Advertisement

Election ಲೋಕಸಭೆಯಲ್ಲಿ 350 ಸ್ಥಾನ ಗೆಲ್ಲಲು ಕಾರ್ಯತಂತ್ರ: ಸಿ.ಟಿ.ರವಿ

11:30 PM Sep 16, 2023 | Team Udayavani |

ಮಂಗಳೂರು: ಲೋಕಸಭಾ ಚುನಾವಣೆಯಲ್ಲಿ 350ಕ್ಕೂ ಅಧಿಕ ಸ್ಥಾನಗಳನ್ನು ಬಿಜೆಪಿ ಗೆದ್ದುಕೊಳ್ಳಲಿದೆ. ಚುನಾವಣೆ ಎದುರಿಸುವ ನಿಟ್ಟಿನಲ್ಲಿ ಈಗಾಗಲೇ ಕಾರ್ಯತಂತ್ರ ನಡೆದಿದೆ. ರಾಜ್ಯದಲ್ಲಿಯೂ ಹೆಚ್ಚಿನ ಸ್ಥಾನಗಳನ್ನು ಬಿಜೆಪಿ ಗೆಲ್ಲುವುದು ಖಚಿತ ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Advertisement

ಲೋಕಸಭಾ ಚುನಾವಣೆ ಹಾಗೂ 6 ರಾಜ್ಯಗಳಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆ ಗೆಲ್ಲಲು ಬಿಜೆಪಿ ಸಿದ್ಧತೆ ಆರಂಭಿಸಿದ್ದು, ಚುನಾವಣ ಪ್ರಭಾರಿಗಳನ್ನು ನಿಯೋಜಿಸಿದೆ ಎಂದರು.ಪ್ರಧಾನಿ ಮೋದಿ ನೇತೃತ್ವವನ್ನು ಅನೇಕ ದೇಶಗಳ ನೇತಾರರು ಶ್ಲಾಘಿಸಿದ್ದಾರೆ.

ಜಗತ್ತಿನ ಜನಪ್ರಿಯ ನಾಯಕರಾಗಿ ಹೊರಹೊಮ್ಮಿರುವ ಮೋದಿಯವರು ಜಿ20 ಅಧ್ಯಕ್ಷತೆ ವಹಿಸಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಕಾಂಗ್ರೆಸ್‌ನಲ್ಲಿ ನೇತಾರ ಯಾರು ಎಂಬುದಕ್ಕೆ ಇನ್ನೂ ಸ್ಪಷ್ಟತೆ ಇಲ್ಲ. ಭಾರತೀಯ ಸಂಸ್ಕೃತಿ, ಅವಹೇಳನ, ಸನಾತನ ಧರ್ಮ ವಿರೋಧಿಸುವುದೇ ಕಾಂಗ್ರೆಸ್‌ ನೀತಿಯಾಗಿದೆ ಎಂದರು.

ಜನತೆ ತತ್ತರ
ರಾಜ್ಯದಲ್ಲಿ ಕಾಂಗ್ರೆಸ್‌ ಆಡಳಿತಕ್ಕೆ ಬಂದ ಬಳಿಕ ರಾಜ್ಯದಲ್ಲಿ ಬೆಲೆ ಏರಿಕೆ, ಬರ, ಅಬಕಾರಿ ಸುಂಕ ಹೆಚ್ಚಳ, ನೋಂದಣಿ ಶುಲ್ಕ ಹೆಚ್ಚಳದಿಂದ ಜನತೆ ತತ್ತರಿಸಿ ಹೋಗಿದ್ದಾರೆ. ಅಭಿವೃದ್ಧಿ ಮರೀಚಿಕೆಯಾಗಿದ್ದು, ಭ್ರಷ್ಟಾಚಾರ ಮಿತಿ ಮೀರಿದೆ. ಸಿದ್ದರಾಮಯ್ಯನವರು ಅಧಿಕಾರಕ್ಕೆ ಬರುತ್ತಿದ್ದಂತೆ ರಾಜ್ಯವನ್ನು ಬರ ಪರಿಸ್ಥಿತಿ ಕಾಡುತ್ತಿದೆ ಎಂದು ಲೇವಡಿ ಮಾಡಿದರು.

ಚೈತ್ರಾ ಕುಂದಾಪುರ ಪ್ರಕರಣ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ರವಿ, ಬಿಜೆಪಿ ಹಣಕ್ಕೆ ಮಣೆ ಹಾಕಿ ಟಿಕೆಟ್‌ ನೀಡುವುದಿಲ್ಲ. ಅಂತಹ ಸಂಸ್ಕೃತಿಯೂ ನಮ್ಮಲ್ಲಿಲ್ಲ. ಮೋಸ ಹೋಗುವವರು ಇರುವಲ್ಲೆಲ್ಲಾ ಮೋಸ ಮಾಡುವವರು ಇದ್ದೇ ಇರುತ್ತಾರೆ. ಪ್ರಕರಣದ ಹಿಂದೆ ಯಾರೆಲ್ಲಾ ಇದ್ದಾರೆ ಎಂಬುದು ತನಿಖೆಯಿಂದ ಹೊರಬರಲಿದೆ ಎಂದರು.

Advertisement

ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಎಂ., ವಿಧಾನಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಜಿಲ್ಲಾ ಬಿಜೆಪಿ ವಕ್ತಾರ ರವಿಶಂಕರ ಮಿಜಾರು, ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು ಉಪಸ್ಥಿತರಿದ್ದರು.

