ಚಿತ್ರದುರ್ಗ: ನಾಲ್ಕು ವರ್ಷದ ಕಂದನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ್ದು ಬಾಲಕಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿತ್ರದುರ್ಗದ ಆಜಾದ್ ನಗರದಲ್ಲಿ ನಡೆದಿದೆ.
ನಾಯಿಗಳು ನಾಲ್ಕು ವರ್ಷದ ಗೌಸಿಯಾ ಎಂಬ ಮಗುವಿಗೆ ವಿಪರೀತ ಕಚ್ಚಿವೆ. ಪರಿಣಾಮವಾಗಿ ಬಾಲಕಿ ಗಂಭೀರವಾಗಿ ಗಾಯಗೊಂಡಿರುವ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಗೆ ರವಾನಿಸಲಾಗಿದೆ.
ನಾಲ್ಕು ದಿನದ ಹಿಂದೆಯೂ ಇದೇ ಬಡಾವಣೆಯಲ್ಲಿ ಅಟ್ಟಹಾಸ ನೆರೆದಿದ್ದ ಬೀದಿ ನಾಯಿಗಳು 6 ವರ್ಷದ ಜಮೀಲ್ ಎಂಬ ಬಾಲಕನಿಗೆ ಕಚ್ಚಿ ಗಾಯಗೊಳಿಸಿದ್ದವು.
ಚಿತ್ರದುರ್ಗ ನಗರದ ಎಲ್ಲಾ ಬಡಾವಣೆಗಳಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದೆ. ನಗರಸಭೆ ಅಧಿಕಾರಿಗಳು ಬೀದಿ ನಾಯಿಗಳನ್ನು ನಿಯಂತ್ರಣ ಮಾಡುವಲ್ಲಿ ವಿಫಲರಾಗಿದ್ದಾರೆ. ಇದರಿಂದ ಅಮಾಯಕ ಮಕ್ಕಳು ಬಲಿಯಾಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬಾಲಕಿ ಗೌಸಿಯಾ ಮೇಲೆ ನಾಯಿಗಳ ಅಟ್ಟಹಾಸ ನೋಡಿ ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು ನಗರಸಭೆ ಎದುರು ಪ್ರತಿಭಟನೆ ನಡೆಸಿದರು.