Advertisement
ಒಂದು ದಿನ ಕರ್ಕ್‌ಗಾರ್ಡ್ ತನ್ನ ದಿನಚರಿ ಪುಸ್ತಕದಲ್ಲಿ ಹೀಗೆ ಬರೆದುಕೊಂಡ: ನಾನು ಹುಡುಕುತ್ತಿರುವುದು ನನ್ನದೇ ಆದ ಫಿಲಾಸಫಿಯನ್ನು. ಅಂದರೆ, ಸೊರೆನ್ ಕರ್ಕ್‌ಗಾರ್ಡ್‌ನ ಫಿಲಾಸಫಿ ಎಂದು ಹೇಳಬಹುದಾದ ಸಂಗತಿಯನ್ನು. ಅವರಿವರ ತಣ್ತೀಶಾಸ್ತ್ರಗಳನ್ನು ಓದಿ ಸಾಕಾಗಿದೆ. ಅವೆಲ್ಲಕ್ಕಿಂತ ಹೊರತಾದ, ಭಿನ್ನವಾದ, ಹೊಚ್ಚಹೊಸದಾದ ತಣ್ತೀಶಾಸ್ತ್ರವನ್ನು ನಾನು ಹುಟ್ಟಿಸಬೇಕು. ಜೀವನದ ನಿಜವಾದ ಅರ್ಥವನ್ನು ಅದಲ್ಲದೆ ಬೇರಾವುದೂ ಪರಿಪೂರ್ಣವಾಗಿ ಕೊಡದಂತಿರಬೇಕು. ಅಥವಾ ಹೀಗೆ ಹೇಳ್ಳೋಣವೇ- ಜಗತ್ತಿನ ನೂರೆಂಟು ಫಿಲಾಸಫಿಗಳನ್ನು ಓದಿದರೂ ತೃಪ್ತಿಯಾಗದವರಿಗೆ ಕೊನೆಯದಾಗಿ ಈ ಸೊರೆನ್ ಕರ್ಕ್‌ಗಾರ್ಡ್‌ನ ಫಿಲಾಸಫಿಯನ್ನು ಓದಿದ ಮೇಲೆ ಸಂಪೂರ್ಣ ಶಾಂತಿ-ಸಮಾಧಾನಗಳು ಹುಟ್ಟಬೇಕು.
Related Articles
Advertisement
ಬಹುಶಃ ಬದುಕಿನ ಅರ್ಥ ತಿಳಿಯುವುದು ಎಂದರೆ ಇದೇ ಇರಬೇಕು- ವಿಶ್ವವಿದ್ಯಾಲಯದಲ್ಲಿ ಓದು, ಒಳ್ಳೆಯ ಮಾರ್ಕು ಪಡೆ, ಒಳ್ಳೆಯ ಉದ್ಯೋಗ ಗಿಟ್ಟಿಸು, ಮದುವೆಯಾಗು, ಮಕ್ಕಳನ್ನು ಹಡೆ… ಹೀಗೆ ಯೋಚಿಸುತ್ತ ಹೋದವನನ್ನು ಅವನದ್ದೇ ಯೋಚನೆ ಗಕ್ಕನೆ ನಿಲ್ಲಿಸಿತು. ಹೌದು! ಇಷ್ಟೇನೇ ಜೀವನದ ಪರಮೋದ್ದೇಶ? ಬದುಕಿನ ಅರ್ಥ ಇಷ್ಟೇನೇ? ಇಷ್ಟೆಲ್ಲ ಮಾಡಿದ ಮೇಲೆ ಏನು? ಏನು?
