Advertisement

ಕತೆ: ಕಿರುಬೆರಳು 

06:00 AM Nov 25, 2018 | |

ನಂದಗೋಕುಲದ ಬೀದಿಯಲ್ಲಿ ಹಣ್ಣು ಮುದುಕನೊಬ್ಬ ಈಗಲೋ ಆಗಲೋ ನೆಲಕ್ಕುರುಳುತ್ತಾನೆನೋ ಎಂಬಂತೆ ಭಾರವಾದ ಹೆಜ್ಜೆಗಳನ್ನಿಡುತ್ತ ನಡೆದುಕೊಂಡು ಬರುತ್ತಿದ್ದ. ನಂದಗೋಕುಲದ ಕೆಲವು ಮಕ್ಕಳು ಮರುಳನೊಬ್ಬ ಬಂದಿದ್ದಾನೆಂದು ಹೆದರಿಕೊಂಡಿದ್ದರು. ಆ ಮಕ್ಕಳಲ್ಲಿಯೇ ಇಬ್ಬರು ಸೇರಿಕೊಂಡು ಆ ಮುದುಕನನ್ನು ಕಲ್ಲು ಹೊಡೆದು ಓಡಿಸಲು ಪ್ರಯತ್ನ ಮಾಡಿದರು. ಆದರೆ, ಆ ಮುದುಕ ಇವರು ಕಲ್ಲು ಎಸೆಯುವುದನ್ನು ಗಮನಿಸದೆ ಬರುತ್ತಲೇ ಇದ್ದ. ಮಕ್ಕಳು ಭಯಭೀತರಾಗುವಂತಹ ಘೋರ ರೂಪವಂತೂ ಅವನದಾಗಿರಲಿಲ್ಲ. ವಯೋಸಹಜವಾಗಿ ಶರೀರ ಜರ್ಜರಿತವಾಗಿತ್ತು. ಚರ್ಮ ನೆರಿಗೆಗಟ್ಟಿತ್ತು. ನಿತ್ರಾಣವಾದ ಶರೀರ ಆಯಾಸಗೊಂಡಂತಿತ್ತು. ಬಿಳಿಯ ಗಡ್ಡದ ನಡುವೆ ಕಣ್ಣು, ಬಾಯಿ ಮತ್ತು ಮೂಗು ಚಿಕ್ಕದಾಗಿ ಕಾಣುತ್ತಿತ್ತು. ಆತನ ಕೈಯಲ್ಲೊಂದು ಸಣ್ಣ ಮಣ್ಣಿನ ಮಡಕೆ ಇತ್ತು. ಅದನ್ನು ಅತಿ ಜಾಗರೂಕತೆಯಿಂದ ನೆಲಕ್ಕೆ ಬೀಳದಂತೆ ಗಟ್ಟಿಯಾಗಿ ಹಿಡಿದುಕೊಂಡಿದ್ದ. ಆ ಮುದುಕ ಈ ಮಕ್ಕಳ ಚೇಷ್ಟೆಗೆ ಪ್ರತಿಕ್ರಿಯಿಸದೇ ಇದ್ದಾಗ ಆ ಮಕ್ಕಳಿಬ್ಬರಿಗೂ ಸ್ವಲ್ಪ ಧೈರ್ಯಬಂತು. ನಿಧಾನವಾಗಿ ಅವನ ಹತ್ತಿರ ಹೋದರು.

Advertisement

ಒಂದು ಕೈಯಲ್ಲಿ ಊರುಗೋಲನ್ನು ಹಿಡಿದಿದ್ದ ಆತ ಒಮ್ಮೆಗೆ ಅಲ್ಲಿಯೇ ನಿಂತು ಬಿಟ್ಟ. ನಿಂತವನು, ಆ ಊರುಗೋಲನ್ನು ನೆಲಕ್ಕೆಸೆದು, ಮಡಕೆ ಕೆಳಗೆ ಬೀಳದಂತೆ ಜಾಗರೂಕತೆಯಿಂದ ಅಲ್ಲಿಯೇ ಕುಳಿತ. ಮಡಕೆಯಿಂದ ನೀರು ಹೊರ ಚೆಲ್ಲುತ್ತಿದ್ದಂತೆ ಕಂಡಿತು. ಆ ಮಕ್ಕಳು ಎಸೆದ ಕಲ್ಲಿನಿಂದ ಮಡಕೆಗೆ ಸಣ್ಣದಾದ ತೂತಾಗಿತ್ತು. ಅದರಿಂದ ನೀರು ಸುರಿಯುತ್ತಿದ್ದನ್ನು ಕಂಡು ಅವನಿಗೆ ಬೇಸರ ಮೂಡಿತು. ಛೆ! ಈಗೇನು ಮಾಡಲಿ? ಎಂದುಕೊಳ್ಳುತ್ತ ಅತ್ತಿತ್ತ ನೋಡಿದ. ಆತನಿಗೆ ನೀರು ಸುರಿದು ಹೋಗದಂತೆ ತಡೆಯಲು ಬೇರೆ ಯಾವುದೇ ವಿಧಾನ ತಿಳಿಯದೆ, “ಗೋವಿಂದ’ ಎನ್ನುತ್ತ ಆ ತೂತಿಗೆ ತನ್ನ ಕಿರುಬೆರಳನ್ನು ತೂರಿಸಿ, ನೀರು ಹೊರಹೋಗದಂತೆ ತಡೆಹಿಡಿದ. ಅಷ್ಟು ಹೊತ್ತಿಗಾಗಲೇ ಆ ಮಕ್ಕಳಿಬ್ಬರು ಆತನ ಬಳಿಗೆ ಬಂದರು. “”ಓಹ್‌! ಅಜ್ಜಯ್ಯ ಇವರು” ಎಂದು ಆ ಇಬ್ಬರು ಹುಡುಗರು ತಮ್ಮತಮ್ಮಲ್ಲೇ ಮಾತನಾಡಿಕೊಂಡು, ಆ ಬಳಿಕ ಈತನನ್ನು ಮಾತನಾಡಿಸಲು ಮುಂದಾದರು.

