ಬೆಳ್ಳಂಬೆಳಿಗ್ಗೆ ಕರಾರುವಕ್ಕಾಗಿ ಹಾಜರಾಗುವ ಸೂರ್ಯ, ರಾತ್ರಿಗಳಲ್ಲಿ ಆಕಾರ ಬದಲಿಸುತ್ತ ಒಮ್ಮೆ ಪೂರ್ಣ ಮತ್ತೂಮ್ಮೆ ಅಪೂರ್ಣ ಕೆಲವೊಮ್ಮೆ ಇಲ್ಲವಾಗುವ ಚಂದಿರ. ಈ ಚಂದಿರನ ಅನುಪಸ್ಥಿತಿಯಲ್ಲೇ ಹೊಳೆವ ನಕ್ಷತ್ರಗಳು, ದಾರಿಯಗುಂಟ ಗುರುತು ಪರಿಚಯದ ಅದೇ ಆ ಊರಿನ ಕೆಲವೇ ಜನಗಳು; ಅಸಂಖ್ಯಾತ ಮರಗಳು. ಇವೆಲ್ಲವೂ ನನ್ನ ಬಾಲ್ಯದ ದಿನಗಳಲ್ಲಿದ್ದ ಮಲೆನಾಡಿನ ದಟ್ಟ ಕಾನನದ ಪುಟ್ಟ ಹಳ್ಳಿಯೊಂದರ ನಿತ್ಯ ದಿನಚರಿಗಳು. ಈಗಿನ ಟಿವಿ, ಇಂಟರ್ನೆಟ್ ಕಾಲವಲ್ಲ ಅದು. ಸುಮಾರು, 30 ವರುಷಗಳ ಹಿಂದೆ ಮಲೆನಾಡ ಇಬ್ಬನಿಯ ಬೆಳಗದು; ಚಹ ತೆಳ್ಳೇವು ಪರಿಮಳದ ಬೆಳಗದು. ಹುಡುಗಿಯಾದ ಕಾರಣಕ್ಕೆ ಬಾಗಿಲಿಗೆ ಸಾರಿಸಿ, ರಂಗೋಲಿ ಇಟ್ಟು ದೇವರಿಗೆ ಹೂ ಕೊಯ್ದಿಡುವ ಭಕ್ತಿಯ ಬೆಳಗದು. ಮನೆಯ ಪಕ್ಕದ ಕೊಟ್ಟಿಗೆಯ ದನ ಹುಲ್ಲು-ಹಿಂಡಿ ತಿಂದು ಹಾಲು ಕೊಡುವ ಬೆಳಗದು, ಎಂಟು ಗಂಟೆಗೆ ಚಾ ಕುಡಿದು ಹೊರಟರೆ ಶಾಲೆಗೆ ಒಟ್ಟಿಗೆ- ಇರುವುದೇ ನಾವು ಎಂಟತ್ತು ಮಕ್ಕಳು. ಏಕೋಪಾಧ್ಯಾಯ ಶಾಲೆ. ಮಧ್ಯಾಹ್ನ ಮತ್ತೆ ಮನೆಗೆ ಬಂದು ಉಂಡು ಹೊರಟರೆ ಸಂಜೆ ಐದಕ್ಕೆ ವಾಪಸ್. ಲಗೋರಿ, ಮುಟ್ಟಾಟ, ಕುಂಟಾಟ, ಗೋಲಿ, ಕವಡೆಯಂಥ ಆಟಗಳಲ್ಲಿ ಕಳೆಯುತ್ತಿದ್ದ ದಿನಗಳು. ಹೊರಪ್ರಪಂಚದ ಅರಿವಿರದ, ವರ್ಷಕ್ಕೊಂದು ಸಲ ಹೋಗುವ ಆಲೇಮನೆ ಮತ್ತು ಎರಡು ವರ್ಷಗಳಿಗೊಂದು ಸಲ ಬರುವ ಸಿರ್ಸಿ ಜಾತ್ರೆ ಮಾತ್ರ ಬಾಹ್ಯ ಜಗತ್ತನ್ನು ಸ್ವಲ್ಪವಾದರೂ ತೆರೆದಿಡುತ್ತಿತ್ತು. ಅಂತಹ ಬಾಲ್ಯದ ನೆನಪುಗಳ ಭಾಗವಾದವಳೇ ಅವಳು.
