Advertisement

ಬೀದಿಬದಿ ವ್ಯಾಪಾರಿಗಳ ಬದುಕು ಚಿಂದಿ

09:37 AM May 11, 2021 | Team Udayavani |

ಹುಬ್ಬಳ್ಳಿ: ಬೀದಿಬದಿ ವ್ಯಾಪಾರಿಗಳು, ವಿವಿಧ ತಿಂಡಿ-ತಿನಿಸುಗಳ ಮಾರಾಟ ಮಾಡುವವರಿಗೆ ಕೋವಿಡ್ ಪೆಟ್ಟು ನೀಡಿದ್ದು, ನಿತ್ಯದ ದುಡಿಮೆ, ಆದಾಯ ಇಲ್ಲದೆ ಪರದಾಡುತ್ತಿದ್ದಾರೆ. ಸಂಜೆಯಾದರೆ ಗಿರಮಿಟ್ಟು, ಬನ್‌-ಮಿರ್ಚಿ, ಎಗ್‌ ರೈಸ್‌, ಕುರುಕುಲು ತಿಂಡಿ ಮಾರಾಟ ಮಾಡಿ ಅಂದಿನ ಜೀವನ ನಡೆಸುತ್ತಿದ್ದವರು, ಸಣ್ಣ ಪುಟ್ಟ ಅಂಗಡಿಗಳನ್ನು ಇರಿಸಿಕೊಂಡವರು ಅಕ್ಷರಶಹಃ ಬೀದಿಗೆ ಬಂದಿದ್ದಾರೆ.

Advertisement

ತಮ್ಮದೇ ವಹಿವಾಟಿನಿಂದ ನಿತ್ಯದ ಆದಾಯದೊಂದಿಗೆ ಕುಟುಂಬ ನಿರ್ವಹಣೆ ಮಾಡುತ್ತಿದ್ದವರು ಇದೀಗ ಸಂಕಷ್ಟ ಎದುರಿಸುವಂತಾಗಿದೆ. ಕುಟುಂಬ ನಿರ್ವಹಣೆಗೂ ಕಷ್ಟ ಪಡುತ್ತಿದ್ದಾರೆ. ಕೋವಿಡ್‌-19 ಎರಡನೇ ಅಲೆ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಕೋವಿಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಬೀದಿಬದಿಯ ಬಹುತೇಕ ವ್ಯಾಪಾರ-ವಹಿವಾಟು ನಿಂತಿದೆ. ಹೊಟೇಲ್‌ಗ‌ಳಿಗೆ ಪಾರ್ಸಲ್‌ಗೆ ಅವಕಾಶ ನೀಡಲಾಗಿತ್ತಾದರೂ ಸಂಜೆ ವೇಳೆ ತಳ್ಳುಗಾಡಿ, ಸಣ್ಣ ಮಳಿಗೆಯಲ್ಲಿ ವಿವಿಧ ತಿಂಡಿ-ತಿನಿಸು, ಇನ್ನಿತರೆ ಪದಾರ್ಥಗಳ ಮಾರಾಟಗಾರರು ಪಾರ್ಸಲ್‌ ಸಾಧ್ಯವಾಗದೆ ತಮ್ಮ ವ್ಯಾಪಾರವನ್ನೇ ಬಂದ್‌ ಮಾಡಿಕೊಳ್ಳಬೇಕಾಗಿ ಬಂದಿದ್ದರಿಂದ ಕುಟುಂಬ ನಿರ್ವಹಣೆಗೆ ಬೇರೆ ವಹಿವಾಟಿನತ್ತ ಮುಖ ಮಾಡುವಂತಾಗಿದೆ.

ತರಕಾರಿ ಮಾರಾಟ: ಈಗ ಎಲ್ಲವೂ ಬಂದ್‌ ಆದ ಹಿನ್ನೆಲೆಯಲ್ಲಿ ಜೀವನ ನಡೆಸುವುದು, ಅಂಗಡಿ ಬಾಡಿಗೆ ಕಟ್ಟುವುದು ಕಷ್ಟಕರವಾಗಿದ್ದು, ಇದರಿಂದ ಅನ್ಯ ಮಾರ್ಗವಿಲ್ಲದೇ ಬಹುತೇಕರು ತರಕಾರಿ ಮಾರಾಟಕ್ಕೆ ಮುಂದಾಗಿದ್ದಾರೆ. ನಗರದಲ್ಲಿ ಸಂಜೆಯಾದರೆ ಗಿರಮಿಟ್ಟು, ಪಡ್ಡು ಮಾರಾಟ ಮಾಡುತ್ತಿದ್ದವರು ಇಂದು ಅದೇ ಗಾಡಿಯಲ್ಲಿ ತರಕಾರಿ ಮಾರಲು ಮುಂದಾಗಿದ್ದಾರೆ. ಇನ್ನೂ ಕೆಲವರು ರಸ್ತೆ ಅಕ್ಕಪಕ್ಕದಲ್ಲಿ ತರಕಾರಿ ಮಾರಲು ಮುಂದಾಗಿದ್ದಾರೆ.

ವಿವಿಧ ಬಡಾವಣೆಗಳಲ್ಲಿ ಸಂಚರಿಸಿ ತರಕಾರಿ ಮಾರಾಟಕ್ಕೆ ಸರಕಾರ ಅವಕಾಶ ನೀಡಿದ್ದು, ಪ್ರತಿದಿನ ಬೆಳಿಗ್ಗೆ ವಾಹನ ತೆಗೆದುಕೊಂಡು ತರಕಾರಿ ಖರೀದಿಸಿ ಬರಲು ಅವಕಾಶ ಮಾಡಿ ಕೊಡಿ ಎನ್ನುವುದು ತರಕಾರಿ ಮಾರಾಟಗಾರರ ಒತ್ತಾಯವಾಗಿದೆ. ವಾಹನಗಳು ರಸ್ತೆಗಿಳಿದರೆ ಪೊಲೀಸರು ಅವುಗಳನ್ನು ಸೀಜ್‌ ಮಾಡುತ್ತಿದ್ದು, ಖರೀದಿ ಇದ್ದವರು ನಡೆದುಕೊಂಡು ಬರಬೇಕೆಂದು ಹೇಳುತ್ತಿದ್ದರಿಂದ ಎಪಿಎಂಸಿಗೆ ಹೋಗಿ ತರಕಾರಿ ತಂದು ಮಾರಾಟ ಮಾಡುವರಿಗೆ ಸಮಸ್ಯೆ ಆಗುತ್ತಿದೆ ಎಂಬುದು ಕೆಲವರ ಅನಿಸಿಕೆ.

ವರದಿ :ಬಸವರಾಜ ಹೂಗಾರ

Advertisement

 

 

 

Advertisement

Udayavani is now on Telegram. Click here to join our channel and stay updated with the latest news.

Next