ಭದ್ರಾಕ್(ಒಡಿಶಾ): ಸರ್ಕಾರಿ ಆಸ್ಪತ್ರೆಯೊಳಗಿಟ್ಟಿದ್ದ ನವಜಾತ ಶಿಶುವಿನ ಕಳೇಬರವನ್ನು ಬೀದಿ ನಾಯಿ ಕಚ್ಚಿಕೊಂಡು ಓಡಿ ಹೋದ ಘಟನೆ ಒಡಿಶಾದ ಭದ್ರಾಕ್ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಟವೇರಾಗೆ ಕಂಟೇನರ್ ಡಿಕ್ಕಿ: ಇಬ್ಬರು ಕಬಡ್ಡಿ ಆಟಗಾರರ ದುರಂತ ಸಾವು
ಈ ದುರದೃಷ್ಟಕರ ಘಟನೆ ಭದ್ರಾಕ್ ಜಿಲ್ಲೆಯ ಮುಖ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಸೋಮವಾರ(ಮಾರ್ಚ್ 15) ನಡೆದಿತ್ತು. ವರದಿಗಳ ಪ್ರಕಾರ, ಬೀದಿ ನಾಯಿ ಏಕಾಏಕಿ ನವಜಾತ ಶಿಶುವಿನ ಹೆಣವನ್ನು ಕಚ್ಚಿಕೊಂಡು ಸರ್ಕಾರಿ ಆಸ್ಪತ್ರೆಯ ಆವರಣದೊಳಗೆ ಓಡಿ ಹೋಗುತ್ತಿರುವುದನ್ನು ಸಿಬಂದಿಗಳು, ಜನರು ಗಮನಿಸಿದ್ದರು. ಬಳಿಕ ಜನರು ನಾಯಿಯನ್ನು ಅಟ್ಟಿಸಿಕೊಂಡು ಹೋದಾಗ ಶವವನ್ನು ಬಿಸಾಕಿ ಕಾಲ್ಕಿತ್ತಿರುವುದಾಗಿ ವರದಿ ವಿವರಿಸಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಬೀದಿ ನಾಯಿ ನವಜಾತ ಹೆಣ್ಣುಮಗುವಿನ ಶವವನ್ನು ಕಚ್ಚಿಕೊಂಡು ಆಸ್ಪತ್ರೆಯ ಆವರಣದಲ್ಲಿ ಸುತ್ತಾಡುತ್ತಿತ್ತು. ಆ ಮಗು ಜೀವಂತವಾಗಿದೆ ಎಂದು ಭಾವಿಸಿ, ನಾಯಿಯನ್ನು ಅಟ್ಟಿಸಿಕೊಂಡು ಹೋದಾಗ ಅದು ಶವವನ್ನು ಬಿಟ್ಟು ಓಡಿ ಹೋಗಿತ್ತು ಎಂದು ತಿಳಿಸಿದ್ದಾರೆ.
ಈ ಘಟನೆ ಬಗ್ಗೆ ಪ್ರತ್ಯದರ್ಶಿಗಳು ಭಯವನ್ನು ವ್ಯಕ್ತಪಡಿಸಿದ್ದು, ಆಸ್ಪತ್ರೆಯ ಆವರಣದೊಳಗೆ ಒಂದು ವೇಳೆ ಇಂತಹ ಘಟನೆಗಳು ನಡೆಯುತ್ತಿದ್ದರೆ, ನವಜಾತ ಶಿಶುಗಳನ್ನು ಚಿಕಿತ್ಸೆಗೆ ಹೇಗೆ ಕರೆತರಲಿ ಎಂದು ಪ್ರಶ್ನಿಸಿದ್ದಾರೆ. ಇದೊಂದು ಭಯಾನಕ ಘಟನೆ, ಇದನ್ನು ಗಮನಿಸಿದ ಮೇಲೆ ಆಸ್ಪತ್ರೆ ಮೇಲಿನ ನಂಬಿಕೆಯೇ ಹೊರಟು ಹೋಗಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿರುವುದಾಗಿ ವರದಿ ತಿಳಿಸಿದೆ. ಘಟನೆ ಬಗ್ಗೆ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿರುವುದಾಗಿ ತಿಳಿಸಿದ್ದಾರೆ.