Advertisement

ಕುಂದಾಪುರ: ಬೀದಿ ವ್ಯಾಪಾರಿಗಳಿಗೆ ಕೋಟಿ ರೂ. ಸಾಲ; ಉಡುಪಿ ಜಿಲ್ಲೆಯಲ್ಲಿ ಕುಂದಾಪುರ ಪ್ರಥಮ

12:21 PM Nov 04, 2022 | Team Udayavani |

ಕುಂದಾಪುರ: ವಿಸ್ತಾರ, ಗಾತ್ರದಲ್ಲಿ ಸಣ್ಣದಾಗಿ ಇರುವ ಕುಂದಾಪುರ ಪುರಸಭೆ ಪ್ರಧಾನ ಮಂತ್ರಿಯವರ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಮಹತ್ತರ ಸಾಧನೆ ಮಾಡಿದೆ. ಪಿಎಂ ಸ್ವನಿಧಿ ಯೋಜನೆಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ 1 ಕೋ.ರೂ.ಗಳಷ್ಟು ಸಾಲ ಕೊಡಿಸಿದೆ. ಬಡವರೂ ನಂಬಿಕೆಗೆ ಅರ್ಹರು ಎಂದು ನಿರೂಪಿಸಿದೆ. ಈ ಮೂಲಕ ಉಡುಪಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ದೇಶದ 253 ಸ್ಥಳೀಯಾಡಳಿತ ಸಂಸ್ಥೆಗಳಷ್ಟೇ ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿವೆ ಎನ್ನುವುದು ಗಮನಾರ್ಹ.

Advertisement

ಕೋವಿಡ್‌ ಬಳಿಕ

ಕೋವಿಡ್‌-19 ವ್ಯಾಪಕವಾಗಿ ಹರಡುವುದನ್ನು ತಡೆಯಲೆಂದು ಜಾರಿಗೊಳಿಸಿದ ಲಾಕ್‌ಡೌನ್‌ ಹಲವರ ಆರ್ಥಿಕ ಪರಿಸ್ಥಿತಿಯನ್ನು ಏರುಪೇರು ಮಾಡಿತು. ಹಲವರು ಇನ್ನೂ ಲಾಕ್‌ಡೌನ್‌ ಹೊಡೆತ ದಿಂದ ಚೇತರಿಸಿಕೊಂಡಿಲ್ಲ. ಬೀದಿ ವ್ಯಾಪಾರವನ್ನೇ ನಂಬಿದ್ದ ಸಾವಿರಾರು ಜನರಿಗೆ ಆರ್ಥಿಕವಾಗಿ ಬಂಡವಾಳದ ರೂಪದಲ್ಲಿ ಸಾಲ ನೀಡಲು ಕೇಂದ್ರ ಸರಕಾರ ಆತ್ಮನಿರ್ಭರ ಯೋಜನೆಯಡಿ ಪಿಎಂ ಸ್ವನಿ ಧಿ ಯೋಜನೆಯನ್ನು 2 ವರ್ಷಗಳ ಹಿಂದೆ ಜಾರಿಗೆ ತಂದಿದೆ.

ಸ್ವನಿಧಿ ಯೋಜನೆ

ಬೀದಿ ಬದಿ ಮತ್ತು ಸಣ್ಣ ವ್ಯಾಪಾರಿಗಳನ್ನು ಮೀಟರ್‌ ಬಡ್ಡಿ ಮಾಫಿಯಾದಿಂದ ಕಾಪಾಡುವ ಉದ್ದೇಶದಿಂದ ಕೇಂದ್ರ ಪಿಎಂ ಸ್ವನಿಧಿ ಯೋಜನೆ ಪರಿಚಯಿಸಿದೆ. ಈ ಯೋಜನೆಯಡಿ ಬೀದಿಬದಿಯ ವ್ಯಾಪಾರಿಗಳಿಗೆ 10, 20, 50 ಸಾವಿರ ರೂ.ಸಾಲ ಸಿಗಲಿದ್ದು, ಇದನ್ನು ಒಂದು ವರ್ಷದ ಮಾಸಿಕ ಕಂತುಗಳಲ್ಲಿ ತೀರಿಸಬೇಕಾಗುತ್ತದೆ.

