Advertisement

ಏರ್ ಇಂಡಿಯಾ ಸಂಕಷ್ಟ: ಶಾಂಘಾಯ್ ವಿಮಾನ ನಿಲ್ದಾಣದಲ್ಲಿ 300 ಪ್ರಯಾಣಿಕರು ಅತಂತ್ರ

09:26 AM Sep 02, 2019 | Hari Prasad |

ಶನಿವಾರ ರಾತ್ರಿಯೇ ದೆಹಲಿ ತಲುಪಬೇಕಾಗಿದ್ದ ಏರ್ ಇಂಡಿಯಾ ವಿಮಾನ ಒಂದರ ಪ್ರಯಾಣಿಕರು ಕಳೆದ ಹಲವು ತಾಸುಗಳಿಂದ ಶಾಂಘಾಯ್ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿರುವ ಘಟನೆ ವರದಿಯಾಗಿದೆ. ತಾಂತ್ರಿಕ ಕಾರಣಗಳಿಂದ ವಿಮಾನದಲ್ಲಿ ತೊಂದರೆ ಕಾಣಿಸಿಕೊಂಡು ಈ ಅನಾನುಕೂಲ ಉಂಟಾಗಿದೆ ಎಂದು ಖಾಸಗಿ ವೆಬ್ ಸೈಟ್ ಒಂದರ ವರದಿ ತಿಳಿಸಿದೆ.

Advertisement

ಎಐ349 ವಿಮಾನದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡ ಬಳಿಕ ಆ ವಿಮಾನದಲ್ಲಿದ್ದ ಪ್ರಯಾಣಿಕರನ್ನು ಹಲವು ತಾಸುಗಳವರೆಗೆ ವಿಮಾನದೊಳಗೇ ಕುಳ್ಳಿರಿಸಿದ್ದ ಕುರಿತು ಇದೀಗ ಪ್ರಯಾಣಿಕರು ತಮ್ಮ ಆಕ್ರೋಶವನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ತೋಡಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಹವಾನಿಯಂತ್ರಣ ವ್ಯವಸ್ಥೆಯೂ ನಿಲುಗಡೆಗೊಂಡಿತ್ತು ಮತ್ತು ಬಳಿಕ ವಿಮಾನದೊಳಗೆ ದೀಪಗಳೂ ಆರಿಹೋದವು, ಮತ್ತು ಒಳಗಿದ್ದ ಪ್ರಯಾಣಿಕರಿಗೆ ಸ್ವಲ್ಪ ಸಮಯ ಉಸಿರುಕಟ್ಟಿದ ಅನುಭವವೂ ಆಯಿತು ಎಂದು ಪ್ರಯಾಣಿಕರಲ್ಲಿ ಹಲವರು ತಮಗಾದ ಕೆಟ್ಟ ಅನುಭವವನ್ನು ಹಂಚಿಕೊಂಡಿದ್ದಾರೆ.

ಈ ಸುದ್ದಿ ಖಾಸಗಿ ವೆಬ್ ಸೈಟ್ ನಲ್ಲಿ ಪ್ರಕಟವಾದ ಬಳಿಕ ಎಚ್ಚೆತ್ತುಕೊಂಡ ಏರ್ ಇಂಡಿಯಾ ಸಿಬ್ಬಂದಿ ಬಳಿಕ ಪ್ರಯಾಣಿಕರಿಗೆ ದೋಷಪೂರಿತ ವಿಮಾನದಿಂದ ಇಳಿಯಲು ಅವಕಾಶ ಮಾಡಿಕೊಟ್ಟರು. ಮತ್ತು ಅವರನ್ನೆಲ್ಲಾ ಶಾಂಘಾಯ್ ವಿಮಾನ ನಿಲ್ದಾಣದಿಂದ ಸುಮಾರು 40 ಕಿಲೋಮೀಟರ್ ದೂರದಲ್ಲಿರುವ ಹೊಟೇಲ್ ಒಂದಕ್ಕೆ ಕರೆದೊಯ್ಯಲಾಗಿದೆ ಎಂದು ವರದಿ ತಿಳಿಸಿದೆ.

ವಿಮಾನದಲ್ಲಿನ ತೊಂದರೆಯ ಕುರಿತಾಗಿ ಪ್ರಯಾಣಿಕರಿಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ ಎಂದು ಪ್ರಯಾಣಿಕರು ದೂರಿದ್ದಾರೆ. ಬಳಿಕ ಎಲ್ಲಾ ಪ್ರಯಾಣಿಕರನ್ನು ಆದಿತ್ಯವಾರ ಮರಳಿ ವಿಮಾನ ನಿಲ್ದಾಣಕ್ಕೆ ಕರೆತರಲಾಯ್ತು. ಆದರೆ ಈ ವಿಮಾನದಲ್ಲಿ ಕಾಣಿಸಿಕೊಂಡಿರುವ ತೊಂದರೆಯನ್ನು ಸರಿಪಡಿಸುವ ತಂತ್ರಜ್ಞರು ಮುಂಬಯಿಯಿಂದ ಬರಬೇಕಾಗಿದ್ದು ಆ ಬಳಿಕವಷ್ಟೇ ತೊಂದರೆ ಸರಿಪಡಿಸಿಕೊಂಡು ವಿಮಾನ ಇಲ್ಲಿಂದ ಹೊರಡುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ.

Advertisement

ಏರ್ ಇಂಡಿಯಾ ಸಂಸ್ಥೆಯ ಈ ನಿರ್ಲಕ್ಷ್ಯ ಧೋರಣೆಯ ವಿರುದ್ಧ ಹಲವು ಪ್ರಯಾಣಿಕರು ಈಗಾಗಲೇ ಸಾಮಾಜಿಕ ಜಾಲತಾಣಗಳ ಮೂಲಕ ಹರಿಹಾಯ್ದಿದ್ದಾರೆ. ತಾಂತ್ರಿಕ ತೊಂದರೆ ಕಾಣಿಸಿಕೊಂಡ ವಿಮಾನದಲ್ಲಿಯೇ ಪ್ರಯಾಣಿಕರನ್ನು ಉಸಿರುಗಟ್ಟುವ ರೀತಿಯಲ್ಲಿ ಇರಿಸಿದ್ದು ಮತ್ತು ಈಗಲೂ ಸಹ ಮರು ಪ್ರಯಾಣದ ಕುರಿತಾಗಿ ಯಾವುದೇ ನಿಖರ ಮಾಹಿತಿಯನ್ನು ಒದಗಿಸದಿರುವ ಕುರಿತಾಗಿ ಪ್ರಯಾಣಿಕರು ಏರ್ ಇಂಡಿಯಾ ಮೇಲೆ ಗರಂ ಆಗಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next