“”ಅಜ್ಜಯ್ಯ, ಎಲ್ಲಿಯವರು ನೀವು? ಯಾವ ಕಡೆ ಹೋಗಬೇಕು? ನಮ್ಮಿಂದ ತಪ್ಪಾಯಿತು. ನಾವು ಎಸೆದ ಕಲ್ಲು ನಿಮಗೆ ತಾಗಿತೇ? ಕ್ಷಮಿಸಿ ಅಜ್ಜಯ್ಯ” ಎಂದಾಗ ಆ ಅಜ್ಜಯ್ಯನಿಗೆ ಈವರೆಗೆ ಕೇಳಿರದ, ತಾನೂ ಹೇಳಿರದ ಈ ಕ್ಷಮಿಸಿ ಎಂಬ ಪದ ಮೊದಲ ಬಾರಿಗೆ ಕಿವಿಗೆ ಬಿದ್ದಂತಾಯಿತು! “”ನಾನು ದೂರದ ಊರಿನವನು. ನಂದಗೋಕುಲವೆಲ್ಲಿದೆ? ನಾನು ಕೃಷ್ಣನನ್ನು ನೋಡಬೇಕಿತ್ತು. ಆತ ಎಲ್ಲಿದ್ದಾನೆ?”
“”ದೂರದ ಊರು ಅಂದರೆ? ಅದಕ್ಕೆ ಹೆಸರಿಲ್ಲವೇನು? ನಿಮ್ಮ ಹೆಸರೇನು? ನಮ್ಮ ಕೃಷ್ಣ ನಿಮಗೇನಾಗಬೇಕು? ನೀವು ಒಬ್ಬರೇ ಬಂದಿದ್ದೇಕೆ?” ಆ ಅಜ್ಜಯ್ಯನಿಗೆ ಈ ಮಕ್ಕಳು ಎಷ್ಟೊಂದು ಪ್ರಶ್ನೆ ಕೇಳುತ್ತಾರಪ್ಪಾ! ಅನ್ನಿಸಿತು. 
“”ದೂರದ ಊರು ಅಷ್ಟೆ. ನಾನು ವೃದ್ಧನಲ್ಲವೇ? ನನಗೆ ಊರಿನ ಹೆಸರು ನೆನಪಾಗುತ್ತಿಲ್ಲ. ನನಗೆ ಒಮ್ಮೆ ಕೃಷ್ಣನನ್ನು ಕೊನೆಯದಾಗಿ ಕೃಷ್ಣನಾಗಿ ನೋಡಬೇಕೆಂಬ ಆಸೆ. ಅದಕ್ಕೆ ಇಲ್ಲಿಯ ತನಕ ಬಂದಿದ್ದು”.
ಮಕ್ಕಳಿಗೆ ಕೃಷ್ಣನನ್ನು ಕೃಷ್ಣನಾಗಿ ನೋಡುವುದು ಅಂದರೆ ಏನು? ಎಂಬುದು ಅರ್ಥವಾಗಲಿಲ್ಲ. ಆ ಬಗ್ಗೆ ಕೇಳಲೂ ಹೋಗಲಿಲ್ಲ.

“”ಹೌದಾ, ನಿಮ್ಮ ಹೆಸರನ್ನು ಹೇಳೇ ಇಲ್ಲವಲ್ಲ, ಹೆಸರೇನು? ಹೇಳಿ”.
“”ನನ್ನ ಹೆಸರು… ಹೆಸರು…”
“”ಅಯ್ಯೋ! ನಿಮ್ಮ ಹೆಸರೂ ಮರೆತು ಹೋಗಿದೆಯೇ? ಪಾಪ”.
“”ಹಮ…… ಹಮ…… ನನ್ನ ಹೆಸರು ಮೋಕ್ಷದೀಪ” ಎಂದ ಆ ಅಜ್ಜಯ್ಯ ತಡವರಿಸುತ್ತ.
“”ನೀವು ಕೃಷ್ಣನನ್ನು ಕಂಡಿದ್ದೀರಾ?”
“”ಹೌದು. ಆತ ನಮ್ಮ ಮಿತ್ರ. ಇಲ್ಲೇ ಹತ್ತಿರದಲ್ಲೇ ನಂದಗೋಕುಲದಲ್ಲಿದ್ದಾನೆ. ಬನ್ನಿ  ನಮ್ಮ ಜೊತೆಗೆ ನಾವು  ಕರೆದೊಯ್ಯುತ್ತೇವೆ”.
“”ಸರಿ”.
ಮೂವರೂ ಅಲ್ಲಿಂದ ನಂದಗೋಕುಲದತ್ತ ಹೊರಟರು.
“”ಅಜ್ಜಯ್ಯ ನಿಮ್ಮ ಕೈಯಲ್ಲಿರುವ ಮಡಕೆಯಲ್ಲಿ ಏನಿದೆ?”
“”ಅದರಲ್ಲಿ ಕುಡಿಯುವ ನೀರಿದೆ ಅಷ್ಟೆ, ಮತ್ತೇನಿಲ್ಲ”.
ಆದರೂ ಮಕ್ಕಳಿಗೆ ಆ ಮಡಕೆಯೊಳಗೆ ಬೇರೆ ಏನೋ ಇದೆ. ಈ ಅಜ್ಜಯ್ಯ ಸುಳ್ಳು ಹೇಳುತ್ತಿ¨ªಾನೆ ಅನ್ನಿಸಿತು. ಅದನ್ನು ನೋಡುವ ಪ್ರಯತ್ನ ಮಾಡಿದರಾದರೂ ಸಾಧ್ಯವಾಗಲಿಲ್ಲ.

ನಂದಗೋಕುಲಕ್ಕೆ ಬಂದು ನಿಲ್ಲುತ್ತಿದ್ದಂತೆ ಆ ಮಕ್ಕಳು ಮೋಕ್ಷದೀಪನನ್ನು ಬಾಗಿಲಲ್ಲಿಯೇ ನಿಲ್ಲಿಸಿ, ಯಶೋದೆಯ ಹತ್ತಿರ ಹೋಗಿ ಈತ ಬಂದಿರುವ ವಿಷಯವನ್ನು ತಿಳಿಸಿದರು.
ಯಶೋದೆಗೆ ಒಮ್ಮೆ ಭಯವಾಯಿತು. ಯಾರಾದರೂ ಮಾರುವೇಷದಲ್ಲಿ ಬಂದಿರಬಹುದೆ? ನನ್ನ ಕಂದನನ್ನು ಹೊತ್ತೂಯ್ಯುವ ಯೋಚನೆಯಿರಬಹುದೆ? ಎಂಬೆಲ್ಲ ಪ್ರಶ್ನೆ ಹುಟ್ಟಿತಾದರೂ ಪಾಪ ಯಾರೋ ಇಳಿವಯಸ್ಸಿನವರಂತೆ, ಮಗುವನ್ನು ನೋಡಲು ಬಂದಿದ್ದಾರೆ. ಹೀಗೆಲ್ಲ ನಾನು ಯೋಚಿಸಬಾರದು ಎಂದುಕೊಳ್ಳುತ್ತ ಮೋಕ್ಷದೀಪ ಇದ್ದಲ್ಲಿಗೆ ಬಂದಳು. 

Advertisement

ಮೋಕ್ಷದೀಪನನ್ನು ನೋಡಿದವಳೇ, “”ಛೆ! ಸುಖಾಸುಮ್ಮನೆ ಅನ್ಯಥಾ ಭಾವಿಸಿಬಿಟ್ಟೆ. ಈ ಹಣ್ಣು ಮುದುಕನಿಗೆ ನನ್ನ ಕಂದನನ್ನು ನೋಡುವ ಆಸೆಯಿರಬೇಕು. ಈತನಿಂದ ಯಾವುದೇ ತೊಂದರೆಯಾಗದು” ಎಂದುಕೊಂಡು ಆತನನ್ನು ಒಳಕ್ಕೆ ಕರೆದು ಉಪಚರಿಸಿದಳು.
“”ಬನ್ನಿ, ಒಳಕ್ಕೆ ಬನ್ನಿ. ದೂರದಿಂದ ಬಂದವರಂತೆ ಕಾಣುತ್ತಿದ್ದೀರಿ. ತುಂಬಾ ಬಸವಳಿದಿದ್ದೀರಿ. ತಗೊಳ್ಳಿ ಈ ನೀರನ್ನು ಕುಡಿದು ದಣಿವಾರಿಸಿಕೊಳ್ಳಿ”.
ಮೋಕ್ಷದೀಪ, “”ಅಬ್ಟಾ! ಈಕೆಯಾದರೂ ಎಷ್ಟು ಕರುಣಾಮಯಿಯಪ್ಪ. ಇಂತಹ ಕರುಣೆಯ ಕುರುಹೂ ನನ್ನ ಹೃದಯದಲ್ಲಿ ಇಲ್ಲಿಯತನಕ ಹುಟ್ಟಲಿಲ್ಲವಲ್ಲ” ಎಂದುಕೊಂಡು ಅವಳ ಜೊತೆ ಮಾತಿಗಿಳಿದ.

“”ನೀನು ಹೇಳಿದಂತೆ ತುಂಬಾ ದೂರದಿಂದಲೇ ಬಂದಿದ್ದೇನೆ. ಇಲ್ಲಿಗೆ ಬರಲು ಇಷ್ಟು ವರ್ಷವಾಯಿತು. ನಿನ್ನ ಕಂದ ಕೃಷ್ಣನನ್ನು ನೋಡದ ಹೊರತು ನನಗೆ ದಣಿವಾರುವುದಿಲ್ಲ. ಬಾಯಾರಿಕೆಗೂ ಬೇಡ. ಕೃಷ್ಣನೆಲ್ಲಿದ್ದಾನೆ?”
“ಈ ಅಜ್ಜಯ್ಯನಿಗೆ ನನ್ನ ಮಗುವಿನ ಮೇಲೆ ಇಷ್ಟೊಂದು ಮಮತೆಯೇ? ಈತ ಬಂಧುವೂ ಅಲ್ಲ; ಬಳಗವೂ ಅಲ್ಲ. ಸ್ವಂತ ಸೋದರಮಾವನೇ ಕೃಷ್ಣನ ವೈರಿ. ಆದರೆ, ಎಲ್ಲಿಂದಲೋ ಒಮ್ಮೆಯಾದರೂ ಕೃಷ್ಣನನ್ನು ನೋಡಬೇಕೆಂದು ಇಲ್ಲಿಯ ತನಕ ಹುಡುಕಿಕೊಂಡುಬಂದ ಈ ಮುದಿಜೀವವೆಲ್ಲಿ? ಸೋದರಿಯ ಪುತ್ರನನ್ನೇ ದ್ವೇಷಿಸುವ ಆ ದುರುಳ ಕಂಸನೆಲ್ಲಿ? ಎಷ್ಟೊಂದು ವಿಪರ್ಯಾಸಗಳಿವೆ ಈ ಪ್ರಪಂಚದಲ್ಲಿ?’ ಎಂದು ಮನಸ್ಸಿನಲ್ಲಿಯೇ ಹೇಳಿಕೊಳ್ಳುತ್ತ, “”ನಿಮ್ಮ ಹೆಸರೇನು, ಯಾವ ಊರು?” ಎಂದಳು.

“”ಊರು ನೆನಪಿಲ್ಲ. ನನ್ನ ಹೆಸರನ್ನಷ್ಟೇ ಹೇಳಬಲ್ಲೆ. ನನ್ನ ಹೆಸರು ಮೋಕ್ಷದೀಪ. ಸಾಯುವುದರೊಳಗೆ ಒಮ್ಮೆಯಾದರೂ ಕೃಷ್ಣನನ್ನು ನೋಡಿಯೇ ತೀರಬೇಕೆಂಬ ಹೆಬ್ಬಯಕೆಯನ್ನು ಹೊತ್ತು ಇಲ್ಲಿಗೆ ಬಂದಿದ್ದೇನೆ”.
ಯಶೋದೆಗೆ ಈತನ ಹೆಸರು ವಿಶಿಷ್ಟವಾಗಿದೆ ಎಂದೆನಿಸಿತು. ಅಲ್ಲದೆ ಈತ ಒಗಟಾಗಿ ಮಾತನಾಡುತ್ತಿದ್ದಾನೆ ಎಂತಲೂ ಅನಿಸಿತು.

