ಐಸಿಸಿ ಟಿ20 ವಿಶ್ವಕಪ್ ಗೆಲುವಿನ ಬಳಿಕ ಇಡೀಯ ಭಾರತವೇ ಸಂತಸದಲ್ಲಿ ಕುಣಿಯುತ್ತಿದೆ. ವಿಶ್ವವೇ ಮೆಚ್ಚಿದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಅವರ ನಡುವೆ ಡ್ರೆಸ್ಸಿಂಗ್ ರೂಮ್ ನಲ್ಲಿ ಹಣೆಗೊಂದು ತಿಲಕವಿಟ್ಟು ಕನ್ನಡಿಗನೊಬ್ಬ ಸಾರ್ಥಕ ನಗೆ ಬೀರುತ್ತಿದ್ದಾನೆ. ಆತನೇ ಭಾರತದ ಥ್ರೋ ಡೌನ್ ಸ್ಪೆಷಲಿಸ್ಟ್ ರಘು ಯಾನೆ ರಾಘವೇಂದ್ರ.
ರಾಘವೇಂದ್ರ ಅವರ ಬಗ್ಗೆ ಉದಯವಾಣಿ ಡಾಟ್ ಕಾಮ್ 2020ರ ಮೇ 22ರಂದು ಪ್ರಕಟಿಸಿದ ವೆಬ್ ಫೋಕಸ್ ವರದಿ ಇಲ್ಲಿದೆ.
ನಾಲ್ಕೂವರೆ ವರ್ಷ ಸ್ಮಶಾನದಲ್ಲಿ ಕಳೆದಿದ್ದ ಈ ಕನ್ನಡಿಗ ಈಗ ಟೀಂ ಇಂಡಿಯಾದ ಪ್ರಮುಖ ಶಕ್ತಿ!
ಇತ್ತೀಚೆಗೆ ಬಾಂಗ್ಲಾದೇಶದ ಕ್ರಿಕಟ್ ಆಟಗಾರ ತಮೀಮ್ ಇಕ್ಬಾಲ್ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಜೊತೆ ಮಾತನಾಡುವಾಗ ಭಾರತೀಯ ಬ್ಯಾಟ್ಸಮನ್ ಗಳು ವೇಗಿಗಳನ್ನು ಲೀಲಾಜಾಲಾವಾಗಿ ಎದುರಿಸುವ ರಹಸ್ಯದ ಬಗ್ಗೆ ಪ್ರಶ್ನಿಸಿದ್ದರು. ಆಗ ಇದರ ಯಶಸ್ಸನ್ನು ಕೊಹ್ಲಿ ಮುಕ್ತಕಂಠದಿಂದ ನೀಡಿದ್ದು ಓರ್ವ ಕನ್ನಡಿಗನಿಗೆ. ಅವರೇ ಥ್ರೋ ಡೌನ್ ಸ್ಪೆಷಲಿಸ್ಟ್ ರಘು ಯಾನೆ ರಾಘವೇಂದ್ರ.
ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಮಧ್ಯಮ ವರ್ಗದ ಹುಡುಗ ಈ ರಾಘವೇಂದ್ರ. ಕ್ರಿಕೆಟ್ ಎಂದರೆ ಎಲ್ಲಿಲ್ಲದ ಹುಚ್ಚು. ಮನೆಯಂಗಳದಲ್ಲಿ ಬ್ಯಾಟ್ ಬೀಸುತ್ತಾ ಮುಂದೊಂದು ದಿನ ಟೀಂ ಇಂಡಿಯಾದ ಬ್ಲೂ ಜೆರ್ಸಿಯಲ್ಲಿ ಆಡುವ ಕನಸು ಕಾಣುತ್ತಿದ್ದ. ತಂದೆ ಶಾಲಾ ಶಿಕ್ಷಕ. ಮಗನ ಕ್ರಿಕೆಟ್ ಹುಚ್ಚು ಅವರಿಗೆ ಹಿಡಿಸಿರಲಿಲ್ಲ. ಒಮ್ಮೆ ಸಂಬಂಧಿಕರ ಮನೆಗೆಂದು ಮುಂಬೈಗೆ ಹೋಗಿದ್ದ ರಘು ಅಲ್ಲಿ ಕ್ರಿಕೆಟ್ ಗುರು ರಮಾಕಾಂತ್ ಆಚ್ರೇಕರ್ ಅವರ ಬಳಿ ಕೆಲ ದಿನಗಳ ಕಾಲ ಪಾಠ ಕಲಿತಿದ್ದ.