ಅದೇ ಕ್ಷಣದಲ್ಲಿ ಅವನನ್ನು ಮತ್ತೆ ನಿರಾಶೆ ಮುತ್ತಿಕೊಂಡಿತು. ಪ್ರಪಂಚದಲ್ಲಿ ಪ್ರತಿಯೊಬ್ಬರೂ ಸಂತೋಷದಿಂದಿದ್ದಾರೆ. ಕೆಲವರಂತೂ ಎಷ್ಟು ಸಂತೋಷದಿಂದ ಬಾಳುತ್ತಿದ್ದಾರೆಂದರೆ ಜೀವನದ ಅರ್ಥವೇನೆಂ ಬುದು ಅವರಿಗೆ ಬಹಳ ಚೆನ್ನಾಗಿ ಅರ್ಥವಾದಂತಿದೆ! ಆದರೆ, ತಾನು ಮಾತ್ರ ಸಂತೋಷವನ್ನು ಅನುಭವಿಸಲಾಗದೆ ಒದ್ದಾಡುತ್ತಿದ್ದೇನೆ. ಬದುಕಿನ ಖುಷಿ ಎಲ್ಲಿದೆ ಎಂಬುದು ಇನ್ನೂ ಸರಿಯಾಗಿ ತನಗೆ ತಿಳಿದಿಲ್ಲ. ಹೀಗಿರುವಾಗ ತಾನು ರೆಜೀನ್‌ಳನ್ನು ಮದುವೆಯಾಗಿ ಆಕೆಯನ್ನು ಸುಖವಾಗಿಡಬಲ್ಲೆನೆ? ಜೀವನದ ಸಂತೋಷವನ್ನು ಎಲ್ಲರಂತೆ ಅನುಭವಿಸಲು ತಿಳಿಯದ ಮೊದ್ದುಮಣಿಯನ್ನು ಮದುವೆಯಾಗಿ ಆಕೆಯಾದರೂ ಯಾವ ಸಂತೋಷ ಅನುಭವಿಸಿಯಾಳು!
ಕರ್ಕ್‌ಗಾರ್ಡ್‌ನಿಗೆ ಈಗ ಮೆದುಳು-ಹೃದಯಗಳ ನಡುವೆ ಹಗ್ಗಜಗ್ಗಾಟ ನಡೆಯುತ್ತಿರುವುದು ಅನುಭವಕ್ಕೆ ಬಂತು. ಇಷ್ಟು ದಿನ ಅವನು ಮೆದುಳಿನಿಂದ ಯೋಚಿಸುತ್ತಿದ್ದ. ತನ್ನ ಪ್ರೊಫೆಸರುಗಳು ಹೇಳುವ ಪಾಠಗಳನ್ನು ಮೆದುಳಿಗಷ್ಟೇ ರವಾನಿಸುತ್ತಿದ್ದ. ತರ್ಕದೊಳಗಿನ ಪಟ್ಟುಗಳು ಅವನಿಗೆ ಇಷ್ಟವಾಗುತ್ತಿದ್ದದ್ದೂ ಅದೇ ಕಾರಣಕ್ಕಿರಬೇಕು. ಯಾಕೆಂದರೆ ತರ್ಕದಲ್ಲಿ ಹೃದಯಕ್ಕೆ ಕೆಲಸವೇ ಇಲ್ಲ; ಇರುವ ಕೆಲಸವೆಲ್ಲ ಮೆದುಳಿಗೇ ತಾನೆ! ಅವನಿಗೀಗ ಸ್ಪಷ್ಟವಾಗತೊಡಗಿತು. ಹೌದು, ನಾನು ಎಲ್ಲವನ್ನೂ ಮೆದುಳಿಂದ ಯೋಚಿಸುವುದನ್ನು ಬಿಡಬೇಕು. ಹೃದಯಕ್ಕೂ ಕೊಂಚ ಕೆಲಸ ಕೊಡಬೇಕು. ಕರ್ಕ್‌ಗಾರ್ಡ್ ಕೂತು ಯೋಚಿಸಿದ. ನಾನು ರೆಜೀನ್‌ಳನ್ನು ಪ್ರೀತಿಸುತ್ತೇನೆ ಎಂಬುದೇನೋ ನಿಜವೇ. ಆದರೆ ಪ್ರೀತಿಸಬೇಕಾದಷ್ಟು ಪ್ರೀತಿಸುತ್ತಿಲ್ಲ. ವಾಸ್ತವದಲ್ಲಿ ನನಗೆ ಆಕೆಯ ಮೇಲೆ ಅಷ್ಟೇನೂ ಪ್ರೀತಿ ಇಲ್ಲ. ಹೃದಯದಿಂದ ಯೋಚಿಸಿದರೆ, ಹೌದು, ನಾನು ಆಕೆಗೆ ತಕ್ಕ ಸಂಗಾತಿ ಅಲ್ಲವೇ ಅಲ್ಲ. ಯಾಕೆಂದರೆ, ನನಗೆ ಜೀವನದಲ್ಲಿ ಆಕೆಯನ್ನು ಮದುವೆಯಾಗುವುದಕ್ಕಿಂತ ಅಗತ್ಯವೆನ್ನಿಸುವ ಬೇರೆ ಒಂದಷ್ಟು ಕೆಲಸಗಳನ್ನು ಮಾಡುವುದಿದೆ. ಮದುವೆಯ ವೃತ್ತದೊಳಗೆ ಬಿದ್ದುಬಿಟ್ಟರೆ ಉಳಿದೆಲ್ಲ ಕೆಲಸಗಳಿಗೆ ತಿಲಾಂಜಲಿ ಇಟ್ಟ ಹಾಗೆಯೇ… ಹಾಗಾಗಿ… ರೆಜೀನ್‌ಳನ್ನು! ತ್ಯಜಿಸಬೇಕು!
ಕೋಪನ್‌ಹೆಗನ್‌ನ ಜನರಿಗೆ ನಿರಾಸೆಯಾಗುವಂಥ ಆ ನಿರ್ಧಾರವನ್ನು ಆತ ಕೊನೆಗೂ ಪ್ರಕಟಿಸಿದ. ಆಕೆಯನ್ನು ಮದುವೆಯಾಗುವ ಪ್ರಸ್ತಾಪವನ್ನು ತಾನಾಗಿ ಮುರಿದು, ಆಕೆಯ ಹೃದಯ ಭಗ್ನಗೊಳಿಸಿ ಕರ್ಕ್ ಗಾರ್ಡ್ ತನ್ನ ಮನೆ ಸೇರಿ ಕೊಂಡ. ಬಾಗಿಲು ಹಾಕಿ ಕೊಂಡು ಒಬ್ಬಂಟಿಯಾದ. ಅಲ್ಲಿಂದಲೇ ವೃತ್ತಪತ್ರಿಕೆಯ ಆಫೀಸಿಗೆ ಒಂದು ಪ್ರಕಟಣೆ ಕಳಿಸಿದ: ಕೋಪನ್‌ಹೆಗನ್‌ನ ಪ್ರೀತಿಯ ನಾಗರಿಕರೆ, ಇನ್ನು ಕೆಲವೇ ದಿನಗಳಲ್ಲಿ ಬಹಳಷ್ಟು ಪುಸ್ತಕಗಳು ಪ್ರಕಟವಾಗಿ ನಿಮ್ಮ ಕೈ ಸೇರಲಿವೆ. ಆ ಪುಸ್ತಕಗಳು ಸೊರೆನ್ ಕರ್ಕ್‌ಗಾರ್ಡ್ ಬರೆದದ್ದು ಎಂದು ಮಾತ್ರ ನೀವು ಖಂಡಿತ ಭಾವಿಸಬಾರದು. ಎಂಥ ವಿಚಿತ್ರ ಪ್ರಕಟಣೆ! ಪುಸ್ತಕಗಳು ಹಿಂದೂ, ಇಂದೂ, ಮುಂದೂ ಪ್ರಕಟವಾಗುತ್ತಲೇ ಇವೆಯಲ್ಲ ಈ ಜಗತ್ತಿನಲ್ಲಿ! ಅವು ಸೊರೆನ್ ಕರ್ಕ್‌ಗಾರ್ಡ್ ಬರೆದ ಪುಸ್ತಕಗಳು ಅಂತ ಯಾರಾದರೂ ಯಾಕೆ ಅಂದುಕೊಳ್ಳಬೇಕು!?
