ಧಾರವಾಡ: ಜನಜಾಗೃತಿ ಮೂಡಿಸಲು, ಸಂದೇಶಗಳನ್ನು ನೇರವಾಗಿ ಜನರಿಗೆ ತಲುಪಿಸಲು ಬೀದಿ ನಾಟಕಗಳು ಸಮರ್ಥ ಮಾಧ್ಯಮಗಳಾಗಿವೆ. ಅವುಗಳ ಕಲಿಕೆ ಮತ್ತು ಪ್ರದರ್ಶನದಿಂದ ವ್ಯಕ್ತಿತ್ವ ವಿಕಸನವೂ ಸಾಧ್ಯವಾಗುತ್ತದೆ ಎಂದು ಆಕಾಶವಾಣಿಯ ನಿರ್ದೇಶಕ ಡಾ| ಸತೀಶ ಪರ್ವತೀಕರ ಹೇಳಿದರು.
ಇಲ್ಲಿನ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಆವರಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿದ್ದ ಬೆಳಗಾವಿ ವಿಭಾಗ ಮಟ್ಟದ ಬೀದಿ ನಾಟಕ ಕಲಾವಿದರ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಜನರ ನಡುವಿನಿಂದಲೇ ಮೂಡಿ ಬರುವ ಬೀದಿ ನಾಟಕಗಳಿಂದ ಸರಕಾರದ ಅನೇಕ ಯೋಜನೆಗಳ ಕುರಿತು ಜನರಿಗೆ ಮಾಹಿತಿ ನೀಡಲು ಸಹಕಾರಿಯಾಗಿದೆ.
ಬೀದಿ ನಾಟಕಗಳ ಕಲಿಕೆಯು ನಮ್ಮಲ್ಲಿನ ಆತ್ಮಸ್ಥೈರ್ಯ ಹೆಚ್ಚಿಸುತ್ತದೆ ಎಂದರು. ರಂಗಾಯಣದ ಆಡಳಿತಾ ಧಿಕಾರಿ ಬಸವರಾಜ ಹೂಗಾರ ಮಾತನಾಡಿ, ಬೀದಿ ಎಂಬುದು ಜಗತ್ತಿನ ಎಲ್ಲ ಜನರು ಪ್ರತಿನಿತ್ಯ ಓಡಾಡುವ ಜೀವಂತ ಸ್ಥಳ ಮತ್ತು ಅದೊಂದು ಪುಟ್ಟ ಜಗತ್ತೇ ಆಗಿದೆ. ನಿತ್ಯ ಎಲ್ಲರಿಂದ ತುಳಿಸಿಕೊಂಡರೂ ಅದು ಪವಿತ್ರವಾಗಿದೆ.
ವರಕವಿ ದ.ರಾ. ಬೇಂದ್ರೆಯವರು ತಮ್ಮ ಹೆಚ್ಚು ಸಮಯವನ್ನು ಬೀದಿ ಹಾಗೂ ಜನರ ಮಧ್ಯೆಯೇ ಕಳೆಯುವ ಮೂಲಕ ತಮ್ಮ ಕಾವ್ಯ ಭಾಷೆಗೆ ಹೆಚ್ಚು ಕಸುವು ತುಂಬಿದರು. ಬೀದಿಗಳಲ್ಲಿ ವಾಸ್ತವಿಕ ಸಂವೇದನೆಗಳಿವೆ. ಬೀದಿಗಳ ಮೂಲಕವೇ ಸಾಮಾಜಿಕ ಪರಿವರ್ತನೆ ಸಾಧ್ಯವಿದೆ ಎಂದರು. ಶಿಬಿರದ ನಿರ್ದೇಶಕರಾದ ಬಸವಲಿಂಗಯ್ಯ ಹಿರೇಮಠ ಹಾಗೂ ವಿಶ್ವೇಶ್ವರಿ ಹಿರೇಮಠ ಮಾತನಾಡಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ ಅಧ್ಯಕ್ಷತೆ ವಹಿಸಿದ್ದರು. ಸಿ.ಬಿ.ಬೋವಿ ಸ್ವಾಗತಿಸಿದರು. ಪಿ.ಎಸ್.ಹಿರೇಮಠ ನಿರೂಪಿಸಿದರು. ಸುಜಾತಾ ಮಗದುಮ್ ವಂದಿಸಿದರು. ಬೆಳಗಾವಿ ವಿಭಾಗದ ಎಲ್ಲ ಜಿಲ್ಲೆಗಳ ಬೀದಿ ನಾಟಕ ಕಲಾವಿದರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದಾರೆ. ಜೂನ್ 9ರವರೆಗೆ ಕಾರ್ಯಾಗಾರ ನಡೆಯಲಿದೆ.