ದಾವಣಗೆರೆ: ಬೀದಿ ನಾಟಕ ಸಾಮಾಜಿಕ ಜಾಗೃತಿಯ ರಂಗಭೂಮಿ ಎಂದು ಪ್ರಗತಿಪರ ಚಿಂತಕ ಡಾ| ಸಿದ್ದನಗೌಡ ಪಾಟೀಲ್ ವಿಶ್ಲೇಷಿಸಿದ್ದಾರೆ.
ಸೋಮವಾರ ಮಹಾನಗರ ಪಾಲಿಕೆ ಆವರಣದಲ್ಲಿ ರಾಜ್ಯ ಬೀದಿ ನಾಟಕ ಕಲಾವಿದರ ಅಧ್ಯಯನ ಶಿಬಿರದ ಸಮಾರೋಪದಲ್ಲಿ ಮಾತನಾಡಿದ ಅವರು, ದೇಶದಲ್ಲಿ ತುರ್ತು ಪರಿಸ್ಥಿತಿಯ ನಂತರ ಬೀದಿ ನಾಟಕಗಳ ಪ್ರಾಕಾರ ಚಾಲ್ತಿಗೆ ಬಂದಿದೆ. ಪ್ರಾರಂಭಿಕ ಹಂತದಲ್ಲಿ ವೈಚಾರಿಕ ಆಂದೋಲ ನವಾಗಿದ್ದ ಬೀದಿ ನಾಟಕ ಈಗ ಸಾಮಾಜಿಕ ಜನಾಂದೋಲನವಾಗಿದೆ ಎಂದರು.
ಬೀದಿ ನಾಟಕ ಕಲಾವಿದರು ಜನರ ಮಧ್ಯೆಯೇ ತೆರಳಿ ಜನರು ಅನುಭವಿಸುವ ಸಮಸ್ಯೆ, ಮೌಡ್ಯತೆ, ಅನಾಚಾರ, ವಿರುದ್ಧ ಧ್ವನಿಯೆತ್ತುವ ಆಂದೋಲನವಾಗಿದೆ. ಜನರ ಮಧ್ಯೆಯೇ ಹೋಗಿ ಜನರ ಸಮಸ್ಯೆಗೆ ಧ್ವನಿಯಾಗಿ ಸ್ಪಂದಿಸುವಂತಹ ಬೀದಿ ನಾಟಕ ಪ್ರಾಕಾರವೂ ಈಗ ಸಮಸ್ಯೆ ಎದುರಿಸುತ್ತಿದೆ ಎಂದು ತಿಳಿಸಿದರು.
1990 ರಲ್ಲಿ ಬೀದಿ ನಾಟಕ ಸಾಕ್ಷರತಾ ಆಂದೋಲನದ ಭಾಗವಾಗಿತ್ತು. ಈಗ ನೀರು, ಪರಿಸರ ಸಮಸ್ಯೆ ಮುಂದಿಟ್ಟು ಕೊಂಡು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಈಗ ಎಲ್ಲಾ ಕಡೆ ನೀರಿನ ಸಮಸ್ಯೆ ಸಾಮಾನ್ಯ ಎನ್ನುವಂತಾಗಿದೆ. ಇದೇ ಸ್ಥಿತಿ ಮುಂದುವರೆದಲ್ಲಿ ನೀರನ್ನು ಚಮಚೆಯಲ್ಲಿ ಬಳಸಬೇಕಾದ ಸ್ಥಿತಿ ಬರಬಹುದು. ಗಾಳಿಯೂ ಮಾಲಿನ್ಯವಾಗುತ್ತಿರುವ ಕಾರಣಕ್ಕೆ ಮುಂದೆ ಓಣಿಗಳಲ್ಲಿ ಗಾಳಿಕೇಂದ್ರ ಪ್ರಾರಂಭವಾದರೂ ಅಚ್ಚರಿ ಪಡಬೇಕಾಗಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು. ಇತ್ತೀಚಿನ ದಿನಗಳಲ್ಲಿ ಪ್ರಜಾಸತ್ತೆ ಯಾವ ಹಂತಕ್ಕೆ ಬಂದು ತಲುಪಿದೆ ಎಂದರೆ ಸರ್ಕಾರಗಳ ಬಜೆಟ್‌ಗಳೇ ಖಾಸಗೀಕರಣಕ್ಕೆ ಒತ್ತು ನೀಡುತ್ತಿವೆ. ಕಲ್ಯಾಣ ರಾಜ್ಯ ಹೋಗಿ ಮುಂದೆ ಕಂಪನಿ ರಾಜ್ಯ ನಿರ್ಮಾಣವಾಗಲಿದೆ. ನಮ್ಮದೇ ನೀರು, ಗಾಳಿಯನ್ನು ವಿವಿಧ ಬ್ರಾಂಡ್‌ಗಳ ಹೆಸರಲ್ಲಿ ನಮಗೆ ಮಾರಾಟ ಮಾಡುವಂತಹ ಸ್ಥಿತಿ ಬರಲಿದೆ ಎಂದು ಎಚ್ಚರಿಸಿದರು.
