Advertisement

ಕೋವಿಡ್ ಕಾಲದ ಊರಿನ ಕಥೆಯಿದು..! ಮನೆಯೇ ಮಂತ್ರಾಲಯ!

09:36 AM Jun 27, 2020 | mahesh |

ನಮಗೆಲ್ಲರಿಗೂ ಮನೆಯೆಂಬುದು ಅದೆಷ್ಟೋ ಸಂಗತಿಗಳ, ಸಂತೋಷಗಳ ನೆನಪಿನ ಬುತ್ತಿಯ ಆಗರ. ಮನೆ ಎಂದರೆ ಹೀಗೆಯೇ ಇರಬೇಕೆಂದೇನಿಲ್ಲ. ಆದರೂ ಇರುವ ಹಾಗೆಯೇ ಇದ್ದರೆ ಚೆನ್ನ ಎಂಬುದು ನನ್ನ ಅಭಿಪ್ರಾಯ.  ಹಳ್ಳಿಗಳಲ್ಲಾದರೆ ಮನೆಯ ಹೊರಗಡೆ ಅಂಗಳ, ಜಗಲಿ, ನಡುಮನೆ, ಚೌಕಿ, ಅಡುಗೆ ಮನೆ, ಬಚ್ಚಲು ಮನೆ, ಹಿತ್ತಲು ಹಾಗೆ ಮೇಲು ಮಹಡಿಯೂ ಕಾಣಸಿಗುತ್ತವೆ. ಆದರೆ ಪೇಟೆಗಳಲ್ಲಿ ಜಾಗ ಅಭಾವದ ಕಾರಣ ಒಂದು ಹಾಲ್‌, ಕಿಚನ್‌ , ಬಾತ್‌ ರೂಮ್‌ಗೆ ಮನೆ ಮುಕ್ತಾಯವಾಗಿರುತ್ತದೆ. ಮನೆಯು ನಮಗೆ ಪ್ರತಿದಿನವೂ ಹೊಸತನದ ಅನುಭವ ನೀಡುತ್ತದೆ. ಬಹಳಷ್ಟು ಜನ, ಯಾವುದೋ ಕಾರಣಗಳಿಂದ ವಿದ್ಯಾಭ್ಯಾಸ, ಉದ್ಯೋಗ ಅಥವಾ ಬೇರೆ ಕೆಲಸಕ್ಕಾಗಿಯೂ ಮನೆ ಬಿಟ್ಟು ಹೊರಗಡೆ ಸಿಟಿಯಲ್ಲಿ ಬಾಡಿಗೆ ಮನೆ ಪಡೆದು ಅಥವಾ ಪಿಜಿಯಲ್ಲಿ ವಾಸಿಸಿರುತ್ತಾರೆ.

Advertisement

ಹುಟ್ಟಿ ಬೆಳೆದ ಮನೆಗೂ ಸಿಟಿ ಮನೆಗೂ ಏನೂ ವ್ಯತ್ಯಾಸವಿಲ್ಲ. ಎರಡೂ ಸಹ ಇಟ್ಟಿಗೆ, ಸಿಮೆಂಟ್‌, ಮರಳನಿಂದಲೇ ನಿರ್ಮಿಸಲಾಗಿದೆ. ಬಹುಶಃ ಹಳ್ಳಿಯದು ಹಳೆಯ ಕಾಲದ ಮನೆ ಎಂದಷ್ಟೇ ಭಾವಿಸಿದರೆ ತಪ್ಪಾಗುತ್ತದೆ. ನಾವು ಹುಟ್ಟಿ ಬೆಳೆದ ಮನೆಯಲ್ಲಿ ನಮ್ಮ ನೆನಪುಗಳೇ ಕೂಡಿವೆ. ಪ್ರತಿ ಜಾಗದಲ್ಲೂ ನಮ್ಮ ನೆರಳಿದೆ. ಹೆತ್ತ ತಾಯಿಯ ಪ್ರೀತಿಯಿದೆ, ಅಪ್ಪನ ಮಮಕಾರವಿದೆ, ಅಜ್ಜನ ಬುದ್ಧಿ ಮಾತಿದೆ, ಅಜ್ಜಿಯ ಆಶೀರ್ವಾದವಿದೆ, ಅಕ್ಕನ ಅಕ್ಕರೆಯಿದೆ, ಅಣ್ಣನ ಮುದ್ದಾಟವಿದೆ, ತಮ್ಮ-ತಂಗಿಯರ ಹೊಡೆದಾಟವಿದೆ.

ಹೀಗೆ ಮನೆಯೂ ತುಂಬಿ ಮನವೂ ತುಂಬಿದ್ದ ನೆನಪಿನ ಬುತ್ತಿಯಿದೆ. ಅಂಗಳದಲ್ಲಿ ಚಿಣ್ಣಿದಾಂಡು ಗೋಲಿಯ ಗುರುತಿದೆ. ಹಿತ್ತಲಿನಲ್ಲಿ ಪೇರಳೆ, ಹಲಸು, ಮಾವಿನ ಸಿಹಿಯಿದೆ, ಮುಂದುಗಡೆ ದಾಸವಾಳ ಮಲ್ಲಿಗೆ ಹೂವಿನ ಗಂಧವಿದೆ, ಮನೆಯ ಜಗಲಿಯಲ್ಲಿ ಪಗಡೆ ಚೆನ್ನೆಮಣೆಗಳ ಆಟವಿದೆ, ಕೊಟ್ಟಿಗೆಯಲ್ಲಿ ಗೌರಿ, ಗಂಗೆಯರ(ಹಸುಗಳ) ಕರುಗಳಿವೆ.  ಅಡುಗೆ ಮನೆಯಲ್ಲಿ ಅಮ್ಮನ ಕೈ ರುಚಿ ಯಿದೆ, ಮೆತ್ತಿಯ ಜಾಡಿಯಲ್ಲಿ ಮಾವಿನ ಉಪ್ಪಿನಕಾಯಿ ಇದೆ, ತೋಟದಲ್ಲಿ ಅಜ್ಜ- ಅಪ್ಪಂದಿರ ಬೆವರಿದೆ. ಹೀಗೆ ಮನೆಯನ್ನು ಹತ್ತು ಹಲವು ರೀತಿಯಲ್ಲಿ ವರ್ಣಿಸಿದರೂ ಸಾಲದು. ಇದೊಂದು ಸುಖ-ದುಃಖ ನೋವು

ನಲಿವುಗಳ ಸಮ್ಮಿಶ್ರವಾದ ಒಂದು ಸಮೂಹವಿರುವ ಜಾಗವಾಗಿದೆ. ನಾನು ಸಹ ವಿದ್ಯಾ ಭ್ಯಾಸಕ್ಕಾಗಿ ಮನೆಯಿಂದ ಹೊರಗಡೆ ಇರುವೆ ಹಾಗಾಗಿ ಮನೆಗೆ
ಹೋದಾಗ ಆಗುವ ಸಂತೋಷಕ್ಕೆ ಸರಿ ಸಾಟಿ ಇಲ್ಲವೆನಿಸುತ್ತದೆ.


ವಿಜೇತ್‌ ಮಳಲಗದ್ದೆ ಶಿವಮೊಗ್ಗ

Advertisement
Advertisement

Udayavani is now on Telegram. Click here to join our channel and stay updated with the latest news.

Next