    “”ಸರಿ, ನೀವು ಇಲ್ಲಿಯೇ ಕುಳಿತುಕೊಂಡಿರಿ. ನಾನು ಈಗಲೇ ಕೃಷ್ಣನನ್ನು ನಿಮ್ಮ ಬಳಿ ಕಳುಹುತ್ತೇನೆ”.
ಮೋಕ್ಷದೀಪ ಆಯಿತು ಎಂಬಂತೆ ತಲೆಯಲ್ಲಾಡಿಸಿದ.
.
ಕೃಷ್ಣ ಬರುತ್ತಿರುವುದನ್ನು ಕಂಡು ಮೋಕ್ಷದೀಪನಿಗೆ ಮೋಕ್ಷವೇ ದೊರೆಯಿತೇನೋ ಎಂಬಂತಾಯಿತು. ಕೃಷ್ಣ ಹತ್ತಿರ ಬರುತ್ತಿದ್ದಂತೆ ಆತನನ್ನು ತನ್ನ ವಿಶಾಲವಾದ ಬಾಹುಗಳಲ್ಲಿ ಬಾಚಿ ತಬ್ಬಿಕೊಂಡ. ಆ ಕ್ಷಣ ಮೋಕ್ಷದೀಪನಿಗೆ ರೋಮಾಂಚನವಾಯಿತು. ಒಂದು ಕ್ಷಣ ಇಲ್ಲಿಯತನಕ ಆತ ಅನುಭವಿಸದೇ ಇದ್ದ ಆನಂದದ ಅನುಭೂತಿ ಅವನಿಗಾಯಿತು. ಕೆಲವು ಕ್ಷಣ ಹಾಗೆಯೇ ಕೃಷ್ಣನನ್ನು ಅಪ್ಪಿಕೊಂಡೇ ಇದ್ದ.
“”ಅಜ್ಜಯ್ಯ, ಇದೇನಿದು ನಿಮ್ಮ ಕೈಯಲ್ಲಿ ಮಡಕೆ? ಅದರಲ್ಲೇನಿದೆ?” ಎಂದು ಕೃಷ್ಣ ಕೇಳಿದಾಕ್ಷಣ ಮೋಕ್ಷದೀಪನಿಗೆ ಆನಂದವಾಗಿ ಆ ಮಡಕೆಯನ್ನು ಕೃಷ್ಣನ ಕೈಗಿಡುತ್ತ ಹೇಳಿದ.
“”ನಿನಗಿಷ್ಟವಾದ ಬೆಣ್ಣೆಯಿದೆ. ಬೇಗ ತೆಗೆದುಕೋ. ಈ ಮಡಕೆ ತೂತಾಗಿದೆ. ನೀರು ಚೆಲ್ಲಿಹೋಗದಿರಲೆಂದು ನನ್ನ ಕಿರುಬೆರಳಿನಿಂದ ಆ ತೂತನ್ನು ಮುಚ್ಚಿದ್ದೇನೆ. ಹಿಡಿ… ಹಿಡಿ…”” ಎಂದು ತನ್ನ ಕೈಯಾರೆ ಬೆಣ್ಣೆಯನ್ನು ತಿನ್ನಿಸಿದ. 
ಮೋಕ್ಷದೀಪನು ಬೆಣ್ಣೆಯನ್ನೆಲ್ಲ ತಿನ್ನಿಸಿಯಾದ ಬಳಿಕ ಆ ಮಡಕೆಯ ತೂತಿನಿಂದ ತನ್ನ ಕಿರುಬೆರಳನ್ನು ತೆಗೆದ. ಅದನ್ನು ನೋಡುತ್ತಿದ್ದ ಕೃಷ್ಣ , “”ಅಜ್ಜಯ್ಯ, ನಿಮ್ಮ ಬೆರಳಿನಿಂದ ರಕ್ತ ಬರುತ್ತಿದೆ” ಎನ್ನುತ್ತ ಮೋಕ್ಷದೀಪನ ಕೈಯನ್ನು ಎಳೆದುಕೊಂಡು ತನ್ನ ಶಾಲನ್ನು ತೆಗೆದು ಆ ಬೆರಳಿಗೆ ಸುತ್ತಿದ. 

“”ಅಜ್ಜಯ್ಯ, ಈಗ ನೋವು ಶಮನವಾಯಿತೇ, ಈ ಶಾಲನ್ನು ನಾಳೆಯ ತನಕ ತೆಗೆಯಬೇಡಿ” ಎಂದು ತಾಕೀತು ಮಾಡಿದ.
ಮೋಕ್ಷದೀಪನ ಕಣ್ಣಲ್ಲಿ ನೀರು ಬಂತು. ಅದನ್ನು ತೋರಿಕೊಳ್ಳದೆ ಕೃಷ್ಣನನ್ನು ಮತ್ತೆ ಎತ್ತಿ ಮುದ್ದಾಡಿದ.
“”ಅಜ್ಜಯ್ಯ, ನಿಮ್ಮ ಹೆಸರೇನು? ನನ್ನನ್ನೇ ಯಾಕೆ ಹುಡುಕಿಕೊಂಡು ಬಂದಿದ್ದು?”
“”ಮುದ್ದುಕಂದ, ನಾನು ಮೋಕ್ಷದೀಪ. ನಿನ್ನನ್ನು ನೋಡುವ ಆಸೆಯಿಂದ ಇಲ್ಲಿಯತನಕ ಬಂದೆ. ಎಲ್ಲೇಲ್ಲೂ ನಿನ್ನ ಮಹಿಮೆಯನ್ನು ಕೊಂಡಾಡುವುದನ್ನು ಕೇಳಿದ ನನಗೆ ಒಮ್ಮೆ ನಿನ್ನನ್ನು ಮುದ್ದಾಡಬೇಕೆಂಬ ಆಕಾಂಕ್ಷೆಯುಂಟಾಗಿ ನಿನ್ನ ಬಳಿ ಬಂದೆ. ಇವತ್ತಿಗೆ ನನ್ನ ಜನ್ಮ ಪಾವನವಾಯಿತು. ಇನ್ನು ಬದುಕುವ ಇಚ್ಛೆ ನನಗಿಲ್ಲ”.
“”ಅಜ್ಜಯ್ಯ, ಏನೆಲ್ಲ ಹೇಳಬೇಡಿ! ನನಗೆ ಅರ್ಥವಾಗದು. ನಿಮ್ಮ ಹೆಸರು ಏನೆಂಬುದೇ ಅರ್ಥವಾಗುತ್ತಿಲ್ಲ. ಮೋಕ್ಷದೀಪ ಎಂದರೇನು?”
ಮೋಕ್ಷದೀಪನಿಗೆ ನಗು ಬಂತು.

