ನಾಳೆಯಿಂದ ವರ್ಕ್ ಫ್ರಂ ಹೋಂ ಅಂದಾಗ, ಖುಷಿಯೋ ಖುಷಿ. ಹೆತ್ತವರಿಗೆ, ಮಗ ಮನೇಲೆ ಇರ್ತಾನೆ ಅನ್ನೋ ಸಡಗರ. ನಾಳೆ ತಿಂಡಿ ಏನು ಬೇಕು ಅಂತ ಹೆಂಡತಿ ಕೇಳಿದಳು. ಬಿಸಿಬೇಳೆ ಬಾತ್ ಮಾಡೇ ಅಂತ ಅಮ್ಮ ಅಂದಳು. ಅಪ್ಪಾ, ನಾಳೆ ನೀನು ನನ್ನ ಜೊತೆ ಆಟ ಆಡಬೇಕು ಅಂತ ಮಗ ಶುರು ಮಾಡಿದ… ಹೀಗೆ, ಪಟ್ಟಿ ಬೆಳೆಯುತ್ತಾ ಹೋಯಿತು. ವರ್ಕ್ ಫ್ರಂ ಹೋಮ್ ಖುಷಿಯ ಬೆನ್ನಿಗೆ. ಸರಿ, ಆಫೀಸಲ್ಲಿ ಬಾಸ್ ನೇ ನಿಭಾಯಿಸಿದ್ದೀನಂತೆ; ಇವರು ಯಾವ ಮಹಾ ಅಂದುಕೊಂಡು ಯೋಜನೆ ಮಾಡಿದೆ. ಮಾರನೆ ದಿನ, ಬಿಸಿಬೆಳೆ ಬಾತ್‌ಗೆ ಒಲೆಯ ಮೇಲೆ ಅಕ್ಕಿ, ಬೇಳೆ ಬೇಯುತ್ತಿರುವಾಗಲೇ, ಮಗ ಆಟಕ್ಕೆ ಕರೆದ. ದಿನಾ ಬೆಳಗ್ಗೆ ಎದ್ದೇಳ್ಳೋದು ಇದ್ದಿದ್ದೇ ಅಂತ, ಸ್ವಲ್ಪ ನಿಧಾನಕ್ಕೆ ಎದ್ನಲ್ಲಪ್ಪ, ತಗೋ, ಆಫೀಸಿಂದ ಮೂರು ಕರೆ, 10 ಮೆಸೇಜು ರೆಡಿಯಾಗಿದ್ದವು.
ಆವತ್ತು ಏನಾಗಿತ್ತು ಅಂದರೆ, ನನ್ನ ಸಹೋದ್ಯೋಗಿಗೆ ಹುಷಾರಿಲ್ಲದೆ, ಅವನು ವರ್ಕ್ ಫ್ರಂ ಹೋಮ್‌ಗೆ ರಜೆ ಹಾಕಿದ್ದ. ಹೀಗಾಗಿ, ಅವನ ಎಲ್ಲ ಕೆಲಸಗಳನ್ನು ನಾನೇ ಮುಗಿಸಬೇಕಿತ್ತು. ನನ್ನ ಕೆಲಸ ಬಹಳ ವಿಚಿತ್ರದ್ದು. ಟೆಲಿಫೋನಿನಲ್ಲಿ ಗ್ರಾಹಕರನ್ನು ಸಂದರ್ಶಿಸಿ, ಅವರ ತಲೆ ಸವರಿ, ನಮ್ಮ ಪ್ರಾಡಕr…ಗಳನ್ನು ಅವರ ತಲೆಗೆ ಕಟ್ಟುವ ಪ್ರಕ್ರಿಯೆ. ಕೊರೊನಾಕ್ಕೂ ಮೊದಲು ಬಹಳ ಚೆನ್ನಾಗಿತ್ತು.
ವಿದೇಶಗಳಲ್ಲಿ ಮೆಡಿಕಲ್‌ಗೆ ಸಂಬಂಧಿಸಿದ ವಸ್ತುಗಳಿಗೆ ಬೇಡಿಕೆ ಇದ್ದುದರಿಂದ ನಮ್ಮ ಮಾತಿಗೆ ಗೌರವ ಕೂಡ ಇತ್ತು. ಆದರೆ, ಕೊರೊನಾ ಹೆಚ್ಚಾದಂತೆ, ವಿದೇಶಿ ಕರೆಗಳು ಬಂದ್ ಆದವು. ಸ್ಥಳೀಯರ ಕರೆಗಳನ್ನು ಸ್ವೀಕರಿಸಿ, ಅವರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಸೂಚಿಸುವುದೇ ಉದ್ಯೋಗ ಮತ್ತು ಜವಾಬ್ದಾರಿಯಾಯಿತು. ಒಂದು ನಿಮಿಷ ಕೂಡ ಪುರುಸೊತ್ತಿಲ್ಲ. ಬೆಳಗ್ಗೆಯಿಂದಲೇ ಕರೆ, ಹೆಂಡತಿ, ಮಕ್ಕಳು, ಯಾರ ಬಳಿಯೂ ಮಾತನಾಡಲು ಸಮಯವಿಲ್ಲ. ಆಫೀಸಲ್ಲಾದರೆ, ನಿಗದಿತ ಸಮಯಕ್ಕೆ ಮಾತ್ರ ಕರೆ ಬರುತ್ತಿತ್ತು.
ನಮ್ಮದು ಮೆಡಿಕಲ್ ಕ್ಷೇತ್ರವಾದ್ದರಿಂದ, ಸೇವೆ ಅನ್ನೋ ಹೆಸರಲ್ಲಿ ನಮ್ಮ ಬಾಸ್ ಯಾವಾಗ ಬೇಕಾದರೂ ಕರೆ ಮಾಡಿ ಅಂತ ಹೇಳಿದ್ದಾರೆ. ಹೀಗಾಗಿ, ಸ್ನಾನ, ತಿಂಡಿ ಮಾಡುವಾಗಲೂ ಕರೆ ಬರುತ್ತಲೇ ಇತ್ತು. ಆಗ ಮನೆಯವರಿಗೆ ಅನ್ನಿಸಿದ್ದೇನೆಂದರೆ, ವರ್ಕ್ ಫ್ರಂ ಹೋಮ್‌ಗಿಂತ, ಇವರು ಆಫೀಸಲ್ಲಿ ಇದ್ದಿದ್ದರೇ ಚೆನ್ನಾಗಿತ್ತು ಅಂತ…
– ಕಳಿಂಗ ಮೂರ್ತಿ, ಚಾಮರಾಜಪೇಟೆ