Advertisement

ಬೆಂಗಳೂರಿನಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ: ಸಚಿವ ಪ್ರಭು ಚವ್ಹಾಣ್

05:25 PM Jul 11, 2022 | Team Udayavani |

ಬೆಂಗಳೂರು: ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತಿರುವ ಬೀದಿ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಪಶುಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್ ಅವರು ಸ್ಪಷ್ಟಪಡಿಸಿದರು.

Advertisement

ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಬೀದಿನಾಯಿಗಳ ರಕ್ಷಣೆ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ 3 ಲಕ್ಷಕ್ಕೂ ಅಧಿಕ ಬೀದಿ ನಾಯಿಗಳಿವೆ. ಪ್ರತಿನಿತ್ಯ 240 ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತಿದೆ ಎಂದರು.

ಪ್ರತಿನಿತ್ಯ ನಡೆಸುವ ಸಂತಾನಹರಣ ಶಸ್ತ್ರಚಿಕಿತ್ಸೆ ಸಂಖ್ಯೆಯನ್ನು 400ಕ್ಕೆ ಹೆಚ್ಚಳ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ ಎಂದ ಅವರು, ಬಿಬಿಎಂಪಿಯೊಂದಿಗೆ ನಮ್ಮ ಪಶು ಸಂಗೋಪನೆ ಇಲಾಖೆ ಕೈಜೋಡಿಸಿ ಬೀದಿ ನಾಯಿಗಳ ಹಾವಳಿ ತಡೆಗಟ್ಟಲು ಸಂಪೂರ್ಣ ಸಹಕಾರ ನೀಡಲು ಸಿದ್ಧವಿರುವುದಾಗಿ ಇದೇ ವೇಳೆ ಸ್ಪಷ್ಟಪಡಿಸಿದರು.

ಬೆಂಗಳೂರಿನಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ ಎಂದು ಪ್ರಾಣಿ ಸಹಾಯವಾಣಿ ಕೇಂದ್ರಕ್ಕೆ ಪ್ರತಿನಿತ್ಯ ಕರೆಗಳು ಬರುತ್ತಿವೆ. ವೈಯಕ್ತಿಕವಾಗಿ ಶಾಸಕರು ನನಗೆ ಕರೆ ಮಾಡಿ ಇಲಾಖೆ ವತಿಯಿಂದ ಬೀದಿನಾಯಿಗಳ ಹಾವಳಿ ತಡೆಗಟ್ಟುವ ಕೆಲಸಗಳ ಬಗ್ಗೆ ಪ್ರಶ್ನೆ ಕೇಳುತ್ತಿದ್ದರಿಂದ ಇಂದು ಬಿಬಿಎಂಪಿ, ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು, ಪಶುಸಂಗೋಪನೆ ಕಾಲೇಜು ಪ್ರಾಧ್ಯಾಪಕರುಗಳೊಂದಿಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿಗೆ ಸಭೆ ನಡೆಸಿರುವುದಾಗಿ ಸಚಿವ ಪ್ರಭು ಚವ್ಹಾಣ್ ತಿಳಿಸಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿರುವ 8 ವಲಯಗಳಲ್ಲಿ ಬೀದಿ ನಾಯಿಗಳನ್ನು ನಿಯಂತ್ರಿಸುವ ಕಾರ್ಯವನ್ನು ಖಾಸಗಿ ಎನ್.ಜಿ.ಒ ಸಂಸ್ಥೆಗಳಿಗೆ ನೀಡಲಾಗಿದೆ. ಇದರ ಹೊರತಾಗಿಯೂ ಪಶು ಸಂಗೋಪನೆ ಇಲಾಖೆಯ ಆಸ್ಪತ್ರೆಗಳಲ್ಲಿಯೂ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ.‌ ಖಾಸಗಿ ಎನ್.ಜಿ.ಒ ಸಂಸ್ಥೆಗಳ ಬದಲಾಗಿ ಇಲಾಖೆಯಿಂದಲೇ ಸಂತಾನೋತ್ಪತ್ತಿ ತಡೆಗಟ್ಟಲು ಶಸ್ತ್ರಚಿಕಿತ್ಸೆ ಮತ್ತು ರೇಬಿಸ್ ಚುಚ್ಚುಮದ್ದು ನೀಡುವ ಸಂಬಂಧ ಕೂಡಲೇ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಬಿಬಿಎಂಪಿ ಪಶುಸಂಗೋಪನೆ ಇಲಾಖೆ ಅಧಿಕಾರಿಗಳಿಗೆ ಸಚಿವ ಪ್ರಭು ಚವ್ಹಾಣ್ ಇದೇ ಸಂದರ್ಭದಲ್ಲಿ ಸೂಚನೆ ನೀಡಿದರು.