ಮುಂಬೈನಿಂದ ಮರಳಿ ಊರಿಗೆ ಬಂದ ಮತ್ತೆ ಕ್ರಿಕೆಟ್ ಮುಂದುವರಿಸುತ್ತೇನೆ ಎಂದ ಮಗನ ಮಾತಿಗೆ ಅಪ್ಪ ಒಪ್ಪಿರಲಿಲ್ಲ. ಆದರೆ ಕ್ರಿಕೆಟ್ ಮೇಲಿನ ಅತಿಯಾದ ಪ್ರೀತಿ ರಘುನನ್ನು ಕುಮಟಾದಲ್ಲಿ ಇರಲು ಬಿಡಲಿಲ್ಲ. ಕೈಯಲ್ಲಿ ಕಾಸೆನೂ ಇಲ್ಲದೆ ಇದ್ರೂ ಕ್ರಿಕೆಟ್ ಪ್ರೀತಿಯೇ ನನ್ನ ಸಂಪತ್ತು ಎಂದು ರಘು ಕುಮಟಾದಿಂದ ರಾಜ್ಯ ಕ್ರಿಕೆಟ್ ಸಂಸ್ಥೆಯ ಧಾರವಾಡ ವಲಯದ ಆಯ್ಕೆ ಟ್ರಯಲ್ಸ್ ಗಾಗಿ ಹುಬ್ಬಳ್ಳಿ ಬಸ್ಸು ಹತ್ತಿದ್ದ.
ಹುಬ್ಬಳ್ಳಿಯಲ್ಲಿ ಉಳಿದುಕೊಳ್ಳಲು ಯಾವುದೇ ಸಂಬಂಧಿಕರ ಮನೆಯಾಗಲಿ, ಹಾಸ್ಟೆಲ್ ಆಗಲಿ ಇರಲಿಲ್ಲ. ಕೈಯಲ್ಲಿ ಇದ್ದಿದ್ದು ಚಿಕ್ಕಾಸು ಮಾತ್ರ. ಹೀಗಾಗಿ ಸುಮಾರು ಎರಡು ವಾರಗಳ ಕಾಲ ಬಸ್ ಸ್ಟಾಂಡ್ ನಲ್ಲಿ ಮಲಗಿದರು. ಅಲ್ಲಿ ಪೊಲೀಸರು ತೊಂದರೆ ಕೊಟ್ಟಾಗ ಸಮೀಪದ ಹನುಮಂತನ ದೇವಾಸ್ಥಾನವೇ ರಾಘವೇಂದ್ರನ ತಾಣವಾಯಿತು. ಆದರೆ ಕೆಲವೇ ದಿನಗಳಲ್ಲಿ ರಘು ಬೇರೆ ಜಾಗ ನೋಡಬೇಕಾಯಿತು.
ಜನಾಶ್ರಯದ ತಾಣಗಳಲ್ಲಿ ತನಗೆ ಉಚಿತ ಆಶ್ರಯ ದೊರೆಯದು ಎಂದು ಅರಿತ ರಘು ಆರಿಸಿಕೊಂಡಿದ್ದು ಸ್ಮಶಾನವನ್ನು. ಕೆಎಸ್ ಸಿಎ ಮೈದಾನದ ಬಳಿಯ ಸ್ಮಶಾನವೇ ರಘುವಿಗೆ ಮನೆ. ಹಗಲು ಮೈದಾನದಲ್ಲಿ ಅಭ್ಯಾಸ ರಾತ್ರಿ ಸ್ಮಶಾನದಲ್ಲಿ ವಾಸ. ಆಫ್ ಸ್ಪಿನ್ನರ್ ಆಗಿದ್ದ ರಘು ತನ್ನ ಜೀವನವು ಒಂದು ದಿನ ಸ್ಪಿನ್ ಆಗಿ ಕಷ್ಟಗಳೆಲ್ಲಾ ಬೌಲ್ಡ್ ಆಗಿ ತಾನು ಒಂದು ದಿನ ಮಿಂಚುವ ಕನಸನ್ನು ಸ್ಮಶಾನದ ಮೂಲೆಯಲ್ಲಿ ಇರುತ್ತಾ ಕಾಣುತ್ತಿದ್ದ. ಮುಂದಿನ ನಾಲ್ಕುವರೆ ವರ್ಷ ಸ್ಮಶಾನದ ಚಳಿ- ಮಳೆ- ಬಿಸಿಲು ಯಾವುದೂ ಅಡ್ಡಿಯಾಗಲಿಲ್ಲ ರಘುವಿಗೆ. ಯಾಕೆಂದರೆ ಅಷ್ಟೊಂದು ಉತ್ಕಟವಾಗಿತ್ತು ರಘುವಿನ ಕ್ರಿಕೆಟ್ ಪ್ರೀತಿ.