ಈಗಿನ ಅಭಿವೃದ್ಧಿ ಮತ್ತು ವೇಗದ ಬದುಕಿನಲ್ಲಿ ಮಾನವ ಜಗತ್ತು ಎತ್ತ ಕಡೆ ಹೋಗುತ್ತಿದೆ ಎಂಬುದನ್ನು ಬೀದಿ ನಾಟಕಗಳು ಜನರಿಗೆ ತಲುಪಿಸಬೇಕು. ಸರ್ಕಾರದ ಯೋಜನೆ, ಕಾರ್ಯಕ್ರಮಗಳ ಜೊತೆಗೆ ಭ್ರಷ್ಟಾಚಾರ, ಕಳಂಕ ರಹಿತ, ನಿಜವಾದ ಪ್ರಜಾಸತ್ತತೆ ಮೌಲ್ಯ ತಲುಪಿಸಬೇಕು. ಬೀದಿ ನಾಟಕ ಕಲಾವಿದರು ತಮ್ಮ ಕಲೆಯ ಮೂಲಕ ಅತ್ಯುತ್ತಮ ರೀತಿಯಲ್ಲಿ ಜನಾಂದೋಲನ ಮಾಡಬೇಕು ಎಂದು ತಿಳಿಸಿದರು.
ಮಹಾನಗರ ಪಾಲಿಕೆ ಆಯುಕ್ತ ಮಂಜುನಾಥ್ ಆರ್. ಬಳ್ಳಾರಿ ಮಾತನಾಡಿ, ಸರ್ಕಾರದ ಕಾರ್ಯಕ್ರಮ, ಯೋಜನೆಗಳ ಜೊತೆಗೆ ಸಾಮಾಜಿಕ ಅನಿಷ್ಠ ಪದ್ಧತಿಯ ವಿರುದ್ಧ ಬೀದಿ ನಾಟಕಗಳು ಸಂದೇಶ ನೀಡುವ ಗುರುತರ ಜವಾಬ್ದಾರಿ ಹೊತ್ತಿವೆ ಎಂದು ತಿಳಿಸಿದರು.
ಮೈಮ್ ಕಲಾವಿದ ಆರ್.ಟಿ. ಅರುಣ್‌ಕುಮಾರ್ ಮಾತನಾಡಿ, ಸಮಾಜದಲ್ಲಿ ಉತ್ತಮ ಮೌಲ್ಯ ಬಿತ್ತುವುದು ಕಲಾವಿದರ ಮುಖ್ಯ ಉದ್ದೇಶ ಆಗಬೇಕು. ಬೀದಿ ನಾಟಕಗಳಲ್ಲಿನ ಕಥೆ, ಹಾಡುಗಳಿಂದ ಪ್ರಭಾವಿತರಾಗಿ ಒಬ್ಬರೇ ಒಬ್ಬರು ಬದಲಾವಣೆಗೊಂಡರೆ ಬೀದಿ ನಾಟಕ ಸಾರ್ಥಕ ಎಂದರು.
ರಾಜ್ಯ ಮಟ್ಟದ ಅಧ್ಯಯನ ಶಿಬಿರದ ನಿರ್ದೇಶಕ ಡಾ| ರಾಜಪ್ಪ ದಳವಾಯಿ, ಡಾ| ಶಂಕರ ಹಲಗತ್ತಿ, ಹಿರಿಯ ಕಾರ್ಮಿಕ ಮುಖಂಡ ಎಚ್.ಕೆ. ರಾಮಚಂದ್ರಪ್ಪ, ಮಹಾನಗರ ಪಾಲಿಕೆ ಮಾಜಿಸದಸ್ಯ ಆವರಗೆರೆ ಎಚ್.ಜಿ. ಉಮೇಶ್, ಮಲ್ಲೇಶ್, ಪಿ. ಷಣ್ಮುಖಸ್ವಾಮಿ, ಕೆ. ಬಾನಪ್ಪ, ಐರಣಿ ಚಂದ್ರು, ಅಂಜಿನಪ್ಪ ಲೋಕಿಕೆರೆ ಇತರರು ಇದ್ದರು.