Advertisement

ಬಂಡವಾಳ ಸಾಲದ ಅವಧಿ 1 ವರ್ಷವಾಗಿದ್ದು, ಅವ ಧಿಯೊಳಗೆ ಮರುಪಾವತಿ ಮಾಡುವವರಿಗೆ ಬಡ್ಡಿಯಲ್ಲಿ ಶೇ 7ರಷ್ಟು ಸಬ್ಸಿಡಿ ನೀಡಲಾಗುತ್ತದೆ. ತ್ತೈಮಾಸಿಕ ಪಾವತಿಗೂ ಅವಕಾಶ ಇದ್ದು ಡಿಜಿಟಲ್‌ ವಹಿವಾಟಿನ ಮೇಲೆ ಮಾಸಿಕ ಪ್ರೋತ್ಸಾಹ ಕ್ಯಾಶ್‌ ಬ್ಯಾಕ್‌ ನೀಡಲಾಗುತ್ತದೆ. ಅವ ಧಿಯೊಳಗೆ ಸಾಲಮರುಪಾವತಿ ಮಾಡಿದವರ ಸಾಲದ ಅರ್ಹತೆ ಏರಿಕೆಯಾಗುತ್ತದೆ. ದೇಶಾದ್ಯಂತ ನಗರ ಸ್ಥಳೀಯ ಸಂಸ್ಥೆಗಳ ಮೂಲಕ ಈ ಯೋಜನೆ ಜಾರಿಯಾಗುತ್ತಿದೆ.

ಯಾರು ಅರ್ಹರು?

ಮಾರ್ಚ್‌ 24, 2020 ಅಥವಾ ಅದಕ್ಕೂ ಮೊದಲಿನಿಂದ ಕಾರ್ಯನಿರ್ವಹಿಸುತ್ತಿರುವ ವ್ಯಾಪಾರಿಗಳು, ಬೀದಿಬದಿಯ ವ್ಯಾಪಾರಿಗಳು ಅರ್ಹರು. ಈ ಪೈಕಿ ತರಕಾರಿಗಳು, ಹಣ್ಣುಗಳು, ಚಹಾ- ಸ್ನ್ಯಾಕ್ಸ್, ಬ್ರೆಡ್‌, ಮೊಟ್ಟೆ, ಬಟ್ಟೆ, ಪುಸ್ತಕಗಳು, ಲೇಖನ ಸಾಮಗ್ರಿಗಳನ್ನು ಮಾರಾಟ ಮಾಡುವವರು ಅರ್ಜಿ ಸಲ್ಲಿಸಬಹುದು.

ಈ ಮೊದಲು ಗುರುತಿನ ಚೀಟಿ ಮತ್ತು ಮಾರಾಟ ಪ್ರಮಾಣ ಪತ್ರವನ್ನು ಹೊಂದಿರುವ ವ್ಯಾಪಾರಿಗಳಿಗೆ ಮಾತ್ರ ಸಾಲ ನೀಡುವುದಾಗಿ ತಿಳಿಸಲಾಗಿತ್ತು. ಆದರೆ ಈ ಯೋಜನೆಯಡಿ, ಇತ್ತೀಚೆಗೆ ಸರಕಾರ ಸ್ಥಳೀಯ ಸಂಸ್ಥೆಯೊಂದಿಗೆ ಶಿಫಾರಸು ಪತ್ರ (ಎಲ್‌ಒಆರ್‌) ವ್ಯವಸ್ಥೆಯನ್ನು ಪರಿಚಯಿಸಿದೆ. ಆದ್ದರಿಂದ ಗುರುತಿನ ಚೀಟಿ ಮತ್ತು ಮಾರಾಟ ಪ್ರಮಾಣಪತ್ರವನ್ನು ಹೊಂದಿರದ ಬೀದಿ ಬದಿ ವ್ಯಾಪಾರಿಗಳಿಗೆ ಸಾಲವನ್ನು ಪಡೆಯಬಹುದು. ಇದಕ್ಕಾಗಿ ಸ್ಥಳೀಯಾಡಳಿತ ಸಂಸ್ಥೆ ಹಂತದಲ್ಲಿ ಸಮಿತಿ ಇದೆ.

