Advertisement

ಹನಿ ಎಂಬ ಕಹಾನಿ

09:29 PM Jul 04, 2019 | mahesh |

ಮೊದಲ ಮಳೆಯ ಹನಿಗಳು ನೆಲವನ್ನು ಸ್ಪರ್ಶಿಸುವಾಗ ಮನಸ್ಸಿನಲ್ಲಿ ನೆನಪಿನ ಹನಿಗಳುದುರುವುದು ಅತಿ ಸಹಜ. ಸಿಹಿ ನೆನಪುಗಳು ನಗೆಯ ಹೊನಲನ್ನು ಹರಿಸಿದರೆ, ಕಹಿ ನೆನಪುಗಳು ಕಣ್ಣಂಚನ್ನು ಹನಿಗೂಡಿಸುತ್ತವೆ. ಮಳೆಯ ರಭಸದೊಂದಿಗೆ ನೆನಪಿನ ಹರಿವು ತೀವ್ರವಾಗುತ್ತ ಸಾಗುತ್ತದೆ. ಈ ಭಾವವು ವಯಸ್ಸಿನ ಭೇದವಿಲ್ಲದೆ ಸರ್ವರನ್ನೂ ಏಕರೂಪದಿಂದ ಕಾಡುತ್ತದೆಂಬುದೇ ವಿಶೇಷತೆ.

Advertisement

“”ನಮ್ಮ ಕಾಲದ ಮಳೆಯ ಮುಂದೆ ಈಗಿನ ಮಳೆ ಏನೇನೂ ಅಲ್ಲ” ಎಂದು ಶುರುವಾಗುವ ಅನುಭವಿ ಹಿರಿಜೀವಿಗಳ ಮಾತು, ತಮ್ಮ ಜೀವನದ ಸಾಹಸಗಾಥೆಗಳನ್ನು ಅನಾವರಣಗೊಳಿಸುವ ಹಾದಿಯಾಗುತ್ತದೆ. ತಮ್ಮ ಜೀವನದ ನೋವು-ನಲಿವುಗಳು ಮುಂದಿನ ಪೀಳಿಗೆಯ ಹೃದಯಗಳಿಗೆ ತಲುಪಿ ಸ್ಫೂರ್ತಿದಾಯಕವಾಗುವುದು ಎಂಬ ಅರಿವು ಅವರಲ್ಲಿ ಸುಪ್ತವಾಗಿರುವುದಲ್ಲವೆ ! ಮೊದಲ ಬಾರಿಗೆ ತಮ್ಮ ಜೀವನ ಸಂಗಾತಿಯನ್ನು ಕಂಡದ್ದು, ಚಿಕ್ಕ ವಯಸ್ಸಿನಲ್ಲಿಯೇ ಮದುವೆ ಮಾಡಿದ್ದು, ಮೊದಲ ಸಲ ಅಡುಗೆ ಮಾಡಿದ್ದು… ಹೀಗೆ ಹತ್ತಾರು ನೆನಪಿನ ಬುತ್ತಿ ಬಿಚ್ಚಿಕೊಳ್ಳುತ್ತ ಹೋಗುತ್ತದೆ. ಇದು ಹಳೆಯ ದೇಹಗಳ ಕಥೆಯಾದರೆ, ಅವರ ಮಡಿಲಲ್ಲಿ ಮಲಗುವ ಎಳೆ ಜೀವಗಳ ಜಗತ್ತೇ ವಿಭಿನ್ನ-ವಿಶಿಷ್ಟ.

