Advertisement
ನಾವು ನಾಲ್ಕು ಜನ. ಬೆಳಗಿನ ಉಪಹಾರಕ್ಕೆ ಬಂದವರು. ನಾವೂ ಪ್ರವಾಸಿಗರೇ. ಕರಾವಳಿಯ ಸೊಬಗನ್ನು ಸವಿಯಲೆಂದು ಬಂದು, ಕಾರವಾರದಲ್ಲಿ ಬೀಡುಬಿಟ್ಟಿದ್ದೆವು. ನಮ್ಮೆಲ್ಲರ ಕಣ್ಣುಗಳೂ ಬಂದ ಆಗಂತುಕರತ್ತಲೇ. ಯಾರೂ ಆ ಬಗ್ಗೆ ಮಾತನಾಡದಿದ್ದರೂ ಎಲ್ಲರ ಗಮನವೂ ಅವರ ಮೇಲೇ ನೆಟ್ಟಿತ್ತು. ನಮ್ಮೆಲ್ಲ ಕ್ರಿಯೆಗಳು ಯಾಂತ್ರಿಕ ಕ್ರಿಯೆಯಾಗಿ, ನಾವೆಲ್ಲ ಸ್ವಿಚ್ ಹಾಕಿದ ರೋಬೋಗಳಂತೆಯೇ ಇದ್ದೆವು. ನಮ್ಮ ಮಾತು ಆಗೊಂದು ಈಗೊಂದು; ಉಪಚಾರಕ್ಕೆ ಮಾತ್ರ ಎನ್ನುವಂತೆ.
Related Articles
Advertisement
ಟಿಬೆಟಿಯನ್ನರ ಬಗ್ಗೆ ನಮಗೆ ತಿಳಿಯದಂತೆಯೇ ನಮ್ಮೊಳಗೆ ಮೂಡಿದ್ದ ಅನುಕಂಪವೇ ಕಾರಣವಾಗಿ, ದಾಸ್ಯದಲ್ಲಿ ಸಿಕ್ಕಿಹಾಕಿಕೊಂಡವರನ್ನು ನೋಡುವಂತೆ ನಮ್ಮ ಬಳಿಯಿದ್ದ ಆ ಗುಂಪನ್ನು ನೋಡಿದರೆ, ಅವರೆಲ್ಲ ಉಲ್ಲಾಸದಲ್ಲಿದ್ದರು; ಮುಕ್ತವಾಗಿದ್ದರು; ಬಿಚ್ಚು ಮನಸ್ಸಿನಿಂದ ದಿಟ್ಟವಾಗಿ ಮಾತನಾಡುತ್ತಿದ್ದರು. ಅವರ ಇಡೀ ನಡವಳಿಕೆಯಲ್ಲಿ ಒಂದು ಘನತೆ, ಗಾಂಭೀರ್ಯ, ಧೀರತೆ ಮೂಡಿದಂತೆ ಭಾಸವಾಯಿತು.
ವೇಟರ್ ನಮ್ಮ ಬಳಿ ಬಂದಾಗ ಗಲಿಬಿಲಿಗೊಂಡಿದ್ದೆವು. ನೀರಿನ ಲೋಟವನ್ನು ಆತ ಕುಕ್ಕಿದ್ದನೋ ಅಥವಾ ನಾವೇ ಹಾಗೆ ಭಾವಿಸಿದ್ದೆವೋ. ತಡವಾದರೆ ಅವನು ಬೈದುಕೊಂಡಾನೆಂದು ಪಟಪಟ ಬೇಕಾದ ತಿಂಡಿಗಳನ್ನು ಹೇಳಿದ್ದೆವು.
“”ಈ ಇಡ್ಲಿ ವಡೆಯನ್ನು ತಿಂದುತಿಂದು ಸಾಕಾಗಿದೆ. ಯಾಕಾದರೂ ಅದನ್ನು ಹೇಳಿದೆನೋ” ಎಂದು ಪೇಚಾಡಿದ್ದ ಕೃಷ್ಣ.
“”ದೋಸೆ ಚೆನ್ನಾಗಿ ರೋಸ್ಟ್ ಆದರೆ ಪರವಾಯಿಲ್ಲ. ಇಲ್ಲವಾದರೆ ತಿನ್ನುವುದು ಕಷ್ಟ” ಎಂದಿದ್ದ ಹರೀಶ.
