Advertisement

ಒಂದೂರಲ್ಲಿ ಒಬ್ಬ ರಾಜ ಇದ್ನಂತೆ…

05:15 PM Oct 20, 2018 | |

ಒಂದಾನೊಂದು ಕಾಲದಲ್ಲಿ, ಒಂದೂರಲ್ಲಿ ಒಬ್ಬ ರಾಜ ಇದ್ದ….ಹೀಗೆ ಅಜ್ಜನೋ ಅಜ್ಜಿಯೋ ಕತೆ ಶುರು ಮಾಡಿದರೆ, ಮೈಯೆಲ್ಲಾ ಕಿವಿಯಾಗಿಸಿ ಕೇಳುವ ಕಾಲವೊಂದಿತ್ತು. ಅಜ್ಜಿ ಹೇಳುವ ಕತೆಯ ಪಾತ್ರಗಳನ್ನು  ಕಲ್ಪಿಸಿಕೊಳ್ಳುತ್ತಾ, ಆ ಕತೆಯ ಪಾತ್ರವಾಗಿ ಬೆಳೆದವರು ನಾವು. ಆದರೆ, ಈಗಿನ ಮಕ್ಕಳಿಗೆ ಆ ಭಾಗ್ಯ ಎಲ್ಲಿದೆ? ಅಜ್ಜ-ಅಜ್ಜಿ ಊರಿನಲ್ಲಿ, ಮಕ್ಕಳು ಬೆಂಗಳೂರಿನಲ್ಲಿ ಎಂಬಂತಾಗಿರುವ ಈ ದಿನಗಳಲ್ಲಿ, ಅಪ್ಪ-ಅಮ್ಮನಿಗೆ ಕತೆ ಗೊತ್ತಿಲ್ಲ. ಗೊತ್ತಿದ್ದರೂ ಹೇಳಲು ಟೈಮಿಲ್ಲ. ಕತೆ ಹೇಳುವ ಪರಂಪರೆಯೊಂದು ಹೀಗೆ ಮರೆಯಾಗುತ್ತಿರುವಾಗ, ಕತೆ ಹೇಳುವೆ ಬನ್ನಿ…ಅನ್ನುತ್ತಿದೆ ಪರಂಪರಾ ಕಲ್ಚರಲ್‌ ಫೌಂಡೇಶನ್‌.

Advertisement

ಕತೆ ಹೇಳುವೆ ಬನ್ನಿ….
ಇದು ಪರಂಪರಾ ಫೌಂಡೇಶನ್‌ನ ಗೌರವಾಧ್ಯಕ್ಷ ಜಿ.ಪಿ.ರಾಮಣ್ಣ ಮತ್ತು ತಂಡದವರ ವಿನೂತನ ಕಲ್ಪನೆ. ಶಾಲೆಗಳಲ್ಲಿ, ಬಡಾವಣೆಗಳಲ್ಲಿ, ಉದ್ಯಾನವನಗಳಲ್ಲಿ, ಚಿಣ್ಣರಿಗೆ ಕತೆ ಹೇಳುವ ಕಾರ್ಯಕ್ರಮ ಇದು. ಈಗಿನ ಮಕ್ಕಳಿಗೆ ಕನ್ನಡ ಓದು-ಬರಹದ ಮೇಲೆ ಆಸಕ್ತಿ ಮೂಡಿಸುವ, ನಮ್ಮ ಸಂಸ್ಕೃತಿಯ ಪರಿಚಯ ಮಾಡಿಕೊಡುವ, ಜೀವನ ಮೌಲ್ಯಗಳನ್ನು ಕಲಿಸುವುದು ಇದರ ಹಿಂದಿನ ಉದ್ದೇಶ.