ಕೈಗೂಸು ಗುಡುಗು-ಸಿಡಿಲಿನ ಆರ್ಭಟಕ್ಕೆ ಬೆದರಿಕೊಂಡರೂ ಕೆಳಗಿಳಿಯುವ ಮಳೆನೀರು ಮೊಗದಲ್ಲಿ ಹೂನಗುವನ್ನು ಅರ‌ಳಿಸುತ್ತದೆ. ಇನ್ನು ಶಾಲೆಯ ಮೆಟ್ಟಿಲು ಹತ್ತಿರುವ ಮಕ್ಕಳಲ್ಲಿ ಬೆಳ್ಳಂಬೆಳಗ್ಗೆ ಸುರಿಯುವ ಮಳೆ ಹಾಸಿಗೆ ಬಿಟ್ಟು ಮೇಲೇಳಲು ಆಲಸ್ಯವನ್ನು ಉಂಟುಮಾಡುತ್ತದೆಯಾದರೂ ಅಮ್ಮನ ಒತ್ತಾಯಕ್ಕೆ ಮಣಿದು, ತಯಾರಾಗಿ ಮನೆಯಿಂದ ಹೊರಗೆ ಕಾಲಿಟ್ಟ ಕೂಡಲೇ ಮಳೆ ಹನಿಗಳೊಂದಿಗೆ ನರ್ತಿಸಲು ಪ್ರಾರಂಭಿಸುತ್ತಾರೆ.

ಬಹುಮುಖ್ಯವಾಗಿ ಮಳೆ ನವಿರಾದ ಭಾವಗಳನ್ನೆಬ್ಬಿಸುವುದು ಹದಿಹರೆಯದವರಲ್ಲಿ ಮತ್ತು ಯುವಮನಸುಗಳಲ್ಲಿ, ಕಾಲೇಜು- ಗೆಳೆಯ-ಗೆಳತಿಯರ ಸಂಗಡದಲ್ಲಿರುವ ಈ ಜೀವಗಳು ಮಳೆಯಲ್ಲಿ ಅರಳುವ ಭಾವಗಳಲ್ಲಿ ಮಿಂದೇಳುತ್ತವೆ. ಪ್ರೀತಿ-ಪ್ರೇಮಗಳ ಬಲೆಯಲ್ಲಿ ಬಿದ್ದವರು ಬೀಳುವ ಪ್ರತಿ ಹನಿಯಲ್ಲೂ ಪ್ರೇಮದ ದನಿ ಕೇಳುತ್ತಾರೆ. ಇದನ್ನು ಹೊರತುಪಡಿಸಿ ಹಸಿರ ರಾಶಿ ಮಿಂದೇಳುವಾಗ ಹೊಸ ಆಲೋಚನ ಸರಣಿಯನ್ನು ಕಂಡುಕೊಳ್ಳುವ ಯುವಕ-ಯುವತಿಯರಿಗೂ ಕೊರತೆಯೇನಿಲ್ಲ.

ಕವಿಮನಸುಗಳಲ್ಲಿ ಬಿದ್ದ ಹನಿಯು ಮೊಳಕೆಯೊಡೆದು ಕಥೆ-ಕವನ-ಲೇಖನಗಳಾಗಿ ಅರಳುತ್ತವೆ. ಚಿತ್ರಕಾರರ ಕುಂಚಗಳಲ್ಲಿ ಅದ್ಭುತವಾಗಿ ಹೊರಹೊಮ್ಮುತ್ತದೆ. ರೈತನಲ್ಲಿ ಹೊಸ ಹುರುಪು ತುಂಬುವ ಹನಿಗಳು ಬರೀ ಸಣ್ಣ ಹನಿಯಾಗಿರದೆ ಹೊಸ ಆರಂಭದ ದನಿಯಾಗುತ್ತದೆ. ಪುಟ್ಟ ಪುಟ್ಟ ಹನಿಗಳು ನೆಲವನ್ನೆಲ್ಲ ಹಸಿಯಾಗಿಸಿ, ದೊಡ್ಡ ಪಾಠವನ್ನೇ ಕಲಿಸುವಂತೆ ಕಾಣುತ್ತವೆ. ಮಳೆಹನಿಗಳು- ನೆನಪಾಗಿ, ಅನುಭವಗಳಾಗಿ, ಜೀವನವಾಗಿ, ಜಗತ್ತಾಗುವುದು ವಿಶೇಷವೇ ಹೌದು.

Advertisement

ಪಲ್ಲವಿ ಕಬ್ಬಿನಹಿತ್ಲು
ದ್ವಿತೀಯ ಬಿ. ಕಾಂ.
ಸರಕಾರಿ ಪ್ರಥಮ ದರ್ಜೆ ಕಾಲೇಜು, ಸುಳ್ಯ

Advertisement

Udayavani is now on Telegram. Click here to join our channel and stay updated with the latest news.

Next