Advertisement

ಮೂರು ದಶಕದ ಕಥೆಗಳು

10:10 AM Jan 12, 2020 | mahesh |

ನಮ್ಮಲ್ಲಿ ದೂರವಾಣಿ ತಂತ್ರಜ್ಞಾನ ಬೆಳೆದು ಬಂದ ಬಗೆಯೇ ರೋಮಾಂಚನಕಾರಿಯಾದುದು. ಊರಿಗೊಂದು ಮನೆಗಳಲ್ಲಿ ರಿಂಗಣಿಸುತ್ತಿದ್ದ ಲ್ಯಾಂಡ್‌ ಲೈನ್‌ ದೂರವಾಣಿಗಳು ಬಳಿಕ ಹೆಚ್ಚಾದವು. ಬಿಎಸ್‌ಎನ್‌ಎಲ್‌ನವರು ಟೆಲಿಫೋನ್‌ ಡೈರೆಕ್ಟರಿ ಪ್ರಕಟಿಸುವ ಹಂತಕ್ಕೆ ಬಂದಿತು. ಅದಾದ ಬಳಿಕ ಸಾರ್ವಜನಿಕರು ಹೆಚ್ಚಾಗಿ ಸೇರುವಲ್ಲಿ ಸಾರ್ವಜನಿಕ ದೂರವಾಣಿ ಬೂತ್‌ಗಳು ಆರಂಭವಾದವು. ನಗರಗಳು ಮತ್ತು ಪಟ್ಟಣಗಳಲ್ಲಿ ಎಸ್‌ಟಿಡಿ ಮತ್ತು ಐಎಸ್‌ಡಿ ಬೂತ್‌ ಆರಂಭವಾದವು. ನಿಮಿಷಕ್ಕೆ ನಿರ್ದಿಷ್ಟ ಮೊತ್ತವನ್ನು ಬಿಲ್‌ ರೂಪದಲ್ಲಿ ಪಾವತಿಸಬೇಕಾಗಿತ್ತು. ಅದರಲ್ಲೂ ಎಸ್‌ಟಿಡಿ/ಐಎಸ್‌ಡಿ ಕರೆಗೆ ಸಾಲು ನಿಲ್ಲಬೇಕಾದ ಸ್ಥಿತಿ ಉದ್ಭವಿಸಿತು. ಬಳಿಕ ಸಂಖ್ಯೆ ಹೆಚ್ಚಾದವು. ಕರೆ ಪೂರ್ಣಗೊಳಿಸಿದ ಬಳಿಕ ಉದ್ದನೆಯ ಬಿಲ್‌ ಒಂದು ನಮ್ಮ ಕೈ ಸೇರುತ್ತಿತ್ತು. ಎರಡು-ಮೂರು ದಶಕಗಳ ಕಥೆ ಇದು.

Advertisement

ಕಾಯಿನ್‌ ಬಾಕ್ಸ್‌ ಬಂತು
ಇದರ ಮಧ್ಯೆಯೇ ಜನಪ್ರಿಯವಾದುದು ಕಾಯಿನ್‌ ಫೋನ್‌ಗಳು. ಒಂದು ರೂ. ನಾಣ್ಯ ಹಾಕಿದರೆ ಮಾತಿಗೆ ಅನುಮತಿ. ಮೂರು ನಿಮಿಷಕ್ಕೆ ಕರೆ ಕಡಿತಗೊಳ್ಳುತ್ತಿತ್ತು. ಸರಿಯಾಗಿ 160 ಸೆಕೆಂಡ್‌ ಆಗುತ್ತಿದ್ದಂತೆಯೇ ಕರೆ ಮುಗಿಯುತ್ತದೆ ಅಥವಾ ಮತ್ತಷ್ಟು ಮಾತು ಬೇಕಾದರೆ ಇನ್ನೊಂದು ನಾಣ್ಯ ಹಾಕಿ ಎಂದು ಹೇಳುವ ಬೀಪ್‌ ಶಬ್ದ ಕೇಳುತ್ತಿತ್ತು. ಕೆಲವೊಮ್ಮೆ ಕೆಲವರು ಐದಾರು ನಾಣ್ಯ ಹಾಕಿ ಹದಿನೈದು ನಿಮಿಷ ಮಾತನಾಡುವಾಗ ಸಾಲಿನಲ್ಲಿ ನಿಂತವರು ಜಗಳಕ್ಕೆ ಇಳಿದದ್ದೂ ಇದೆ.

