Advertisement

ಬೀದಿ ದೀಪ ಬಿಲ್‌ಬಾಕಿ ಮೇಲೆ ಬೆಳಕು

11:38 AM Jun 23, 2018 | Team Udayavani |

ಬೆಂಗಳೂರು: ಬೀದಿ ದೀಪ ನಿರ್ವಹಣೆ ಕಾರ್ಯವನ್ನು ಅಗತ್ಯ ಸೇವೆಯೆಂದು ಪರಿಗಣಿಸಿ ಕೂಡಲೇ ಗುತ್ತಿಗೆದಾರರಿಗೆ ಬಾಕಿ ಬಿಲ್‌ ಪಾವತಿಸಬೇಕು ಎಂದು ಪಕ್ಷಾತೀತವಾಗಿ ಸದಸ್ಯರು ಶುಕ್ರವಾರ ನಡೆದ ಪಾಲಿಕೆ ವಿಶೇಷ ಸಭೆಯಲ್ಲಿ ಒತ್ತಾಯಿಸಿದರು.

Advertisement

ವಿಷಯ ಪ್ರಸ್ತಾಪಿಸಿದ ಮಾಜಿ ಮೇಯರ್‌ ಬಿ.ಎಸ್‌.ಸತ್ಯನಾರಾಯಣ, ಬೀದಿ ದೀಪ ನಿರ್ವಹಣೆ ಗುತ್ತಿಗೆದಾರರ ಪ್ರತಿಭಟನೆಯಿಂದ ಸಂಜೆ ಹಾಗೂ ಬೆಳಗಿನ ಜಾವ ವಾರ್ಡ್‌ ರಸ್ತೆಗಳು ಹಾಗೂ ಉದ್ಯಾನಗಳಲ್ಲಿ ಕತ್ತಲು ಆವರಿಸಿದೆ. ಬೀದಿ ದೀಪಗಳು ಬೆಳಗದ ಕಾರಣ ಜನ ಕತ್ತಲಲ್ಲಿ ಓಡಾಡಬೇಕಾದ ಸ್ಥಿತಿಯಿದ್ದು, ಅಹಿತಕರ ಘಟನೆಗಳು ಸಂಭವಿಸುವ ಆತಂಕ ಎದುರಾಗಿದೆ. ಆ ಹಿನ್ನೆಲೆಯಲ್ಲಿ ಸಾರ್ವಜನಿಕರು, ಪೊಲೀಸರು ಅಹಿತಕರ ಘಟನೆಗಳಿಗೆ ಪಾಲಿಕೆ ಸದಸ್ಯರನ್ನು ಹೊಣೆಯಾಗಿಸುತ್ತಿದ್ದು, ಕೂಡಲೇ ಬಾಕಿ ಬಿಲ್‌ ಪಾವತಿಸಿ ಸಮಸ್ಯೆ ಪರಿಹರಿಸಬೇಕು ಎಂದು ಆಗ್ರಹಿಸಿದರು.

ಇದಕ್ಕೆ ದನಿಗೂಡಿಸಿದ ಮೇಯರ್‌ ಆರ್‌.ಸಂಪತ್‌ರಾಜ್‌, ಬಿಲ್‌ ಪಾವತಿಸುವಂತೆ ಕಳೆದ ಸಭೆಯಲ್ಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆದರೂ ಈವರೆಗೆ ಪಾವತಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ವಿಶೇಷ ಆಯುಕ್ತ ಮನೋಜ್‌ ರಾಜನ್‌, ನ್ಯಾಯಾಲಯದ ಆದೇಶದಂತೆ ಬೀದಿ ದೀಪ ನಿರ್ವಹಣೆ ಆದ್ಯತೆ ಕೆಲಸವಾಗಿದ್ದು, ಜೇಷ್ಠತೆ ಆಧಾರದಲ್ಲಿ ಬಿಲ್‌ ಪಾವತಿಸಲಾಗುತ್ತಿದೆ ಎಂದರು. 

ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎಂ.ಕೆ.ಗುಣಶೇಖರ್‌ ಮಾತನಾಡಿ, ತುರ್ತು ಸಂದರ್ಭಗಳಲ್ಲಿ ಆಯುಕ್ತರು ಅಗತ್ಯ ಸೇವೆಯೆಂದು ಪರಿಗಣಿಸಿ ಬಿಲ್‌ ಪಾವತಿಸಬಹುದಾಗಿದ್ದು, ನಂತರದಲ್ಲಿ ಸ್ಥಾಯಿ ಸಮಿತಿಗೆ ವಿಷಯ ಮಂಡಿಸಬಹುದು. ಹೀಗಾಗಿ ಕೂಡಲೇ ಸಮಸ್ಯೆ ಬಗೆಹರಿಸಲು ಮುಂದಾಗಬೇಕು ಎಂದು ಹೇಳಿದರು. ಬೀದಿ ದೀಪ ನಿರ್ವಹಣೆ ಕಾರ್ಯ ಅಗತ್ಯ ಸೇವೆ ಎಂದು ಕೌನ್ಸಿಲ್‌ ನಿರ್ಣಯ ಕೈಗೊಂಡರೆ ಕೂಡಲೇ ಬಾಕಿ ಬಿಲ್‌ ಪಾವತಿಸುವುದಾಗಿ ಆಯುಕ್ತ ಮಹೇಶ್ವರ ರಾವ್‌ ತಿಳಿಸಿದರು.