ಅರ್ಜಿ ಸಲ್ಲಿಸಿದವರು

ಪಿಎಂ ಸ್ವನಿಧಿ ಯೋಜನೆಯಡಿಯಲ್ಲಿ ಈವರೆಗೂ ದೇಶದಲ್ಲಿ 17,33,880 ಜನ ಬೀದಿಬದಿ ವ್ಯಾಪಾರಿಗಳು ಪ್ರಯೋಜನ ಪಡೆದಿದ್ದಾರೆ. ಕುಂದಾ ಪುರದಲ್ಲಿ 2020ರಿಂದ ಈ ವರ್ಷ ನ.2ರವರೆಗೆ 974 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ 735 ಜನರಿಗೆ ಸಾಲ (ಸೌಲಭ್ಯ) ಮಂಜೂರಾಗಿದೆ. ಇದು ಉಡುಪಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದು ವಿವರಿಸುತ್ತಾರೆ ಪುರಸಭೆಯ ವಿಷಯ ನಿರ್ವಾಹಕ ಗಣೇಶ್‌ ಕುಮಾರ್‌ ಜನ್ನಾಡಿ. ಮೊದಲ ಹಂತದ 10 ಸಾವಿರ ರೂ.ಗಳನ್ನು 650ಕ್ಕೂ ಹೆಚ್ಚು ಜನ, ಎರಡನೇ ಹಂತದ 20 ಸಾವಿರ ರೂ.ಗಳನ್ನು 163 ಮಂದಿ ಪಡೆದಿದ್ದಾರೆ. ಈ ಪೈಕಿ ಅತಿ ಹೆಚ್ಚಿನ ಪ್ರಮಾಣದ ಸಾಲ ನೀಡಿದ್ದು ಕೆನರಾ ಬ್ಯಾಂಕ್‌. ಅನಂತರದ ಸ್ಥಾನ ಯೂನಿಯನ್‌ ಬ್ಯಾಂಕ್‌, ಸ್ಟೇಟ್‌ ಬ್ಯಾಂಕ್‌, ಐಡಿಬಿಐ ಬ್ಯಾಂಕ್‌ಗಳದ್ದು.

ಪ್ರಯೋಜನಗಳು

ಸ್ವನಿಧಿ ಯೋಜನೆಯು 2022ರ ಮಾರ್ಚ್‌ವರೆಗೆ ಎಂದಿತ್ತು. ಆದರೆ ಮುಂದುವರಿದಿದೆ. ಕೆಲಸ ಪ್ರಾರಂಭಿಸಲು ಕಡಿಮೆ ಬಡ್ಡಿದರದಲ್ಲಿ 10 ಸಾವಿರ ರೂ. ವರೆಗೆ ಸಾಲ ನೀಡಲಾಗುತ್ತದೆ. ಸಮಯಕ್ಕೆ ಸರಿಯಾಗಿ ಸಾಲ ಪಾವತಿಸಿದರೆ, ಬಡ್ಡಿಯನ್ನು ಶೇ. 7ರ ದರದಲ್ಲಿ ಸಬ್ಸಿಡಿ ಮಾಡಲಾಗುತ್ತದೆ. ಸರಿಯಾದ ಕಂತು ಪಾವತಿಯೇ ಎರಡನೇ ಹಂತದ ಸಾಲ ಪಡೆಯಲು ಅರ್ಹತೆ. ಎರಡನೇ ಹಂತದಲ್ಲಿ 20 ಸಾವಿರ ರೂ., ಮೂರನೆಯ ಹಂತದಲ್ಲಿ 50 ಸಾವಿರ ರೂ.ವರೆಗೆ ಸಾಲ ದೊರೆಯುತ್ತದೆ.

ಯಶಸ್ವಿ ಅನುಷ್ಠಾನ: ಕೇಂದ್ರ ಸರಕಾರದ ಪಿಎಂ ಸ್ವನಿಧಿ ಯೋಜನೆಯನ್ನು ಕುಂದಾಪುರ ಪುರಸಭೆ ವ್ಯಾಪ್ತಿಯ ಬೀದಿಬದಿ ವ್ಯಾಪಾರಿಗಳಿಗೆ ಬ್ಯಾಂಕ್‌ ಮೂಲಕ ಸಾಲ ದೊರಕಿಸಿಕೊಡುವಲ್ಲಿ ಪುರಸಭೆ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಿದೆ. 1ಕೋ.ರೂ.ಗೂ ಹೆಚ್ಚಿನ ಸಾಲ ನೀಡಲಾಗಿದೆ. –ಗೋಪಾಲಕೃಷ್ಣ ಶೆಟ್ಟಿ ಮುಖ್ಯಾಧಿಕಾರಿ, ಪುರಸಭೆ

-ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next