ಆತ ಹುಟ್ಟಿ ಬೆಳೆದಿದ್ದು ಇಂಗ್ಲೆಂಡ್‌ನಲ್ಲಿ. ಆದರೆ, ಆತನ ಮೂಲ ಭಾರತದಲ್ಲಿದೆ. ಅದೇ ಕಾರಣದಿಂದ ಆತನಿಗೆ ಭಾರತದ ಮೇಲೆ ಪ್ರೀತಿ ಇದೆ. ಜೊತೆಗೆ ತನ್ನ ದೇಶ ಇಂಗ್ಲೆಂಡ್ ಮೇಲೆ ಗೌರವವೂ ಇದೆ. ಭಾರತದ ಐತಿಹಾಸಿಕ ಸ್ಥಳಗಳ ಬಗ್ಗೆ ತಿಳಿಯುವ ಉದ್ದೇಶದಿಂದ ಆತನ ಭಾರತಕ್ಕೆ ಭೇಟಿ ನೀಡುತ್ತಾನೆ. ಈ ಭೇಟಿ ಆತನ ಕಣ್ಣು ತೆರೆಸುತ್ತದೆ. ಭಾರತವನ್ನು ಬ್ರಿಟಿಷರು ಆಳಿದ್ದರಿಂದ ದೇಶದ ಉದ್ಧಾರವಾಯಿತು ಎಂದೇ ನಂಬಿದ್ದ ಆತ, ಬ್ರಿಟಿಷರಿಂದಾದ ತೊಂದರೆ, ಪ್ರಾಣ ಬಿಟ್ಟವರ ಬಗ್ಗೆಯೂ ತಿಳಿದುಕೊಳ್ಳುತ್ತಾನೆ.
ಆತನ ಕಣ್ಣು ತೆರೆಸೋದು ಭಾರತೀಯ ಸಂಸ್ಕೃತಿಯನ್ನು ಪ್ರೀತಿಸುವ ಅಚ್ಚ ಕನ್ನಡತಿ! ಇಷ್ಟು ಹೇಳಿದ ಮೇಲೆ ಈ ಸಿನಿಮಾ ಬಗ್ಗೆ ಒಂದು ಐಡಿಯಾ ಬಂದಿರುತ್ತದೆ. ಮುಖ್ಯವಾಗಿ ಇಲ್ಲಿ ಎರಡು ಸಂಸ್ಕೃತಿಯನ್ನು ತೋರಿಸುವುದರ ಜೊತೆಗೆ ಭಾರತೀಯ ಸಂಸ್ಕೃತಿಯ ಶ್ರೀಮಂತಿಕೆ, ಬ್ರಿಟಿಷರಿಂದ ಅದರ ಮೇಲಾದ ದಬ್ಟಾಳಿಕೆ, ಪರದೇಶದಲ್ಲಿರುವವರ ದೇಶ ಪ್ರೇಮ, ಜೊತೆಗೊಂದು ಲವ್‌ಸ್ಟೋರಿಯನ್ನು ಹೇಳಿದ್ದಾರೆ. ಹಾಗಂತ ಕಥೆ ಇಷ್ಟಕ್ಕೆ ಸೀಮಿತವಾಗಿಲ್ಲ. ಅದರಾಚೆ ಒಂದು ಸಸ್ಪೆನ್ಸ್ ಸ್ಟೋರಿಯನ್ನು ಸೇರಿಸಿದ್ದಾರೆ.
ಅದು ಕೂಡಾ ನಮ್ಮ ದೇಶ, ಪುರಾತನ ದೇವಾಲಯಕ್ಕೆ ಸಂಬಂಧಿಸಿದ್ದು. ಅದೇನೆಂಬುದನ್ನು ನೀವು ಸಿನಿಮಾದಲ್ಲಿ ನೋಡಿ. ಈ ಸಿನಿಮಾ ಹೈಲೈಟ್ ಎಂದರೆ ಕಥೆಗೆ ಎರಡು ದೇಶಗಳ ಲಿಂಕ್ ಬೆಸೆದಿರುವುದು. ಅದೇ ಕಾರಣದಿಂದ ಸಿನಿಮಾದಲ್ಲಿ ದೇಶ ಪ್ರೇಮ, ನಮ್ಮ ಸಂಸ್ಕೃತಿ, ಪರಂಪರೆಯ ಅಂಶಗಳು ಹೆಚ್ಚಿವೆ. ಜೊತೆಗೆ ಯಾವುದು ಸತ್ಯ, ಯಾವುದು ಸುಳ್ಳು ಎಂಬ ಆರೋಗ್ಯಕರ ಚರ್ಚೆಯೂ ಚಿತ್ರದಲ್ಲಿದೆ. ಮುಖ್ಯವಾಗಿ ಈ ಚಿತ್ರ ಭಾರತದ ಸಾಕಷ್ಟು ಐತಿಹಾಸಿಕ, ಪುರಾತನ ಹಿನ್ನೆಲೆ ಇರುವ ಸ್ಥಳಗಳನ್ನು ತೋರಿಸುತ್ತಲೇ ಮುಂದೆ ಸಾಗುತ್ತದೆ.
