Advertisement

ವಯಸ್ಸು 87 ದಾಟಿದರೂ ಹಳ್ಳಿಗಳಿಗೆ ಹೋಗಿ ವೈದ್ಯಕೀಯ ಸೇವೆ ಒದಗಿಸುತ್ತಿರುವ ಮಹಾನ್ ವ್ಯಕ್ತಿತ್ವ

09:53 PM Nov 04, 2020 | Suhan S |

ನಾವು ಆಯಿತು. ನಮ್ಮ ಕೆಲಸವಾಯಿತು. ಹೀಗೆ ದಿನಗಳನ್ನು ದೂಡಿ,ವರ್ಷಗಳನ್ನು ಸವೆದು ಬದುಕು ಬವಣೆಯನ್ನು ಮುಗಿಸುವ ವ್ಯಕ್ತಿಗಳ ಸಾಲಿಗೆ ನಾವು ನೀವು ಸೇರಿರಬಹುದು. ಆದರೆ ಕೆಲವರು ಈ ಸಾಲಿನಲ್ಲಿ ಇದ್ದುಕೊಂಡೇ ಭಿನ್ನವಾಗಿ ಕಾಣುತ್ತಾರೆ. ಅಂಥ ವ್ಯಕ್ತಿಗಳನ್ನು ಸಾಧಕರೆನ್ನಬಹುದು. ಸಮಾಜದ ಸೇವೆಯಲ್ಲಿ ನಿಸ್ವಾರ್ಥತನವನ್ನು ಕಾಣುವ ವ್ಯಕ್ತಿಯೊಬ್ಬರ ಕಥೆಯಿದು.

Advertisement

ವಯಸ್ಸು 87,ಬಾಡಿದ ದೇಹ,ಕುಗ್ಗಿದ ಉತ್ಸಾಹ,ದಣಿವು, ಮಾತ್ರೆ,ನಿದ್ದೆ ಇವಿಷ್ಟೇ ಬದುಕಿನ ನಿತ್ಯ ದೃಶ್ಯದಂತೆ ಚಟುವಟಿಕೆಯಾಗಿ  ಸಾಗುವ ಘಟ್ಟದಲ್ಲಿ ಇರುವ ವ್ಯಕ್ತಿಯೊಬ್ಬರ ಕಥೆಯೆಂದು ಅಂದುಕೊಳ್ಳ ಬೇಡಿ. ವಯಸ್ಸು ಮತ್ತು ಮನಸ್ಸಿಗೆ ಇಲ್ಲಿ ಯಾವ ಸಂಪರ್ಕವೇ ಇಲ್ಲ. ವಯಸ್ಸು 87 ದಾಟಿದರೂ ಮನಸ್ಸು, ದೇಹಗಳೆರೆಡು ಇಪ್ಪತ್ತು ಚಿಗುರಿದ ಯುವಕನ ಹಾಗೆ. ಇದು ಮಹಾರಾಷ್ಟ್ರದ ಚಂದಾಪೂರ್ ಗ್ರಾಮದ ವಯೋ ವೃದ್ಧ ಹೋಮಿಯೋಪತಿ ವೈದ್ಯ ರಾಮಚಂದ್ರ ದಾಂಡೆಕರ್ ಅವರ ಕಥೆ.

ರಾಮಚಂದ್ರ ದಾಂಡೆಕರ್ ಅವರ ದಿನ ಆರಂಭವಾಗುವುದು ಸೇವೆಯ ಮೂಲಕ. ಸೇವೆ ಅಂದರೆ ತಾವು ಕಲಿತು ಕರಗತ ಮಾಡಿಕೊಂಡ ವೈದ್ಯ ವೃತ್ತಿ. ಹೋಮಿಯೋಪತಿ ವೈದ್ಯರಾಗಿರುವ ರಾಮಚಂದ್ರ ತಮ್ಮ 87 ನೇ ವಯಸ್ಸಿನಲ್ಲೂ ಹಳ್ಳಿಗರ ಪಾಲಿಗೆ ಜೀವ ಉಳಿಸುವ ಕಾಯಕ ಮಾಡುತ್ತಿದ್ದಾರೆ. ಬೆಳಗಿನ ಜಾವ ಸೈಕಲ್ ಹತ್ತಿ ಮಹಾರಾಷ್ಟ್ರದ ದೂರದ ಹಳ್ಳಿಗಳಿಗೆ ಪಯಣ ಬೆಳೆಸಿ ಗುರಿ ಮುಟ್ಟಿದವರು ಮನೆಗೆ ಬರುವುದು ಸಂಜೆ ಮೇಲೆಯೇ.

