ಅಲ್ಲಿದ್ದ ಅಷ್ಟೂ ಮಂದಿ ಏನು ಮಾತನಾಡಬೇಕು ಎಂಬ ಬಗ್ಗೆ ಪೂರ್ವತಯಾರಿ ಮಾಡಿಕೊಂಡಿರಲಿಲ್ಲ. ವೇದಿಕೆ ಮೇಲೆ ಕುಳಿತರಾಯಿತು ಎಂಬಂತೆ ಬಂದಿದ್ದರು. ಅದೇ ಕಾರಣದಿಂದ ಪತ್ರಿಕಾಗೋಷ್ಠಿ 10 ನಿಮಿಷದೊಳಗಡೆ ಮುಗಿದೇ ಹೋಯಿತು. ಅಂದಹಾಗೆ, ಇದು “ಆ ಜೀವ’ ಸಿನಿಮಾದ ಸುದ್ದಿ. “ಆ ಜೀವ’ ಎಂಬ ಸಿನಿಮಾವೊಂದು ಸದ್ದಿಲ್ಲದೇ ತಯಾರಾಗಿದೆ. ಇತ್ತೀಚೆಗೆ ಚಿತ್ರದ ಆಡಿಯೋ ಬಿಡುಗಡೆಯಾಯಿತು. ಈ ಚಿತ್ರವನ್ನು ಕೆ.ಜಿ.ಎಮ್.ಮಹದೇವ್ ಎನ್ನುವವರು ನಿರ್ದೇಶಿಸಿದ್ದಾರೆ. ಈ ಹಿಂದೆ ಒಂದು ಸಿನಿಮಾ ಮಾಡಿದ್ದರಂತೆ ಮಹದೇವ್. “ಆ ಜೀವ’ ಅವರಿಗೆ ಎರಡನೇ ಸಿನಿಮಾ. ಸಿನಿಮಾ ಬಗ್ಗೆ ಏನು ಮಾತನಾಡಬೇಕೆಂಬ ಅರಿವು ಅವರಿಗಿರಲಿಲ್ಲ. ಕೊನೆಗೂ ಪತ್ರಕರ್ತರು ಸಿನಿಮಾ ಬಗ್ಗೆ ಪ್ರಶ್ನಿಸಿದಾಗ, ಕಥಾಸಾರಂಶವನ್ನು ಹೇಳಿಬಿಟ್ಟರು ಮಹದೇವ್.
“ಜೀವ ಎಂಬ ವ್ಯಕ್ತಿ ಬಂಗಲೆಯೊಳಗಿನ ರಹಸ್ಯವನ್ನು ಬಯಲು ಮಾಡಲು ತನ್ನ ಸ್ನೇಹಿತರೊಂದಿಗೆ ಹೋಗುತ್ತಾನೆ. ಈ ವೇಳೆ ಬಂಗಲೆಯೊಳಗಿನ ದುಷ್ಟಶಕ್ತಿಗಳ ಕೈಗೆ ಸಿಲುಕಿ ಏನೆಲ್ಲಾ ಕಷ್ಟ ಅನುಭವಿಸುತ್ತಾನೆ ಮತ್ತು ಅವೆಲ್ಲದರಿಂದ ಪಾರಾಗಿ ಹೇಗೆ ಬರುತ್ತಾನೆ ಎಂಬ ಅಂಶದೊಂದಿಗೆ ಚಿತ್ರ ಸಾಗುತ್ತದೆ’ ಎಂದು ಸಿನಿಮಾ ಬಗ್ಗೆ ಹೇಳಿದರು ಮಹದೇವ್. ಇಷ್ಟು ಹೇಳಿದ ಮೇಲೆ ಇದೊಂದು ಹಾರರ್ ಸಿನಿಮಾ ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಬೆಂಗಳೂರು ಹಾಗೂ ಚಿಕ್ಕಮಗಳೂರು ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ.
ಚಿತ್ರದಲ್ಲಿ ಜಿ.ಎಮ್. ರಾಜು ಹೀರೋ ಆಗಿ ನಟಿಸಿದ್ದಾರೆ. ಕಥೆ ತುಂಬಾ ಚೆನ್ನಾಗಿದ್ದ ಕಾರಣ ಹೀರೋ ಆಗಿ ನಟಿಸಿದ್ದಾಗಿ ಹೇಳಿಕೊಂಡರು. ರಮ್ಯಾ ಗಾಯತ್ರಿ ಈ ಸಿನಿಮಾದ ನಾಯಕಿ. ಇನ್ನು ಚಿತ್ರದ ಹಾಡೊಂದರಲ್ಲಿ ಸೋನಮ್ ಕಾಣಿಸಿಕೊಂಡಿದ್ದಾರೆ. ಆ ಹಾಡಿನಲ್ಲಿ ಕಾಣಿಸಿಕೊಂಡ ಅನುಭವ ಹಂಚಿಕೊಂಡು ಖುಷಿಯಾದರು ಸೋನಮ್.
ಪರಮೇಶ್ವರಯ್ಯ ಈ ಸಿನಿಮಾದ ನಿರ್ಮಾಪಕರು. ಈ ಹಿಂದೆ “ಧನು’ ಎಂಬ ಸಿನಿಮಾ ನಿರ್ಮಾಣ ಮಾಡಿದ್ದ ಪರಮೇಶ್ವರಯ್ಯನವರಿಗೆ “ಆ ಜೀವ’ ಕಥೆ ಇಷ್ಟವಾಗಿ ನಿರ್ಮಿಸಲು ಮುಂದಾದರಂತೆ. ಚಿತ್ರಕ್ಕೆ ಶ್ರೀ ಹರ್ಷ ಸಂಗೀತ, ರಾಜು ಭಾಸ್ಕರ್ ಹಿನ್ನೆಲೆ ಸಂಗೀತವಿದೆ. ಚಿತ್ರದ ಹಾಡೊಂದಕ್ಕೆ ನೃತ್ಯ ನಿರ್ದೇಶನ ಮಾಡಿದ ಮುರುಗೇಶ್ ಕೂಡಾ ತಮ್ಮ ಅನುಭವ ಹಂಚಿಕೊಂಡರು.