ಗೌರಕ್ಕ, ಅವಳೇನೂ ನಮಗೆ ಸಂಬಂಧಿಯಲ್ಲ, ಆದರೆ, ಸಂಬಂಧವನ್ನು ಮೀರಿದಂತಿದ್ದಳು. ಸುಮಾರು 80ರ ಪ್ರಾಯದ ಬಿಳಿಯ ರೇಶಿಮೆ ಕೂದಲಿನ ಅವಳು ವರ್ಷಕ್ಕೊಮ್ಮೆ ಗೋಕರ್ಣದಿಂದ ಬರುವ ಅತಿಥಿ. ಗೌರಕ್ಕನ ಗಂಡ ಶಾಸ್ತ್ರಿಗಳು ಮೊದಲು ನಮ್ಮನೆಯ ಪುರೋಹಿತರಾಗಿದ್ದವರು. ಅವರು ಕಾಲವಾದ ನಂತರ, ಅವರ ಮಗ ವೈದಿಕ ವೃತ್ತಿಗೆ ಬಾರದೇ ಸೈನ್ಯಕ್ಕೆ ಸೇರಿದ್ದರಿಂದ, ಅನಿವಾರ್ಯವಾಗಿ ಬೇರೆ ಉಪಾಜ್ರ (ಕುಲಪುರೋಹಿತ)ರನ್ನು ಹೊಂದಿದ್ದರೂ, ಗೌರಕ್ಕ ಮಾತ್ರ ವರ್ಷಕ್ಕೊಮ್ಮೆ ತನ್ನ ಪತಿಯ ಶಿಷ್ಯ ವರ್ಗದ ಮನೆಗಳಿಗೆ ಭೇಟಿಕೊಟ್ಟು ಒಂದೊಂದು ಮನೆಯಲ್ಲಿಯೂ, ಎಂಟತ್ತು ದಿನ ಉಳಿದು ಹೋಗುವುದು ವಾಡಿಕೆ. ಇರುವ ಒಬ್ಬ ಮಗ ಸೈನ್ಯದಲ್ಲಿರುವುದು ಬಿಟ್ಟರೆ ಇನ್ಯಾರೂ ಅವಳಿಗೆ ಅಂಥ ಆಪ್ತರು ಇದ್ದಂತಿರಲಿಲ್ಲ. ನಾನಾಗ ನಾಲ್ಕನೇ ಕ್ಲಾಸಿನಲ್ಲಿರಬೇಕು… ಒಂದು ಇಳಿಸಂಜೆ. ಪಕ್ಕದೂರು ಕೊಪ್ಪದ ರಾಮಚಿಕ್ಕಯ್ಯ ಗೌರಕ್ಕನ ಬ್ಯಾಗು ಹಿಡಿದುಕೊಂಡು, ಅವಳನ್ನೂ ಕರೆದುಕೊಂಡು ತಮ್ಮ ಮನೆಯಿಂದ ನಮ್ಮನೆಗೆ ಕರೆತಂದಿದ್ದ. ಗೋಕರ್ಣದಿಂದ ವಾರದ ಹಿಂದೆ ಅವರ ಮನೆಗೆ ಬಂದವಳು, ಈಗ ನಮ್ಮ ಮನೆಯಲ್ಲಿ ಇನ್ನೂ ಎಂಟತ್ತು ದಿನ ಗೌರಕ್ಕ ಇರುತ್ತಾಳೆ. ಖುಷಿಯಾಯಿತು. ಏಕೆಂದರೆ, ಗೌರಕ್ಕನ ಮಾತುಗಳೆಂದರೆ ಮೆಲ್ಲ, ಮುದ ಮತ್ತು ಮಾಹಿತಿಯ ಕಣಜ. ಮಾಗಿದ ಅನುಭವದ ಆ ಹಿರಿಯ ಜೀವ ಮಾತಾಡಿದಳೆಂದರೆ, ಆ ತಲೆಮಾರೇ ಮಾತಾ ಡಿದಂತಿತ್ತು. ಶಿರಸಿ ಬಿಟ್ಟರೆ ಮತ್ತೂಂದು ಊರ ಪರಿಚಯವಿರದ ನನಗೆ, ಅವಳ ಮಾತುಗಳಿಂದಲೇ ಗೋಕರ್ಣದ ಮಹಾಬಲೇಶ್ವರ ದರ್ಶನವಾದಂತಿತ್ತು. ಬಾಡದ ತೇರು ಶೃಂಗೆರಿಸಿಕೊಂಡು ನಿಂತಂತಿತ್ತು. ಪಕ್ಕದ ಸಮುದ್ರದ ಅಬ್ಬರ, ಮುತ್ತುಗದ ಎಲೆಯಲ್ಲಿ ಬಚ್ಚಿಟ್ಟ ಸುರಗಿ, ರೆಂಜಲದ ಹೂಗಳ ಘಮದಂತೆ ಅಡರಿಕೊಳ್ಳುವ, ಘಟ್ಟದ ಕೆಳಗಿನ ಜನಜೀವನ-ಬದುಕಿನ ಲಕ್ಷಣಗಳನ್ನು ಕಟ್ಟಿಕೊಡುತ್ತಿತ್ತು.
ಗೌರಕ್ಕನ ನೆನಪಾದಾಗಲೆಲ್ಲ, ಮನಸ್ಸಿಗೆ ಬರುವ ವಿಷಯಗಳೆಂದರೆ, ಅವಳು ಕಾಫಿಯ ಕಡೆಗೆ ತೋರಿಸುವ ದಿವ್ಯ ಪ್ರೀತಿ; ಕಾಫಿಯ ಪರಿಮಳಕ್ಕೆ ಅವಳ ಅರಳುವ ಮೈ-ಮನಗಳು; ಜೊತೆಗೆ ಬರುವ ಒಣ ಕೆಮ್ಮು. ಅವಳು ಆ ಕೆಮ್ಮನ್ನು ಒಂದು ರೋಗದಂತೆ ಎಂದೂ ಭಾವಿಸಿರಲಿಲ್ಲವೆನಿಸುತ್ತಿದೆ. ಅವಳ ದೇಹದ ಒಂದು ಅವಿಭಾಜ್ಯ ಅಂಗದಂತೆ ಇತ್ತು. ಇನ್ನೊಂದು ಅವಳು ಅತೀ ಇಷ್ಟಪಡುವ ವಿಷಯ; ಸಹಜವಾಗಿಯೇ ಅವಳ ಮಗ. ಊಟ ಮಾಡುವಾಗ, “ಅಥೋ ನಮ್ಮನೆ ಮಂಜುಂಗೂ ದಪ್ಪ ಮೊಸರಿಷ್ಟ’ ಎಂದೋ, ನಾನು ಓದುತ್ತಿದ್ದರೆ, “ನಮ್ಮನೆ ಮಂಜುನೂ ಓದುಲೆ ಹುಷಾರಿ. ಕ್ಲಾಸಿಗೇ ಫಸ್ಟ್ ಬಂದಿದ್ದ…’ ಎಂದೋ ನೆನಪಿಸುತ್ತಿದ್ದಳು. ಮನದ ತುಂಬ ಮಗನೇ ತುಂಬಿದ. ಪ್ರತಿಸಲ ಹೋಗುವಾಗಲೂ “ಈ ಸಲವೇ ಕೊನೆಯ ಸಲ ಬರುದೊ ಏನೋ. ಮಗ ಬಂದು ಕರ್ಕೊಂಡ್ಹೊದ್ರೆ, ಉತ್ತರ ದೇಶಕ್ಕೆ ಹೋದ್ರೆ ಇಲ್ಲೆಲ್ಲ ಬಪ್ಪೂಲಾಗ್ತಿಲ್ಲೆ’ ಎನ್ನುತ್ತ ಹೋದವಳು ಮತ್ತೆ ಮರುವರ್ಷ ಹಾಜರಾಗುತ್ತಿದ್ದಳು. “ಮಗನಿಗೆ ಜಾಸ್ತಿ ಕೆಲಸವೇನೋ ಬರಲೇ ಇಲ್ಲ. ಒಂದು ಪತ್ರವೂ ಇಲ್ಲ. ಎಂತದೋ’ ಎಂದು ಕುಕ್ಕರುಗಾಲಲ್ಲಿ ಕೂತು