ಧಾರವಾಡ ವಲಯದ ಪರ ಆಡುತ್ತಿದ್ದ ರಘು ಒಂದು ಬಾರಿ ಪಂದ್ಯದಲ್ಲಿ ನಾಲ್ಕು ವಿಕೆಟ್ ಕಿತ್ತಿದ್ದ. ಇದರಿಂದ ಈತನಿಗೆ ಕೆಎಲ್ ಇ ಸೊಸೈಟಿ ಉಳಿದುಕೊಳ್ಳಲು ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಿತ್ತು. ಇಷ್ಟು ದಿನ ಕಷ್ಟಪಟ್ಟಿದ್ದಕ್ಕೆ ಮೊದಲ ಯಶಸ್ಸು ಸಿಕ್ಕಿದೆ ಎಂದು ಸಂತೋಷಪಟ್ಟಿದ್ದ ರಘುವಿಗೆ ಕೆಲವೇ ದಿನಗಳಲ್ಲಿ ಆಘಾತ ಎದುರಾಗಿತ್ತು. ಮೆಟ್ಟಿಲು ಹತ್ತುತ್ತಿದ್ದ ರಘು ಜಾರಿ ಬಿದ್ದು ಬಲಗೈಗೆ ಪೆಟ್ಟಾಗಿತ್ತು. ಮುಂದೆಂದೂ ಬೌಲಿಂಗ್ ನಡೆಸಲು ಸಾಧ್ಯವಿಲ್ಲ ಎಂದು ಡಾಕ್ಟರ್ ಶರಾ ಬರೆದಾಗಿತ್ತು!
ಕ್ರಿಕೆಟ್ ಎಂಬ ಏಕೈಕ ಕನಸಿನ ಬೆನ್ನತ್ತಿ ಬಂದಿದ್ದ ರಘುವಿಗೆ ಆಕಾಶವೇ ಕಳಚಿ ಬಿದ್ದ ಅನುಭವ. ಮುಂದೆ ಏನು ಮಾಡಬೇಕು ಎಂದು ತಲೆ ಮೇಲೆ ಕೈಹೊತ್ತು ಕುಳಿತಿದ್ದವಗೆ ಬಂದ ಯೋಚನೆಯೆಂದರೆ ಕ್ರಿಕೆಟ್ ಕೋಚಿಂಗ್. ಹೌದು ಟೀಂ ಇಂಡಿಯಾ ಸೇರುವ ಆಸೆ ಕೈಬಿಟ್ಟ ರಘು ಕೋಚಿಂಗ್ ಪಟ್ಟುಗಳನ್ನು ಕಲಿತು ಜೀವನೋಪಾಯದ ದಾರಿ ಹುಡುಕ ಹೊರಟ. ಹೀಗೆ ಹೊರಟವ ಸೇರಿದ್ದು ರಾಜಧಾನಿ ಬೆಂಗಳೂರಿಗೆ. ಕೆಐಒಸಿ ಅಕಾಡಮಿಯಲ್ಲಿ ಆಟಗಾರರಿಗೆ ಸಹಾಯ ಮಾಡುತ್ತಿದ್ದ ರಘುವನ್ನು ಕಂಡ ಮಾಜಿ ಆಟಗಾರರೊಬ್ಬರು ಕೆಎಸ್ ಸಿಎಗೆ ಕರೆತಂದರು. ಅಲ್ಲಿ ರಣಜಿ ಆಟಗಾರರಿಗೆ ಸಹಾಯಕನಾಗಿದ್ದ ರಘುವಿಗೆ ಯಾವುದೇ ವೇತನ ಸಿಗುತ್ತಿರಲಿಲ್ಲ.