ಅದಾಗಿ ಕೆಲಕಾಲದ ನಂತರ ಒಂದು ಪುಸ್ತಕ ಪ್ರಕಟವಾಯಿತು. ಅದೋ ಇದೋ – ಭಾಗ 1 ಎಂದು ಅದರ ಹೆಸರು. ಲೇಖಕರ ಹೆಸರಿರಬೇಕಾದ ಜಾಗದಲ್ಲಿ ವಿಕ್ಟರ್ ಎರೆಮಿಟಾ ಎಂದಿತ್ತು. ಪುಸ್ತಕ ಎನ್ನುವುದಕ್ಕಿಂತ ಉದ್ಗ†ಂಥ ಎನ್ನಬೇಕು ಅದನ್ನು! ನೂರಾರು ಪುಟಗಳು, ಹತ್ತಾರು ಅಧ್ಯಾಯಗಳು ಇದ್ದ ಉದ್ಗ†ಂಥ. ಮನುಷ್ಯರು ಬದುಕಿನಲ್ಲಿ ಸಂತೋಷದಿಂದಿರಲು ಏನು ಮಾಡಬೇಕು ಎಂಬುದನ್ನು ಅದರಲ್ಲಿ ಅತ್ಯಂತ ವಿನೋದಭರಿತ ಶೈಲಿಯಲ್ಲಿ ಮನಮುಟ್ಟುವಂತೆ ಬರೆಯಲಾಗಿತ್ತು. ಬದುಕಿನಲ್ಲಿ ಖುಷಿಯಾಗಿರಲು ಸಂತೋಷ ಕೂಟಗಳಿಗೆ ಹೋಗಿ, ಚೆನ್ನಾಗಿ ತಿನ್ನಿ, ಕುಡಿಯಿರಿ, ಸ್ನೇಹಿತರ ಜೊತೆ ಸಮಯ ಕಳೆಯಿರಿ ಎಂಬುದನ್ನು ಆ ಪುಸ್ತಕದಲ್ಲಿ ಹೇಳಲಾಗಿತ್ತು. ಕೋಪನ್‌ಹೆಗನ್‌ನ ಜನಕ್ಕೆ ಆ ಗ್ರಂಥ ಪ್ರಕಟವಾದ ಮೇಲೆ ಖುಷಿಯಾಗಿರಲು ಅಗತ್ಯವಾದ ದಾರಿ ಸಿಕ್ಕಂತಾಯಿತು. ನಗರದಲ್ಲಿ ಸಂತೋಷ ಕೂಟಗಳು ಹೆಚ್ಚಿದವು. ಜನ ಸಮಯ ಸಿಕ್ಕಾಗೆಲ್ಲ ಸ್ನೇಹಕೂಟಗಳನ್ನು ನಡೆಸಿದರು. ಚೆನ್ನಾಗಿ ತಿಂದು ಕುಡಿದು ಕುಣಿದರು. ಕುಣಿದು ಕುಣಿದು ದಣಿದರು. ಆದರೆ, ಇಂಥ ಸಂತೋಷ ಎಷ್ಟು ದಿನ ಇರಲು ಸಾಧ್ಯ? ಪ್ರತಿದಿನವೂ ಸಂತೋಷ ಕೂಟವೇ ಆದರೆ ಸಂತೋಷವೆಲ್ಲಿಯದು? ಜನರಿಗೆ ಈಗ ಅವೆಂದರೆ ಬೋರ್ ಅನ್ನಿಸತೊಡಗಿತು. ಜೀವನದಲ್ಲಿ ಖುಷಿ ಸಿಗುತ್ತಿಲ್ಲ ಎನ್ನಿಸಿತು. ಬಿಡುವಿಲ್ಲದಂತೆ ಸಂತೋಷ ಕೂಟಗಳನ್ನು ನಡೆಸುತ್ತಿದ್ದರೆ ಅದರಿಂದ ಏನೂ ಮಜಾ ಸಿಗದು ಎಂಬ ಜ್ಞಾನೋದಯವಾಗುವ ಸಮಯದಲ್ಲೇ ಅವರ ಅದೃಷ್ಟ, ಇನ್ನೊಂದು ಪುಸ್ತಕ ಮಾರುಕಟ್ಟೆಗೆ ಬಂತು. ಅದೋ ಇದೋ – ಭಾಗ 2 ಎಂಬ ಹೆಸರಿನ ಆ ಗ್ರಂಥ ಈ ಸಲ ಶಿಸ್ತಿನ ಬದುಕಿನ ಬಗ್ಗೆ, ವಿಶಿಷ್ಟವಾಗಿ ಬಾಳುವುದರ ಬಗ್ಗೆ ಬರೆಯಲ್ಪಟ್ಟಿತ್ತು.
