ಗುರುವಾಗಿ ಗುರಿ ಮುಟ್ಟಿಸುವ ಶಿಕ್ಷಕರನ್ನು ಮರೆಯೋದು ಸುಲಭವಲ್ಲ. ಬಾಲ್ಯದಿಂದ ಯೌವನದ ಹಂತ ಮುಗಿದು ಭವಿಷ್ಯ ರೂಪಿಸಿಕೊಳ್ಳುವಲ್ಲಿ ಗುರುವಿನ ಶ್ರಮ,ಸಹಕಾರ,ಸಲಹೆಯನ್ನು ಬದುಕಿಗೆ ಜೋಳಿಗೆ ಹಾಕಿ ಬೆಳೆಯುವ ವಿದ್ಯಾರ್ಥಿಗಳು ಯಶಸ್ಸಿನ ಘಟ್ಟಕ್ಕೆ ತಲುಪಿದಾಗ ಮೊದಲಿಗೆ ನೆನೆಯುವುದು ಗುರುವನ್ನು.
ಲಾಕ್ ಡೌನ್ ನಿಂದಾಗಿ ಶೈಕ್ಷಣಿಕ ವ್ಯವಸ್ಥೆ ನಲುಗಿ ಹೋಗಿದೆ. ನೂರಾರು ವಿದ್ಯಾರ್ಥಿಗಳಿಗೆ ಅಕ್ಷರ ಕಲಿಸುವ ಶಾಲೆಯ ಬಾಗಿಲುಗಳು ಬಂದ್ ಆಗಿದೆ. ಇಂಥ ಸಮಯದಲ್ಲಿ ಸರ್ಕಾರ ಹೇಗಾದರೂ ಮಾಡಿ ಶಿಕ್ಷಣವನ್ನು ಮುಂದುವರೆಸಲು ಆನ್ಲೈನ್ ಶಿಕ್ಷಣದ ಮೂಲಕ ಪ್ರಯತ್ನಿಸುತ್ತಿದೆ.
ಇಲ್ಲೊಬ್ಬ ಶಿಕ್ಷಕರು ಲಾಕ್ ಡೌನ್ ಸಮಯದಲ್ಲಿ ಮಕ್ಕಳ ಕಲಿಕೆ ನಿರಂತರವಾಗಿರಬೇಕೆಂದು ತಮ್ಮ ಸ್ವಂತ ಖರ್ಚಿನಿಂದ ಕಲಿಕೆಯ ಅನುಭವನ್ನು ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತವಾಗಿ ಹೇಳಿಕೊಡುತ್ತಿದ್ದಾರೆ.
ಪಂಜಾಬ್ ಬಟಿಂಡಾ ಊರಿನವರಾದ ಸಂಜೀವ್ ಕುಮಾರ್, ಕಳೆದ 18 ವರ್ಷಗಳಿಂದ ಶಿಕ್ಷಕರಾಗಿದ್ದಾರೆ. ಮಕ್ಕಳ ಶಿಕ್ಷಣಕ್ಕಾಗಿ ಮಕ್ಕಳ ಬುದ್ಧಿ ಶಕ್ತಿಯನ್ನು ಅರಿತು, ಮಕ್ಕಳಿಗೆ ಸುಲಭವಾಗಿ ಅಕ್ಷರವನ್ನು ಅರ್ಥೈಸುವ ಇವರು ಕಳೆದ ವರ್ಷದ ಲಾಕ್ ಡೌನ್ ವೇಳೆಯಲ್ಲಿ ಒಂದು ವಿಶೇಷ ಪ್ರಯೋಗಕ್ಕೆ ಮುಂದಾಗುತ್ತಾರೆ. ಅದುವೇ ಆನ್ ಲೈನ್ ಮೂಲಕ ಉಚಿತವಾಗಿ ಮಕ್ಕಳಿಗೆ ಶಿಕ್ಷಣವನ್ನು ಹೇಳಿಕೊಡುವ ಯೋಜನೆ.
ಸಂಜೀವ್ ಕುಮಾರ್ ವಿದ್ಯಾರ್ಥಿಗಳಿಗೆ ಕಬ್ಬಿಣ್ಣದ ಕಡಲೆಕಾಯಿ ಎಂದೇ ಖ್ಯಾತವಾಗಿರುವ ಗಣಿತ ವಿಷಯದ ಶಿಕ್ಷಕರು. ಕಳೆದ ವರ್ಷ ಲಾಕ್ ಡೌನ್ ವೇಳೆಯಲ್ಲಿ ಕೆಲ ವಿದ್ಯಾರ್ಥಿಗಳು ಗಣಿತ ವಿಷಯದ ಕುರಿತು ಪಾಠ ಹೇಳಿ ಎಂದಾಗ, ಸಂಜೀವ್ ಅವರಿಗೆ ಆನ್ ಲೈನ್ ಮೂಲಕ ಶಿಕ್ಷಣವನ್ನು ಹೇಳಿಕೊಡುವ ಯೋಜನೆ ಯೋಚನೆಗೆ ಬಂತು.