ಮೇಲೆ ನೋಡುತ್ತ ಕೈಮುಗಿದು ಹನಿಗಣ್ಣಾಗುತ್ತಿದ್ದಳು. ಒಂದೇ ಕ್ಷಣ! ಮತ್ತೆ ಮೊದಲಿನಂತಾಗಿ, “ಮುಂದಿನ ವರ್ಷ ನಾ ಬಪ್ಪದು ಖರೇ ಇಲ್ಲೆ. ಮಗ ಬಂದ್ರೆ ಅವನೊjತೆ ಹೋಪುದಲಿ’ ಎನ್ನುತ್ತ ತನ್ನ ಒಣಗಿದ ಬಟ್ಟೆಗಳ ನಾಜೂಕಾಗಿ ಮಡಚಿಡುತ್ತ ತೊಳೆದ ಬಟ್ಟೆಗಳ ಅಷ್ಟೇ ಅಕ್ಕರೆಯಿಂದ ಒಣಗಿಸುತ್ತ ಮಗನನ್ನೇ ಧ್ಯಾನಿಸುತ್ತಿದ್ದಳು.
ಸುಮಾರು ಏಳೆಂಟು ವರ್ಷಗಳಿಂದಲೂ ಬರುತ್ತಿದ್ದ ಗೌರಕ್ಕ ಇದ್ದಕ್ಕಿದ್ದಂತೆ ಒಂದು ವರ್ಷ ಬರಲಿಲ್ಲ. ಆ ಕಡೆಯಿಂದ ಬಂದ ಸುದ್ದಿಯ ಪ್ರಕಾರ ಅವಳು ತೀರಿಕೊಂಡಿದ್ದಳು. ಹೈಸ್ಕೂಲಿಗೆ ಹೋಗುತ್ತಿದ್ದ ನನಗೆ ಈ ವಿಷಯ ತುಂಬಾ ಬೇಸರ ಉಂಟು ಮಾಡಿದ್ದಂತೂ ಸುಳ್ಳಲ್ಲ. “”ಅವಳ ಮಗ ಈಗಾದರೂ ಬಂದನೋ ಇಲ್ಲವೊ” ಅಮ್ಮನ ಬಳಿ ನಾನು ಹೇಳಿದೆ. ಕಾಣದ ಅವಳ ಮಗನ ಬಗ್ಗೆ ಸಕಾರಣವಾಗಿ ಸಿಟ್ಟಿತ್ತು ನನಗೆ. ಅಮ್ಮ ನನ್ನ ಮುಖ ಒಮ್ಮೆ ದೀರ್ಘವಾಗಿ ನೋಡಿ, ಹೇಳಲೋ ಬೇಡವೋ ಎಂದು ಯೋಚಿಸಿ, ಮತ್ತೆ ಹೇಳಿದರು- “ಅವಳ ಮಗ, ಅಪಘಾತವೊಂದರಲ್ಲಿ ಈಗ ಹತ್ತು ವರ್ಷಗಳ ಹಿಂದೆಯೇ ಕಾಲವಾಗಿ¨ªಾನೆ ‘ ಎಂದು. ಇದು ನನಗೆ ಆಘಾತದ ವಿಷಯ. “”ಅಮ್ಮ, ಹಾಗಾದರೆ ಅದು ಅವಳಿಗೆ ಗೊತ್ತಿರಲಿಲ್ಲವಾ?” ಎಂದರೆ “”ಗೊತ್ತಿಲ್ಲದೇ ಏನು? ಮಗನ ಸಾವನ್ನು ಅವಳಿರುವವರೆಗೂ ಅವಳ ಮನಸ್ಸು ಒಪ್ಪಲು ಸಿದ್ಧವಿರಲಿಲ್ಲ. ಬರುತ್ತಾನೆ ಎಂದೇ ಭ್ರಮಿಸುತ್ತಿದ್ದಳು” ಎಂದರು. ನಾನು ದಿಗ್ಭ್ರಾಂತಳಾಗಿ¨ªೆ! ಮತ್ತೆ ಒಂದು ವಾರ ಬೇಕಾಯಿತು, ನನ್ನ ಮನ ಹತೋಟಿಗೆ ಬರಲು.