ಆ ಹೊಸ ಗ್ರಂಥ ಅದೆಷ್ಟು ಕುತೂಹಲದಿಂದ ಓದಿಸಿಕೊಂಡು ಹೋಗುವಂತೆ ಬರೆಯಲ್ಪಟ್ಟಿತ್ತೆಂದರೆ ಜನರು ಮುಗಿಬಿದ್ದು ಕೊಂಡು ಓದಿದರು. ಹೌದು, ಬದುಕಿದರೆ ಹೀಗೆ ಬದುಕಬೇಕು. ಆಗಲೇ ಖುಷಿ, ನೆಮ್ಮದಿಯಿಂದಿರುವುದು ಸಾಧ್ಯ ಅನ್ನಿಸಿತು ಎಲ್ಲರಿಗೂ. ಜನರಲ್ಲಿ ಒಮ್ಮಿಂದೊಮ್ಮೆಲೇ ಶಿಸ್ತು, ಪರಂಪರೆ, ನೀತಿ, ನಿಯಮ, ವಿಧೇಯತೆ ಗಳ ಎಚ್ಚರ ಹುಟ್ಟಿತು. ಸಾರ್ವಜನಿಕ ಸ್ಥಳಗಳಲ್ಲಿ ಮೋಜುಮಸ್ತಿ ಕಡಿಮೆಯಾ ಯಿತು. ಜನ ಬಹಳ ಎಚ್ಚರದಿಂದ ಮಾತಾಡಲು ಪ್ರಾರಂಭಿಸಿದರು. ಸಿಗ್ನಲ್‌ಗಳಲ್ಲೇ ರಸ್ತೆ ದಾಟಿದರು. ಮಕ್ಕಳ ಹೋಮ್‌ವರ್ಕ್ ಪ್ರತಿದಿನ ಪರೀಕ್ಷಿಸಿದರು. ಎಲ್ಲವೂ ಒಂದು ಕಟ್ಟುನಿಟ್ಟಿನ ಕಾನೂನಿಗೊಳಪಟ್ಟಂತೆ ಬದಲಾಗಿಬಿಟ್ಟಿತು. ಆದರೆ, ಇಂಥ ಬದುಕಿನಿಂದ ಪ್ರಯೋಜನ ಏನು? ಸಂತೋಷವೇ ಇಲ್ಲದ ಈ ಬಾಳಿನ ಪುರುಷಾರ್ಥವೇನು? ಜನಕ್ಕೆ ಇದೂ ಕೆಲವು ದಿನಗಳಲ್ಲಿ ಬೋರ್ ಹೊಡೆಸತೊಡಗಿತು.