“ಕತೆ’ಯ ಸ್ವರೂಪ
ಸದ್ಯಕ್ಕೆ ಈ ತಂಡ, 5-10ನೇ ತರಗತಿಯ ಮಕ್ಕಳಿಗೆ ಕತೆ ಹೇಳುತ್ತದೆ. ರಾಮಾಯಣ, ಮಹಾಭಾರತ, ಪಂಚತಂತ್ರ, ತೆನಾಲಿರಾಮ, ಅಕºರ್‌-ಬೀರಬಲ್‌..ಹೀಗೆ ನೀತಿ ಬೋಧಕ ಕತೆಗಳನ್ನು, ಪರಿಣಾಮಕಾರಿಯಾಗಿ ಹೇಳುವ ಪರಂಪರಾ ಸಂಸ್ಥೆಯ ಸದಸ್ಯರು, ಶಾಲೆಗಳಿಗೆ ಹೋಗಿ ಈ ಕಾರ್ಯಕ್ರಮ ನೀಡುತ್ತಾರೆ. ಮಕ್ಕಳಿಗೆ ಕತೆಯ ನೀತಿ ಎಷ್ಟರಮಟ್ಟಿಗೆ ಅರ್ಥವಾಗಿದೆ ಎಂದು ತಿಳಿಯಲು, ನಂತರ ಸಂವಾದ ಮತ್ತು ಪ್ರಶ್ನೋತ್ತರ ನಡೆಯುತ್ತದೆ. ಕತೆಯೊಂದನ್ನು ಓದಿ ಹೇಳಲು ಮಕ್ಕಳಿಗೂ ಅವಕಾಶವಿರುತ್ತದೆ. ಸ್ಪಷ್ಟವಾಗಿ, ಭಾವಪೂರ್ಣವಾಗಿ ಓದಿದ ಇಬ್ಬರು ಮಕ್ಕಳಿಗೆ ನಗದು ಮತ್ತು ಪುಸ್ತಕ ಬಹುಮಾನವಿರುತ್ತದೆ. ಹಾಗೆಯೇ, ತಾವು ಕೇಳಿದ ಯಾವುದಾದರೊಂದು ಕತೆಯನ್ನು ವೇದಿಕೆಯ ಮೇಲೆ ಸುಂದರವಾಗಿ ಪ್ರಸ್ತುತಪಡಿಸುವ ಇಬ್ಬರು ಮಕ್ಕಳಿಗೂ ಬಹುಮಾನವಿದೆ. ಒಂದೂವರೆ ತಾಸಿನ ಈ ಕಾರ್ಯಕ್ರಮದಲ್ಲಿ, ಕತೆ ಕೇಳುವ, ಕತೆ ಓದುವ ಮತ್ತು ಹೇಳುವ ಕೌಶಲವನ್ನು ಮಕ್ಕಳಿಗೆ ತಿಳಿಸಿಕೊಡಲಾಗುತ್ತದೆ.

ಆರು ಶಾಲೆಗಳಲ್ಲಿ ಕಾರ್ಯಕ್ರಮ
ಕಳೆದ ಒಂದು ವರ್ಷದಿಂದ ಈ ತಂಡ, ಆರು ಶಾಲೆಗಳಲ್ಲಿ ಕತೆ ಹೇಳುವ ಕಾರ್ಯಕ್ರಮ ನಡೆಸಿದೆ. ಭೈರಸಂದ್ರದ ಸೋಮೇಶ್ವರ ಶಾಲೆ, ಸ.ಹಿ.ಪ್ರಾ.ಶಾಲೆ ತಾವರೆಕರೆ, ಟ್ರಿನಿಟಿ ಹೈ ಸ್ಕೂಲ್‌ ಮಾರತಳ್ಳಿ, ಬಿಟಿಎಂ ಲೇಔಟ್‌ನ ಎಂ.ಇ.ಎಸ್‌. ಹೈ ಸ್ಕೂಲ್‌ ಹಾಗೂ ವಿದ್ಯಾಜ್ಯೋತಿ ವಿದ್ಯಾಸಂಸ್ಥೆ, ಮಾರತ್‌ಹಳ್ಳಿಯ ಭಾರತ್‌ ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ ಮಕ್ಕಳು ಇವರ ಕತೆ ಕೇಳಿ ಖುಷಿಯಾಗಿದ್ದಾರೆ. ಈ ಬಾರಿ ವಿಜಯನಗರದ ಸೆಂಟ್‌ ಮೇರೀಸ್‌ ಶಾಲೆಯ ಮಕ್ಕಳು ಕತೆ ಕೇಳಲಿದ್ದು, ಚಿಂತಕ ಎಸ್‌.ಸುಧಾಕರ್‌ ಕತೆ ಹೇಳಲಿದ್ದಾರೆ. 

