ಕನಕಪುರ: ತಾಲೂಕಿನ ಸಾತನೂರು ಹೋಬಳಿಯ ಹೊಸ ಕಬ್ಟಾಳು ಗ್ರಾಮ ದಲ್ಲಿ ಹಲಗಮ್ಮ (80) ಎಂಬ ವೃದ್ಧೆ ಯೊಬ್ಬರ ಮೇಲೆ ಬೀದಿ ನಾಯಿಗಳು ದಾಳಿ ಮಾಡಿ ತೀವ್ರ ಗಾಯಗೊಳಿಸಿವೆ.
ಗುರುವಾರ ಸಂಜೆ 7 ಗಂಟೆ ವೇಳೆ ಯಲ್ಲಿ ಗುಡಿಸಿಲಿನಲ್ಲಿ ಮಲಗಿದ್ದ ವೇಳೆ 10 -15 ನಾಯಿಗಳು ದಾಳಿ ಮಾಡಿವೆ. ವೃದ್ಧೆಯ ಮುಖ, ಹೊಟ್ಟೆ, ಒಂದು ಕೈಯನ್ನು ಕಚ್ಚಿ ಗಾಯಗೊಳಿಸಿವೆ.
ವೃದ್ಧೆ ಹಲಗಮ್ಮ ತೀವ್ರ ಗಾಯಗೊಂಡಿದ್ದು, ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತೀರಾ ಬಡವರಾಗಿದ್ದು, ಗುಡಿಸಿಲಿನಲ್ಲಿಯೇ ವಾಸ. ಬೀದಿ ನಾಯಿಗಳ ದಾಳಿಯಿಂದ ತೀವ್ರ ಗಾಯಗೊಂಡು ನಿತ್ರಾಣರಾಗಿದ್ದರು. ಇದನ್ನು ಕಂಡ ಗ್ರಾಮಸ್ಥರು 108 ಆ್ಯಂಬುಲೆನ್ಸ್‌ಗೆ ಕರೆ ಮಾಡಿ ದ್ದರು. ಸಾತನೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯ ನಂತರ ಬೆಂಗಳೂರಿನ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಲಾಗಿದೆ.
ಚಿಕಿತ್ಸೆಗೆ ಆಕೆಯ ಬಳಿ ಹಣವಿಲ್ಲ. ಹೀಗಾಗಿ ಸ್ಥಳೀಯ ಗ್ರಾಪಂ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ಆಕೆಯ ಚಿಕಿತ್ಸೆಗೆ ಆರ್ಥಿಕ ಸಹಾಯ ಮಾಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಕಬ್ಬಾಳಿನಲ್ಲೂ ನಾಯಿಗಳ ಹಾವಳಿ: ಇದೇ ದಿನ ಕಬ್ಟಾಳು ಗ್ರಾಮದ ಮಾದಪ್ಪ ಎಂಬ ವೃದ್ಧರ ಮೇಲೆ ಬೀದಿನಾಯಿಗಳು ದಾಳಿ ಮಾಡಿ, ಗಂಭೀರವಾಗಿ ಗಾಯ ಮಾಡಿವೆ. ಗ್ರಾಮದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಪದೇ ಪದೇ ನಾಯಿಯಿಂದ ಗಾಯಗೊಂಡ ಪ್ರಕರಣಗಳು ನಡೆಯುತ್ತಲೇ ಇದೆ. ನಾಯಿಗಳ ಹಾವಳಿಯನ್ನು ತಡೆಯುವಂತೆ ಇಲ್ಲಿನ ನಾಗರಿಕರು ತಮ್ಮ ಗ್ರಾಪಂ ಅನ್ನು ಆಗ್ರಹಿಸಿದ್ದಾರೆ.