ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ಬೀದಿ ನಾಯಿಗಳ ವಿಪರೀತ ಹಾವಳಿಯಿಂದಾಗಿ ನಾಯಿ ಕಡಿತ ಪ್ರಕರಣಗಳ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿ ರುವುದು ಜಿಲ್ಲೆಯ ಸಾರ್ವಜನಿಕರನ್ನು ತೀವ್ರ ಆತಂಕ್ಕೀಡು ಮಾಡಿದ್ದು, ಬೌಬೌ ನಾಯಿಗಳ ಕಾರು ಬಾರಿಗೆ ಕಡಿವಾಣ ಹಾಕೋವರೇ ಇಲ್ಲದಂತಾಗಿದೆ.
ಹೌದು, ಜಿಲ್ಲೆಯಲ್ಲಿ ನಾಯಿ ಕಡಿತ ಪ್ರಕರಣ ಸಂಖ್ಯೆಯನ್ನು ಅವಲೋಕಿಸಿದರೆ ಎತಂಹವರಲ್ಲಿಯೂ ಒಮ್ಮೆ ಗಾಬರಿ ಮೂಡಿಸುತ್ತವೆ. ಈ ವರ್ಷದ ಜನವರಿಯಿಂದ ಆಗಸ್ಟ್ ಅಂತ್ಯದವರೆಗೂ ಜಿಲ್ಲಾದ್ಯಂತ 5,313 ನಾಯಿ ಕಡಿತ ಪ್ರಕರಣಗಳು ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದೆ.
ವರ್ಷದಿಂದ ವರ್ಷಕ್ಕೆ ಹೆಚ್ಚಳ: ನಾಯಿಗಳ ಅರ್ಭಟಕ್ಕೆ ಅಮಾಯಕರು, ಶಾಲಾ, ಕಾಲೇಜು ವಿದ್ಯಾರ್ಥಿಗಳು, ವೃದ್ಧರು, ಮಹಿಳೆಯರು, ಬೈಕ್ ಸವಾರರು ಬೆಚ್ಚಿ ಬೀಳುವ ಸ್ಥಿತಿ ಜಿಲ್ಲೆಯಲ್ಲಿ ನಿರ್ಮಾಣವಾಗಿದ್ದು ,ನಾಯಿಗಳ ಕಡಿತಕ್ಕೆ ಕಡಿವಾಣ ಇಲ್ಲದೇ ಕೆಲವೊಂದು ಪ್ರದೇಶಗಳ ರಸ್ತೆಗಳಲ್ಲಿ ಸಾರ್ವಜನಿಕರು ಸಂಚರಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ.
ತುಸು ಎಚ್ಚರ ತಪ್ಪಿದರೂ ಸಾಕು ಬೀದಿ ನಾಯಿಗಳು ದಿಢೀರ್ ಮೇಲೆರೆಗಿ ಗಾಯಗೊಳಿಸಿರುವ ಪ್ರಕರಣಗಳು ಜಿಲ್ಲೆಯ ಸಾರ್ವಜನಿಕರನ್ನು ಇನ್ನೂ ಕಾಡುತ್ತಲೇ ಇದ್ದು, ಅನೇಕ ಮಕ್ಕಳು ಬೀದಿ ನಾಯಿಗಳ ಅರ್ಭಟಕ್ಕೆ ಮನೆಗಳಿಂದ ಹೊರ ಬರಲು ಹಿಂದೇಟು ಹಾಕುವಷ್ಟರ ಮಟ್ಟಿಗೆ ಜಿಲ್ಲೆಯಲ್ಲಿ ನಾಯಿ ಕಡಿತ ಪ್ರಕರಣಗಳನ್ನು ಗಮನಿಸಿದರೆ ಅವುಗಳ ಹಾವಳಿಯ ತೀವ್ರತೆ ಅರ್ಥವಾಗುತ್ತದೆ. ವಿಶೇಷವಾಗಿ ಹಾಲು, ಹಣ್ಣು, ತರಕಾರಿ ತರುವಾಗ ಹೋಟೆಲ್‌ಗಳಿಂದ ಊಟ, ತಿಂಡಿ ತರುವಾಗ ಹೊಂಚು ಹಾಕಿ ಕಾಯುವ ನಾಯಿಗಳು ಸಾರ್ವಜನಿಕರ ಮೇಲೆ ದಾಳಿ ಮಾಡುತ್ತಿವೆ ಇನ್ನೂ ಕೆಲವೊಂದು ಪ್ರದೇಶಗಳಲ್ಲಿ ಕಾರು, ಬೈಕ್ ಸವಾರರ ಮೇಲೆ ನಾಯಿಗಳು ಹಿಂಬಾಲಿಸಿಕೊಂಡು ಬೌಬೌ ಎನ್ನುತ್ತಾ ಕಡಿತಕ್ಕೆ ಮುಂದಾಗುತ್ತಿರುವ ದೃಶ್ಯಗಳು ಜಿಲ್ಲಾ ಕೇಂದ್ರದಲ್ಲಿ ಸಾಮಾನ್ಯವಾಗಿವೆ.
ಸ್ಥಳೀಯ ಸಂಸ್ಥೆಗಳ ನಿರ್ಲಕ್ಷ್ಯ: ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ನಾಯಿ ಕಡಿತ ಪ್ರಕರಣಗಳು ಹೆಚ್ಚಾಗಿ ಅಮಾಯಕರು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವಂತಹ ಸ್ಥಿತಿ ನಿರ್ಮಾಣವಾಗಿದೆ. ಆದರೂ ಈ ಬಗ್ಗೆ ಎಚ್ಚೆತ್ತುಕೊಂಡು ಬೀದಿ ನಾಯಿಗಳ ಹಾವಳಿಗೆ ಬ್ರೇಕ್ ಹಾಕ ಬೇಕಿದ್ದ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳು ಮೌನ ವಹಿಸಿವೆ. ವರ್ಷ ಕ್ಕೊಮ್ಮೆ ಮಂಡಿಸುವ ಬಜೆಟ್‌ನಲ್ಲಿ ಬೀದಿ ನಾಯಿಗಳ, ಕೋತಿಗಳ ಹಾವಳಿ ತಡೆಗೆ ಲಕ್ಷಾಂತರ ರೂ. ಅನುದಾನ ಮೀಸಲಿಡುತ್ತವೆ. ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಹೆಸರಲ್ಲಿ ಲಕ್ಷಾಂತರ ರೂ.ಬಿಲ್ ಡ್ರಾ ಮಾಡುತ್ತಾರೆ. ಆದರೆ ಫಲಿತಾಂಶ ಮಾತ್ರ ಶೂನ್ಯ ಎನ್ನುವುದಕ್ಕೆ ಜಿಲ್ಲೆಯಲ್ಲಿ ಇಲ್ಲಿವರೆಗೂ ದಾಖಲಾಗಿರುವ ನಾಯಿ ಕಡಿತ ಪ್ರಕರಣಗಳು ಸಾಕ್ಷಿಯಾಗಿವೆ.
–ಕಾಗತಿ ನಾಗರಾಜಪ್ಪ