Advertisement
ಬಿ.ಸಿ.ರೋಡ್‌ನಲ್ಲಿ ವಾಹನ ಪಾರ್ಕಿಂಗ್ ಸೇರಿದಂತೆ ಸಾಕಷ್ಟು ಸಮಸ್ಯೆಗಳಿಗೆ ಬೀದಿ ಬದಿ ವ್ಯಾಪಾರವೇ ಕಾರಣ ಎಂಬ ಆರೋಪಗಳು ಕೇಳಿ ಬರುತ್ತಿವೆ. ಹೀಗಾಗಿ ಇಂತಹ ವ್ಯಾಪಾರಿಗಳಿಗೆ ಸ್ಥಳೀಯಾಡಳಿತ ತಾತ್ಕಾಲಿಕ ವ್ಯವಸ್ಥೆ ಮಾಡಿ ಕೊಡಬೇಕಿದೆ. ಪ್ರತಿ ನಗರ ಸ್ಥಳೀಯಾಡಳಿತ ಸಂಸ್ಥೆಗಳಲ್ಲೂ ಬೀದಿ ಬದಿ ವ್ಯಾಪಾರಿಗಳಿಗೆ ಕಾರ್ಡ್ ನೀಡಿ ಅವರಿಗೆ ಪ್ರತ್ಯೇಕ ವಲಯ ಗುರುತಿಸಬೇಕಿದೆ.
ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪಾರದ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ತಲಪಾಡಿಯ ಕೆಎಸ್‌ಆರ್‌ಟಿಸಿ ಡಿಪೋ ಮುಂಭಾಗ, ಬಂಟ್ವಾಳದ ಕೊಟ್ರಮಣಗಂಡಿ ಬಸ್ ನಿಲ್ದಾಣ ಹಾಗೂ ಮೆಲ್ಕಾರ್ ಗುಡ್ಡೆಯಂಗಡಿ ಪ್ರದೇಶದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ವಲಯ ಮಾಡುವುದಕ್ಕೆ ಸ್ಥಳ ಗುರುತಿಸಲಾಗಿತ್ತು. ಆದರೆ ಈ ಮೂರು ಸ್ಥಳಗಳಿಗೂ ಪುರಸಭೆ ಸದಸ್ಯರಿಂದ ವಿರೋಧ ವ್ಯಕ್ತವಾಗಿತ್ತು. ಬಂಟ್ವಾಳದ ಕೊಟ್ರಮಣಗಂಡಿ ಪ್ರದೇಶದಲ್ಲಿ ಬಸ್ ನಿಲ್ದಾಣಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಲ್ಲಿ ಬೀದಿ ಬದಿ ವ್ಯಾಪಾರಿ ವಲಯ ಮಾಡುವುದು ಸರಿಯಲ್ಲ. ಜತೆಗೆ ಗುಡ್ಡೆಯಂಗಡಿ ಪ್ರದೇಶದಲ್ಲಿ ಸ್ಥಳೀಯರಿಗೆ ತೊಂದರೆಯಾಗಲಿದೆ ಎಂದು ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದರು.
Related Articles
Advertisement
ಪ್ರಸ್ತುತ ಬಿ.ಸಿ.ರೋಡ್ ಪೇಟೆಯ ಜತೆಗೆ ಬಂಟ್ವಾಳ ಪೇಟೆ, ಪಾಣೆಮಂಗಳೂರು, ಕೈಕಂಬ, ಬಂಟ್ವಾಳ ಬೈಪಾಸ್, ಮೆಲ್ಕಾರ್ ಮೊದಲಾದ ಭಾಗಗಳಲ್ಲಿ ಬೀದಿ ಬದಿ ವ್ಯಾಪಾರಿಗಳನ್ನು ಕಾಣಬಹುದು. ಅದರಲ್ಲೂ ಬಿ.ಸಿ.ರೋಡ್ ಸರ್ಕಲ್ ಬಳಿ ರಾಷ್ಟ್ರೀಯ ಹೆದ್ದಾರಿಯ ಬದಿ ದಿನೇ ದಿನೆ ಬೀದಿ ಬದಿ ವ್ಯಾಪಾರಿಗಳ ಸಂಖ್ಯೆ ಏರುತ್ತಲೇ ಇದೆ. ಹೀಗಾಗಿ ಪೇಟೆಯ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಬೀದಿ ಬದಿ ವ್ಯಾಪಾರಿ ವಲಯ ಗುರುತಿಸುವ ಕಾರ್ಯವನ್ನು ಶೀಘ್ರದಲ್ಲಿ ಮುಗಿಸಬೇಕಿದೆ.