“”ಮೋಕ್ಷ ಎಂದರೆ ಮುಕ್ತಿ. ಮುಕ್ತಿ ಎಂದರೆ ಬಂಧನದಿಂದ ಬಿಡುಗಡೆ. ದೀಪ ಎಂದರೆ ಬೆಳಕು ಅಥವಾ ಮಾರ್ಗವನ್ನು ತೋರಿಸುವ ಸಾಧನ. ನನಗೀಗ ಈ ಜನ್ಮದಿಂದ ಬಿಡುಗಡೆ ಬೇಕು. ಆ ಮುಕ್ತಿಯ ಪಥವನ್ನು ಅರಸುತ್ತ ಬಂದವನು ನಾನು, ಮೋಕ್ಷದೀಪ”.
“”ನನಗೆ ಇದು ಅರ್ಥವಾಗದು. ಅಜ್ಜಯ್ಯ, ನನ್ನ ಸೋದರ ಮಾವನಿಗೆ ನನ್ನನ್ನು ಕಂಡರೆ ಆಗದು. ನನಗೋ ಮಾವನ ತೊಡೆಯೇರಿ ಕುಳಿತುಕೊಳ್ಳಬೇಕು, ಹೆಗಲೇರಿ ಮಾವನೂರನ್ನು ಸುತ್ತಬೇಕೆಂಬ ಆಸೆ. ನಿಮ್ಮ ತೊಡೆಯೇರಿ ಕುಳಿತುಕೊಳ್ಳಲೇ? ನಿಮಗೆ ಕಷ್ಟವಾಗುವುದೇ?”
“”ಇಲ್ಲ ಕಂದ, ಇಲ್ಲ. ಬಾ ನನ್ನ ತೊಡೆಯೇರಿ ಕುಳಿತುಕೋ. ಹೆಗಲನ್ನೇರು. ಈ ನಂದಗೋಕುಲವನ್ನು ಸುತ್ತಿಸುತ್ತೇನೆ”.
ಕೃಷ್ಣ ಆತನ ತೊಡೆಯೇರಿ ಕುಳಿತ, ಹೆಗಲೇರಿ ಇಡೀ ನಂದಗೋಕುಲವನ್ನು ಸುತ್ತಿದ. ಸುಮಧುರವಾದ ಭಾವವನ್ನು ಮಗುವಾಗಿ ಕೃಷ್ಣನೂ, ಅಜ್ಜನಾಗಿ ಮೋಕ್ಷದೀಪನೂ ಅನುಭವಿಸಿ ಆನಂದಿಸಿದರು. 
ಸೂರ್ಯಾಸ್ತವಾಗುತ್ತ ಬಂದಿತ್ತು. ಮೋಕ್ಷದೀಪ ಮತ್ತೂಮ್ಮೆ ಕೃಷ್ಣನನ್ನು ಬಿಗಿದಪ್ಪಿ ಮು¨ªಾಡಿ ಭಾರವಾದ ಮನಸ್ಸಿನಿಂದ ತನ್ನ ಊರಿನತ್ತ ಹೊರಟ.

 ಕೃಷ್ಣ ಆತನ ಬೆರಳಿಗೆ ಸುತ್ತಿದ ಶಾಲು ಹಾಗೆಯೇ ಇತ್ತು.
.
ಕಂಸನಿಗೆ ಇನ್ನು ಕಾಯುವುದರಲ್ಲಿ ಅರ್ಥವಿಲ್ಲ ಎಂದೆನಿಸಿ ಆ ಕೂಡಲೇ ಅಕ್ರೂರನನ್ನು ಕರೆದು ಕೃಷ್ಣನನ್ನು ಬಿಲ್ಲಹಬ್ಬಕ್ಕೆ ಕರೆಯಲು ಹೇಳಿದನಲ್ಲದೆ “ಆತನು ಇಲ್ಲಿಗೆ ಬರುವಂತೆ ಮಾಡುವ ಜವಾಬ್ದಾರಿ ನಿನ್ನದು, ಇದು ನನ್ನ ಕಟ್ಟಾಜ್ಞೆ’ ಎಂದು ಕಟುವಾಗಿ ಹೇಳಿದ್ದ. ಇದಕ್ಕೆ ಒಪ್ಪಿದ ಅಕ್ರೂರ ಕಂಸನ ಕ್ರೂರತೆಯ ಬಗೆಗೆ ಅರಿವಿದ್ದರೂ ಕೃಷ್ಣನನ್ನು ಬಿಲ್ಲುಹಬ್ಬಕ್ಕೆ ಆಮಂತ್ರಿಸಿ, ಆತ ಮಧುರೆಗೆ ಬರುವಂತೆ ಮಾಡಿದ್ದ. ಅಲ್ಲದೆ ನಾಳೆಯೇ ಕೃಷ್ಣ ಬರುತ್ತಾನೆಂಬುದನ್ನು ಕಂಸನಿಗೆ ಹೇಳಿದಾಗ ಆತ ಅಟ್ಟಹಾಸದಿಂದ ಗಹಗಹಿಸಿ ನಕ್ಕುಬಿಟ್ಟ. ಇದರಲ್ಲಿ ಕ್ರೌರ್ಯವೂ ಇತ್ತು, ವ್ಯಂಗ್ಯವೂ ಇತ್ತು; ಏನನ್ನೋ ಸಾಧಿಸಿಯೇ ಬಿಟ್ಟ ನಿಟ್ಟುಸಿರೂ ಇತ್ತು. ಈ ನಗುವಿನ ಹಿಂದೆ ಅಡಗಿದ ಸತ್ಯ ಮಾತ್ರ ಕಂಸನ ಅಂತರಂಗಕ್ಕಷ್ಟೇ ಗೊತ್ತಿತ್ತು!