ಮುಂದೆ ನನ್ನ ಮದುವೆಯ ತರುವಾಯ ಕರಾವಳಿಯಲ್ಲೇ ಉಳಿಯುವಂತಾಗಿದ್ದರಿಂದ, ಅಲ್ಲಿಯ ಜನಜೀವನ ಕಂಡಾಗ ಗೌರಕ್ಕ ಮತ್ತೆ ಮತ್ತೆ ನೆನಪಾಗುತ್ತಿದ್ದಳು. ಗೊತ್ತಿದ್ದೂ ಗೊತ್ತಿಲ್ಲದಂತೆ, ಅರಿತೂ ಅರಿಯದಂತೆ, ನಿಗೂಢವಾಗುತ್ತ, ಮತ್ತೂಮ್ಮೆ ಪರಿಚಿತಳಂತೆ, ಪರಿಚಯವಿದ್ದು ಅಪರಿಚಿತಳಾದಂತೇ. ಈ ಸಮಯದಲ್ಲಿ ಪಕ್ಕದ ಮನೆಯ ಕಿಣಿ ಮಾಮನ ಹೆಂಡತಿ ಉಷಾ ಮಾಮಿಯ ಮಕ್ಕಳ ಪ್ರೀತಿ ನೋಡುವಾಗೆಲ್ಲ ಒಮ್ಮೊಮ್ಮ ಗೌರಕ್ಕ ನೆನಪಾಗಿ ಕಣ್ಣು ಹನಿಗೂಡುತ್ತಿತ್ತು. ಉಷಾ ಮಾಮಿಗೂ ಹಾಗೆ ಮಕ್ಕಳೇ ಎಲ್ಲ. ವಿದೇಶದಲ್ಲಿ ಮೂರು ಮಕ್ಕಳು ನೆಲೆ ನಿಂತು ಇಲ್ಲಿ ಅವರೊಂದಿಗೆ ಕೊನೆಯ ಮಗ ರಾಮನಾಥನಿದ್ದ. ದೊಡ್ಡ ಜೀವದ ಉಷಾಮಾಮಿಯ ಗಂಡ ಮಾತ್ರ ಸಪೂರದ ಶ್ರೀನಿವಾಸ ಮಾಮ. ಮೊದಲ ಮೂರು ಮಕ್ಕಳು, ಎರಡು ಹೆಣ್ಣು, ಒಂದು ಗಂಡು ಎಲ್ಲಾ ತಂದೆಯ ಹಾಗೆ ಒಣಕಲು ಕಡ್ಡಿ. ಆದರೆ, ಕೊನೆಯ ಮಗ ರಾಮನಾಥ ಮಾತ್ರ ಉಷಾ ಮಾಮಿಯಂತೆ. ಯಕ್ಷಗಾನದಲ್ಲಿ ಉಷಾಮಾಮಿ ಪುರುಷ ವೇಷ ಹಾಕಿದಂತೆ ಕಾಣಿಸುತ್ತಿದ್ದ. ಅಕ್ಕ-ಪಕ್ಕದ ಮನೆಯವರಾದ ನಾವು ಮಾತನಾಡುವಾಗ, ರಾಮನಾಥನ ವಿಷಯ ಇಲ್ಲದೇ ಉಷಾಮಾಮಿಯ ಮಾತು ಮುಗಿದದ್ದೇ ಇಲ್ಲ. ನಾಲ್ಕು ಮಕ್ಕಳಿದ್ದರೂ ತಮಗೆ ಕೊನೆಗಾಲದಲ್ಲಿ ಆಸರೆಯಾಗಿರುವವ, ಓದು ತಲೆಗೆ ಹತ್ತದಿದ್ದರೂ, ಅಂಗಡಿ ಇಟ್ಟು ಬಾಳು ಕಟ್ಟಿಕೊಂಡವ, ತಿಂಡಿಪೋತ ಮಗನ ಜಿಹ್ವಾ ಚಪಲ ತೀರಿಸಲು ಶೀಘ್ರವಾಗಿ ಅವನಿಗೊಂದು ಮದುವೆ ಮಾಡುವ ಆಸೆ ಉಷಾ ಮಾಮಿಗೆ.ಮೊದಲ ಇಬ್ಬರು ಹುಡುಗಿಯರಿಗೆ ಮದುವೆ ಆದಾಗ ಅವರ ಹೆಸರಲ್ಲಿ ಒಂದೊಂದು ಗಿಡನೆಟ್ಟು ಆ ಹೆಸರಿನಲ್ಲೇ ಕರೆದು ಮಾತಾಡಿಸುತ್ತ, ಮಕ್ಕಳು ದೂರವಿರುವ ನೋವು ಮರೆಯುತ್ತಿದ್ದರು. ಇನ್ನೊಬ್ಬ ಮಗ- ಸೊಸೆ ಮಕ್ಕಳೊಂದಿಗೆ ದುಬೈ ಸೇರಿದಾಗ ಅವರ ಹೆಸರಲ್ಲೂ ಒಂದೊಂದು ಗಿಡ ನೆಟ್ಟು ನೀರೆರೆಯುತ್ತಿದ್ದರು. ಚಿಕ್ಕು, ಸಂಪಿಗೆ, ಮಾವು- ಹೀಗೆ ಅವರ ಮನೆ ಸುತ್ತಲೂ ಮರಗಳೇ ತುಂಬಿತ್ತು. ಹಣ್ಣುಗಳೂ, ಹಕ್ಕಿಗಳ ಕಲರವ, ಉಷಾ ಮಾಮಿಯ ತುಳಸೀ ಪೂಜೆ ಆ ಮನೆಯ ಶೋಭೆಯನ್ನೇ ಹೆಚ್ಚಿಸಿತ್ತು.
ರಾಮನಾಥನಿಗೆ ಈ ಸಲ ಅಣ್ಣನಿರುವ ದುಬೈಗೆ ಹೋಗಿ, ನಾಲ್ಕು ದಿನ ಇದ್ದು ಊರು ನೋಡಿ, ತಿರುಗಾಡಿ ಬರುವ ಉಮೇದು. ಉಷಾ ಮಾಮಿಗೆ ಬಿಲ್‌ಕುಲ್ ಇಷ್ಟವಿರಲಿಲ್ಲ. ಆದರೇನು, ಅಣ್ಣ-ತಮ್ಮ ಸೇರಿ ಒಪ್ಪಿಸಿದರು. ಹಾಗೆ ಹೋದ ರಾಮನಾಥ ಮಾತ್ರ ಬರುವ ಹಿಂದಿನ ದಿನ ವಿದ್ಯುತ್ ಅವಘಡಕ್ಕೆ ಬಲಿಯಾಗಿ ಕರಕಾದ, ಅವನ ದೇಹ ಮಾತ್ರ ಒಂದು ವಾರದ ನಂತರ ಭಾರತಕ್ಕೆ ಬಂತು.