ಅಷ್ಟರಲ್ಲಾಗಲೇ ಜನರಿಗೆ ಆ ಎರಡೂ ಪುಸ್ತಕ ಗಳನ್ನು ಬರೆದವನು ಸೊರೆನ್ ಕರ್ಕ್ ಗಾರ್ಡ್‌ನೇ ಇರಬೇಕೆಂಬ ಅನುಮಾನ ಬಲವಾಗಿತ್ತು. ಅವರೆಲ್ಲ ಅವನ ಬಳಿ ಹೋಗಿ ಪ್ರಶ್ನಿಸಿದರು. ಹಾಗಾದರೆ, ಹೇಗೆ ಬದುಕಬೇಕು? ಯಾವ ದಾರಿ ಒಳ್ಳೆಯದು? ಅವನು ಬರೆದ ಗ್ರಂಥಗಳ ಹೆಸರೇ ಅದೋ ಇದೋ ಎಂದಿದ್ದರಿಂದ ಜನರಿಗೂ ಒಂದು ಸರಳ ಉತ್ತರ ಬೇಕಾಗಿತ್ತು. ಅದು ಅಥವಾ ಇದು ಎಂದು ಒಂದನ್ನಷ್ಟೇ ಗುರಿಮಾಡಿ ಹೇಳಿದ್ದರೆ ಗೊಂದಲಕ್ಕೆ ಎಡೆ ಇರುತ್ತಿರಲಿಲ್ಲ. ಆದರೆ, ಸರಳವಾಗಿ ಉತ್ತರಿಸುವುದರ ಬದಲು ಕರ್ಕ್‌ಗಾರ್ಡ್ ಮತ್ತೂಂದು ಗ್ರಂಥ ಬರೆದ. ಭಯ ಮತ್ತು ನಡುಕ ಎಂದದರ ಹೆಸರು. ಲೇಖಕರ ಹೆಸರಿರಬೇಕಾದ ಜಾಗದಲ್ಲಿ ಯೋಹಾನ್ ಡಿ ಸೈಲೆಂಷಿಯೋ ಎಂದಿತ್ತು.
ಈ ಪುಸ್ತಕದಲ್ಲಿ ಅವನು ಎಲ್ಲರ ಜೀವನದ ಬಗ್ಗೆ ಮಾತಾಡುವ ಬದಲು ಕೇವಲ ಒಬ್ಬ ವ್ಯಕ್ತಿಯ ಬಗ್ಗೆ ಚರ್ಚಿಸಿದ. ಆ ವ್ಯಕ್ತಿಯೇ ಅಬ್ರಹಾಮ್. ಬೈಬಲ್‌ನಲ್ಲಿ ಬರುವ ಅಬ್ರಹಾಮ್‌ನ ಕತೆ ಎಲ್ಲರಿಗೂ ಗೊತ್ತಿದೆ. ಅಬ್ರಹಾಮನು ತನ್ನ ಏಕೈಕ ಮಗನನ್ನು ಕೊಲ್ಲಬೇಕೆಂದು ಗಾಡ್‌ನ ಆಜ್ಞೆಯಾಗುತ್ತದೆ. ಸ್ವಂತ ಮಗನನ್ನೇ ಕೊಲ್ಲುವುದು ಯಾವೊಬ್ಬ ತಂದೆಗೂ ಸಂತಸ ತರುವ ಸಂಗತಿಯಲ್ಲ. ಅಥವಾ ಯಾರ ಮಗನೇ ಆಗಲಿ, ಕೊಲ್ಲುವುದೆಂದರೆ! ಅದೆಂಥ ಘೋರ ಪಾಪಕೃತ್ಯ! ಅಬ್ರಹಾಮ್ ಗೊಂದಲದಲ್ಲಿ ಹೊಯ್ದಾಡುತ್ತಾನೆ. ಆದರೆ ಕೊನೆಗೆ ದೃಢನಿಶ್ಚಯ ಮಾಡಿ ತನ್ನ ಮಗನನ್ನು ಬಲಿಕೊಡಲು ಸಿದ್ಧನಾಗುತ್ತಾನೆ. ಅದು ಸಂತೋಷದಾಯಕವೋ ಅಥವಾ ನ್ಯಾಯಸಮ್ಮತವೋ ಎನ್ನುವುದಕ್ಕಿಂತ ಅದು ದೇವರ ಆಜ್ಞೆ ಎಂಬ ಸಂಗತಿಯೇ ಅವನಿಗೆ ಮುಖ್ಯವಾಗುತ್ತದೆ. ಈ ಕತೆಯ ಬಗ್ಗೆ ಅತ್ಯಂತ ಉದೊºàಧಕವಾಗಿ ಕರ್ಕ್‌ಗಾರ್ಡ್ ತನ್ನ ಗ್ರಂಥದಲ್ಲಿ ಬರೆದ.