ಅನುಮತಿ ಪಡೆಯದೆ ಕಾರ್ಯಾದೇಶ: ಪಶ್ಚಿಮ ವಲಯದ ಪುಲಿಕೇಶಿನಗರ ಹಾಗೂ ಶಿವಾಜಿನಗರ ಹೊರತುಪಡಿಸಿ ಉಳಿದ ವಿಧಾನಸಭಾ ಕ್ಷೇತ್ರಗಳ 30 ವಾರ್ಡ್‌ಗಳಲ್ಲಿ ತ್ಯಾಜ್ಯ ವಿಲೇವಾರಿ ಗುತ್ತಿಗೆಯನ್ನು ಎಂಎಸ್‌ಜಿಪಿ ಸಂಸ್ಥೆಗೆ ನೀಡಲಾಗಿದೆ. ಸ್ಥಾಯಿ ಸಮಿತಿ ಹಾಗೂ ಕೌನ್ಸಿಲ್‌ ಅನುಮೋದನೆ ಪಡೆಯದೇ ಹೇಗೆ ಕಾರ್ಯಾದೇಶ ನೀಡಿದಿರಿ ಎಂದು ವಿರೋಧ ಪಕ್ಷ ನಾಯಕ ಪದ್ಮನಾಭ ರೆಡ್ಡಿ, ಅಧಿಕಾರಿಗಳನ್ನು ಪ್ರಶ್ನಿಸಿದರು. ಕಾರ್ಯಾದೇಶ ಮರು ಪರಿಶೀಲಿಸುವಂತೆ ಹಾಗೂ ಮತ್ತೆ ಸ್ಥಾಯಿ ಸಮಿತಿ ಮುಂದೆ ಮಂಡಿಸುವಂತೆ ಸೂಚನೆ ನೀಡುವುದಾಗಿ ಮೇಯರ್‌ ಸಂಪತ್‌ರಾಜ್‌ ಹೇಳಿದರು. 

Advertisement

ಬಿಬಿಎಂಪಿ ಮಾವನ ಮನೆಯಾಗಿದೆ: ಅಧಿಕಾರಿಗಳು ಪಾಲಿಕೆ ಸ್ಥಾಯಿ ಸಮಿತಿಗಳ ಅಧಿಕಾರ ಮೊಟಕುಗೊಳಿಸಿದ್ದು, ಸಮಿತಿಗಳಿಗೆ ಯಾವುದೇ ಕಡತ, ಆಂತರಿಕ ಪತ್ರ, ಪ್ರಕಟಣೆಗಳನ್ನು ಕಳಿಸುತ್ತಿಲ್ಲ. ಬಿಬಿಎಂಪಿ ಮಾವನ ಮನೆಯಂತಾಗಿದ್ದು, ಇಲ್ಲಿಗೆ ಯಾರು ಬರುತ್ತಿದ್ದಾರೆ, ಯಾರು ಹೋಗುತ್ತಾರೆ ಎಂಬುದೇ ತಿಳಿಯದ ಸ್ಥಿತಿ ನಿರ್ಮಾಣವಾಗಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮೀನಾರಾಯಣ್‌ ಆಕ್ರೋಶ ವ್ಯಕ್ತಪಡಿಸಿದರು.
 
ವಿವಿಧ ಇಲಾಖೆಗಳಿಂದ ಪಾಲಿಕೆಗೆ ಬಂದಿರುವ ಅಧಿಕಾರಿಗಳು ಹತ್ತಾರು ವರ್ಷಗಳಿಂದ ಇಲ್ಲೇ ಕಾರ್ಯನಿರ್ವಹಿಸುತ್ತಿದ್ದು, ಇಂತಹ ಅಧಿಕಾರಿಗಳಿರುವ ಪ್ರದೇಶದಲ್ಲಿ ಖಾತಾ, ನಕ್ಷೆಯಿಲ್ಲದಿದ್ದರೂ 500ಕ್ಕಿಂತ ಹೆಚ್ಚಿನ ಫ್ಲ್ಯಾಟ್‌ಗಳನ್ನೊಳಗೊಂಡ ಅಪಾರ್ಟ್‌ಮೆಂಟ್‌ಗಳು ನಿಯಮಬಾಹಿರವಾಗಿ ನಿರ್ಮಾಣವಾಗುತ್ತಿವೆ ಎಂದು ಗಂಭೀರ ಆರೋಪ ಮಾಡಿದರು.

