ಕಿಕ್ಕೇರಿ: ಪಟ್ಟಣದಲ್ಲಿ ಒಂದೆಡೆ ವಯಸ್ಸಾದ, ರೋಗಪೀಡಿತ, ಕಜ್ಜಿ ನಾಯಿಗಳ ಕಾಟ, ಮತ್ತೂಂದೆಡೆ ಹೊರಗಡೆ ಬರುವ ಹೊಸ ನಾಯಿಗಳ ಕಾಟಕ್ಕೆ ಜನರು ರೋಸಿ ಹೋಗುವಂತಾಗಿದೆ. ನಾಯಿಗಳ ಕಾಟ ತಾರಕಕ್ಕೇರಿದ್ದು, ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ.
ಕೊರೊನಾ ಸಂದರ್ಭದಲ್ಲಿ ನಿಯಂತ್ರಣದಲ್ಲಿದ್ದ ನಾಯಿಗಳ ಉಪಟಳ ದಿಢೀರ್ ಹೆಚ್ಚಾಗಿದೆ. ಬಸ್ ನಿಲ್ದಾಣದ ಬಳಿ ಇರುವ ಮಾಂಸದ ಅಂಗಡಿ, ಲಕ್ಷ್ಮೀಪುರ ಗ್ರಾಮದ ಬಳಿ ಇರುವ ಮಾಂಸ, ಮೀನು ಅಂಗಡಿಗಳ ಬಳಿ ನಾಯಿಗಳ ಗುಂಪು ಸದಾ ಇರುತ್ತಿದ್ದು, ಸಾರ್ವಜನಿಕರು ಸಂಚಾರ ಮಾಡಲು ಕಷ್ಟವಾಗುತ್ತಿದೆ.
ಮನುಷ್ಯರ ಮೇಲೆ ದಾಳಿ: ರಸ್ತೆ ಬದಿಯಲ್ಲಿ ಬಹುತೇಕ ನಾಗರಿಕರು, ಹೋಟೆಲ್ ಮತ್ತಿತರ ಉದ್ಯಮಿಗಳು ತ್ಯಾಜ್ಯ ಸುರಿಯುತ್ತಿದ್ದಾರೆ. ಬೀದಿ ಬದಿಯಲ್ಲಿ ಮಾಂಸಹಾರಿ ಹೋಟೆಲ್‌ಗಳು ಇರುವುದರಿಂದ ನಾಯಿಗಳ ಹಿಂಡು ಮತ್ತಷ್ಟು ಹೆಚ್ಚಾಗಲು ಕಾರಣವಾಗಿದೆ. ಮಾಂಸದ ಅಂಗಡಿಯ ಬಳಿ ಬಿಸಾಡುವ ಮಾಂಸದ ತುಂಡು, ರಕ್ತವನ್ನು ಕುಡಿದು ಮನುಷ್ಯರ ಮೇಲೆ ದಾಳಿ ಮಾಡಲು ಪಟ್ಟಣದಲ್ಲಿ ನಾಯಿಗಳು ಸಂಚಾರ ಮಾಡುತ್ತಿವೆ. ಬೆಳಗ್ಗಿನ ವೇಳೆ ಪಟ್ಟಣದ ಎಲ್ಲೆಡೆ ಸಂಚಾರ ಮಾಡಿ, ರಾತ್ರಿ ಬಸ್ ನಿಲ್ದಾಣದಲ್ಲಿ ಹಿಂಡಾಗಿ ತಂಗುತ್ತಿವೆ.
ಆತಂಕದಲ್ಲೇ ಸಂಚಾರ: ಮುಂಜಾನೆ ಬಸ್‌ನಿಲ್ದಾಣಕ್ಕೆ ಪ್ರಯಾಣಿಕರು ಕೈಯಲ್ಲಿ ಬ್ಯಾಗ್ ಹಿಡಿದುಕೊಂಡು ಹೋಗಲು ಭಯಪಡುವಂತಿದೆ. ಹಗಲು ವೇಳೆ ಬಹುತೇಕರು ಹಾಲು ಮತ್ತಿತರ ವಸ್ತುಗಳನ್ನು ಖರೀದಿಸಲು, ರೈತಾಪಿ ಜನರು ಹಾಲಿನ ಡೇರಿಗೆ ತೆರಳಲು ಭಯಪಡುವಂತಾಗಿದೆ. ಮಕ್ಕಳು ರಸ್ತೆಯಲ್ಲಿ ಕೈಯಲ್ಲಿ ಒಂದು ಸಣ್ಣ ಪೊಟ್ಟಣ ಕೂಡ ಹಿಡಿದು ಓಡಾಡಲು ದಿಗಿಲುಪಡು ವಂತಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಶುಕ್ರವಾರದ ಸಂತೆಗೆ ರೈತರೊಂದಿಗೆ ಹಳ್ಳಿಗಳಿಂದ ಬರುವ ನಾಯಿಗಳು ಮತ್ತಷ್ಟು ಸೇರ್ಪಡೆಯಾಗುತ್ತಿವೆ. ಮೊದಲು ಊರು ಹೊರವಲಯದಲ್ಲಿ ತಂಗುತ್ತಿದ್ದ ನಾಯಿಗಳು, ಈಗ ಬಸ್‌ನಿಲ್ದಾಣದಲ್ಲಿ ತಂಗಲು ಆರಂಭಿಸಿವೆ. ರಕ್ತ, ಮಾಂಸದ ರುಚಿ ನೋಡಿದ ನಾಯಿಗಳು ಜಾನುವಾರು, ಮಕ್ಕಳ ಮೇಲೆ ದಾಳಿ ಮಾಡುತ್ತಿವೆ. ನಾಯಿಗಳ ನಿಯಂತ್ರಣಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಮುಂದಾಗಬೇಕಾಗಿದೆ ಎಂದು ನಾಗರಿಕರು ಆಗ್ರಹಿಸಿದ್ದಾರೆ.
ಮಾಂಸದ ಅಂಗಡಿ, ಹೋಟೆಲ್‌ಗಳು ಹೆಚ್ಚಿದ್ದು, ಎಲ್ಲೆಂದರಲ್ಲಿ ತ್ಯಾಜ್ಯ ವನ್ನು ಬಿಸಾಡುತ್ತಿರುವುದರಿಂದ ನಾಯಿಗಳ ಹಿಂಡು ಹೆಚ್ಚಾಗಿದೆ. ಇವುಗಳ ಕಡಿವಾಣಕ್ಕೆ ಅಧಿಕಾರಿಗಳು ಮುಂದಾಗಬೇಕು.
– ಮೂರ್ತಿ, ಕಿಕ್ಕೇರಿ
ನಾಯಿಗಳ ನಿಯಂತ್ರಣಕ್ಕೆ ಕ್ರಮ ವಹಿಸಲಾಗುವುದು. ಸಂತಾನ ಹರಣ ಚಿಕಿತ್ಸೆ ಮಾಡಿಸಲು ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಲಾಗುವುದು. ಪ್ರಾಣಿದಯಾ ನಿಯಮ ಪಾಲಿಸಿ, ನಾಯಿಗಳ ನಿಯಂತ್ರಣಕ್ಕೆ ಬೇಕಿರುವ ಅಗತ್ಯ ಕ್ರಮ ವಹಿಸಲಾಗುವುದು.
– ಚಲುವರಾಜು, ಪಿಡಿಒ, ಕಿಕ್ಕೇರಿ