Advertisement

ಮುಂಗಾರಿಗೂ ಮುನ್ನ ಮಾರುಕಟ್ಟೆ ಪ್ರವೇಶಿಸಿದ ಕಲ್ಲಣಬೆ

06:15 AM May 26, 2018 | Team Udayavani |

ಅಜೆಕಾರು: ಪ್ರತೀ ವರ್ಷ ಮುಂಗಾರು ಮಳೆ ಪ್ರಾರಂಭಗೊಂಡು ಒಂದೆರಡು ದಿನಗಳಲ್ಲಿ ಗ್ರಾಮೀಣ ಭಾಗಗಳಲ್ಲಿ ಕಂಡು ಬರುತ್ತಿದ್ದ ಕಲ್ಲಣಬೆ (ಸ್ಟೋನ್‌ ಮಶ್ರೂಮ್ಸ್‌) ಈ ಬಾರಿ ಮಳೆಗಾಲ ಪ್ರಾರಂಭಕ್ಕೂ ಮುನ್ನವೇ ಮಾರುಕಟ್ಟೆ ಪ್ರವೇಶಿಸಿದೆ. 

Advertisement

ಕಳೆದ ಒಂದೆರಡು ತಿಂಗಳಿನಿಂದ ಸತತವಾಗಿ ಗುಡುಗು ಸಿಡಿಲು ಸಹಿತ ಬೇಸಿಗೆ ಮಳೆ ಸುರಿಯುತ್ತಿರುವ ಪರಿಣಾಮ ಭೂಮಿ ತಂಪಾಗಿರುವ ಕಾರಣ ಕಲ್ಲಣಬೆಗಳು ಅವಧಿಗೂ ಮುನ್ನವೇ ಹುಟ್ಟಿಕೊಂಡಿವೆ.
 
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ದೊರೆಯುವ ಈ ಕಲ್ಲಣಬೆಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಿದ್ದು ಕೆ.ಜಿಯೊಂದಕ್ಕೆ ಸುಮಾರು 400ರಿಂದ 600 ರೂ.ಗಳವರೆಗೂ ಮಾರಾಟವಾಗುತ್ತಿದೆ. 

ಮಳೆಗಾಲ ಪ್ರಾರಂಭಗೊಂಡ ಅನಂತರ ಕೆಲವೇ ದಿನಗಳವರೆಗೆ ಮಾತ್ರ ದೊರೆಯುವ ಈ ಕಲ್ಲಣಬೆಗಳಿಗೆ ಭಾರೀ ಬೇಡಿಕೆ ಇದೆ. ಉತ್ತಮ ಮಳೆಯಾದ ಸಂದರ್ಭ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮಾರುಕಟ್ಟೆಯಲ್ಲಿ ಪೂರೈಕೆಯಿರುತ್ತದೆ. ಆದರೆ ಮಳೆ ಕಡಿಮೆಯಾದರೆ ಕಲ್ಲಣಬೆ ಮಣ್ಣಿನಲ್ಲಿ ಉತ್ಪತ್ತಿಯಾಗದೆ ಕುಂಠಿತಗೊಳ್ಳುತ್ತದೆ. 

ಅತೀ ರುಚಿಕರವಾದ ಕಲ್ಲಣಬೆಯು ಆರೋಗ್ಯ ದಾಯಕವಾದುದು. ಇದರಲ್ಲಿ ಪೌಷ್ಟಿಕಾಂಶ, ಪೊ›ಟೀನ್‌ಗಳು ಹೇರಳವಾಗಿದ್ದು ದೇಹದಲ್ಲಿರುವ ರೋಗಾಣುಗಳ ವಿರುದ್ಧವೂ ಇದು ಕಾರ್ಯನಿರ್ವಹಿಸುತ್ತದೆ ಎನ್ನಲಾಗುತ್ತದೆ.
 
ಮೊದಲ ಮಳೆಯ ಸ್ಪರ್ಶವಾಗುತ್ತಿದ್ದಂತೆ ಹತ್ತಿಯ ಉಂಡೆಗಳಂತೆ ಮಣ್ಣಿನ ಒಳಗಿಂದ ಮೇಲೆ ಗೋಚರಿಸುವ ಈ ಕಲ್ಲಣಬೆಗಳು ಗ್ರಾಮೀಣ ಭಾಗದ ಕೆಲ ಜನತೆಗೆ ಸ್ವಲ್ಪ ಪ್ರಮಾಣದ ಆದಾಯವನ್ನು ತಂದುಕೊಡುತ್ತವೆ. ಇದು ಜನತೆಗೆ ಪ್ರಕೃತಿ ನೀಡಿದ ಕೊಡುಗೆಯಾಗಿದೆ.

ಎಚ್ಚರ ಅಗತ್ಯ
ಸಾಮಾನ್ಯವಾಗಿ ಕಲ್ಲಣಬೆಗಳು ಬಿಳಿ ಬಣ್ಣದಿಂದ ಕೂಡಿರುತ್ತವೆ. ಅಲ್ಲದೆ ತಿಳಿಕಂದು ಬಣ್ಣ ಅಥವಾ ಮಣ್ಣಿನ ಬಣ್ಣದಲ್ಲಿಯೂ ಕಲ್ಲಣಬೆಗಳು ದೊರೆಯುತ್ತವೆ. ಇವು ಆರೋಗ್ಯವರ್ಧಕ ಕಲ್ಲಣಬೆಗಳು. ಆದರೆ ಕೆಲವೊಮ್ಮೆ ಬಣ್ಣ ಬಣ್ಣದ ಅಣಬೆಗಳು ದೊರೆಯುತ್ತವೆ. ಇದು ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ. ಈ ನಿಟ್ಟಿನಲ್ಲಿ ಸೂಕ್ತವಾಗಿ ಪರಿಶೀಲಿಸಿ ಕಲ್ಲಣಬೆ ಸೇವಿಸಬೇಕಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next