ಪಾದಚಾರಿ ಮಾರ್ಗದಲ್ಲಿ ಮಳಿಗೆ: ಮೆಟ್ರೋ ನಿಲ್ದಾಣದ ಬಳಿಯ ಪಾದಚಾರಿ ಮಾರ್ಗಗಳಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗಿದ್ದು, ಜನ ಓಡಾಡಲು ತೊಂದರೆಯಾಗಿದೆ. ಮೆಟ್ರೋ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದ್ದು, ಅಗತ್ಯ ಪಾರ್ಕಿಂಗ್‌ ವ್ಯವಸ್ಥೆ ಮಾಡದ ಹಿನ್ನೆಲೆಯಲ್ಲಿ ಜನ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುತ್ತಿದ್ದಾರೆ. ಇದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದ್ದು, ಸ್ಥಳೀಯ ನಿವಾಸಿಗಳು ಕಿರಿಕಿರಿ ಅನುಭವಿಸುವಂತಾಗಿದೆ ಎಂದು ಬಿಜೆಪಿ ಸದಸ್ಯ ಡಾ.ರಾಜು ಆರೋಪಿಸಿದರು.

ವಿಜಯನಗರದಲ್ಲಿ ಪಾದಚಾರಿ ಮಾರ್ಗದಲ್ಲೇ ಫೋಟೋ ಸ್ಟುಡಿಯೋ, ಹೋಟೆಲ್‌ ಸೇರಿದಂತೆ ಇತರೆ ಮಳಿಗೆಗಳನ್ನು ಆರಂಭಿಸಲಾಗಿದೆ. ಇವರಿಗೆ ವಾಣಿಜ್ಯ ಪರವಾನಗಿ ನೀಡಿದವರು ಯಾರು ಎಂದು ಪ್ರಶ್ನಿಸಿದ ರಾಜು, ಹಂತ ಹಂತವಾಗಿ ಪಾಲಿಕೆ ಜಾಗಗಳನ್ನು ಮೆಟ್ರೋ ಒತ್ತುವರಿ ಮಾಡಿಕೊಂಡು ಲಾಭ ಮಾಡಿಕೊಳ್ಳುತ್ತಿದೆೆ. ಆದರೆ ಪಾಲಿಕೆ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು.

ಮೇಯರ್‌ ಸಂಪತ್‌ರಾಜ್‌ ಮಾತನಾಡಿ, ಬಿಎಂಆರ್‌ಸಿಎಲ್‌ ಹಾಗೂ ಪಾಲಿಕೆ ಒಡಂಬಡಿಕೆ ಅಂಶಗಳನ್ನು ಪರಿಶೀಲಿಸುವ ಜತೆಗೆ ಬಿಎಂಆರ್‌ಸಿಎಲ್‌ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಕೂಡಲೇ ಪುಸ್ತಕ ವಿತರಿಸಿ: ಶಾಲೆ ಆರಂಭವಾಗಿ 20 ದಿನ ಕಳೆದರೂ ಪಾಲಿಕೆಯ ಶಾಲಾ ಮಕ್ಕಳಿಗೆ ಪುಸ್ತಕಗಳು, ಬ್ಯಾಗ್‌ ಹಾಗೂ ಶೂ ವಿತರಿಸಿಲ್ಲ. ಟೆಂಡರ್‌ ಕರೆದಿರುವುದಾಗಿ ಅಧಿಕಾರಿಗಳು ಹೇಳಿದರೂ, ಈವರೆಗೆ ವಿದ್ಯಾರ್ಥಿಗಳಿಗೆ ಪುಸ್ತಕ ಸಿಕ್ಕಿಲ್ಲ. ಪಾಲಿಕೆ ಶಾಲೆಗಳಲ್ಲಿ ಸರ್ಕಾರಿ ಶಾಲೆಗಳಿಗಿಂತಲೂ ಹೆಚ್ಚಿನ ವಿದ್ಯಾರ್ಥಿಗಳು ತೇರ್ಗಡೆಯಾಗುತ್ತಿದ್ದು, ಶೀಘ್ರವಾಗಿ ಪುಸ್ತಕಗಳನ್ನು ಪೂರೈಸುವಂತೆ ಅಧಿಕಾರಿಗಳಿಗೆ ಸೂಚಿಸಬೇಕೆಂದು ಬಿಜೆಪಿಯ ಸವಿತಾ ಮಾಯಣ್ಣ ಮನವಿ ಮಾಡಿದರು. 