ಎಸ್‌ಟಿಡಿ ಮತ್ತು ಐಎಸ್‌ಟಿಡಿ ಬೂತ್‌ಗಳು ವಿರಳವಾಗಿ ಕಂಡು ಬಂದರೂ ಕಾಯಿನ್‌ ಬಾಕ್ಸ್‌ಗಳು ಬಹುತೇಕ ಅಂಗಡಿಗಳ ಮುಂಭಾಗ ಇರುತ್ತಿದ್ದವು. ಬಿಎಸ್‌ಎನ್‌ಎಲ್‌ ಸಂಸ್ಥೆಯೂ ಹೆಚ್ಚು ಆಸ್ಥೆ ವಹಿಸಿತ್ತು. ಆದರಿಂದು ಇಲ್ಲವೇ ಇಲ್ಲ ಎನ್ನಲಡಿಯಿಲ್ಲ. ಈ ಟ್ರೆಂಡ್‌ ಒಂದಷ್ಟು ಕಾಲ ಚಾಲ್ತಿಯಲ್ಲಿತ್ತು. ಅಷ್ಟರಲ್ಲೇ ಲ್ಯಾಂಡ್‌ಫೋನ್‌ಗಳು ಬಹುತೇಕ ಮನೆಗಳಲ್ಲಿ ರಿಂಗಣಿಸಲು ಆರಂಭಿಸಿದ್ದವು.

ಕಾಯಿನ್‌ ಬಾಕ್ಸ್‌ಗಳು ಬಂದ ಸಂದರ್ಭದಲ್ಲಿ ಎಸ್‌ಟಿಡಿ ಮತ್ತು ಐಎಸ್‌ಟಿಡಿ ಬೂತ್‌ಗಳು ಮರೆಯಾದವು. ಅದೇ ರೀತಿ ಕಾಯಿನ್‌ ಬಾಕ್ಸ್‌ಗಳು ಮನೆ ಮನೆಗಳಲ್ಲಿ ದೂರವಾಣಿ ಬಂದ ಬಳಿಕ ಮರೆಯಾದವು. ಭಾರತದ ಪ್ರತಿ ಮೂಲೆ ಮೂಲೆಯಲ್ಲೂ ಬಿಎಸ್‌ಎನ್‌ಎಲ್‌ ಲ್ಯಾಂಡ್‌ಲೈನ್‌ ಮತ್ತು ಬ್ರಾಂಡ್‌ಬ್ಯಾಂಡ್‌ ಸೇವೆ ಆರಂಭವಾಗತೊಡಗಿತು.

ಮೊಬೈಲ್‌ ಬಂದವು
ವಿಚಿತ್ರವೆಂದರೆ ಈ ಫೋನ್‌ಗಳೆಲ್ಲಾ ಬಂದದ್ದು ಮನೆ ಅಂಗಳಕ್ಕೆ, ಕೋಣೆಗೆ. ಆದರೆ ಮೊಬೈಲ್‌ ಫೋನ್‌ ಬಂದದ್ದು ಜನರ ಕೈಗೇ. ನೋಕಿಯಾ, ರಿಲಯನ್ಸ್‌ ಸೇರಿದಂತೆ ಹಲವಾರು ಕಂಪೆನಿಗಳ ಮೊಬೈಲ್‌ಗ‌ಳು ಕೈಗಳಲ್ಲಿ ಕುಣಿಯತೊಡಗಿದಾಗ, ಈ ಕ್ರಾಂತಿ ಉಳಿದೆಲ್ಲವನ್ನೂ ಆಪೋಶನ ತೆಗೆದುಕೊಳ್ಳುವುದೆಂದು ಎಣಿಸಿರಲಿಲ್ಲ. ಇಂದು ಮೊಬೈಲ್‌ ಅವೆಲ್ಲವನ್ನೂ ಬದಿಗೆ ಸರಿಸಿ ಫೋಸ್‌ ಕೊಡುತ್ತಿದೆೆ. ಆಮೇಲೆ ಸೃಷ್ಟಿಯಾದದ್ದು ಸಿಮ್‌ ಪ್ರಪಂಚ.