“”ಅನೇಕ ಹೊಟೇಲುಗಳಲ್ಲಿ ದೋಸೆಹಿಟ್ಟು ಬಹಳ ಹುಳಿಯಾಗಿರುತ್ತದೆ. ದೋಸೆ ಕೆಟ್ಟದಾಗಿರುತ್ತದೆ. ಅದಕ್ಕೆ ನಾನು ಚೌಚೌ ಬಾತ್ ಹೇಳಿದ್ದು” ಎಂದಿದ್ದಳು ನೀಲಾ.ನಾನು ಏನು ಹೇಳಿದ್ದೆ ಎಂಬುದೇ ಮರೆತುಹೋಗಿತ್ತು. ಎಂಥದೋ ಒಂದು ತಿಂದರಾಯ್ತು ಎಂದು ಮಾತಿಲ್ಲದೆ ಉಳಿದಿದ್ದೆ. ಮತ್ತೆ ನಮ್ಮ ಮಾತುಗಳು ಟಿಬೆಟ್‌ನ ಸುತ್ತಲೇ ಹರಿದಾಡಿದವು. ನಮ್ಮ ಅರಿವೆಲ್ಲ ಮಾಹಿತಿ ಜಾಲವನ್ನು ಆಧರಿಸಿದ್ದು. ಅಲ್ಲಿಂದ ಹರಿದು ಬಂದ ಸುದ್ದಿಗಳನ್ನೆಲ್ಲ ಹಿಡಿದುಹಿಡಿದು ಮಾತನಾಡುವ ಮಂದಿ. ಯಾವುದು ನಿಜ, ಎಷ್ಟು ನಿಜ, ಇದು ಯಾವುದೂ ನಿಕ್ಕಿಯಾಗಿ ಹೇಳುವಂತಿಲ್ಲ. ಆದರೂ ನಮ್ಮ ಮಾತುಗಳಿಗೆ ಅಡೆತಡೆ ಎಂಬುದಿರಲಿಲ್ಲ. ಧ್ವನಿ ಇಳಿಸಿ ಮಾತನಾಡುತ್ತಿದ್ದೆವು. ನಮ್ಮ ಮಾತುಗಳಿಗೆ ಕಿವಿಗೊಡುವವರು ಯಾರಾದರೂ ಇದ್ದಾರೆಯೇ ಎಂಬ ಅನುಮಾನ. ಅದೇನೂ ಅಲ್ಲದಿದ್ದರೂ ಇಂಥ ಅನುಮಾನಗಳ ನಡುವೆಯೇ ಬೆಳೆದುಬಂದ ಮನಸ್ಸುಗಳು ನಮ್ಮವು. ಹರೀಶ ಹೇಳುತ್ತಿದ್ದ, “”ಚೀನಾ, ಟಿಬೆಟ್ಟನ್ನು ಹೊಸಕಿ ಹಾಕಲು ನೋಡುತ್ತಿದೆ. ಕೆಲವರೇನೋ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದಾರೆ. ಭಾರತವೂ ಅವರಿಗೆ ಆಶ್ರಯ ನೀಡಿದೆ. ಆದರೆ ಹೀಗೆ ಬಂದವರು ಎಷ್ಟು ಜನ? ಇವರ ಹೋರಾಟ ಎಷ್ಟು ಕಾಲ ನಡೆಯುತ್ತದೆ? ದಲೈಲಾಮಾ ಬಹಳ ದೊಡ್ಡ ಧಾರ್ಮಿಕ ನಾಯಕ; ಜಗತ್ತನ್ನೆಲ್ಲ ಸುತ್ತಿ ಟಿಬೆಟ್ಟಿನ ಪರಿಸ್ಥಿತಿಯನ್ನು ಸಾರಿ ಸಾರಿ ಹೇಳುತ್ತಿದ್ದಾರೆ. ಟಿಬೆಟ್ಟನ್ನು ಚೀನಾದ ಕೈಯಿಂದ ಬಿಡುಗಡೆ ಮಾಡಿ ಎಂದು ಮೊರೆ ಇಡುತ್ತಿದ್ದಾರೆ. ಟಿಬೆಟ್‌ನ ಹೋರಾಟದ ಬೆಂಕಿ ಎಂದೂ ಆರುವುದಿಲ್ಲ ಎನ್ನುತ್ತಿದ್ದಾರೆ. ಆದರೆ, ಯಾವ ರಾಷ್ಟ್ರ ಇವರಿಗೆ ಬೆಂಬಲವಾಗಿ ನಿಲ್ಲಲು ಸಾಧ್ಯ? ಇವರಿಗೆ ಬೆಂಬಲ ಎಂದರೆ ಚೀನಾವನ್ನು ಎದುರು ಹಾಕಿಕೊಳ್ಳುವುದು. ಅದಕ್ಕೆ ಯಾರು