ಆಯುಕ್ತರಿಗೆ ಶಿಷ್ಟಾಚಾರದ ಪಾಠ: ಅಧಿಕಾರ ವಹಿಸಿಕೊಂಡ ನಂತರ ಇದೇ ಮೊದಲ ಬಾರಿ ಕೌನ್ಸಿಲ್‌ ಸಭೆಗೆ ಹಾಜರಾದ ಆಯುಕ್ತ ಮಹೇಶ್ವರ ರಾವ್‌ ಅವರು ಸದಸ್ಯರ ಪ್ರಶ್ನೆಗಳಿಗೆ ಕುಳಿತುಕೊಂಡೆ ಉತ್ತರಿಸಲು ಮುಂದಾದರು. ಆಗ ಆಡಳಿತ ಪಕ್ಷ ನಾಯಕ ಎಂ.ಶಿವರಾಜ್‌, ಪ್ರತಿಪಕ್ಷ ನಾಯಕ ಪದ್ಮನಾಭ ರೆಡ್ಡಿ ಸೇರಿದಂತೆ ಇತರ ಸದಸ್ಯರು ಎದ್ದು ನಿಂತು ಉತ್ತರ ನೀಡಬೇಕು ಎಂದು ಹೇಳಿದರು. ಅದಕ್ಕೆ ನಗುತ್ತಲೇ ಎದ್ದುನಿಂತ ಆಯುಕ್ತರು, ತಮ್ಮ ಪರಿಚಯ ಮಾಡಿಕೊಂಡರು.

27ರಂದು ಕೆಂಪೇಗೌಡ ಜಯಂತಿ: ಸರ್ಕಾರದ ವತಿಯಿಂದ ಜೂ.27ರಂದು ಅರಮನೆ ಮೈದಾನದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಿಸುತ್ತಿದ್ದು, ಪಾಲಿಕೆಯ ಎಲ್ಲ ಸದಸ್ಯರು ಭಾಗವಹಿಸಬೇಕು ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಸಚಿವ ಡಿ.ಕೆ.ಶಿವಕುಮಾರ್‌ ಅವರು ಆಹ್ವಾನ ನೀಡಿದ್ದಾರೆ ಎಂದು ಮೇಯರ್‌ ಸಂಪತ್‌ರಾಜ್‌ ಸಭೆಗೆ ತಿಳಿಸಿದರು.

ಈ ವೇಳೆ ಮಾಜಿ ಮೇಯರ್‌ ಸತ್ಯನಾರಾಯಣ, ಪಾಲಿಕೆಯಿಂದ ಈ ಬಾರಿ ಕೆಂಪೇಗೌಡ ಜಯಂತಿ ಆಚರಿಸಲಾಗುತ್ತಿದೆಯೇ ಎಂಬ ಬಗ್ಗೆ ಮಾಹಿತಿ ಕೊಡಿ ಎಂದರು. ಅದಕ್ಕೆ ಉತ್ತರಿಸಿದ ಮೇಯರ್‌, ಪ್ರತಿ ವರ್ಷದಂತೆ ಈ ಬಾರಿಯೂ ಪಾಲಿಕೆಯಿಂದ ಜಯಂತಿ ಆಚರಿಸುತ್ತಿದ್ದು, ಈಗಾಗಲೇ ಎಲ್ಲ ಸ್ಥಾಯಿ ಸಮಿತಿ ಅಧ್ಯಕ್ಷರೊಂದಿಗೆ ಸಭೆ ನಡೆಸಲಾಗಿದೆ. ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳನ್ನು ಸಂಪರ್ಕಿಸಿ ದಿನಾಂಕ ನಿಗದಿಪಡಿಸಲಾಗುವುದು ಎಂದರು.

ಅಭಿವೃದ್ಧಿಗೆ ಸಲಹೆ, ಸಹಕಾರ ಕೊಡಿ: ಜಯನಗರ ವಿಧಾನಸಭೆ ಕ್ಷೇತ್ರದ ಶಾಸಕಿಯಾಗಿ ಆಯ್ಕೆಯಾಗಿರುವ ಸೌಮ್ಯರೆಡ್ಡಿ ಅವರು ಶುಕ್ರವಾರ ಬಿಬಿಎಂಪಿ ಪಾಲಿಕೆ ಸಭೆಯಲ್ಲಿ ಪಾಲ್ಗೊಂಡಿದ್ದರು. ಜಯನಗರ ಕ್ಷೇತ್ರದಲ್ಲಿ ಹಲವು ಸಮಸ್ಯೆಗಳಿದ್ದು, ಅವುಗಳನ್ನು ಪರಿಹರಿಸಲು ಪಕ್ಷಭೇದ ಮರೆತು ಪಾಲಿಕೆಯ ಎಲ್ಲ ಸದಸ್ಯರು ಸಲಹೆ, ಸಹಕಾರ ನೀಡಬೇಕು ಎಂದು ಅವರು ಕೋರಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next