ಬೆಂಗಳೂರು: ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳುವುದು ದೇಶದ್ರೋಹಕ್ಕೆ ಸಮ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಎನ್. ಉಮೇಶ್ ಅಭಿಪ್ರಾಯಪಟ್ಟಿದ್ದಾರೆ. ವಿಶ್ವ ಕಾರ್ಮಿಕ ದಿನಾಚರಣೆ ಪ್ರಯುಕ್ತ ಸಿಐಟಿಯು ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ ಹಾಗೂ ಇತರ ಕಾರ್ಮಿಕ ಸಂಘಟನೆಗಳ ವತಿಯಿಂದ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದರು.
ಕಾರ್ಮಿಕರ ಹಕ್ಕುಗಳನ್ನು ರಕ್ಷಿಸುವುದು ದೇಶಪ್ರೇಮದ ಕೆಲಸ. ಅದೇ ರೀತಿ ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳುವುದು ದೇಶದ್ರೋಹದ ಕೆಲಸ. ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿಗಳನ್ನು ತರುವ ಮೂಲಕ ಕೇಂದ್ರ ಸರ್ಕಾರ ಆ ದ್ರೋಹದ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. ಕಾರ್ಮಿಕರ ಹಕ್ಕುಗಳನ್ನು ರಕ್ಷಿಸುವಲ್ಲಿ ಶಾಸಕಾಂಗ, ನ್ಯಾಯಾಂಗ ಹಾಗೂ ಕಾರ್ಯಾಂಗ ವಿಫಲವಾಗಿವೆ.
ಕಾರ್ಮಿಕರ ಪರವಾಗಿ ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಧ್ವನಿ ಎತ್ತುವವರ ಸಂಖ್ಯೆ ಕ್ಷೀಣಿಸಿದೆ. ಇಂತಹ ಸಂದರ್ಭದಲ್ಲಿ ಬೀದಿಗಿಳಿದು ಹೋರಾಡುವ ಮೂಲಕ ಕಾರ್ಮಿಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ. ರಕ್ಷಣಾತ್ಮಕ ಅಥವಾ ಮೌನ ಹೋರಾಟಗಳಿಗೆ ಸರ್ಕಾರಗಳು ಸ್ಪಂದಿಸುವ ಸಾಧ್ಯತೆಗಳೇ ಕಡಿಮೆ. ಆದ್ದರಿಂದ ಮುಂದಿನ ದಿನಗಳಲ್ಲಿ ಕಾರ್ಮಿಕರು ಒಗ್ಗಟ್ಟಾಗಿ ಆಕ್ರಮಣಕಾರಿ ಹೋರಾಟದ ಹಾದಿ ತುಳಿಯಬೇಕಾಗುತ್ತದೆ ಎಂದು ಹೇಳಿದರು.
ಸಿಐಟಿಯು ಮುಖಂಡ ಆರ್. ಶ್ರೀನಿವಾಸ್ ಮಾತನಾಡಿ, ರಾಜ್ಯ ಸರ್ಕಾರ ಕಾರ್ಮಿಕ ದಿನಾಚರಣೆ ರಜೆ ಘೋಷಿಸಿದ್ದು, ಕೇಂದ್ರ ಸರ್ಕಾರ ಆ ಕೆಲಸ ಮಾಡಿಲ್ಲ. ರಾಷ್ಟ್ರಮಟ್ಟದಲ್ಲಿ ಈ ಬಗ್ಗೆ ಧ್ವನಿ ಎತ್ತಬೇಕಿದೆ. ಕಾರ್ಮಿಕರ ಪರ ಶಾಸನಸಭೆಗಳಲ್ಲಿ ಧ್ವನಿ ಎತ್ತಲು ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಪ್ರತಿನಿಧಿಗಳನ್ನು ಆರಿಸಿ ಕಳಿಸಬೇಕು. ಇದಕ್ಕಾಗಿ ಕಾರ್ಮಿಕರು ಹಾಗೂ ಕಾರ್ಮಿಕ ಸಂಘಟನೆಗಳಲ್ಲಿ ಒಗ್ಗಟ್ಟು ಬರಬೇಕು ಎಂದರು.
“ಮೇ ಡೇ ಕಪ್’ ವಿತರಣೆ: ಮೇ ದಿನಾಚರಣೆ ಅಂಗವಾಗಿ ಕಾರ್ಮಿಕರಿಗೆ ಕ್ರಿಕೆಟ್ ಪಂದ್ಯಾವಳಿ ಏರ್ಪಡಿಸಲಾಗಿತ್ತು. ವಿಜೇತ ತಂಡಗಳಿಗೆ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಅವರು ಮೇ ಡೇ ಕಪ್ ವಿತರಿಸಿದರು. ಇದಕ್ಕೂ ಮೊದಲು ಪುರಭವನದಿಂದ ಫ್ರೀಡಂ ಪಾರ್ಕ್‌ವರೆಗೆ ನಡೆದ ಬೃಹತ್ ಮೆರವಣಿಗೆಯಲ್ಲಿ ಸಾವಿರಾರು ಕಾರ್ಮಿಕರು ಪಾಲ್ಗೊಂಡಿದ್ದರು.
ಕಾರ್ಮಿಕ ಕಲ್ಯಾಣ ಮಂಡಳಿ ಆಯುಕ್ತ ಡಾ. ಜಿ. ಮಂಜುನಾಥ್, ಕಾರ್ಮಿಕ ಮುಖಂಡರಾದ ಮೈಕಲ್ ಫರ್ನಾಂಡಿಸ್, ಇ.ಕೆ.ಎನ್. ರಾಜನ್, ಮೀನಾಕ್ಷಿ ಸುಂದರಂ, ಕೆ. ಪ್ರಕಾಶ್, ಎಚ್.ಎನ್. ಗೋಪಾಲಕೃಷ್ಣ, ಬಿ.ಎನ್. ಮಂಜುನಾಥ್ ಇದ್ದರು.