Advertisement

ಸಿಮ್‌ಗಳೂ ಹೆಚ್ಚಾದವು
ಇದಕ್ಕೆ ಪೂರಕವಾಗಿ ಬಿಎಸ್‌ಎನ್‌ಎಲ್‌, ಏರ್‌ಟೆಲ್‌, ವೊಡಾಫೋನ್‌ ಸಂಸ್ಥೆಗಳು ಸಿಮ್‌ಕಾರ್ಡ್‌ಗಳ ಉತ್ಪಾದನೆ ಮತ್ತು ಲಭ್ಯತೆಯನ್ನು ಹೆಚ್ಚಿಸಿ ಮೊಬೈಲ್‌ ಸಂಪರ್ಕಗಳು ಹೆಚ್ಚು ದೊರೆಯುವಂತೆ ಮಾಡಿದವು. ಇದರಿಂದ ಕ್ರಮೇಣವಾಗಿ ಮನೆಯಲ್ಲಿದ್ದವರಿಗೆ ಲ್ಯಾಂಡ್‌ಲೈನ್‌, ಹೊರಗೆ ಹೋಗುವವರಿಗೆ ಮೊಬೈಲ್‌ ಎಂಬುದು ಹೆಚ್ಚು ಖ್ಯಾತವಾಗಿತ್ತು.

 ತಲೆ ಎತ್ತಿದ ರೀಚಾರ್ಜ್‌ ಶಾಪ್‌ಗಳು
ಮೊಬೈಲ್‌ ಸೇವೆಗೂ ಎರಡು ಬಗೆಯ ಸೌಲಭ್ಯ ಬಂದವು. ಮೊದಲೇ ಹಣ ಕೊಟ್ಟು ಮಾತನಾಡುವುದು, ಮಾತನಾಡಿ ಹಣ ಕಟ್ಟುವುದು. ಜನರು ಹೆಚ್ಚಾಗಿ ಆಶ್ರಯಿಸಿದ್ದು ಮೊದಲೇ ಹಣ ಕೊಟ್ಟು ಮಾತನಾಡುವ ಸೇವೆಯನ್ನು ಹಾಗಾಗಿ ಟಾಪ್‌ಅಪ್‌ ಹಾಕಿಸಿಕೊಳ್ಳಲು ರೀಚಾರ್ಚ್‌ ಶಾಪ್‌ಗ್ಳು ನಗರ, ಪಟ್ಟಣ ಮೊದಲಾದ ಕಡೆಗಳಲ್ಲಿ ಆರಂಭವಾದವು. ಎಲ್ಲೆಂದರಲ್ಲಿ ಅದು. ಒಂದು ದಶಕದ ಹಿಂದೆ ಕಾಯಿನ್‌ ಬೂತ್‌ಗಳು ಹೇಗೆ ಚಿಲ್ಲರೆ ಸಮಸ್ಯೆಗೆ ಪರಿಹಾರವೆಂಬಂತೆ ತೋರಿದವೋ ಹಾಗೆಯೇ ಈ ಟಾಪ್‌ಅಪ್‌ ರೀಚಾರ್ಜ್‌ ಒಂದು ಉಪ ವ್ಯವಹಾರವಾಗಿ ಬಿಂಬಿತ ವಾಗತೊಡಗಿತು. ಸಣ್ಣ ಬಟ್ಟೆ ಅಂಗಡಿಯಿಂದ ಹಿಡಿದು ಗೂಡಂಗಡಿವರೆಗೆ ಈ ಟಾಪ್‌ ಅಪ್‌ಗ್ಳು ದೊರಕತೊಡಗಿದವು.

ಎಲ್ಲ ಕಂಪೆನಿಯ ರೀಚಾರ್ಜ್‌ಗಳೂ ಒಂದೇ ಅಂಗಡಿಯಲ್ಲಿ ಲಭ್ಯವಾದವು. ಅಂಗಡಿಗಳಲ್ಲಿ ಪ್ರತಿ ಕಂಪೆನಿಯವರೂ ವಾರಕ್ಕೊಮ್ಮೆ ಕ್ಯಾಲೆಂಡರ್‌ನಂತೆ ಅವರ ಆಫ‌ರ್‌ಗಳ ತೂಗುಪಟಗಳನ್ನು ತೂಗು ಹಾಕತೊಡಗಿದರು. ಇಂಟರ್‌ನೆಟ್‌ ಹೆಚ್ಚು ಸೋವಿಯಾಗಿ, ಟಚ್‌ಸ್ಕ್ರೀನ್‌ ಮೊಬೈಲ್‌ಗ‌ಳು ಮಾರುಕಟ್ಟೆಗೆ ಬರ ತೊಡಗಿದಾಗ ರೀಚಾರ್ಜ್‌ ವ್ಯವಹಾರವೂ ಜೋರಾಯಿತು.

