advertisement

ಒತ್ತಡ ಜೀವನದಲ್ಲಿ ದೇವರ ಸ್ಮರಣೆಗಿಲ್ಲ ಸಮಯ

06:23 PM Dec 16, 2021 | Team Udayavani |

ರಾಣಿಬೆನ್ನೂರ: ಆಧುನಿಕತೆಯ ಭರಾಟೆ, ಯಾಂತ್ರೀಕೃತ ಜೀವನ, ವಿದೇಶಿ ವ್ಯಾಮೋಹ, ಹೆಚ್ಚುತ್ತಿರುವ ಮೊಬೈಲ್‌ ಹಾವಳಿ ಹಾಗೂ ಒತ್ತಡದ ಜೀವನದಿಂದಾಗಿ ಇಂದು ಭಗವಂತನ ಸ್ಮರಣೆ, ಪೂಜೆ, ಪುನಸ್ಕಾರ ಮಾಡಲು ಮನುಷ್ಯನಿಗೆ ಸಮಯವೇ ಇಲ್ಲದಂತಾಗಿದೆ ಎಂದು ಕೂಡಲಿ ಶೃಂಗೇರಿ ಶಂಕರಾಚಾರ್ಯ ಮಹಾಸಂಸ್ಥಾನ ಪೀಠದ ಜಗದ್ಗುರು ವಿದ್ಯಾಭಿನವ ಭಾರತಿ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.

Advertisement

ಬುಧವಾರ ನಗರದ ಕುರುಬಗೇರಿಯ ಪ್ರಾಚೀನ ಶ್ರೀ ಬನಶಂಕರಿದೇವಿ ದೇವಸ್ಥಾನ ಸಮಿತಿ ವತಿಯಿಂದ ನೂತನವಾಗಿ 1 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಿರುವ ಶ್ರೀ ಬನಶಂಕರಿ ದೇವಿ ದೇವಸ್ಥಾನ ಉದ್ಘಾಟಿಸಿ ಅವರು ಮಾತನಾಡಿದರು.

ಭಗವಂತನ ಅನುಗ್ರಹ ಬೇಕಾದರೆ ಮನುಷ್ಯ ಸದಾ ಶಾಂತಿ, ನೆಮ್ಮದಿ, ಸಮಾಧಾನದಿಂದ ಭಕ್ತಿಯ ಪೂಜೆ ನೆರವೇರಿಸಬೇಕು. ಜೀವನದುದ್ದಕ್ಕೂ ಭಗವಂತನ ಸ್ಮರಣೆ ಮಾಡುವುದರಿಂದ ಬದುಕು ಪಾವನವಾಗುತ್ತದೆ ಎಂದರು. ಕಲುಷಿತಗೊಂಡಿರುವ ಸಮಾಜದಲ್ಲಿ ಹಾಗೂ ದಾರಿ ತಪ್ಪುತ್ತಿರುವ ಮಕ್ಕಳು ಮಹಾಭಾರತ, ರಾಮಾಯಣ, ಭಗವದ್ಗೀತೆಯಂತಹ ನೀತಿ ಕಥೆಗಳನ್ನು ಓದುವು ದರಿಂದ ಹಾಗೂ ಆಲಿಸುವುದರಿಂದ ಮನಸ್ಸನ್ನು ಶುಚಿತ್ವಗೊಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದರಲ್ಲಿ ಪಾಲಕರ, ಪೋಷಕರ, ಶಿಕ್ಷಕರ ಪಾತ್ರ ಅಮೂಲ್ಯವಾಗಿದೆ. ಮನುಷ್ಯ ಎಲ್ಲ ಸಮಸ್ಯೆಗಳನ್ನು ಬದಿಗೊತ್ತಿ ಭಗವಂತನ ಸಾಕ್ಷಾತ್ಕಾರ ಹೊಂದಲು ಪ್ರಯತ್ನಿಸಬೇಕೆಂದು ಹೇಳಿದರು.

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಶಿರಹಟ್ಟಿ ಫಕ್ಕೀರೇಶ್ವರ ಸಂಸ್ಥಾನ ಮಠದ ಫಕ್ಕೀರಸಿದ್ಧರಾಮ ಮಹಾಸ್ವಾಮಿಗಳು ಮಾತನಾಡಿ, ಒಳ್ಳೆಯ ಕೆಲಸ ಮಾಡಲು ಒಳ್ಳೆಯ ಮನಸ್ಸು ಬೇಕು. ಇದರಿಂದ ಸಮಾಜದ ನಾಗರಿಕರು ಸಹ ಸಹಕರಿಸಲು ಮುಂದಾಗುತ್ತಾರೆ. ಪ್ರಾಮಾಣಿಕ ಕಾರ್ಯದಿಂದ ಮುನ್ನಡೆದರೆ ಏನೆಲ್ಲ ಸಾಧಿ ಸಲು ಸಾಧ್ಯ. ಪುರುಷರು ಓಸಿ, ಇಸ್ಪೀಟ್‌, ಕುಡಿತವನ್ನು ಬಿಡಬೇಕು. ಮಹಿಳೆಯರು ಚಾಡಿ ಹೇಳುವುದನ್ನು ಬಿಟ್ಟಾಗ ಮಾತ್ರ ಆರೋಗ್ಯಕರ ಸಮಾಜ ಕಾಣಬಹುದು ಎಂದರು.