ತಯಾರಾಗಿರುತ್ತಾರೆ?” ಕೃಷ್ಣ ಮಧ್ಯೆ ತಲೆಹಾಕಿದ, “”ಇದೇನೂ ಚೀನಾಕ್ಕೆ ತಿಳಿಯದ ಸಂಗತಿಯಲ್ಲ. ಟಿಬೆಟ್ಟನ್ನು ನುಂಗಿ ನೀರು ಕುಡಿಯಲು ಅದು ನೋಡುತ್ತಿದೆ. ತನ್ನೊಳಗೆ ಅದು ಸದ್ದಿಲ್ಲದೆ ಕರಗಿಬಿಡುವಂತೆ ಮಾಡಲು ಚೀನಾ ಹುನ್ನಾರ ಮಾಡುತ್ತಿದೆ. ಟಿಬೆಟ್ಟಿನ ಎಳೆಯ ತಲೆಮಾರಿನ ಮೇಲೆ ಚೀನಾ ತನ್ನ ಸಂಸ್ಕೃತಿಯನ್ನು ಹೇರಲು ನೋಡುತ್ತಿದೆ. ಗುಟ್ಟಾಗಿ ತನ್ನ ಭಾಷೆಯನ್ನು ಹೇರುತ್ತ ಹೇರುತ್ತ ಟಿಬೆಟಿಯನ್ ಭಾಷೆಯನ್ನು ನಾಶಮಾಡುತ್ತಿದೆ. ಭೂಗೋಳ, ಇತಿಹಾಸಗಳಲ್ಲಿ ಟಿಬೆಟ್ಟಿನ ಚಿತ್ರವೇ ಇಲ್ಲದಂತೆ ಮಾಡಿದೆ.” ಆ ಮೂವರು ಜೋರಾಗಿ ನಕ್ಕು ನಮ್ಮ ಮಾತುಕತೆಗೆ ತಡೆ ಬಿತ್ತು. ಎಲ್ಲರೂ ಅವರ ಕಡೆ ನೋಡಿದರು. ಆ ತರುಣ ಏನೋ ಹೇಳುತ್ತಿದ್ದ, ನಗು ಅಲ್ಲಿಂದ ಏಳುತ್ತಿತ್ತು. ನಾವು ಮೌನವಾಗಿ ಅವರನ್ನೇ ನೋಡಿದೆವು. ಅವರು ಗಟ್ಟಿ ಧ್ವನಿಯಲ್ಲಿ, ಯಾವ ಎಗ್ಗೂ ಇಲ್ಲದೆ, ಯಾರ ಅಂಜಿಕೆಯೂ ಇಲ್ಲದೆ, ಮುಕ್ತವಾಗಿ ಮಾತನಾಡುತ್ತಿದ್ದರು. ಅವರ ಮಾತಿನಲ್ಲಾಗಲಿ, ನಗುವಿನಲ್ಲಾಗಲಿ, ನಡವಳಿಕೆಯಲ್ಲಾಗಲಿ ಅಳುಕಾಗಲಿ, ನೋವಾಗಲಿ, ವಿಷಾದವಾಗಲಿ ಇದ್ದಂತಿರಲಿಲ್ಲ. ನಗೆಬುಗ್ಗೆಗಳೇ ಅವರಿಂದ ಚಿಮ್ಮುತ್ತಿದ್ದವು. ಬದುಕಿನ ಉಲ್ಲಾಸವೆಂದರೇನೆಂಬುದನ್ನು ಅರಿಯಲು ಅವರನ್ನು ನೋಡಿದರೆ ಸಾಕಾಗುತ್ತಿತ್ತು. ಕಾಲೂರಲೂ ಜಾಗವಿಲ್ಲದ ಜನ; ಮತ್ತೆ ಮೇಲೇಳಲಾರದಂತೆ ಪೆಟ್ಟುತಿಂದ ಜನ; ನೋವಿನ ಭೂತವನ್ನು ಹೆಗಲ ಮೇಲೆ ಹೊತ್ತು ತಿರುಗುವ ಜನ; ವರ್ತಮಾನದ ಯಾತನೆಯಲ್ಲಿ ಬೇಯುತ್ತ, ಭವಿಷ್ಯದ ಘೋರ ಚಿತ್ರಕ್ಕೆ ನೋಟ ಹರಿಸಲಾಗದ ಜನ. ಇದು ಯಾವುದರ ಪರಿವೆಯೂ ಇಲ್ಲದೆ ಈ ಕ್ಷಣದ ಸುಖವನ್ನು ಸವಿಯುವ ಇವರನ್ನು ನೋಡಿ ಸೋಜಿಗವಾಯಿತು. ಎಲ್ಲವನ್ನೂ ನುಂಗಿಕೊಂಡು ನಗುತ್ತಿರುವ ಇವರ ಬದುಕೇ ಬಹುದೊಡ್ಡ ಫಿಲಾಸಫಿ ಇರಬಹುದೆ? ಅವರ ಮುಂದೆ ದೋಸೆಯ ಪ್ಲೇಟುಗಳು