 ನ್ಯೂ ಮೀಡಿಯಾ ಬಂತು
ಬಳಿಕ ಸ್ಮಾರ್ಟ್‌ಫೋನ್‌ ಕೈಗೆ ಬಂದು, ಇಂಟರ್‌ನೆಟ್‌ ಸೇವೆಯ ಗುಣಮಟ್ಟ ಸುಧಾರಿಸಿದ ಹಿನ್ನೆಲೆಯಲ್ಲಿ ಜನರು ಹೊಸದೊಂದು ಯುಗಕ್ಕೆ ಕಾಲಿಟ್ಟರು. ಫೇಸ್‌ಬುಕ್‌, ವಾಟ್ಸಾಪ್‌, ಟ್ವಿಟರ್‌, ಯೂಟ್ಯೂಬ್‌ಗಳೆಲ್ಲಾ ಜನಪ್ರಿಯವಾಗತೊಡಗಿದವು. ಬಹುತೇಕ ಮನೆಯಲ್ಲಿದ್ದ ಲ್ಯಾಂಡ್‌ಲೈನ್‌ಗಳು ರಿಂಗಣಿಸುವುದನ್ನು ಮರೆತಿದ್ದವು.  ಆದರೆ ಸ್ಮಾರ್ಟ್‌ಫೋನ್‌ಗಳ ಮೂಲಕ ಇಂಟರ್‌ನೆಟ್‌ ಬ್ಯಾಂಕಿಂಗ್‌ ಸೇವೆಗಳ ಪರಿಚಯವಾದ ಬಳಿಕ ರೀಚಾರ್ಜ್‌ ಶಾಪ್‌ಗ್ಳು ಹೊಳಪು ಕಳೆದುಕೊಳ್ಳ ತೊಡಗಿದವು. ವಿವಿಧ ಪೇಮೆಂಟ್‌ ಗೇಟ್‌ವೆಗಳು ಬಂದ ಬಳಿಕವಂತೂ ಗಮನಾರ್ಹವಾಗಿ ಶೇ. 60 ರಷ್ಟು ಅಂಗಡಿಗಳು ಮುಚ್ಚಲ್ಪಟ್ಟವು ಎಂಬುದನ್ನು ಮರೆಯುವಂತಿಲ್ಲ.

ಈ ಮೊಬೈಲ್‌ ರಿಚಾರ್ಜ್‌ ಶಾಪ್‌ಗ್ಳು ಬೇರೆ ವ್ಯವಹಾರಗಳನ್ನು ಪ್ರಧಾನವಾಗಿಸಿಕೊಂಡರೆ, ಇನ್ನು ಕೆಲವು ಮಳಿಗೆಯವರು ಸಂಪೂರ್ಣ ವ್ಯಾಪಾರವನ್ನೇ ಬದಲಿಸಿದರು. ಇನ್ನೂ ಕೆಲವು ಮಳಿಗೆಗಳು ಸಿಮ್‌ ಮಾರಾಟಕ್ಕಷ್ಟೇ ಸೀಮಿತಗೊಂಡವು.