ಪಾಕಪಂಡಿತರಿಗೆ ತನಗಿಷ್ಟವಾದ ಖಾದ್ಯವನ್ನೆಲ್ಲ ರಾತ್ರಿಯೂಟಕ್ಕೆ ಮಾಡಿ ಬಡಿಸುವಂತೆ ಹೇಳಿದ. ಪಾಕಪಂಡಿತರು ಕಂಸನ ಆಣತಿಯಂತೆ ಸಕಲಭೋಜ್ಯಗಳನ್ನು ಆತನ ಇದಿರು ತಂದಿಟ್ಟು ಹೋದರು. ಎಲ್ಲವನ್ನು ನೋಡಿ ಹರುಷದಿಂದ ತಿನ್ನಲು ಕುಳಿತ. ಇಲ್ಲ! ಕಂಸನಿಗೆ ಅಲ್ಲಿ ಬಡಿಸಿದ್ದೆಲ್ಲವೂ ಇಷ್ಟವಾದರೂ ಯಾವೊಂದು ತಿನಿಸನ್ನು ತಿನ್ನಲಾಗಲಿಲ್ಲ. ಹೊಟ್ಟೆ ತುಂಬಿಯೇ ಹೋಗಿದೆ ಎಂದೆನಿಸಿತು. ಆದರೆ, ಏನನ್ನೂ ತಿಂದಿರಲಿಲ್ಲ. ಇಲ್ಲ, ಏನನ್ನೂ ತಿನ್ನಲಾಗದೆ ತನ್ನ ಶಯನಾಗಾರಕ್ಕೆ ಹೋಗಿ ಮಲಗಿಬಿಟ್ಟ.
.
ಮಲಗಿದ್ದ ಕಂಸನಿಗೆ ತಟ್ಟನೆ ಎಚ್ಚರವಾಯಿತು. ಬಹುವಾದ ಬಾಯಾರಿಕೆಯಿಂದ ಬಳಲಿದ. ಶಯನಗೃಹದಲ್ಲಿದ್ದ ಬಿಂದಿಗೆಯಲ್ಲಿ ನೀರು ಇರಲಿಲ್ಲ. ಭಟರನ್ನು ಕರೆಯೋಣವೆಂದು ಮುಂದಾದರೆ ಸ್ವರವೇ ಹೊರಡುತ್ತಿಲ್ಲ. “ಅಯ್ಯೋ ಏನಾಗಿಬಿಟ್ಟಿತು ನನಗೆ?’ ಎಂದು ಪರಿತಪಿಸಿದ. ಶಯನಗೃಹದಿಂದ ಹೊರ ಹೋಗಲೆಂದು ಬಾಗಿಲನ್ನು ತೆರೆದರೆ ಪರಮಾಶ್ಚರ್ಯ. ಬಾಗಿಲಿನ ಹೊರಗೆ ವಿಶಾಲವಾದ ಮೈದಾನವಿದೆ. ಬೆಳದಿಂಗಳು ಹರಡಿಕೊಂಡಿದೆ. ಇಡಿಯ ಜಗತ್ತೇ ಮೌನವಾಗಿದೆ. ಕಂಸನಿಗೆ ಭಯವಾಗಿ ಕಣ್ಣುಮುಚ್ಚಿ ಹಿಂಗಾಲಿನಲ್ಲಿಯೇ ಮತ್ತೆ ಶಯನಗೃಹಕ್ಕೆ ಕಾಲಿಟ್ಟು, ಬಾಗಿಲನ್ನು ಗಟ್ಟಿಯಾಗಿ ಹಾಕಿ, ಹಾಗೆಯೇ ಒಂದು ಕ್ಷಣ ಬಾಗಿಲಿಗೆ ಒರಗಿ ನಿಂತ. ನಿಧಾನವಾಗಿ ನಿಟ್ಟುಸಿರು ಬಿಡುತ್ತ ಕಣ್ಣುಬಿಟ್ಟು ನೋಡಿದರೆ ಹಿಂದೆ ಬಾಗಿಲೂ ಇಲ್ಲ; ಮುಂದೆ ಶಯನಗೃಹವೂ ಇಲ್ಲ. ಕಂಸನ ಎದೆ ಒಡೆದುಹೋಗುವಂತೆ ಹೊಡೆದುಕೊಳ್ಳತೊಡಗಿತು. ಬಟಾಬಯಲಿನ ಮಧ್ಯದಲ್ಲಿ ಬಾಯಾರಿಕೆಯಿಂದ ಕೂಗುತ್ತ ದಿಕ್ಕುದಿಶೆಯಿಲ್ಲದೆ ನಡೆದ. ದೂರದಲ್ಲಿ ಹಣ್ಣುಗಳು ತುಂಬಿಕೊಂಡಿದ್ದ ಮರವೊಂದು ಕಂಡಿತು. ಹಸಿವನ್ನು ನೀಗಿಸಿಕೊಳ್ಳಬೇಕೆಂದುಕೊಂಡು ಆ ಮರದತ್ತ ನಡೆದೇ ನಡೆದ. ಆತ ಮರದ ಸಮೀಪ ಹೋಗುತ್ತಿದ್ದಂತೆ ಆ ಮರ ಮಾಯವಾಗಿಬಿಟ್ಟಿತು! ಭಯಗ್ರಸ್ತನಾಗಿದ್ದ ಕಂಸನ ಗಂಟಲು ಸಂಪೂರ್ಣವಾಗಿ ಒಣಗುತ್ತಿತ್ತು. ಬೆಳದಿಂಗಳು ಬಿಸಿಲಿನಂತೆ ಸುಡತೊಡಗಿದಾಗ ಕಂಸ ಕಂಗಾಲಾದ. ಅಲ್ಲಿಯೇ ಕುಸಿದು ಮಂಡಿಯೂರಿ ಕುಳಿತ. ಇದ್ದಕ್ಕಿದ್ದಂತೆ ಬಿರುಗಾಳಿಯೊಂದು ಧೂಳೆಬ್ಬಿಸಿತು. ಕಂಸನು ಕಣ್ಣುಮುಚ್ಚಿ ಕುಳಿತ. ಗಾಳಿಯ ವೇಗ ಕಡಿಮೆಯಾದಾಗ ನಿಧಾನವಾಗಿ ಕಣ್ಣುತೆರೆದ. ದೂರದಲ್ಲಿ ಯಾರೋ ಬರುತ್ತಿರುವುದು ಕಂಡಿತು. ಇದು ನಿಜವೇ? ಎಂಬ ಪ್ರಶ್ನೆ ಅವನೊಳಗೆ ಉದ್ಭವಿಸಿ, ಕಂಸ ತನ್ನ ಕಣ್ಣುಗಳನ್ನು ಉಜ್ಜಿ ಕೊಂಡು ನೋಡಿದ. ಅದು ನಿಜವೇ ಆಗಿತ್ತು. ಅಪರಿಚಿತನೊಬ್ಬ ಕಂಸನಿ¨ªೆಡೆಗೆ ಬರುತ್ತಿದ್ದ. ಕಂಸನಿಗೆ ಸ್ವಲ್ಪ ಧೈರ್ಯ ಬಂತು. ಆತನನ್ನೇ ದಿಟ್ಟಿಸುತ್ತ ಇದ್ದ. ಆತ ಹತ್ತಿರವಾಗುತ್ತಿದ್ದಂತೆ ಆತನ ರೂಪ ಕಾಣತೊಡಗಿತು. ಒಂದು ಕೈಯಲ್ಲಿ ಊರುಗೋಲು ಇನ್ನೊಂದು ಕೈಯಲ್ಲಿ ಮಡಕೆ ಇತ್ತು. ಆ ಮಡಕೆಯಿಂದ ನೀರು ಹೊರಕ್ಕೆ ಚೆಲ್ಲುತ್ತಿದ್ದುದನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಕಂಸನಿಗೆ ಇನ್ನೇನು ತನ್ನ ಪ್ರಾಣ ಹೋಗೇ ಬಿಟ್ಟಿತು ಎಂದುಕೊಂಡವನಿಗೆ ಜೀವ ಬಂದಂತಾಯಿತು. 