ಈ ಮಧ್ಯೆ ನಾನು ಉದ್ಯೋಗದ ನಿಮಿತ್ತ 4 ತಿಂಗಳು ತರಬೇತಿ ಎಂದು ಬೇರೆ ಊರಿಗೆ ಹೋಗಿದ್ದರಿಂದ ಮಾಮಿಯನ್ನು ಮಾತನಾಡಿಸಲಾಗಲಿಲ್ಲ. ಬಿಡುವು ಮಾಡಿಕೊಂಡು ಮತ್ತೆ ಅವರ ಮನೆಗೆ ಹೋದಾಗ, ಹೇಗೆ ಸಾಂತ್ವನಿಸಬೇಕೆಂಬ ಗೊಂದಲ ನನ್ನ ಕಾಡುತ್ತಿತ್ತು. ಇದಕ್ಕೆಲ್ಲ ಯಾವುದೇ ಅವಕಾಶವೇ ಇಲ್ಲದಂತೆ ಮಾಮಿಯೇ ಗೇಟಿನ ಬಳಿ ಬಂದು ನನ್ನ ಬರಮಾಡಿಕೊಂಡರು. ಒಳ ನಡೆದರೆ, ಮನೆಯಲ್ಲಿ 2-3 ನಾಯಿಗಳು, ಬೆಕ್ಕುಗಳು, ಆಕಳು, ಲವ್ ಬರ್ಡ್‌ನ್ನು ಹೊಸತಾಗಿ ತಂದು ಸಾಕಿರುವುದಾಗಿ ಅವುಗಳ ಪರಿಚಯಿಸಿದರು. ಅವುಗಳಿಗೆ ಹೊತ್ತು ಹೊತ್ತಿಗೆ ಆಹಾರ ಕೊಡುವುದರಲ್ಲೇ ಆಗುತ್ತದೆ. ಹಗಲು ರಾತ್ರಿ ತಮಗೆ ಪುರುಸೊತ್ತೇ ಸಿಗುವುದಿಲ್ಲವೆಂದರು. ಏನೆಲ್ಲ ಮಾತಾಡುತ್ತಲೇ ಹೋದರು, ರಾಮನಾಥನ ವಿಷಯವೊಂದನ್ನು ಬಿಟ್ಟು . ಕೊನೆಯಲ್ಲಿ ನಾನು ಅಲ್ಲಿಂದ ಹೊರಟು ಬರುವಾಗ ತೋಟದ ಮೂಲೆಗೆ ಕರೆದೊಯ್ದು ತೋರಿದರು. “”ಇಲ್ನೋಡಿ ರಾಮನಾಥ. ಕಪ್ಪು-ಹಸಿರಿನ ಬಣ್ಣದ ಎಲೆಗಳ ಮಧ್ಯೆ ತಿಳಿ ಹಸಿರಿನ ಚಿಗುರಿರುವ ಎಳೆಯ ಹಲಸಿನ ಸಸಿ ಆಗಷ್ಟೇ ನೀರು ಪಡೆದು ನಳನಳಿಸುತ್ತಿತ್ತು. ರಾಮನಾಥನದು ನನ್ನ ಹಾಗೆ ದೊಡ್ಡ ಜೀವ ನೋಡು. ಅದಕ್ಕೆ ದೊಡ್ಡ ಹಣ್ಣು-ಹಲಸಿನ ಗಿಡವನ್ನೇ ಅವನೆಂದು ನೆಟ್ಟಿದ್ದೇನೆ” ನಕ್ಕರು! ನನ್ನ ಕಣ್ಣಲ್ಲಿ ನೀರು ಬಂತು! “”ಇನ್ನು ಇದರ ಬೆಳೆಸುವ ಜವಾಬ್ದಾರಿ ಉಂಟು. ಎಷ್ಟು ಕೆಲಸ ನನಗೆ. ಒಂದು ನಿಮಿಷ ಪುರುಸೊತ್ತಿಲ್ಲ” ಅವರು ಹೇಳುತ್ತಲೇ ಹೋದರು. ನನ್ನ ಮನ ಮೌನದ ಕಡಲಾಗಿತ್ತು.
ಗಿರಿಜಾ ಹೆಗಡೆ ಗಾಂವ್ಕರ್