ರಾಮಚಂದ್ರ ಹೋಮಿಯೋಪತಿಯಲ್ಲಿ ಡಿಪ್ಲೊಮಾ ಪದವಿ ಪಡೆದು,ಒಂದು ವರ್ಷ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿಕೊಂಡು, ಗ್ರಾಮೀಣ ಭಾಗದಲ್ಲಿ ವೈದ್ಯಕೀಯ ಸೇವೆಯನ್ನು ಆರಂಭಿಸುತ್ತಾರೆ. ಹಳ್ಳಿಗಳಲ್ಲಿ ಬಸ್ಸಿನ ಕೊರತೆಯಿಂದ, ಸರಿಯಾದ ‌ಸಮಯಕ್ಕೆ ಚಿಕಿತ್ಸೆ ಸಿಗದೆ ಪರದಾಡುವ ಪರಿಸ್ಥಿತಿಯನ್ನು ಕಣ್ಣಾರೆ ಕಂಡ ರಾಮಚಂದ್ರ ಅವರು ಕಾಡಿನ ಪ್ರದೇಶದ ಮಧ್ಯದಲ್ಲಿರುವ ಮನೆಗಳಿಗೆ ಭೇಟಿ ಕೊಟ್ಟು ಚಿಕಿತ್ಸೆಯನ್ನು ನೀಡುತ್ತ ‌ಬರುತ್ತಿದ್ದಾರೆ.

Advertisement

ಬೆಳಗ್ಗಿನ ಜಾವ ಸೈಕಲ್ ನಲ್ಲಿ ಚಿಕಿತ್ಸೆಗೆ ಸಂಬಂಧಿಸಿದ ‌ಔಷಧಿ ಹಾಗೂ ಪರಿಕರಗಳನ್ನು ಬ್ಯಾಗ್ ನಲ್ಲಿ ಹಾಕಿಟ್ಟು ಪೆಡಲ್ ತುಳಿಯುತ್ತಾ ಸಾಗಿ ಬಂದ ಇವರ ಸೇವೆ 60 ವರ್ಷಕ್ಕೂ ಹೆಚ್ಚಿನ ವರ್ಷವನ್ನು ಪೊರೈಸಿದೆ.

ಕೋವಿಡ್ ಪರಿಸ್ಥಿತಿಯಲ್ಲೂ ರಾಮಚಂದ್ರ ಹಳ್ಳಿಗರ ವೈದ್ಯಕೀಯ ಸೇವೆಯಲ್ಲಿ ಹಿಂದೆ ಬಿದ್ದಿಲ್ಲ.ಅವಶ್ಯಕತೆಯಿದ್ದಾಗ ನಡುರಾತ್ರಿಯಲ್ಲೂ ಚಿಕಿತ್ಸೆಗೆ ಧಾವಿಸುವ ಇವರ ಸೇವೆಗೆ ಹಾಗೂ ದೇಹಕ್ಕೆ ಸುಸ್ತು ಎನ್ನುವುದು ಇದುವರೆಗೆ ಆಗಿಲ್ಲ. ಬಡವರಿಗೆ ಸದಾ ಮಿಡಿಯುವ ಇವರ ಕೈ ಹಣವನ್ನು ಪಡೆಯುವುದು ಬಿಡುವುದು ಕುಟುಂಬದ ಮೇಲೆ ಅವಲಂಬಿತವಾಗುತ್ತದೆ‌ ಎನ್ನುತ್ತಾರೆ.

 

–  ಸುಹಾನ್ ಶೇಕ್

Advertisement

Udayavani is now on Telegram. Click here to join our channel and stay updated with the latest news.

Next