ತಿ.ನರಸೀಪುರ: ಸುಸ್ತಿದಾರರಾಗಿರುವ ಷೇರುದಾರ ರೈತರು ಸಕಾಲದಲ್ಲಿ ಸಾಲದ ಬಾಕಿ ಹಣವನ್ನು ಮರುಪಾವತಿ ಮಾಡುವ ಮೂಲಕ ಮುಂದಿನ ವರ್ಷದೊಳಗೆ ಬಿ ಗ್ರೇಡ್‌ನಲ್ಲಿರುವ ಕಸಬಾ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ ಎ ಗ್ರೇಡ್ ಮಟ್ಟಕ್ಕೆ ಬರಲು ಸಹಕಾರ ನೀಡಬೇಕು ಎಂದು ಅಧ್ಯಕ್ಷ ಮಲ್ಲಣ್ಣ ಹೇಳಿದರು.
ಪಟ್ಟಣದ ಭಗವಾನ್ ಚಿತ್ರಮಂದಿರದ ಬಳಿಯಿರುವ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ನಡೆದ 2016-17ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು. ಕಳೆದ ಸಾಲಿನಲ್ಲಿ 326 ರೈತರಿಗೆ ಸಾಲ ಸೌಲಭ್ಯವನ್ನು ವಿತರಿಸಲಾಗಿತ್ತು. ಅದರಲ್ಲಿ 1,38.98,000 ರೂಗಳ ಹಣ ರಾಜ್ಯ ಸರ್ಕಾರದ ಸಾಲ ಮನ್ನಾ ಆಗಿದೆ. 31 ಲಕ್ಷ ಸುಸ್ತಿ ಹಣ ಬಾಕಿಯಿದ್ದು, ಸಾಲ ಬಾಕಿ ಮರುಪಾವತಿಯಾದಲ್ಲಿ ಹೊಸ ಸಾಲ ಸೌಲಭ್ಯ ನೀಡಲಾಗುವುದು ಎಂದರು.
ಮುಂದಿನ ಸಾಲಿನಲ್ಲಿ 53 ಲಕ್ಷ ರೂಗಳ ಸಾಲವನ್ನು ವಿತರಣೆ ಮಾಡಲು ಉದ್ದೇಶಿಸಲಾಗಿದೆ. ಹಿಂದಿನ ಸಿಇಒ ಆಗಿದ್ದ ತಿರುಮಕೂಡಲು ಜಯರಾಂ ಅವರು ಸುಮಾರು 22 ಲಕ್ಷ ರೂಗಳ ಸಂಘದ ಹಣವನ್ನು ದುರ್ಬಳಕೆ ಮಾಡಿಕೊಂಡ ಪ್ರಕರಣದಿಂದ ಸ್ವಲ್ಪಮಟ್ಟಿಗೆ ಸಂಘಕ್ಕೆ ಆರ್ಥಿಕ ಹೊಡೆತವೂ ಬಿದ್ದಿತು. ದುರ್ಬಳಕೆಯಾದ ಹಣವನ್ನು ವಸೂಲಿ ಮಾಡಲು ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಸಿದ್ದರಿಂದ ಜಾಮೀನು ಪಡೆದು ಹೊರ ಬಂದಿದ್ದು, ಪ್ರಕರಣ ನ್ಯಾಯಾಲಯದಲ್ಲಿದೆ ಎಂದು ತಿಳಿಸಿದರು.
ಸಂಘದ ಸಿಇಒ ಟಿ.ಎನ್.ಕಿರಣ್ ಮಾತನಾಡಿ, 2016-17ನೇ ಸಾಲಿನಲ್ಲಿ 1,49,155 ರೂಗಳ ನಿವ್ವಳ ಲಾಭ ಬಂದಿದೆ. ಮುಂದಿನ 2017-18ನೇ ಸಾಲಿಗೆ 11 ಲಕ್ಷ ರೂಗಳ ಅಂದಾಜು ಬಜೆಟ್ ರೂಪಿಸಲಾಗಿದ್ದು, ಬೆಳೆಸಾಲ ಬಡ್ಡಿ 7 ಲಕ್ಷ, ಮಹಿಳಾ ಸಂಘಗಳಿಂದ 2.90 ಲಕ್ಷ ಹಾಗೂ ಯಶಸ್ವಿನಿ ವಿಮಾ ಯೋಜನೆಗೆ 1 ಲಕ್ಷ ಹಾಗೂ ಷೇರುದಾರರಿಂದ 55,000 ರೂ ಹಣವನ್ನು ಹಂಚಿಕೆ ಮಾಡಲಾಗಿದೆ. ಮುಂದಿನ ಸೋಮವಾರದಿಂದ ನೂತನ 68 ಮಂದಿ ಷೇರುದಾರ ಸದಸ್ಯರು ಸಾಲ ಸೌಲಭ್ಯ ಪಡೆಯಬಹುದು ಎಂದು ತಿಳಿಸಿದರು.
ತಾಪಂ ಸದಸ್ಯ ಎಂ.ರಮೇಶ, ಎಂಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಎಂ.ಮಹದೇವಸ್ವಾಮಿ, ಮೇಲ್ವಿಚಾರಕ ರಾಜಪ್ಪ, ಸಂಘದ ಉಪಾಧ್ಯಕ್ಷ ತಿರುಮಕೂಡಲು ವೆಂಕಟೇಶ್, ನಿರ್ದೇಶಕರಾದ ಅಂಗಡಿ ಎನ್.ಶೇಖರ್, ಟಿ.ಸಿ.ಫಣೀಶ್‌ಕುಮಾರ್, ಕೆ.ನಂಜುಂಡಸ್ವಾಮಿ, ಸಿದ್ದೇಗೌಡ, ದೊಡ್ಡಬಸವಯ್ಯ, ಮಹಾಲಿಂಗಪ್ಪ, ನಾಗಮ್ಮ, ಎಂ.ನಾಗರತ್ನ, ಖಾಸಗಿ ಬಸ್ ಏಜೆಂಟರ ಸಂಘದ ಅಧ್ಯಕ್ಷ ಪಿ.ಪುಟ್ಟರಾಜು, ಮುಖಂಡರಾದ ಪುಳ್ಳಾರಿಗೌಡ, ದೀಪು, ಸೋಮಣ್ಣನಾಯಕ, ಸಿ.ಮಹದೇವ, ದಿಲೀಪ್, ಶಾಂತರಾಜು, ದೀಪು, ಲಕ್ಷ್ಮಣ, ಎಂ.ಆರ್.ಪ್ರಭಾಮಣಿ, ಸೋಮಣ್ಣ ಇದ್ದರು.