ನಗುತ್ತಿದ್ದವು. ಕೇಸರಿಬಾತು ಹಬೆಯನ್ನು ಏಳಿಸುತ್ತಿತ್ತು. ಪೂರಿ ಊದಿಕೊಂಡು ಕಣ್ಣು ಕುಕ್ಕುತ್ತಿದ್ದವು. ಅವರು ತಿನ್ನುವುದೆಲ್ಲವೂ ರುಚಿಯಾಗಿರುವಂತೆ ತೋರುತ್ತಿತ್ತು. ವೇಟರ್ ಅವರನ್ನು ತೃಪ್ತಿಪಡಿಸಲು ನೋಡುತ್ತಿದ್ದ. ಅವರು ನಗುನಗುತ್ತಲೇ ಅವನಿಗೆ ಮತ್ತೆ ಏನನ್ನೋ ಆರ್ಡರ್ ಮಾಡುತ್ತಿದ್ದರು. ನನಗೆ ಕೇಸರಿಬಾತನ್ನು ತಿನ್ನುವ ಆಸೆಯಾಯಿತು. ವೇಟರ್‌ನನ್ನು ಕರೆದೆ. ಅವನು ತಕ್ಷಣ ಬರಲಿಲ್ಲ. “”ನನಗೆ ಪೂರಿ ಬೇಕು, ನೋಡು ಅವರ ಪೂರಿ ಎಷ್ಟು ಚೆನ್ನಾಗಿವೆ” ಎಂದ ಹರೀಶ. ಅಂತೂ ಎಲ್ಲರೂ ಆ ಮೂವರು ತಿನ್ನುವುದರ ಕಡೆಗೇ ಮನಸೋತಂತೆ ಕಂಡಿತು. ಇನ್ನು ವೇಟರ್ ಬಂದರೆ ಆ ಮೂವರಿಗೆ ಕೊಟ್ಟಿರುವುದನ್ನೇ ನಮಗೂ ಕೊಟ್ಟುಬಿಡು ಎಂದು ಹೇಳುವುದು ಖಚಿತವಾಗಿತ್ತು. ವೇಟರ್ ಅವರ ಟೇಬಲ್ಲಿನ ಬಳಿಗೆ ಮತ್ತೆ ಹೋದ. ಅವರು ಸಾವಕಾಶವಾಗಿ ತಮಗೆ ಬೇಕಾದ್ದನ್ನು ಮತ್ತೆ ಹೇಳಿದರು. ವೇಟರ್ ತುಂಬ ವಿಧೇಯವಾಗಿ ತಲೆಹಾಕಿ ಹೊರಟು ಹೋದ. ನಮಗೆಲ್ಲ ರೇಗಿ ಹೋಗಿತ್ತು. ವೇಟರ್‌ನನ್ನು ಬೈಯಲು ತೊಡಗಿದೆವು. “ಇಂಥವರಿಗೆಲ್ಲ ಟಿಪ್ಸ್ ಕೊಡುವುದೇ ತಪ್ಪು’ ಎಂದ ಕೃಷ್ಣ. ಅಂತೂ ನಮ್ಮೆಲ್ಲರ ಹೊಟ್ಟೆಗಳು ಭರ್ತಿಯಾಗಿ ನಾವು ಕಾಫಿ ಹೀರುತ್ತಿದ್ದಾಗ ಅವರು ಎದ್ದರು. ಬಿಲ್ಲನ್ನು ಕೈಯಲ್ಲಿ ಹಿಡಿದ ಹಿರಿಯ, ಲಾಮಾನ ಉಡುಪಿನಲ್ಲಿದ್ದವನು. ತರುಣ ನೂರರ ಒಂದು ನೋಟನ್ನು ಹೊರತೆಗೆದು, “”ದಿಸ್ ಈಜ್ ಫಾರ್ ಯೂ” ಎಂದು ವೇಟರ್‌ಗೆ ಕೊಟ್ಟ. ವೇಟರ್ ತಲೆಬಾಗಿ, “”ಥ್ಯಾಂಕ್ಯೂ ಸರ್” ಎಂದ. ಮೂವರು ಬಾಗಿ ವೇಟರ್‌ಗೆ ನಮಸ್ಕರಿಸಿದರು; ನಗುತ್ತ ನಗುತ್ತಲೇ ಹೊರಟು ಹೋದರು. ಅವರು ಹೋದ ನಂತರ ಇಡೀ ಕೋಣೆಯಲ್ಲಿ ಮೌನವೇ ತುಂಬಿಕೊಂಡಿತು. ಜನರಿದ್ದೂ ಕೋಣೆ ಖಾಲಿಯಾದಂತೆ ಭಾಸವಾಯಿತು. ನಮ್ಮ ಮಾತುಗಳೂ ಬರಿದಾಗಿದ್ದವು. ಜಿ. ಪಿ. ಬಸವರಾಜು