ಕಂಸನ ದೃಷ್ಟಿ ಕೇವಲ ಆ ನೀರಿರುವ ಮಡಿಕೆಯ ಮೇಲಿತ್ತು. ಮೊಣಕಾಲೂರಿ ಕುಳಿತಿದ್ದ ಕಂಸನ ಹತ್ತಿರವೇ ಬಂದ ಆ ವ್ಯಕ್ತಿಯ ಮುಖವನ್ನು ನೋಡುವ ಮೊದಲೇ ಮಡಕೆಯನ್ನು ಎಳೆದುಕೊಂಡು ಕಂಸ ಅದರಲ್ಲಿದ್ದ ನೀರನ್ನು ಕುಡಿದ. ಬಳಿಕ ಸಾವರಿಸಿಕೊಂಡು ಆ ವ್ಯಕ್ತಿಯ ಮುಖವನ್ನು ನೋಡಿದ ಕಂಸನಿಗೆ ಪರಮಾಶ್ಚರ್ಯವೂ ಆಯಿತು; ಭಯವೂ ಆಯಿತು.
“”ಯಾರು? ಯಾರು ನೀನು?” ಎಂದು ಕೇಳುತ್ತ ತಡವರಿಸಿದ.
“”ನಾನ್ಯಾರೆಂಬುದನ್ನು ನೀನು ಅರಿತಿಲ್ಲವೇನು? ನಾನು ಮೋಕ್ಷದೀಪ?”
ಕಂಸನಿಗೆ ಮತ್ತೆ ದಿಗಿಲಾಯಿತು. ಈತನೂ ಅದೇ ಹೆಸರನ್ನು ಹೇಳುತ್ತಿದ್ದಾನೆ. ಅವನ ಕೈಯನ್ನು ನೋಡಿದ. “”ಹೌದು, ಅದೇ ಬಟ್ಟೆ,  ಕೃಷ್ಣ ಮೋಕ್ಷದೀಪನ ಬೆರಳಿಗೆ ಸುತ್ತಿದ ಶಾಲು ಇದೇ. ಇದು ಹೇಗೆ ಸಾಧ್ಯ?” ಎಂದುಕೊಂಡವನ ಮನದಲ್ಲಿ ತಲೆ ಒಡೆದು ಹೋಗುವಷ್ಟು ಪ್ರಶ್ನೆಗಳು ಹುಟ್ಟುತ್ತಲೇ ಇದ್ದುವು.
ಕಂಸನ ದನಿ ನಡುಗುತ್ತಿತ್ತು. “”ನೀನು ಎಲ್ಲಿಂದ ಬಂದವನು?” ಎಂದ.

“”ನಾನು ನಂದಗೋಕುಲದಿಂದ ಬಂದೆ. ಕೃಷ್ಣನನ್ನು ನೋಡಲು ಹೋಗಿದ್ದೆ. ನಿನ್ನ ಮೊಗದಲ್ಲೇಕೆ ಭಯವಡಗಿದೆ?”
ಕಂಸನಿಗೆ ಎಲ್ಲವೂ ವಿಚಿತ್ರವಾಗಿ ಕಂಡಿತು. ಕೃಷ್ಣನನ್ನು ನೋಡಲು ಹೋದವನು ನಾನು. ಆಗ ತಾನು ತೊಟ್ಟ ರೂಪವೇ ಈ ಮೋಕ್ಷದೀಪನ ರೂಪ. ನನ್ನ ಕೈಗೆ ಆಗಿದ್ದ ಗಾಯಕ್ಕೆ ಕೃಷ್ಣ ತೊಡಿಸಿದ ಬಟ್ಟೆ ನನ್ನ ಕೈ ಬೆರಳಿನಲ್ಲೂ ಇದೆ. ಇವನ ಬೆರಳಿನಲ್ಲೂ ಇದೆ. ಇದೆಂಥ ವಿಚಿತ್ರ. ಯಾವುದೋ ದುಷ್ಟಶಕ್ತಿ ನನ್ನ ಮೇಲೆ ಆಕ್ರಮಣಕ್ಕೆ ಬಂದಿರಬೇಕು ಎಂದುಕೊಳ್ಳುತ್ತ ಕಂಸ ಸಾವೇ ಈ ರೂಪದಲ್ಲಿ ಬಂದಿದೆ ಎಂದು ಇನ್ನೂ ನಡುಗುತ್ತ, “”ಅಯ್ಯೋ, ದೇವರೇ ನೀನೇ ಕಾಪಾಡು” ಎಂದು ಕಣ್ಣುಮುಚ್ಚಿಕೊಂಡು ಕೂಗಿದ. ಆ ಬಟಾಬಯಲಿನಲ್ಲಿ ಕಂಸನ ಕೂಗು ಚದುರಿಹೋಯಿತು.
ಹುಡುಗನೊಬ್ಬ ನಕ್ಕಂತೆ ಕೇಳಿಸಿ, ಕಂಸ ಕಣ್ತೆರೆದು ನೋಡಿದ. ಇದಿರಿನಲ್ಲಿ ಕೃಷ್ಣ ನಗುತ್ತಾ ನಿಂತಿದ್ದ!

ಕಂಸನಿಗೆ ಈಗ ದಿಗ್ಭ್ರಮೆಯಾಯಿತು!
“”ನೀನು ಎಲ್ಲಿಂದ ಬಂದೆ? ಎಲ್ಲಿ ಹೋದ ಆ ಮೋಕ್ಷದೀಪ?” ಎಂದು ಗುಡುಗಿದ. ತನಗಾಗಿದ್ದ ಭಯವನ್ನು ಮರೆಮಾಚುತ್ತ.
“”ಮಾವ, ಮೋಕ್ಷದೀಪ ನೀನೇ ಅಲ್ಲವೇ? ನನ್ನ ನೋಡಲು ಬಂದು ಮುದ್ದಾಡಿ ಹೋದ ಜೀವ ಇದೇ ಅಲ್ಲವೇ?” ಎಂದು ನಗುತ್ತ ಕೃಷ್ಣ ಕಂಸನತ್ತ ಬೆರಳು ತೋರಿಸಿದ.
ಕಂಸನಿಗೆ ಇನ್ನು ಮುಚ್ಚುಮರೆ ಮಾಡುವುದರಲ್ಲಿ ಅರ್ಥವಿಲ್ಲವೆನಿಸಿತು.