“ಮೋದಿ ಮತ್ತೊಮ್ಮೆ ಪ್ರಧಾನಿ’
ಉಡುಪಿ: ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 28ಕ್ಕೆ 28 ಸೀಟು ಗೆಲ್ಲುವ ನಿಟ್ಟಿನಲ್ಲಿ ಸಂಘಟನಾತ್ಮಕ ಪ್ರಯತ್ನ ಆರಂಭಿಸಿದ್ದೇವೆ. ನರೇಂದ್ರ ಮೋದಿ ಮತ್ತೂಮ್ಮೆ ಪ್ರಧಾನಿಯಾಗಲಿದ್ದಾರೆ ಎಂದು ಸಿ.ಟಿ. ರವಿ ಹೇಳಿದರು.

ಬಿಜೆಪಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಗೆ ಪೂರ್ವಭಾವಿಯಾಗಿ ಸೆ.17ರಿಂದ ಮುಳುಬಾಗಿಲಿನಿಂದ ಬಿ.ಎಸ್‌. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಕಾವೇರಿ ಯಾತ್ರೆ ಆರಂಭವಾಗಲಿದೆ ಎಂದರು.

ಕಾಂಗ್ರೆಸ್‌ ಮತ್ತು ಸಹಯೋಗಿ ಪಕ್ಷಗಳಿಗೆ ಭಾರತ ಎನ್ನುವ ಶಬ್ದವೇ ಅಲರ್ಜಿಯಾಗಿದೆ. ಅವರಲ್ಲಿ ಭಾರತದ ಬಗ್ಗೆ ಸ್ಪಷ್ಟ ನೀತಿ, ನೇತೃತ್ವ ಮತ್ತು ನಿಯತ್ತು ಇಲ್ಲ ಎಂದು ವಾಗ್ಧಾಳಿ ನಡೆಸಿದರು.

ವಿಪಕ್ಷ ನಾಯಕನ ಆಯ್ಕೆ ಮಾಡದೇ ಇರುವುದು ಯಾಕೆ ಎಂಬುದು ಗೊತ್ತಿಲ್ಲ. ಈಗಾಗಲೇ ಮಾಡ ಬೇಕಿತ್ತು. ಯಾವುದೋ ಲಾಜಿಕ್‌ ಇಟ್ಟು ವಿಳಂಬ ಮಾಡುತ್ತಿದ್ದಾರೆ ಎಂಬ ವಿಶ್ವಾಸವಿದೆ. ನಾನು ಸದ್ಯ ಮಧ್ಯಪ್ರದೇಶದ ಚುನಾವಣೆ ಜವಾಬ್ದಾರಿ ನಿರ್ವ ಹಿಸುತ್ತಿದ್ದೇನೆ. ಲೋಕಸಭೆ ಚುನಾವಣೆ ಟಿಕೆಟ್‌ ಬಗ್ಗೆ ಮಳೆ ಬಂದಾಗ ಸೇತುವೆ ದಾಟುವುದೋ, ದೋಣಿ ಹತ್ತುವುದೋ ಕಾದುನೋಡಬೇಕು ಎಂದರು.

ಟಿಕೆಟ್‌ ಮಾರಾಟದ ಸರಕಲ್ಲ
ಬಿಜೆಪಿಯಲ್ಲಿ ದುಡ್ಡು ನೀಡಿದರೆ ಟಿಕೆಟ್‌ ಸಿಗುವುದಿಲ್ಲ. ಪಕ್ಷನಿಷ್ಠೆ, ಪರಿಶ್ರಮ ಮತ್ತು ಸಾಮಾನ್ಯ ಜನರ ಮಧ್ಯೆ ಕೆಲಸ ಮಾಡುವವರಿಗೆ ಟಿಕೆಟ್‌ ನೀಡ ಲಾಗುತ್ತದೆ. ಬೈಂದೂರಿನಲ್ಲಿ ಗುರುರಾಜ ಗಂಟಿಹೊಳೆ ಹಾಗೂ ಸುಳ್ಯದಲ್ಲಿ ಭಾಗೀರಥಿ ಮುರುಳ್ಯ ಅವರಿಗೆ ಟಿಕೆಟ್‌ ನೀಡಲಾಗಿದೆ. ದುಡ್ಡಿನ ಮೇಲೆ ಟಿಕೆಟ್‌ ನೀಡಲಾಗುತ್ತದೆ ಎಂದು ಭಾವಿಸುವುದೇ ತಪ್ಪು. ನಮ್ಮ ಪಕ್ಷದಲ್ಲಿ ಟಿಕೆಟ್‌ ಮಾರಾಟದ ಸರಕಲ್ಲ. ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇರುತ್ತಾರೆ ಎಂದರು.

ತಾರ್ಕಿಕ ಅಂತ್ಯ ಕಾಣಲಿ
ಬಿಜೆಪಿ ಹೆಸರಿನಲ್ಲಿ ಯಾರೇ ಮೋಸ ಮಾಡಿದ್ದರೂ ಸಮಗ್ರ ತನಿಖೆ ಆಗಬೇಕು. ಚೈತ್ರಾಳನ್ನು ನಾನೆಂದೂ ಭೇಟಿಯಾಗಿಲ್ಲ. ದೂರವಾಣಿಯಲ್ಲೂ ಮಾತನಾಡಿಲ್ಲ. ಪ್ರಕರಣ ಒಂದು ತಾರ್ಕಿಕ ಅಂತ್ಯ ಕಾಣಬೇಕು ಹಾಗೂ ಎಲ್ಲ ರಾಜಕೀಯ ಪಕ್ಷಗಳು ಇಂತಹ ಘಟನೆ ಬಗ್ಗೆ ಎಚ್ಚರದಿಂದಿರಬೇಕು ಎಂದು ಶಾಸಕ ಸುನಿಲ್‌ ಕುಮಾರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next