ವಾಡಿ: ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮಾಂಸ ಮತ್ತು ಮೀನಿನ ವ್ಯಾಪಾರ ಅವ್ಯಾಹತವಾಗಿ ನಡೆಯುತ್ತಿರುವ ಕಾರಣಕ್ಕೆ ಮಾಂಸ ತ್ಯಾಜ್ಯ ಎಲ್ಲೆಡೆ ಹರಡಿಕೊಂಡಿರುತ್ತದೆ. ಹೀಗಾಗಿ ಬಾಡೂಟದ ಆಶ್ರಯದಲ್ಲಿ ಬೀದಿನಾಯಿಗಳು ತಮ್ಮ ಸಾಮ್ರಾಜ್ಯವನ್ನೇ ಕಟ್ಟಿಕೊಂಡಿವೆ.
ಹಿಂಡು ಹಿಂಡಾಗಿ ಗಸ್ತು ತಿರುಗುವ ಮೂಲಕ ಮಾಂಸ ತ್ಯಾಜ್ಯದ ಹುಡುಕಾಟಕ್ಕೆ ಪೈಪೋಟಿ ನಡೆಸುತ್ತಿವೆ. ಮಾಂಸ-ಮೂಳೆಗಳ ತುಂಡಿಗೆ ಹತ್ತಾರು ನಾಯಿಗಳು ಮುಗಿಬಿದ್ದು ಸಂಘರ್ಷದಿಂದ ಆಹಾರ ಕತ್ತರಿಸಿ ತಿನ್ನುತ್ತಿವೆ.
ಇಲ್ಲಿನ ಬಸವೇಶ್ವರ ವೃತ್ತ, ಪೊಲೀಸ್ ಠಾಣೆ ಪ್ರದೇಶದಿಂದ ರಾವೂರ ಮಾರ್ಗದ ಮುಖ್ಯ ರಸ್ತೆಯುದ್ದಕ್ಕೂ ಮಾಂಸ ತ್ಯಾಜ್ಯ ಹಾಗೂ ಕೋಳಿ ರೆಕ್ಕೆಗಳನ್ನು ಪ್ರತಿದಿನ ರಾತ್ರಿವೇಳೆ ರಾಶಿಗಟ್ಟಲೆ ತಂದು ಸುರಿಯಲಾಗುತ್ತಿದೆ. ಹಗಲು ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಸಂಚರಿಸುವ ಬೀದಿನಾಯಿಗಳು, ರಾತ್ರಿಯಾಗುತ್ತಿದ್ದಂತೆ ಬಸವೇಶ್ವರ ವೃತ್ತ-ರಾವೂರ ಮಾರ್ಗದ ರಸ್ತೆಯಲ್ಲಿ ಬೀಡುಬಿಡುತ್ತವೆ.
ಸಾರ್ವಜನಿಕರು ಸಂಚರಿಸುವ ರಸ್ತೆ ಬದಿಯಲ್ಲಿ ನಾಯಿಗಳು ಕಾವಲು ಕುಳಿತಿರುತ್ತವೆ. ಪಾದಚಾರಿಗಳು ಮತ್ತು ಬೈಕ್ ಸವಾರರು ಬಂದರೆ ಬೆನ್ನಟ್ಟುತ್ತವೆ. ಇದರಿಂದ ಸ್ಥಳೀಯರು ಆತಂಕ ಎದುರಿಸಬೇಕಾದ ಪರಸ್ಥಿತಿ ನಿರ್ಮಾಣವಾಗಿದೆ. ಮಕ್ಕಳು ಪೋಷಕರ ರಕ್ಷಣೆಯಲ್ಲಿ ಶಾಲೆಗೆ ತೆರಳಬೇಕಾದ ದುಸ್ಥಿತಿ ಎದುರಾಗಿದೆ.
ಪಟ್ಟಣದಲ್ಲಿ ತೆರೆಯಲಾಗಿರುವ ಕುರಿ, ಕೋಳಿ, ಮೀನು ಹಾಗೂ ಗೋ ಮಾಂಸದ ಅಂಗಡಿಗಳಿಗೆ ನಿರ್ದಿಷ್ಟವಾದ ಮಾರುಕಟ್ಟೆ ವ್ಯವಸ್ಥೆ ಮಾಡಿಕೊಟ್ಟಿಲ್ಲ. ಪರಿಣಾಮ ರಸ್ತೆ ಬದಿಗಳಲ್ಲಿ ಮಾಂಸದ ತೆರೆದ ಅಂಗಡಿಗಳಿರುವುದನ್ನು ಕಾಣಬಹುದು. ಆಹಾರ ಇಲಾಖೆಯಾಗಲಿ ಅಥವಾ ಪುರಸಭೆ ಅಧಿಕಾರಿಗಳಾಗಲಿ ಈ ಕುರಿತು ಗಂಭೀರ ಚಿಂತನೆ ನಡೆಸಿಲ್ಲ. ಪರಿಣಾಮ ಮಾಂಸ ವ್ಯಾಪಾರಿಗಳು ದಿನದ ಮಾಂಸ ತ್ಯಾಜ್ಯವನ್ನು ರಸ್ತೆಗೆ ಎಸೆದು ಬರುತ್ತಿದ್ದಾರೆ. ಇದರಿಂದ ನಗರದ ಪ್ರವೇಶ ರಸ್ತೆಗಳು ದುರ್ವಾಸನೆಯಿಂದ ಕೂಡಿವೆ. ಕೆಟ್ಟ ವಾಸನೆಯ ಮಧ್ಯೆ ಬೆನ್ನಟ್ಟುವ ಬೀದಿನಾಯಿಗಳ ಕಾಟದಿಂದ ರಕ್ಷಣೆ ಪಡೆಯಬೇಕಾದ ಹೀನಾಯ ಸ್ಥಿತಿ ನಿರ್ಮಾಣವಾಗಿದೆ.
ಇದು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಬಡಾವಣೆಗೆ ನುಗ್ಗಿ ಬರುತ್ತಿರುವ ಬೀದಿನಾಯಿಗಳ ಹಿಂಡು ಸಾರ್ವಜನಿಕರ ಮನೆಗಳಿಗೂ ಪ್ರವೇಶ ಪಡೆಯುತ್ತವೆ. ಮಕ್ಕಳ ದೇಹವನ್ನು ಮೂಸಿ ನೋಡುತ್ತವೆ. ಮಾಂಸ ತ್ಯಾಜ್ಯದ ರುಚಿ ನೋಡಿರುವ ನಾಯಿಗಳು ಮಾನವನ ಮೇಲೆ ದಾಳಿ ನಡೆಸುವ ಸಾಧ್ಯತೆ ಅಲ್ಲಗಳಿಯುವಂತಿಲ್ಲ. ಈ ಕುರಿತು ಅಧಿಕಾರಿಗಳು ಶೀಘ್ರವೇ ಎಚ್ಚೆತ್ತುಕೊಳ್ಳಬೇಕಿದೆ.
ಮಡಿವಾಳಪ್ಪ ಹೇರೂರ