ಆಗ ಎಸ್‌ಟಿಡಿ ಬೂತ್‌ನದ್ದೇ ರಾಜ್ಯ
ಕುಮ್ರಗೋಡಿನ ಬಾಲಕೃಷ್ಣ ಪೂಜಾರಿಯವರು 1990 ರಲ್ಲಿ ಇಸ್ತ್ರಿ ಅಂಗಡಿ ಆರಂಭಿಸಿದರು. ಅದೇ ಜೀವನಾಧಾರ. ಅಷ್ಟರಲ್ಲಿ ಮನೆಯ ಆರ್ಥಿಕತೆಯನ್ನು ಇನ್ನಷ್ಟು ಸಬಲಗೊಳಿಸಲು ಸಿಕ್ಕ ಅವಕಾಶ ಬಳಸಿಕೊಳ್ಳಲು ಪ್ರಯತ್ನಿಸಿದರು. ಅದರ ಪರಿಣಾಮವಾಗಿ 1997 ರಲ್ಲಿ ಟೆಲಿಫೋನ್‌ ಬೂತ್‌ ತೆರೆದರು. ದಿನಕ್ಕೆ 30 ಎಸ್‌ಟಿಡಿ, ಐಎಸ್‌ಡಿ, ಕಾನ್ಫರೆನ್ಸ್‌ ಕಾಲ್‌ಗೆ ಗ್ರಾಹಕರು ಬರುತ್ತಿದ್ದರು. ಆಗಿನ ಗಳಿಕೆ ಸುಮಾರು 4-5 ಸಾವಿರ ರೂ. 2005 ರಲ್ಲಿ ಮೊಬೈಲ್‌ ಬಳಕೆ ಹೆಚ್ಚಾಯಿತು. ಬೂತ್‌ ಕ್ಲೋಸ್‌ ಮಾಡಿದೆ. ರೀಚಾರ್ಜ್‌ ಆರಂಭಿಸಿದೆ. ಸುಮಾರು 5 ಸಾವಿರ ರೂ. ವರೆಗೂ ದುಡಿಯುತ್ತಿದ್ದೆ. ಈಗ ಆ ವ್ಯಾಪಾರ ಒಂದರಿಂದ ಒಂದೂವರೆ ಸಾವಿರಕ್ಕೆ ಇಳಿದಿದೆ ಎಂಬುದು ಬಾಲಕೃಷ್ಣ ಅವರ ಅಭಿಪ್ರಾಯ.

ಮಣಿಪಾಲದ ದಶರಥ ನಗರದ ಶರತ್‌ ಕೆಮೂ¤ರು ಸಹ ಮೊದಲಿನಿಂದಲೂ ಈ ರೀಚಾರ್ಜ್‌ ವ್ಯಾಪಾರ ನಡೆಸುತ್ತಿದ್ದಾರೆ. ಆಗಿನ ಲೆಕ್ಕಕ್ಕೆ ಹೋಲಿಸಿದರೆ ಶೇ. 50 ರಿಂದ 65 ರಷ್ಟು ವ್ಯಾಪಾರ ಕುಸಿದಿದೆಯಂತೆ. ಈಗ ವ್ಯಾಲಿಡಿಟಿ ರೀಚಾರ್ಜ್‌ ಬಿಟ್ಟರೆ, ಮಾತಿಗೆ ದುಡ್ಡು ಹಾಕಿಸಿಕೊಳ್ಳುವವರು ಕಡಿಮೆ. ಹಾಗಾಗಿ ಈಗ ರೀಚಾರ್ಜ್‌ ಎನ್ನುವುದರ ಜತೆ ಮೊಬೈಲ್‌ ಮಾರಾಟ ಮತ್ತು ಸರ್ವೀಸ್‌ ಆರಂಭಿಸಿದ್ದೇವೆ ಎನ್ನುತ್ತಾರೆ ಶರತ್‌. ಮಣಿಪಾಲದ ಮೊಬೈಲ್‌ ಪಾಯಿಂಟ್‌ ನ ಪ್ರಶಾಂತ್‌ ಅವರದ್ದೂ ಇದೇ ಅಭಿಪ್ರಾಯ. ರೀಚಾರ್ಜ್‌ ಬೇಡಿಕೆ ಶೇ. 50 ರಷ್ಟು ಕುಸಿದಿದೆ. ಸಿಮ್‌ ಮಾರಾಟ ಮತ್ತು ಅದಕ್ಕೆ ಸಂಬಂಧಿಸಿದ ರೀಚಾರ್ಜ್‌ ಬಿಟ್ಟರೆ ಬೇರೆ ಇಲ್ಲ. ಹಾಗಾಗಿ ಮೊಬೈಲ್‌ ಮಾರಾಟ ಮತ್ತು ಸರ್ವೀಸ್‌ ಗೆ ಮೊರೆ ಹೋಗಿದ್ದಾರೆ ಈಗ ಪ್ರಶಾಂತ್‌.

-  ಫೀಚರ್‌ ಟೀಮ್‌

Advertisement

Udayavani is now on Telegram. Click here to join our channel and stay updated with the latest news.

Next