Advertisement

ಬಿಬಿಎಂಪಿ ಪ್ರದೇಶಗಳಲ್ಲಿ ಬೀದಿ ನಾಯಿಗಳಿಗೆ ಚಿಕಿತ್ಸೆ ಮತ್ತು ಲಸಿಕೆ ನೀಡಲಾಗಿದೆ. ಬಿಬಿಎಂಪಿಗೆ ಹತ್ತಿರವಾಗಿರುವ ನೆರೆಯ ಹಳ್ಳಿಗಳ ನಾಯಿಗಳು ಈ ಪ್ರದೇಶಗಳಿಗೆ ನುಗ್ಗುತ್ತಿರುವುದರಿಂದ ಬೆಂಗಳೂರು ನಗರದಲ್ಲಿ ಬೀದಿ ನಾಯಿಗಳ ಸಂಖ್ಯೆಯನ್ನು ನಿಯಂತ್ರಿಸುವ ಸಲುವಾಗಿ ಸರ್ಕಾರದ ಮಟ್ಟದಲ್ಲಿ ಕ್ರಮಕೈಗೊಳ್ಳಲು ನಗರಾಭಿವೃದ್ಧಿ ಇಲಾಖೆ, ಬಿಬಿಎಂಪಿ, ಆರೋಗ್ಯ ಇಲಾಖೆ, ಪಶುಸಂಗೋಪನೆ ಇಲಾಖೆ ಮತ್ತು ವಿಶ್ವವಿದ್ಯಾಲಯದ ನುರಿತರೊಂದಿಗೆ ಮುಂದಿನ ದಿನಗಳಲ್ಲಿ ಸಭೆ ನಡೆಸಿ, ಬೀದಿ ನಾಯಿಗಳ ಹಾವಳಿ ತಡೆಗಟ್ಟಲು ಪರಿಹಾರ ಹುಡುಕಿ, ಬೀದಿ ನಾಯಿಗಳ ನಿಯಂತ್ರಿಸಿ, ಸಾರ್ವಜನಿಕರು ನೆಮ್ಮದಿಯಿಂದ ಜೀವನ ಸಾಗಿಸಲು ಪಾರದರ್ಶಕವಾಗಿ ಶ್ರಮಿಸುತ್ತೇನೆ ಎಂದು ಪ್ರಭು ಚವ್ಹಾಣ್ ಹೇಳಿದರು.

ಹುಚ್ಚು ನಾಯಿ ರೋಗ ನಿಯಂತ್ರಣಕ್ಕಾಗಿ ಲಸಿಕೆ ಹಾಕುವ ಕಾರ್ಯವನ್ನು ತೀವ್ರಗೊಳಿಸುವುದು ಹಾಗೂ ಲಸಿಕೆ ಸಂಖ್ಯೆಯನ್ನು ಹೆಚ್ಚಿಸುವಂತೆ ಅಧಿಕಾರಿಗಳಿಗೆ ಸಚಿವ ಪ್ರಭು ಬಿ.ಚವ್ಹಾಣ್ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಇಲಾಖೆಯ ಕಾರ್ಯದರ್ಶಿ ಸಲ್ಮಾ ಕೆ.ಫಾಹೀಮ್, ಆಯುಕ್ತ ಡಾ.ಬಸವರಾಜೇಂದ್ರ, ನಿರ್ದೇಶಕ ಡಾ.ಮಂಜುನಾಥ್ ಪಾಳೇಗಾರ್, ಬಿಬಿಎಂಪಿ ಪಶುಸಂಗೋಪನೆ ಇಲಾಖೆ ಪ್ರಭಾರಿ ಸಹಾಯಕ ನಿರ್ದೇಶಕ ಡಾ.ಮಂಜುನಾಥ್ ಶಿಂಧೆ, ಪಶುವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ.ಸಿ.ಎಸ್.ನಾಗರಾಜ್, ಪ್ರಾಧ್ಯಾಪಕ ಡಾ.ಶ್ರೀಕೃಷ್ಣ ಇಸ್ಳೂರ ಸೇರಿದಂತೆ ಹಲವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next