ಬ್ರಹ್ಮಾವರ: ಭಾರತದ ಮೇಲೆ ಎಷ್ಟೊಂದು ದೇಶದವರು ದಾಳಿ ಮಾಡಿದರೂ ನಮ್ಮ ಧರ್ಮ, ಸಂಸ್ಕೃತಿ, ಭಾಷೆ, ಆಹಾರ ವ್ಯವಸ್ಥೆ ಹಾಗೆಯೇ ಉಳಿದಿದೆ. ದೇವರು ಎನ್ನುವ ನಂಬಿಕೆ ಇದನ್ನೆಲ್ಲಾ ಉಳಿಸಿದೆ ಎಂದು ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರ ಮೂರ್ತಿ ಹೇಳಿದರು.
ಅವರು ಸೋಮವಾರ ಬಾರಕೂರು ಕಚ್ಚಾರು ಶ್ರೀ ನಾಗೇಶ್ವರ ದೇವಸ್ಥಾನದಲ್ಲಿ ಮುಂಬಯಿ ವಾರ್ಷಿಕೋತ್ಸವ ಸಮಿತಿ ಆಶ್ರಯದಲ್ಲಿ ವಾರ್ಷಿಕ ಪ್ರತಿಷ್ಠಾ ವರ್ಧಂತ್ಯುತ್ಸವ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರಣಿಕ ದೇವಸ್ಥಾನ: ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಕಚ್ಚಾರು ಶ್ರೀ ನಾಗೇಶ್ವರ ದೇವಸ್ಥಾನ ಕಾರಣಿಕ ಕ್ಷೇತ್ರ ಎನ್ನುವುದಕ್ಕೆ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡಿರುವುದು ಒಂದು ಸಾಕ್ಷಿ. ದೇಗುಲದ ಉದ್ದೇಶಿತ ಸಭಾಭವನಕ್ಕೆ ಸರಕಾರದಿಂದ ಗರಿಷ್ಠ ಅನುದಾನ ದೊರೆಯುವಲ್ಲಿ ಪ್ರಯತ್ನಿಸುವೆ ಎಂದರು.
ಭಂಡಾರಿ ಸಮಾಜವು ಜನಸಂಖ್ಯೆಯಲ್ಲಿ ಚಿಕ್ಕ ಸಮಾಜವಾದರೂ ಸಾಕಷ್ಟು ಸಾಧಕರಿದ್ದಾರೆ. ಇವರ ಬೇಡಿಕೆಗಳಿಗೆ ಸದಾ ಸ್ಪಂದಿಸುವುದಾಗಿ ಸೊರಬ ಕ್ಷೇತ್ರದ ಶಾಸಕ ಮಧು ಬಂಗಾರಪ್ಪ ಹೇಳಿದರು.
ಒಗ್ಗೂಡುವ ಕೇಂದ್ರ: ಸಮಾಜದ ಎಲ್ಲ ಸಮುದಾಯದವರನ್ನು, ಸಮುದಾಯದ ಎಲ್ಲ ವ್ಯಕ್ತಿಗಳನ್ನು ಒಗ್ಗೂಡಿಸುವ ಕ್ಷೇತ್ರವೇ ದೇವಸ್ಥಾನ ಎಂದು ಅಧ್ಯಕ್ಷತೆ ವಹಿಸಿದ್ದ ಕಚ್ಚಾರು ಶ್ರೀ ನಾಗೇಶ್ವರ ದೇವಸ್ಥಾನ ಆಡಳಿತ ಮತ್ತು ಸೇವಾ ಟ್ರಸ್ಟ್ ಅಧ್ಯಕ್ಷ ಕಡಂದಲೆ ಸುರೇಶ್ ಭಂಡಾರಿ ಹೇಳಿದರು. ಕಚ್ಚಾರು ಕ್ಷೇತ್ರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸಭಾ ಭವನ ಹಾಗೂ ಮುಂದಿನ ವರ್ಷದ ಬ್ರಹ್ಮಕಲಶೋತ್ಸವಕ್ಕೆ ಸರಕಾ ರದ ಸಹಕಾರವನ್ನು ಬಯಸಿದರು.
ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಕ್ಯಾ|ಗಣೇಶ್ ಕಾರ್ಣಿಕ್, ಅದಾನಿ ಯುಪಿಸಿಲ್ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಭವಾನಿ ಶಿಪ್ಪಿಂಗ್ ಸರ್ವಿಸಸ್ ಮ್ಯಾನೇಜಿಂಗ್ ಡೈರೆಕ್ಟರ್ ಕೆ.ಡಿ.ಶೆಟ್ಟಿ, ಮಾಜಿ ಶಾಸಕ ಎಚ್. ಗೋಪಾಲ ಭಂಡಾರಿ, ಭಂಡಾರಿ ಮಹಾಮಂಡಲದ ಅಧ್ಯಕ್ಷ ಸದಾಶಿವ ಭಂಡಾರಿ ಸಕಲೇಶಪುರ, ಪ್ರ. ಕಾರ್ಯದರ್ಶಿ ಯು. ಸತೀಶ್ ಭಂಡಾರಿ, ಮುಂಬಯಿ ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷ ಡಾ| ಶಿವರಾಮ ಭಂಡಾರಿ, ಪ್ರಧಾನ ಕಾರ್ಯದರ್ಶಿ ಅಡ್ವಕೇಟ್ ಆರ್.ಎಂ. ಭಂಡಾರಿ, ಮುಂಬಯಿ ಭಂಡಾರಿ ಸೇವಾ ಸಮಿತಿ ಅಧ್ಯಕ್ಷ ಅಡ್ವಕೇಟ್ ಶೇಖರ್ ಭಂಡಾರಿ, ಕಚ್ಚಾರು ದೇಗುಲ ಆಡಳಿತ ಮತ್ತು ಸೇವಾ ಟ್ರಸ್ಟ್ ಕಾರ್ಯದರ್ಶಿ ಸೋಮಶೇಖರ ಎಂ. ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.
ಕಡಂದಲೆ ಸುರೇಶ್ ಭಂಡಾರಿ ಸ್ವಾಗತಿಸಿ, ಸುಧಾಕರ ಬನ್ನಂಜೆ ಕಾರ್ಯಕ್ರಮ ನಿರೂಪಿಸಿದರು.