ವ್ಯಾಪಾರಿಗಳ ಸಂಖ್ಯೆ ಹೆಚ್ಚಳಬೀದಿ ಬದಿ ವ್ಯಾಪಾರಿಗಳನ್ನು ಗುರುತಿಸಿ ಅವರಿಗೆ ಸರಕಾರದ ಸೌಲಭ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ಗುರುತಿನ ಚೀಟಿಯನ್ನು ವಿತರಿಸಲಾಗುತ್ತಿದೆ. ಈ ಹಿಂದೆ ಪುರಸಭೆಯು ಒಟ್ಟು 72 ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ವಿತರಿಸುವ ಕಾರ್ಯ ಮಾಡಿದ್ದು, ಈ ಬಾರಿ ಇನ್ನಷ್ಟೇ ಗುರುತಿನ ಚೀಟಿ ವಿತರಿಸಬೇಕಿದೆ. ಪ್ರಸ್ತುತ ಬೀದಿ ಬದಿ ವ್ಯಾಪಾರಿಗಳ ಸಂಖ್ಯೆ ದಿನೇ ದಿನೆ ಏರುತ್ತಲೇ ಇದೆ. ಗುರುತಿನ ಚೀಟಿ ವಿತರಣೆಯೂ ಸವಾಲಾಗುವ ಸಾಧ್ಯತೆ ಇದೆ. ಮತ್ತೂಂದೆಡೆ ಗುರುತಿನ ಚೀಟಿ ಸಿಗದೆ ಇರುವ ವ್ಯಾಪಾರಿಗಳಿಗೆ ಪುರಸಭೆ ವ್ಯಾಪ್ತಿಯಲ್ಲಿ ವ್ಯಾಪಾರಕ್ಕೆ ಅವಕಾಶವಿದೆಯೇ ಎಂಬ ಪ್ರಶ್ನೆಯೂ ಎದುರಾಗಲಿದೆ. ಸೂಕ್ತ ತೀರ್ಮಾನ
ಬೀದಿ ಬದಿ ವ್ಯಾಪಾರಕ್ಕೆ ಈ ಹಿಂದೆ ಗುರುತಿಸಲಾದ 2 ಸ್ಥಳಗಳು ಅಂತಿಮಗೊಳ್ಳದೆ ಇರುವುದರಿಂದ ಮುಂದಿನ ಸಭೆಯಲ್ಲಿ ಚರ್ಚಿಸಿ ಸೂಕ್ತ ಸ್ಥಳವನ್ನು ನಿಗದಿಗೊಳಿಸಲಾಗುತ್ತದೆ. ಬಳಿಕ ಬೀದಿ ಬದಿ ವ್ಯಾಪಾರಿ ವಲಯವನ್ನು ಅನುಷ್ಠಾನಗೊಳಿಸುವ ಕಾರ್ಯ ನಡೆಸಲಾಗುವುದು.
-ಮಹಮ್ಮದ್ ಶರೀಫ್, ಅಧ್ಯಕ್ಷರು, ಬಂಟ್ವಾಳ ಪುರಸಭೆ – ಕಿರಣ್ ಸರಪಾಡಿ