ಗ್ರಂಥ ಓದಿದ ಕೋಪನ್‌ಹೆಗನ್‌ನ ನಾಗರಿಕರಿಗೆ ಈಗ ಕರ್ಕ್ ಗಾರ್ಡ್‌ನನ್ನು ಸರಿಯಾಗಿ ಅರ್ಥೈಸಿಕೊಂಡೆವು ಅನ್ನಿಸಿತು. ಹೌದು, ಎಷ್ಟೋ ಸಲ ನಾವು ನ್ಯಾಯಯುತ ಅಂದುಕೊಂಡದ್ದು ಬೇರೊಬ್ಬರ ದೃಷ್ಟಿಯಲ್ಲಿ ನ್ಯಾಯ ಅನ್ನಿಸದೇ ಇರಬಹುದು. ತರ್ಕ, ನ್ಯಾಯ, ಸತ್ಯ, ನೀತಿ ಇವೆಲ್ಲವನ್ನೂ ಮೀರಿದ್ದು ದೈವದ ಆಜ್ಞೆ. ದೈವದ ಕಟ್ಟಳೆ. ಅದನ್ನು ಮೀರಬಾರದು. ನಗರದ ಜನರೆಲ್ಲರೂ ಈಗ ದೈವಭಕ್ತರಾದರು. ಧಾರ್ಮಿಕ ಚಿಂತನೆಯಲ್ಲಿ ಮುಳುಗಿಬಿಟ್ಟರು. ತಮ್ಮ ದಿನನಿತ್ಯದ ಪ್ರತಿಯೊಂದು ಕೆಲಸಕ್ಕೂ ಬೈಬಲ್‌ನಲ್ಲಿ ಸಮ್ಮತಿ ಇದೆಯೇ ಎಂದು ನೋಡಿಕೊಂಡು ಮುಂದುವರಿಯತೊಡಗಿದರು. ಚರ್ಚಿನ ಪ್ರಾರ್ಥನೆಯಲ್ಲಿ ಭಾಗವಹಿಸಿದರು. ಗುರುಗಳ ವಾಣಿಯನ್ನು ಶಿರಸಾವಹಿಸಿ ಕೇಳಿ ಪಾಲಿಸಿದರು. ಇಡೀ ನಗರವೇ ಒಂದು ಧಾರ್ಮಿಕ ಶ್ರದ್ಧಾಕೇಂದ್ರದಂತೆ ಬದಲಾಗಿಬಿಟ್ಟಿತು.
ಇವೆಲ್ಲವನ್ನು ನೋಡಿ ರೋಸಿಹೋದ ಕರ್ಕ್‌ಗಾರ್ಡ್ ಈ ಬಾರಿ ಮತ್ತೂಂದು ಗ್ರಂಥ ಬರೆಯಲು ಕೂತ. ಆದರೆ ಹುಸಿ ಹೆಸರಲ್ಲಲ್ಲ; ತನ್ನದೇ ನಿಜ ಹೆಸರಲ್ಲಿ. ಗ್ರಂಥಕ್ಕೆ ಲೇಖಕನಾಗಿ ನನ್ನ ಕೃತಿಯ ಕುರಿತು ನನ್ನ ಅಭಿಪ್ರಾಯಗಳು ಎಂದು ಹೆಸರಿಟ್ಟ. ಜನ, ಯಾರೋ ಹೇಳಿದರೆಂಬ ಕಾರಣಕ್ಕೆ ತಮ್ಮ ನಿರ್ಧಾರ ಬದಲಿಸಬಾರದು. ಯಾರೋ ನಿರ್ಧರಿಸಿದ ಕಟ್ಟಳೆಗಳ ಚೌಕಟ್ಟಿಗೆ ತಲೆಕೊಟ್ಟು ಬದುಕಬಾರದು. ಪ್ರತಿಯೊಬ್ಬನಿಗೂ ಒಂದು ಸ್ವತಂತ್ರ ವ್ಯಕ್ತಿತ್ವ ಇದೆ. ತನ್ನ ಜೀವನದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಮತ್ತು ಸ್ವಾತಂತ್ರ್ಯ ಪ್ರತಿಯೊಬ್ಬನಿಗೂ ಇದೆ. ತನಗೆ ಯಾವುದು ಸರಿಯೋ ಅದನ್ನಷ್ಟೇ ವ್ಯಕ್ತಿಯು ಮಾಡಬೇಕು. ಸಮಾಜವೂ ಅಷ್ಟೇ – ಹೊಸ ಫ್ಯಾಶನ್ ಹಿಂದೆ ಕುರಿಯಂತೆ ಹೋಗುವುದು ಬಿಟ್ಟು ತನ್ನ ಸ್ವಂತಿಕೆಯನ್ನು ಉಳಿಸಿಕೊಳ್ಳಬೇಕು. ಯಾವ ಬಗೆಯ ಜೀವನ ನನಗೆ ಸೂಕ್ತ ಎಂಬ ಪ್ರಶ್ನೆಯನ್ನು ಸಮಾಜದ ಪ್ರತಿಯೊಬ್ಬನೂ ಕೇಳಿಕೊಳ್ಳಬೇಕು… ಎಂದೆಲ್ಲ ದೊಡ್ಡ ಮಾತುಗಳನ್ನು ಕರ್ಕ್‌ಗಾರ್ಡ್ ತನ್ನ ಗ್ರಂಥದಲ್ಲಿ ಬರೆದ.