ಮಾರ್ಚ್ 29, 2020 ರಂದು ಸ್ನೇಹಿತರ ಮಕ್ಕಳಿಗೆ ಸೇರಿ 50 ಮಂದಿಗೆ ಪ್ರಾಯೋಗಿಕವಾಗಿ ಆನ್ ಲೈನ್ ಮೂಲಕ ಬೀಜಗಣಿತ ಹಾಗೂ ರೇಖಾಗಣಿತದ ವಿಷಯವನ್ನು ಸುಲಭವಾಗಿ ವಿವರಿಸಿ ಹೇಳಿ ಕೊಡುತ್ತಾರೆ. ಕೆಲವೇ ದಿನಗಳಲ್ಲಿ 50 ಮಂದಿ ಇದ್ದ ವಿದ್ಯಾರ್ಥಿಗಳ ಸಂಖ್ಯೆ 700 ದಾಟುತ್ತದೆ. ವರ್ಷ ಕಳೆಯುತ್ತಲೇ 2500 ಕ್ಕೂ ಅಧಿಕ ವಿದ್ಯಾರ್ಥಿಗಳು ಸಂಜೀವ್ ಪಾಠ ಕೇಳಲು ಆನ್ ಲೈನ್ ನಲ್ಲಿ ಕಾಯುತ್ತಾರೆ. ಇಷ್ಟು ಮಂದಿ ವಿದ್ಯಾರ್ಥಿಗಳನ್ನು ಒಂದೇ ಬಾರಿಗೆ ನಿಭಾಯಿಸಲು ಕಷ್ಟವಾದಾಗ ಸಂಜೀವ್ ಅವರು ಝೂಮ್ ಬ್ಯುಸೆನೆಸ್ ಯೋಜನೆಯನ್ನು ಖರೀದಿ ಮಾಡುತ್ತಾರೆ.
ಹಂತ ಹಂತವಾಗಿ ವಿದ್ಯಾರ್ಥಿಗಳಿಗೆ ಪಾಠದ ಅವಧಿಯನ್ನು ಫಿಕ್ಸ್ ಮಾಡುತ್ತಾರೆ. ಜಮ್ಮು ಕಾಶ್ಮೀರ,ತಮಿಳುನಾಡು,ಕೇರಳ,ಕರ್ನಾಟಕ ಸೇರಿದಂತೆ ಕೀನ್ಯಾ, ದುಬೈ, ಮಲೇಶ್ಯಾ,ಸೌದಿ ಅರೇಬಿಯಾದಲ್ಲಿ ವಾಸವಾಗಿರುವ ವಿದ್ಯಾರ್ಥಿಗಳೂ ಕೂಡ ಸಂಜೀವ್ ಅವರ ಪಾಠ ಕೇಳುತ್ತಾರೆ. ತರಗತಿ ಮುಗಿದ ಬಳಿಕ ವಿಶೇಷವಾಗಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗಾಗಿ ಮತ್ತೆ ಪಾಠ ಮಾಡುತ್ತಾರೆ. ಪ್ರತಿ ತಿಂಗಳು ಪರೀಕ್ಷೆ ಮಾಡುತ್ತಾರೆ. ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದವರಿಗೆ ವಿಷಯ ಸಂಬಂಧಿತ ಪಠ್ಯ ಪುಸ್ತಕವನ್ನು ಉಡುಗೊರೆಯಾಗಿ ನೀಡುತ್ತಾರೆ.
ಪ್ರತಿದನಕ್ಕೆ 1 ಗಂಟೆಯ 5 ತರಗತಿಯನ್ನು ತೆಗೆದುಕೊಳ್ಳುತ್ತಾರೆ. ಅಪರೂಪಕ್ಕೊಮ್ಮೆ ವಿದ್ಯಾರ್ಥಿಗಳಿಗಾಗಿ ಕೆಲ ವೈದ್ಯರು, ಶಿಕ್ಷಕರು ಹಾಗೂ ನಟರನ್ನು ವಿಶೇಷ ಉಪನ್ಯಾಸವನ್ನು ನೀಡಲು ಆಹ್ವಾನಿಸುತ್ತಾರೆ.ಸಂಜೀವ್ ಅವರ ಪತ್ನಿ ಕೂಡ ಶಿಕ್ಷಕಿ ಆಗಿದ್ದು, ಪಾಠವಾದ ಕೂಡಲೇ ವಿದ್ಯಾರ್ಥಿಗಳಿಗೆ ನೋಟ್ಸ್ ಗಳನ್ನು ಕಳಿಸುವ ಜವಬ್ದಾರಿ ಅವರದು.ಪ್ರತಿ ತಿಂಗಳು ಸಂಜೀವ್ ಅವರು ವಿದ್ಯಾರ್ಥಿಗಳ ಉಚಿತ ಆನ್ ಲೈನ್ ಕ್ಲಾಸ್ ಗಾಗಿ ತಮ್ಮ ಸ್ವಂತ ಖರ್ಚಿನಿಂದ 20 ಸಾವಿರ ರೂಪಾಯಿಯನ್ನು ವ್ಯಯಿಸುತ್ತಾರೆ. ಇವರ ತರಗತಿಗೆ ಸುಮಾರು 3500 ಕ್ಕೂ ಅಧಿಕ ವಿದ್ಯಾರ್ಥಿಗಳು ಆನ್ ಲೈನ್ ಮೂಲಕ ಹಾಜರಾಗುತ್ತಾರೆ.
-ಸುಹಾನ್ ಶೇಕ್