Advertisement

ಒಕ್ಕಲುತನವೇ ಶ್ರೇಷ್ಠ ಉದ್ಯೋಗ: ರಂಜಾನ್‌ ದರ್ಗಾ

12:12 PM Jan 08, 2019 | |

ಕಲಬುರಗಿ: ಬಸವಾದಿ ಶರಣರ ಪರಂಪರೆಯಲ್ಲಿ ರೈತ ಪ್ರತಿನಿಧಿಯಾಗಿ ಒಕ್ಕಲುತನದ ಪ್ರಕ್ರಿಯೆಯ ಪವಿತ್ರ ಕಾಯಕದಲ್ಲಿ ತೊಡಗಿದ್ದ ಒಕ್ಕಲಿಗ ಮುದ್ದಣ್ಣನವರು ಅಂಗ ಬೇಸಾಯದ ಜತೆಗೆ ಲಿಂಗ ಬೇಸಾಯ ಮಾಡುವ ಕುರಿತು ಕೂಡ ಹೇಳಿದ್ದಾರೆ ಎಂದು ಶರಣ ಚಿಂತಕ ರಂಜಾನ್‌ ದರ್ಗಾ ಹೇಳಿದರು.

Advertisement

ಎಳ್ಳ ಅಮಾವಾಸ್ಯೆ ನಿಮಿತ್ತ ಬಸವ ಕೇಂದ್ರದ ಆಶ್ರಯದಲ್ಲಿ ನಗರದ ಹೊರವಲಯದಲ್ಲಿರುವ ಸೋಮಣ್ಣ ನಡಕಟ್ಟಿ ಅವರ ಮೃತ್ಯಂಜಯ ಫಾರ್ಮ್ ಹೌಸ್‌ನಲ್ಲಿ ಹಮ್ಮಿಕೊಂಡಿದ್ದ ಒಕ್ಕಲಿಗ ಮುದ್ದಣ್ಣ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಅವರು ಅನುಭಾವ ನೀಡಿದರು. 

ಮುದ್ದಣ್ಣ ರಚಿಸಿದ 12 ವಚನಗಳು ಮಾತ್ರ ಲಭ್ಯವಿದ್ದು, ಆ ವಚನಗಳಲ್ಲಿ ವಿಚಾರದ ಬೆಳಕಿದೆ. ರೈತರಿಗೆ ಸಲಹೆಯಿದೆ. ಸಮಾಜಕ್ಕೆ ಉಪಯೋಗಿಯಾಗಬಲ್ಲ ವಿವೇಚನೆ, ವಿಶ್ಲೇಷಣೆಯಿದೆ ಎಂದು ಹೇಳಿದರು. ವೇದ ಶಾಸ್ತ್ರವನೋದುವುದಕ್ಕೆ ಹಾರುವನಲ್ಲ. ಇರಿದು ಮರೆಯುವುದಕ್ಕೆ ಕ್ಷತ್ರಿಯನಲ್ಲ. 

ವ್ಯವಹರಿಸುವುದಕ್ಕೆ ವೈಶ್ಯನಲ್ಲ. ಒಕ್ಕಲ ಮಗನ ತಪ್ಪ ನೋಡದೆ ಒಪ್ಪಗೊಳ್ಳಯ್ಯ, ಕಾಮಭೀಮ ಜೀವಧನದೊಡೆಯ ಎಂಬ ವಚನದ ಮೂಲಕ ಹಾರುವ, ಕ್ಷತ್ರಿಯ, ವೈಶ್ಯರಿಗಿಂತ ರೈತನ ಕಾಯಕವೇ ಶ್ರೇಷ್ಠವಾದ ಕಾಯಕ. ಹೀಗಾಗಿ ಅವನಲ್ಲಿ ತಪ್ಪು ಎಣಿಸದೆ ರೈತಾಪಿ ವರ್ಗವನ್ನು ಜೀವಕಾರಣ್ಯದಿಂದ ನಡೆಸಿಕೊಳ್ಳಬೇಕು ಎಂದು ಹೇಳಿದರು.

ಭೂಮಿಯಿಂದ ಪಡೆದ ಪ್ರಸಾದವನ್ನು ಭೂಮಿಗೊಂದಿಷ್ಟು (ಚರಗ ಚೆಲ್ಲಿ) ಸಾಂಕೇತಿಕವಾಗಿ ದಾಸೋಹ ಮಾಡಿ, ಉಣ್ಣುವ ನಿಜಜೀವಿಗಳಿಗೆ ಪ್ರೀತಿಯಿಂದ ದಾಸೋಹ ಮಾಡುವುದು ಈ ಅಮಾವಾಸ್ಯೆ ಮುಖ್ಯ ಉದ್ದೇಶ. ಅದನ್ನು ನಡಕಟ್ಟಿ ಅವರು ಪ್ರತಿ ವರ್ಷ ಮುಂದುವರಿಸಿಕೊಂಡು ಬಂದಿರುವುದು ಸ್ತುತ್ಯರ್ಹ ಕಾರ್ಯ ಎಂದು ಹೇಳಿದರು. ಬಸವ ಕೇಂದ್ರದ ಶಿವಶರಣಪ್ಪ ಕಲ್ಬುರ್ಗಿ ಅಧ್ಯಕ್ಷತೆ ವಹಿಸಿದ್ದರು. 

Advertisement

ವಿಶ್ವ ಜಾಗತಿಕ ಲಿಂಗಾಯತ ಮಹಾಸಭಾದ ರವೀಂದ್ರ ಶಾಬಾದಿ, ಮಹಾಗಾಂವಕರ್‌, ಜಿ.ಎಸ್‌. ಪಾಟೀಲ, ಬಸವರಾಜ ಮೊರಬದ, ಸಿದ್ಧರಾಮ ಯಳವಂತಗಿ, ಜಗದೀಶ ಪಾಟೀಲ, ಮಹಾಂತೇಶ ಪಾಟೀಲ ರಾಜಾಪುರ, ಎಸ್‌. ಎಂ. ಡೋಮನಾಳ, ಅಮೃತ ಮಾನಕರ್‌, ಎಚ್‌.ಬಿ. ತೀರ್ಥೆ, ಚಂದ್ರಶೇಖರ ಮಲ್ಲಾಬಾದಿ, ಅನಸೂಯಾ ನಡಕಟ್ಟಿ ಭಾಗವಹಿಸಿದ್ದರು. ಬಸವ ಕೇಂದ್ರದ ಕೋಶಾಧ್ಯಕ್ಷ ಸೋಮಣ್ಣ ನಡಕಟ್ಟಿ ಸ್ವಾಗತಿಸಿದರು. ಮಲ್ಲಣ್ಣ ನಾಗರಾಳ ನಿರೂಪಿಸಿದರು. ಮಹಾಂತೇಶ್ವರಿ ನಡಕಟ್ಟಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next