ಇದೀಗ ಕೋಪನ್‌ಹೆಗನ್‌ನ ನಾಗರಿಕರು ಎಚ್ಚರಾದರು. ಹೌದಲ್ಲ! ಇಷ್ಟು ದಿನ ಕುರಿಗಳಂತೆ ಏನೇನೋ ಕೆಲಸಕ್ಕೆ ಬಾರದ ಸಂಗತಿಗಳನ್ನು ಅನುಸರಿಸುತ್ತ ಕಳೆದುಹೋಗಿದ್ದೆವಲ್ಲ ಎಂಬ ಪಶ್ಚಾತ್ತಾಪ, ದುಃಖ, ಕೋಪ ಎಲ್ಲವೂ ಬಂದುಬಿಟ್ಟವು ಅವರಿಗೆ. ಅವರೀಗ ತಮಗೆ ಮೆಚ್ಚುಗೆಯಾಗುವ ಪುಸ್ತಕಗಳ ಹಿಂದೆ ಬಿದ್ದರು. ಮಾರುಕಟ್ಟೆಗೆ ಬರುವ ಹೊಸ ಪುಸ್ತಕಗಳಲ್ಲಿ ಏನು ಹೇಳಿದೆಯೋ ಅದರಂತೆ ಜೀವನಶೈಲಿ ಬದಲಿಸಿಕೊಳ್ಳತೊಡಗಿದರು. ಒಬ್ಬೊಬ್ಬರದೂ ಒಂದೊಂದು ದಾರಿಯಾಯಿತು. ಹೊಸ ಗ್ರಂಥಗಳೆಷ್ಟೋ ಅಷ್ಟು ಜೀವನಶೈಲಿಗಳಾಯಿತು. ಯಾವ ಬಗೆಯ ಜೀವನ ತನಗೆ ಸೂಕ್ತ ಎಂಬ ಪ್ರಶ್ನೆ ಮಾತ್ರ ಈ ಗೌಜು-ಗದ್ದಲಗಳ ಸಂತೆಯಲ್ಲಿ ಯಾರಿಗೂ ಬೇಡದ ಅನಾಥ ಶಿಶುವಿನಂತೆ ದೂರವೇ ಉಳಿಯಿತು.
ಅಂದ ಹಾಗೆ, ಓದುಗ, ಯಾವತ್ತಾದರೂ ನೀನು ಎಲ್ಲ ಜಂಜಡ ಬದಿಗಿಟ್ಟು, ಯಾವ ಬಗೆಯ ಜೀವನ ನಿನಗೆ ಸೂಕ್ತ, ಯೋಚಿಸಿದ್ದೀಯಾ?
ಹೀಬ್ರೂ ಮೂಲ ಮತ್ತು ಇಂಗ್ಲಿಷ್ ಅನುವಾದ: ಟಾಮ್ ಬೈಕಿನ್-ಓ-ಹಾಯೊನ್ಕನ್ನಡಕ್ಕೆ : ರೋಹಿತ್ ಚಕ್ರತೀರ್ಥ