Advertisement

ಕಳಸಾ-ಬಂಡೂರಿ ತಿರುಗಿಸದಂತೆ ಕಾರ್ಯತಂತ್ರ ಸಿದ್ಧ: ದೇವಿದಾಸ್ ಪಾಂಗಮ್

02:26 PM Feb 18, 2023 | Team Udayavani |

ಪಣಜಿ: “ಮಹದಾಯಿಯ ಕಳಸಾ-ಬಂಡೂರಿ ಉಪನದಿಗಳ ನೀರನ್ನು ಕರ್ನಾಟಕವು ತಿರುಗಿಸದಂತೆ ನೋಡಿಕೊಳ್ಳಲು ನಮಗೆ ಎಲ್ಲಾ ಆಯ್ಕೆಗಳು ಮುಕ್ತವಾಗಿವೆ ಮತ್ತು ಕರ್ನಾಟಕ ಪರಿಸರ ಅನುಮತಿ ಸೇರಿದಂತೆ ಇತರ ಎಲ್ಲಾ ಅನುಮತಿಗಳನ್ನು ಉಳಿಸಿಕೊಳ್ಳಲು ನಮ್ಮ ಕಾರ್ಯತಂತ್ರ ಸಿದ್ಧವಾಗಿದೆ” ಎಂದು ಗೋವಾದ ಅಡ್ವೊಕೇಟ್ ಜನರಲ್ ದೇವಿದಾಸ್ ಪಾಂಗಮ್ ಹೇಳಿದರು.

Advertisement

ಪಣಜಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಯಿಸಿದ ಅವರು-ಡಿಪಿಆರ್ ಅನ್ನು ಅನುಮೋದಿಸಿದ ನಂತರ ಸೋಮವಾರದ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನಗಳನ್ನು ಕರ್ನಾಟಕ ಅನುಸರಿಸುತ್ತಿದೆಯೇ ಎಂಬುದನ್ನು ನಾವು ಗಮನಿಸುತ್ತಿದ್ದೇವೆ ಎಂದು ಪಾಂಗಮ್ ಹೇಳಿದರು.ಅಲ್ಲದೆ, ಸಾಕ್ಷ್ಯಚಿತ್ರ ಸಾಕ್ಷ್ಯಗಳು, ವೈಜ್ಞಾನಿಕ ವರದಿಗಳು ಮತ್ತು ಇತರ ವರದಿಗಳನ್ನು ಸುಪ್ರೀಂ ಕೋರ್ಟ್‍ಗೆ ಸಲ್ಲಿಸಲು ಸಿದ್ಧಪಡಿಸಲಾಗುತ್ತಿದೆ. ಗೋವಾ ಸರ್ಕಾರದ ಕಾರ್ಯತಂತ್ರವನ್ನು ನ್ಯಾಯಾಲಯಗಳಲ್ಲಿ ಜಾರಿಗೆ ತರುತ್ತೇವೆ. ಪ್ರಸ್ತುತ, ನಾವು ಇತರ ಸ್ಥಳೀಯ ವಿರೋಧ ಪಕ್ಷಗಳ ಪ್ರಶ್ನೆಗಳಿಗೆ ನ್ಯಾಯಾಂಗ ಮಟ್ಟದಲ್ಲಿ ಉತ್ತರಿಸಬೇಕಾಗಿದೆ.

2018ರಲ್ಲಿ ನ್ಯಾಯಾಧೀಕರಣದ ತೀರ್ಪಿನ ನಂತರ ಏನಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು ಅದು ಆಗಲಿಲ್ಲ. ಸಹಜವಾಗಿಯೇ ಈ ತೀರ್ಪಿನ ವಿರುದ್ಧ ಸರಕಾರವೂ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಯ ವಿಚಾರಣೆಗಾಗಿ ಕಾಯುತ್ತಿದ್ದೇವೆ. ಅದಕ್ಕೂ ಮುನ್ನ ಸರ್ಕಾರದಿಂದ ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಗೋವಾ ಅಡ್ವಕೇಟ್ ಜನರಲ್ ದೇವಿದಾಸ್ ಪಾಂಗಮ್ ಹೇಳಿದರು.

ಗಣಿಗಳಿಗೆ ಬದಲಾಗಿ ಮಹದಾಯಿ ಒಪ್ಪಂದ; ಸೇವ್ ಮಹದಾಯಿ ಆಗ್ರಹ!

ರಾಜ್ಯದಲ್ಲಿ ಗಣಿಗಾರಿಕೆ ಪುನರಾರಂಭಕ್ಕೆ ಬದಲಾಗಿ ಸರ್ಕಾರ ಮಹದಾಯಿ ಒಪ್ಪಂದ ಮಾಡಿಕೊಂಡಿದೆ ಎಂದು ಸೇವ್ ಮಹದಾಯಿ ಸಂಘಟನೆ ಆರೋಪಿಸಿದೆ. ಗೋವಾ ರಾಜ್ಯ ಜಲಸಂಪನ್ಮೂಲ ಇಲಾಖೆ ನಿರ್ದೇಶಕ ಪ್ರಮೋದ್ ಬಾದಾಮಿ ಅವರ ನಿವೃತ್ತಿಯ ನಂತರ ಮೂರು ಬಾರಿ ಅವರ ಅವಧು ವಿಸ್ತರಣೆ ಮಾಡಲಾಗಿದೆ. ಅವರು ಉತ್ತರ ಕರ್ನಾಟಕದವರೇ ಆದ ಕೇಂದ್ರ ಖನಿಜ ಸಚಿವ ಪ್ರಹ್ಲಾದ್ ಜೋಶಿ ಅವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಹೀಗಾಗಿ ಮಹದಾಯಿ ವಿಚಾರದಲ್ಲಿ ನ್ಯಾಯ ಕೊಡಿಸಲು ಅವರಿಗೆ ಸಾಧ್ಯವೇ ಇಲ್ಲ. ಹೀಗಾಗಿ ಕೂಡಲೇ ಅವರನ್ನು ಹುದ್ದೆಯಿಂದ ವಜಾಗೊಳಿಸುವಂತೆ ಸೇವ್ ಮಹದಾಯಿ ಸಂಘಟನೆ ಒತ್ತಾಯಿಸಿದೆ.

Advertisement

ಮಹದಾಯಿ ಹೋರಾಟದ ಸಂಯೋಜಕರಾದ ಹೃದಯನಾಥ ಶಿರೋಡಕರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ- ಫೆಬ್ರವರಿ 20, 2021 ರಂದು ಸರ್ವೋಚ್ಚ ನ್ಯಾಯಾಲಯವು ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕದ ಜಂಟಿ ಸಮಿತಿಗೆ ಇಡೀ ಆವರಣದ ವಿವರವಾದ ಪರಿಶೀಲನೆ ನಡೆಸಿ ವರದಿ ಸಲ್ಲಿಸಲು ಆದೇಶಿಸಿದೆ. ಏಪ್ರಿಲ್ 5 ರಂದು ಕರ್ನಾಟಕ ವರದಿ ಸಲ್ಲಿಸಿದೆ, ಆದರೆ, ಈ ವರದಿಯನ್ನು ಗೋವಾ ಇನ್ನೂ ಸಲ್ಲಿಸಿಲ್ಲ. ಇದಕ್ಕೆ ಇದಕ್ಕೆ ಬಾದಾಮಿ ರವರೇ  ಕಾರಣ ಎಂದೂ ಶಿರೋಡ್ಕರ್ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next