“”ಹೌದು, ನಾನೇ ಬಂದದ್ದು. ನಿನ್ನನ್ನು ದ್ವೇಷಿಸುವ ನಾನು ನಿನ್ನನ್ನು ಪ್ರೀತಿಸಬೇಕೆಂದು ಆ ರೂಪದಿಂದ ಬಂದೆ. ನಿನ್ನ ಮೆಯ್ಯನ್ನು ಸ್ಪರ್ಶಿಸಿದಾಕ್ಷಣ ನಾನು ದ್ವೇಷವನ್ನು ಮರೆತು ಬಿಟ್ಟೆ. ನೀನು ಅಸಾಮಾನ್ಯದವನೆಂಬುದು ಅರಿವಾಯಿತು. ನಿನ್ನ ನಿಜ ರೂಪವನ್ನು ಒಮ್ಮೆ, ಒಂದೇ ಒಂದು ಕ್ಷಣ ತೋರಿಸಿಬಿಡು” ಎಂದು ಅಂಗಲಾಚಿದ.
“”ಸರಿ” ಎಂದು ಕೃಷ್ಣ ತನ್ನ ನಾರಾಯಣರೂಪವನ್ನು ತೋರಿಸಿದ. ಆ ರೂಪವನ್ನು ಕಣ್ತುಂಬಿಸಿಕೊಂಡ ಕಂಸ ಕರಮುಗಿದು ಮನದೊಳಗೆ ಮುಕ್ತಿಯನ್ನು ಕರುಣಿಸೆಂದು ಬೇಡಿಕೊಂಡ.

ಮತ್ತೆ ಕೃಷ್ಣನ ರೂಪಕ್ಕೆ ಬಂದಾಗ ಕಂಸನ ಮನಸ್ಸು ನಿರಾಳವಾಗಿದ್ದುದು ಕಂಡಿತು.
“”ಹೇಳು ಮಾವ, ನೀನೀಗ ಶುದ್ಧನಾದೆ. ಇನ್ನು ಸಣ್ತೀಗುಣಯುತನಾಗಿ ಕಂಸನಾಗಿ ಇದ್ದು ಬಿಡು”.
“”ಇಲ್ಲ ಕೃಷ್ಣ, ಹುಟ್ಟಿನಿಂದ ತೊಡಗಿ ನಾನು ಮಾಡಿದ ಪಾಪಕರ್ಮಗಳು ಸಾವಿರ ಜನ್ಮಕ್ಕಾಗುವಷ್ಟಿದೆ. ಹಾಗಾಗಿ ನಾನು ಸಾತ್ವಿಕನಾಗಿ ಬದುಕುವುದು ಬೇಡ. ಕಂಸ ಎಂದರೆ ಯಾರು? ಹೇಗೆ? ಎಂಬುದನ್ನು ಈ ಪ್ರಪಂಚ ಇಲ್ಲಿಯ ತನಕ ತಿಳಿದುಕೊಂಡಿದೆಯೋ ಅದೇ ಕಂಸನಾಗಿಯೇ ನನ್ನ ನಿರ್ಯಾಣವಾಗಬೇಕು. ಮೊನ್ನೆಯ ತನಕ ನಿನ್ನನ್ನು ಕೊಲ್ಲಬೇಕೆಂಬ ವೈಷಮ್ಯ ನನ್ನಲ್ಲಿತ್ತು. ಕೃಷ್ಣನನ್ನು ಎಲ್ಲರೂ ಪ್ರೀತಿಸುವಾಗ ನಾನೇಕೆ ದ್ವೇಷಿಸುತ್ತೇನೆಂಬುದನ್ನು ಅರಿಯಬೇಕೆಂಬ ಆಸೆಯುಂಟಾಗಿ ನಿನ್ನ ಬಳಿ ಬಂದೆ. ನಿನ್ನನ್ನು ಅರಿತ ಬಳಿಕ ಅನಿಸುತ್ತಿರುವುದಿಷ್ಟೆ; ನನಗೆ ಮೋಕ್ಷ ಕೊಟ್ಟುಬಿಡು. ಸೂರ್ಯೋದಯವಾಯಿತೆಂದರೆ ನನ್ನ ಅರಮನೆಯಲ್ಲಿ ಬಿಲ್ಲಹಬ್ಬ. ನಿನಗೆ ಹಬ್ಬದೂಟವನ್ನು ಉಣಿಸುವ ಆಸೆ ನನಗೆ. ಯಾರಿಗೂ ತಿಳಿಯದಂತೆ ಭಕ್ಷಭೋಜ್ಯಗಳನ್ನು ಸ್ವೀಕರಿಸು. ದುಷ್ಟತನಕ್ಕೆ ವಿನಾಶವೇ ಶಿಕ್ಷೆ ಎಂಬುದು ನನ್ನಿಂದ ಪ್ರಪಂಚಮುಖಕ್ಕೆ ಅರಿವಾಗಲಿ. ನಾಳೆ ನಿನ್ನಿಂದ ನನ್ನ ಸಂಹಾರವಾಗಲಿ. ಅದು ಮೋಕ್ಷವೆಂಬುದು ನನಗೆ ಮತ್ತು ನಿನಗೆ ಮಾತ್ರ ತಿಳಿದಿರಲಿ. ಪ್ರಪಂಚಕ್ಕೆ ಅದು ಕೇವಲ ಕಂಸವಧೆ. ಕಂಸವಧೆ. ಕಂಸವಧೆಯಷ್ಟೆ”.
ಕೃಷ್ಣ “ತಥಾಸ್ತು’ ಎಂದ. ಕಂಸ ಭಾಷ್ಪಭರಿತ ಗೆಲುವಿನ ನಗೆ ಬೀರಿದ.
ಕಂಸ ಕಣ್ಣು ತೆರೆಯುವಾಗ ಬೆಳಕು ಹರಿಯುತ್ತಿತ್ತು.

ವಿಷ್ಣು ಭಟ್‌ ಹೊಸ್ಮನೆ

Advertisement

Udayavani is now on Telegram. Click here to join our channel and stay updated with the latest news.

Next