ಅದಕ್ಕೆ ಕಾರಣ ಕಥೆ. ಆ ಕಥೆಯೇ ಸಾಕಷ್ಟು ಕಡೆ ಟ್ರಾವೆಲ್ ಮಾಡುವುದರಿಂದ ಪ್ರೇಕ್ಷಕರಿಗೂ “ಪ್ರವಾಸ’ದ ಅನುಭವವಾಗುತ್ತದೆ. “ಇಂಡಿಯಾ ವರ್ಸಸ್ ಇಂಗ್ಲೆಂಡ್’ ಒಂದು ಕಮರ್ಷಿಯಲ್ ಸಿನಿಮಾ ನಿಜ. ಹಾಗಂತ ಗಾಂಧಿನಗರದ ಟಿಪಿಕಲ್ ಕಮರ್ಷಿ ಯಲ್ ಸಿನಿಮಾ ಅಲ್ಲ. ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ಸಿನಿಮಾಗಳಲ್ಲಿ ಸಿಗುವ ಸ್ವಾದ ಈ ಚಿತ್ರದಲ್ಲೂ ಇದೆ. ಯಾವುದೇ ಆತುರವಿಲ್ಲದ ಹೇಳುವ ಕಥೆಯನ್ನು ನೀಟಾಗಿ ಹೇಳುತ್ತಾ ಹೋಗಿದ್ದಾರೆ ನಿರ್ದೇಶಕರು.
ಮೊದಲೇ ಹೇಳಿದಂತೆ ಸಾಕಷ್ಟು ಲೊಕೇಶನ್‌ಗಳು ಬರುತ್ತವೆ. ಆದರೆ, ಅವೆಲ್ಲವೂ ಪಾಸಿಂಗ್ ಶಾಟ್‌ನಲ್ಲಿ ಬಂದು ಹೋದಂತೆ ಭಾಸವಾಗುತ್ತವೆ ಅನ್ನೋದು ಬಿಟ್ಟರೆ ಮಿಕ್ಕಂತೆ ಇದೊಂದು ಕೂಲ್ ಸಿನಿಮಾ. ನಿಧಾನವೇ ಪ್ರಧಾನ ಎಂಬಂತೆ ಸಾಗುವ ಈ ಚಿತ್ರದಲ್ಲಿ ಆಗಾಗ ಒಂದಷ್ಟು ಟ್ವಿಸ್ಟ್‌ಗಳು ಬರುತ್ತವೆ. ಆ ಮೂಲಕ ಆಗಾಗ ಪ್ರೇಕ್ಷಕ ನನ್ನು ಜಾಗೃತಗೊಳಿಸುತ್ತವೆ. ಸಿನಿಮಾದಲ್ಲಿ ಹೆಚ್ಚು ಲಾಜಿಕ್ ಹುಡುಕಬಾರದೆಂಬ ಮಾತಿದೆ. ಇಲ್ಲೂ ಅಷ್ಟೇ ಕೆಲವು ಅಂಶಗಳಿಗೆ ಲಾಜಿಕ್ ಹುಡುಕಬಾರದು. ಅದು ನಿರ್ದೇಶಕನ ಸ್ವತಂತ್ರ್ಯ ಕೂಡಾ.
ಚಿತ್ರದಲ್ಲಿ ನಾಯಕರಾಗಿ ನಟಿಸಿರುವ ವಸಿಷ್ಠ ಸಿಂಹ ಪಾತ್ರಕ್ಕೆ ನ್ಯಾಯ ಒದಗಿಸಲು ಪ್ರಯತ್ನಿಸಿದ್ದಾರೆ. ಆದರೆ, ಅವರಿಗೆ ಲವರ್‌ಬಾಯ್‌ಗಿಂತ ಆ್ಯಕ್ಷನ್‌ನಲ್ಲಿ ಇಷ್ಟವಾಗುತ್ತಾರೆ. ಮಾನ್ವಿತಾ ಇಲ್ಲಿ ಲವಲವಿಕೆಯ ಹುಡುಗಿಯಾಗಿ ಮಿಂಚಿದ್ದಾರೆ. ಉಳಿದಂತೆ ಅನಂತ್‌ನಾಗ್, ಪ್ರಕಾಶ್ ಬೆಳವಾಡಿ, ಸುಮಲತಾ ಅಂಬರೀಶ್, ಸಾಧುಕೋಕಿಲ, ಶಿವಮಣಿ ತಮ್ಮ ಪಾತ್ರಗಳಲ್ಲಿ ಇಷ್ಟವಾಗುತ್ತಾರೆ. ಚಿತ್ರದ ಎರಡು ಹಾಡು ಇಷ್ಟವಾಗುತ್ತದೆ.
ಚಿತ್ರ: ಇಂಡಿಯಾ ವರ್ಸಸ್ ಇಂಗ್ಲೆಂಡ್
ನಿರ್ಮಾಣ: ವೈ.ಎನ್ ಶಂಕರೇಗೌಡ ಅಂಡ್ ಫ್ರೆಂಡ್ಸ್
ನಿರ್ದೇಶನ: ನಾಗತಿಹಳ್ಳಿ ಚಂದ್ರಶೇಖರ್
ತಾರಾಗಣ: ವಸಿಷ್ಠ ಸಿಂಹ, ಮಾನ್ವಿತಾ ಹರೀಶ್, ಸುಮಲತಾ ಅಂಬರೀಶ್, ಅನಂತ್‌ನಾಗ್, ಪ್ರಕಾಶ್ ಬೆಳವಾಡಿ ಮತ್ತಿತರರು.
* ರವಿಪ್ರಕಾಶ್ ರೈ