Advertisement
ದಿನೇ ದಿನೆ ನಗರದಲ್ಲಿ ನೀರಿನ ಬೇಡಿಕೆ ಹೆಚ್ಚಾಗುತ್ತಿದೆ. ಬೇಡಿಕೆಯಷ್ಟು ನೀರನ್ನು ಪೂರೈಸಲು ಜಲಮಂಡಳಿಗೆ ಸಾಧ್ಯವಾಗುತ್ತಿಲ್ಲ. ಶುದ್ಧ ನೀರಿನ ಉಳಿಸುವ ನಿಟ್ಟಿನಲ್ಲಿ ಮಳೆನೀರು ಕೊಯ್ಲು ಅಳವಡಿಕೆ ಹಾಗೂ ಎಸ್‌ಟಿಪಿ ನೀರನ್ನು ಬಳಸುವಂತೆ ಜಲಮಂಡಳಿಯೇ ಬಳಕೆದಾರರಿಗೆ ನಿಯಮ ಜಾರಿಗೊಳಿಸಿರುವುದಲ್ಲದೆ, ಪಾಲಿಸವರಿಗೆ ಸಾವಿರಾರು ರೂ. ದಂಡ ಸಹ ವಿಧಿಸುತ್ತಿದೆ.
Related Articles
Advertisement
ಗುತ್ತಿಗೆ ಕಂಪನಿ ಹಿಂದೇಟು: ಎಸ್‌ಟಿಪಿ ನೀರನ್ನು ಬಳಸಲು ಕಾಮಗಾರಿ ಗುತ್ತಿಗೆ ಪಡೆದ ಕಂಪನಿಗಳು ಹಿಂದೇಟು ಹಾಕುತ್ತಿವೆ ಎಂದು ಜಲಮಂಡಳಿ ಅಧಿಕಾರಿಗಳು ಹೇಳುತ್ತಾರೆ. “ಮೂರು ವರ್ಷಗಳ ಹಿಂದೆ ಕಾಮಗಾರಿಗೆ ಎಸ್‌ಟಿಪಿ ನೀರನ್ನೇ ಬಳಸಬೇಕು ಎಂದು ಸುತ್ತೋಲೆ ಹೊರಡಿಸಿದ ಸಂದರ್ಭದಲ್ಲಿ ಅಧಿಕಾರಿಗಳು ಆ ಕಾಮಗಾರಿಗಳಿಗೆ ಎಸ್‌ಟಿಪಿ ನೀರನ್ನು ನೀಡಲು ನಿರ್ಧರಿಸಿದ್ದರು. ಆದರೆ, ಆ ವೇಳೆ ಕಾಮಗಾರಿ ಗುತ್ತಿಗೆ ಪಡೆದ ಕಂಪನಿಗಳು ಹಾಗೂ ಗುತ್ತಿಗೆದಾರರು ಎಸ್‌ಟಿಪಿ ನೀರನ್ನು ಬಳಸಲು ಹಿಂದೇಟು ಹಾಕಿದ್ದರು.
ಜತೆಗೆ ಎಸ್‌ಟಿಪಿ ನೀರನ್ನು ಕಾಮಗಾರಿ ಸ್ಥಳಕ್ಕೆ ಪೂರೈಸಲು ಸೂಕ್ತ ವ್ಯವಸ್ಥೆ ಇರಲಿಲ್ಲ. ಹೀಗಾಗಿ, ಅಂದು ಎಸ್‌ಟಿಪಿ ನೀರು ಬಳಸುಲು ಸಾಧ್ಯವಾಗಿರಲಿಲ್ಲ. ಹೊಸ ಕಾಮಗಾರಿ ಆರಂಭಿಸುವ ವೇಳೆ ಗುತ್ತಿಗೆ ನೀಡುವ ಕಂಪನಿ ಜತೆ ಎಸ್‌ಟಿಪಿ ನೀರನ್ನೇ ಕಾಮಗಾರಿಗೆ ಕಡ್ಡಾಯವಾಗಿ ಬಳಸಬೇಕು ಎಂದು ಒಪ್ಪಂದ ಮಾಡಿಕೊಳ್ಳಲು ನಿರ್ಧರಿಸಲಾಯಿತು’ ಎಂದು ಜಲಮಂಡಳಿ ನಿವೃತ್ತ ಮುಖ್ಯ ಎಂಜಿನಿಯರ್‌ಗಳು ಹೇಳುತ್ತಾರೆ. ಆದರೆ, ನಂತರದ ದಿನಗಳಲ್ಲಿ ಹೊಸ ಕಾಮಗಾರಿ ವೇಳೆ ಯಾವುದೇ ಒಪ್ಪಂದ ಮಾಡಿಕೊಳ್ಳುವಲ್ಲಿ ಜಲಮಂಡಳಿ ವಿಫಲವಾಗಿದೆ.