ಹೀಗೆ ಎರಡು ವರ್ಷದ ಕರ್ನಾಟ ರಣಜಿ ತಂಡಕ್ಕೆ ಸಹಾಯಕನಾಗಿ ದುಡಿದ ರಘುವನ್ನು ಕಂಡ ಎನ್ ಸಿಎ (ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ)ಯ ಅಧಿಕಾರಿಯೊಬ್ಬರು ತಮ್ಮಲ್ಲಿಗೆ ಕರೆಸಿಕೊಂಡು. ಅಲ್ಲಿ ಕೋಚ್ ಗಳಿಗೆ ಸಹಾಯ ಮಾಡಬೇಕಿತ್ತು. ಅದೂ ಕೂಡಾ ವೇತನ ರಹಿತ ಕೆಲಸ. ಆದರೆ ಕ್ರಿಕೆಟ್ ಪ್ರೇಮ ರಘುವಿನಿಂದ ಇದೆಲ್ಲಾ ಮಾಡಿಸುತ್ತಿತ್ತು. ಇದೇ ನಿಸ್ವಾರ್ಥ ಸೇವೆಗೆ ಮುಂದೊಂದು ದಿನ ಫಲ ಸಿಕ್ಕಿತ್ತು. 2008ರಲ್ಲಿ ಬಿಸಿಸಿಐ ಉದ್ಯೋಗಿಯಾಗಿ ಸೇರಿದರು. ಎನ್ ಸಿಎ ಗೆ ಬರುವ ಆಟಗಾರರಿಗೆ ಸಹಾಯ ಮಾಡುತ್ತಾ ಅವರ ಪ್ರೀತಿ ಗಳಿಸುತ್ತಿದ್ದ.
ಮುಂದೆ 2011ರಲ್ಲಿ ಟೀಂ ಇಂಡಿಯಾದ ಟ್ರೈನಿಂಗ್ ಅಸಿಸ್ಟೆಂಟ್ ಆಗಿ ರಘು ಆಯ್ಕೆಯಾದ. ಆಟಗಾರರಿಗೆ ಥ್ರೋ ಬೌಲಿಂಗ್ ಮಾಡುವುದು ರಘುವಿನ ಪ್ರಮುಖ ಕೆಲಸವಾಯಿತು. ರಘು ಎಸೆಯುವ 150ರಿಂದ 155 ಕಿ.ಮೀ ವೇಗದ ಬೌಲಿಂಗ್ ನಿಂದ ಟೀಂ ಇಂಡಿಯಾ ಆಟಗಾರರು ಬ್ಯಾಟಿಂಗ್ ಅಭ್ಯಾಸ ನಡೆಸುತ್ತಾರೆ. ಇಷ್ಟೊಂದು ವೇಗದ ಬೌಲಿಂಗ್ ಅನ್ನು ನೆಟ್ ನಲ್ಲಿ ಎದುರಿಸುವ ಕಾರಣ ಮೈದಾನದಲ್ಲಿ ವೇಗಿಗಳನ್ನು ಸುಲಭವಾಗಿ ಎದುರಿಸಬಹುದು ಎನ್ನುವುದು ಕೊಹ್ಲಿ ಮಾತು. ಧೋನಿ ಪ್ರಕಾರ ರಘು ಟೀಂ ಇಂಡಿಯಾದ ವಿದೇಶಿ ಬೌಲರ್.
ಒಂದು ಕಾಲದಲ್ಲಿ ಸ್ಮಶಾನದಲ್ಲಿ ಮಲಗುತ್ತಿದ್ದ ರಘು ಇಂದು ಟೀಂ ಇಂಡಿಯಾ ಆಟಗಾರರ ಜೊತೆ ವಿಶ್ವ ಸುತ್ತಾಡುತ್ತಾರೆ. ಸಂಕಷ್ಟದ ಸರಮಾಲೆಯಲ್ಲಿ ಸಿಲುಕಿದ್ದ ರಘುವಿನ ಥ್ರೋ ಕಂಡು ಇಂದು ಇತರ ಅಂತಾರಾಷ್ಟ್ರೀಯ ಕೋಚ್ ಗಳು ಬಂದು ಸಲಹೆ ಕೇಳುತ್ತಾರೆ. ತನ್ನ ಕೆಲಸದ ಮೇಲಿನ ಉತ್ಕಟ ಪ್ರೇಮ, ನಿಷ್ಠೆಯಿಂದ ಅತ್ಯುನ್ನತವಾದುದನ್ನು ಪಡೆಯಬಹುದು ಎನ್ನುವುದಕ್ಕೆ ನಮ್ಮ ಕನ್ನಡದ ಹುಡುಗ ರಘು ಸಾಕ್ಷಿ.
ಕೀರ್ತನ್ ಶೆಟ್ಟಿ ಬೋಳ