ಬನಶಂಕರಿ ದೇವಿ ಎಲ್ಲಾ ದೇವಿಯರಿಗಿಂತ ಶಕ್ತಿಶಾಲಿಯಾಗಿದ್ದಾಳೆ. ದೇವಿಯನ್ನು ಭಕ್ತಿಪೂರ್ವಕವಾಗಿ ಸ್ಮರಣೆ, ಪೂಜೆ, ಪುನಸ್ಕಾರ ಮಾಡುವುದರಿಂದ ಕಷ್ಟಗಳು ದೂರವಾಗುತ್ತವೆ. ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಿರುವ ಪುರಾತನ ದೇವಸ್ಥಾನಗಳಲ್ಲಿ ಒಂದಾಗಿರುವ ಈ ಬನಶಂಕರಿ ದೇವಿ ದೇಗುಲ ಬರಿ ಕಲ್ಲಿನಿಂದ ಮಾತ್ರ ನಿರ್ಮಿತವಾಗಿರುವುದು ವಿಶೇಷವಾಗಿದೆ. ಕಲ್ಲಿನಿಂದ ಮಾಡಿದ ಕಾರ್ಯ ಕೈಲಾಸಕ್ಕೆ ಸೇರುತ್ತದೆ ಎನ್ನುವ ನುಡಿ ಈ ದೇವಸ್ಥಾನ ನಿರ್ಮಾಣದಿಂದ ಸತ್ಯವಾಗಿದೆ ಎಂದರು.

Advertisement

ನಿವೃತ್ತ ಶಿಕ್ಷಕ ಗುರುಬಸಪ್ಪ ಪೂಜಾರ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್‌ ಯುವ ಮುಖಂಡ ಪ್ರಕಾಶ ಕೋಳಿವಾಡ, ಸಮಿತಿ ಅಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ, ಡಾ| ಸಂಜಯ್‌ ನಾಯಕ, ನಗರಸಭಾ ಸದಸ್ಯರಾದ ಕವಿತಾ ಹೆದ್ದೇರಿ, ನೀಲಮ್ಮ ಮಾಕನೂರು, ಹೊನ್ನಮ್ಮ ಕಾಟಿ, ಸುಮಾ ಹುಚ್ಚಗೊಂಡರ್‌, ಜಯಶ್ರೀ ಪಿಸೆ ಹಾಗೂ ಮುಖಂಡರಾದ ಮಲ್ಲಿಕಾರ್ಜುನ ಹಳ್ಳಿ, ರಾಮಮೂರ್ತಿ ನಾಯಕ, ಶಿವಪುತ್ರಪ್ಪ ಕೊಪ್ಪದ, ಸಂಕಪ್ಪ ಮಾರನಾಳ, ವಿಶ್ವನಾಥ ಪಾಟೀಲ, ಕರಬಸಪ್ಪ ಮಾಕನೂರು, ಜಯಂತ ನಾಯಕ್‌, ಪಾಂಡಪ್ಪ ಹಡ್ಮನಿ, ಸರ್ವಕ್ಕ ಕೊಪ್ಪದ, ಬಸಪ್ಪ ನಾಡರ್‌, ಗಿರಿಜಾ ಗೂಳೆಣ್ಣನವರ, ಮಹೇಶ ಕೊಪ್ಪದ, ಪ್ರಕಾಶ ಜೈನ್‌ ಸೇರಿದಂತೆ ದೇವಸ್ಥಾನ ಸಮಿತಿಯ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತಿತರರು ಇದ್ದರು. ನಂತರ ಮಹಾಪ್ರಸಾದ ನಡೆಯಿತು. ಸಂಜೆ ನಡೆದ ಕಾರ್ಯಕ್ರಮದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ತನು, ಮನ, ಧನ ಸಹಾಯಗೈದ ದಾನಿಗಳನ್ನು ಸನ್ಮಾನಿಸಲಾಯಿತು. ನಂತರ ರಸಂಜರಿ ಕಾರ್ಯಕ್ರಮಗಳು ನಡೆದವು.

Advertisement

Udayavani is now on Telegram. Click here to join our channel and stay updated with the latest news.

Next