ಕಥೆ ಹೇಳುವ ತಂಡ
 ಜಿ.ಪಿ. ರಾಮಣ್ಣ, ಜಿ. ಮಧುಸೂಧನ ನಾಯಕ, ಟಿ.ಎನ್‌. ಸಾಯಿಕುಮಾರ್‌, ಎ. ಪ್ರಭಾಕರ್‌, ಎಸ್‌. ಸುಧಾಕರ್‌, ಎಂ. ಶಶಿಧರ್‌ ಹೆಬೂÕರ್‌, ಕೆ. ಪರಮಶಿವಂ, ಪಿ.ಎಲ್‌.ರಮೇಶ್‌, ಶಿವನಕೆರೆ ಮನು ಕುಮಾರ್‌, ಸಿ. ಪ್ರಸನ್ನ ಕುಮಾರ್‌, ಆನಂದ ಕುಮಾರ್‌, ಮಲ್ಲಿಕಾರ್ಜುನ, ಟಿ.ಆರ್‌.ರಮೇಶ್‌ ಈ ತಂಡದಲ್ಲಿದ್ದಾರೆ. ವಿದ್ವಾಂಸರಾದ ಪ್ರೊ. ಜಿ. ಅಶ್ವತ್ಥ ನಾರಾಯಣ, ಕಥೆಗಾರರಾದ ಕೆ. ಎನ್‌. ಭಗವಾನ್‌, ಜಿ.ಎಸ್‌. ಸತ್ಯಮೂರ್ತಿ ಮುಂತಾದ ಹಿರಿಯರು, ಯಾವ ಕಥೆ ಆಯ್ಕೆ ಮಾಡಬೇಕೆಂದು ಸಲಹೆ-ಸೂಚನೆ ನೀಡುತ್ತಾರೆ. 

Advertisement

ನಾವ್ಯಾಕೆ ಕತೆ ಕೇಳಬೇಕು?
* ಕಲ್ಪನಾ ಶಕ್ತಿ ಮತ್ತು ಸಂವಹನಾ ಕೌಶಲ ವೃದ್ಧಿ
* ಏಕಾಗ್ರತೆ ಮತ್ತು ನೆನಪಿನ ಶಕ್ತಿ ಚುರುಕಾಗುತ್ತದೆ
*ಕೇಳುವ ತಾಳ್ಮೆ, ತಿಳಿಯುವ ಕೌಶಲ ವೃದ್ಧಿ 
*ಹೊಸ ಪದ, ಹೊಸ ನುಡಿಗಟ್ಟುಗಳ ಪರಿಚಯ
*ಬೌದ್ಧಿಕ ತಳಹದಿ, ಭಾವಪ್ರಪಂಚ ವಿಸ್ತರಣೆ
*ಕಲಿಯುವ ಕ್ರಮದಲ್ಲಿ ಧನಾತ್ಮಕ ಬೆಳವಣಿಗೆ
*ಪರಂಪರೆ, ಸಂಸ್ಕೃತಿ, ಸಂಪ್ರದಾಯಗಳ ಪರಿಚಯ 
*ಸೃಜನಶೀಲತೆ,  ಕ್ರಿಯಾಶೀಲತೆ ಹೆಚ್ಚುತ್ತದೆ
*ವಿಚಾರಶಕ್ತಿ, ಕುತೂಹಲ, ಆತ್ಮವಿಶ್ವಾಸ ವೃದ್ಧಿ
*ಸರಿ ತಪ್ಪುಗಳನ್ನು ಗುರುತಿಸುವ ಚಾತುರ್ಯ ಬೆಳೆಯುತ್ತದೆ
ಎಲ್ಲಿ?: ಸೆಂಟ್‌ ಮೇರೀಸ್‌ ಹೈಸ್ಕೂಲ್‌, ನಂ.57, 2ನೇ ಮುಖ್ಯರಸ್ತೆ, ಕೆ.ಜಿ.ಎಸ್‌.ಲೇಔಟ್‌, ಮಾರೇನಹಳ್ಳಿ, ವಿಜಯನಗರ
ಯಾವಾಗ?: ಅ.29, ಸೋಮವಾರ ಮಧ್ಯಾಹ್ನ 1.30

ಹೆಚ್ಚಿನ ಮಾಹಿತಿಗೆ: 9448202708,  ramannagp@gmail.com

Advertisement

Udayavani is now on Telegram. Click here to join our channel and stay updated with the latest news.

Next