ಸಂಸ್ಕರಿತ ನೀರು ಮಾರಾಟ ಆರಂಭ: ಎಸ್‌ಟಿಪಿ ನೀರಿನ ಬಳಕೆ ಪ್ರೋತಾಹಿಸುವ ಉದ್ದೇಶದಿಂದ ಸದ್ಯ ನೀರು ಸರಬರಾಜು ಮಾಡಲು ಜಲಮಂಡಳಿಯಲ್ಲಿ ಲಭ್ಯವಿರುವ 68 ವಾಹನಗಳ ಪೈಕಿ 10 ವಾಹನಗಳನ್ನು ಬಳಸಲು ಜಲಮಂಡಳಿ ನಿರ್ಧರಿಸಿದೆ. “ಈ ನೀರನ್ನು ಕುಡಿಯಲು ಬಳಸಬಾರದು ಎಂದು ತಿಳಿಯಲು ಕೆಂಪು ಅಥವಾ ಹಸಿರು ಬಣ್ಣದ ಸಾಗಣೆ ವಾಹನ ಬಳಸಲಾಗುತ್ತದೆ. ಸದ್ಯ ನಾಲ್ಕು ವಾಹನ ಬಳಸಲಿದ್ದು, ಮುಂದಿನ ದಿನಗಳಲ್ಲಿ ಅವಶ್ಯಕತೆ ನೋಡಿಕೊಂಡು ವಾಹನಗಳ ಸಂಖ್ಯೆ ಹೆಚ್ಚಿಸಲಾಗುವುದು. 6,000 ಲೀ. ಸಾಮರ್ಥ್ಯದ ಒಂದು ಟ್ಯಾಂಕರ್‌ಗೆ 350 ರೂ. ದರ ನಿಗದಿ ಪಡಿಸಲಾಗಿದೆ’ ಎಂದು ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಎಸ್‌ಟಿಪಿ ಕಾಮಗಾರಿಗೂ ಶುದ್ಧ ನೀರು: ಸದ್ಯ ಜಲಮಂಡಳಿಯ ಮೆಗಾ ಸಿಟಿ ಆಪತ್ತು ನಿಧಿ ಹಾಗೂ ಅಮೃತ್ ಸಿಟಿ ಯೋಜನೆಯಡಿ ನಗರದಲ್ಲಿ ವಿವಿಧ ಪ್ರದೇಶಗಳಲ್ಲಿ ಸಂಗ್ರಹವಾಗುವ ಕೊಳಚೆ ನೀರನ್ನು ಸಂಗ್ರಹಿಸಿ ಆ ನೀರನ್ನು ಶುದ್ಧೀಕರಿಸಿ ನಾಲೆಗಳ ಮೂಲಕ ಹತ್ತಿರದ ಕೆರೆಗಳಿಗೆ ಹರಿಸಲು ಉದ್ದೇಶಿಸಿ ನಗರದ 9 ಪ್ರದೇಶಗಳಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ (ಎಸ್‌ಟಿಪಿ) ನಿರ್ಮಿಸುತ್ತಿದೆ. ಒಂದು ವರ್ಷದಿಂದ ಕಾಮಗಾರಿಗಳು ನಡೆಯುತ್ತಿದ್ದು, ಇಲ್ಲೆಲ್ಲಾ ಶುದ್ಧ ನೀರನ್ನೇ ಬಳಸಲಾಗುತ್ತಿದೆ.
ಪ್ರಮುಖವಾಗಿ ಸಾರಕಿ ಕೆರೆ, ಚಿಕ್ಕಬೇಗೂರು, ಉಳಿಮಾವು, ಅಗರ ಕೆರೆ, ಹೆಬ್ಬಳ ಬಳಿ ನಿರ್ಮಿಸಲಾಗುತ್ತಿರುವ ಎಸ್‌ಟಿಪಿ ಕಾಮಗಾರಿಗಳಿಗೆ ಶುದ್ಧ ನೀರನ್ನೇ ಬಳಸಲಾಗಿದೆ. ಉಳಿದಂತೆ ವೃಷಭಾವತಿ, ದೊಡ್ಡಬೆಲೆ, ಕೆ.ಆರ್.ಪುರದಲ್ಲಿ ನಿರ್ಮಾಣವಾಗುತ್ತಿರುವ ಎಸ್‌ಟಿಪಿ ಕಾಮಗಾರಿಯಲ್ಲೂ ಪೂರ್ಣ ಪ್ರಮಾಣದಲ್ಲಿ ಎಸ್‌ಟಿಪಿ ನೀದು ಬಳಕೆಯಾಗಿಲ್ಲ ಎಂಬ ಆರೋಪ ಕೇಳಿಬಂದಿದೆ. “ಒಂದು ಎಸ್‌ಟಿಪಿ ಕಾಮಗಾರಿಗೆ ನಿತ್ಯ ಕನಿಷ್ಠ ಒಂದು ಸಾವಿರ ಲೀ. ನೀರು ಬೇಕಾಗುತ್ತದೆ. ಇಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕದ ನೀರು ಬಳಸಿದರೆ ನಿತ್ಯ ಅಂದಾಜು 10 ಸಾವಿರ ಲೀ. ಶುದ್ಧ ನೀರನ್ನು ಉಳಿಸಬಹುದಿತ್ತು’ ಎನ್ನುವುದು ಜಲತಜ್ಞರ ಅಭಿಪ್ರಾಯ.
* ಜಯಪ್ರಕಾಶ್ ಬಿರಾದಾರ್