ನಮ್ಮೊಳಗೆ ಒಂದು ಪ್ರತಿಭೆ ಮಾತ್ರವಲ್ಲ,ನಮ್ಮೊಳಗೆ ಹಲವು ಪ್ರತಿಭೆಗಳಿವೆ. ಅವಕಾಶದ ನೆಪವನ್ನು ನಿರೀಕ್ಷೆ ಮಾಡಿಕೊಂಡು, ಮುಜುಗರ,ಹಿಂಜರಿಕೆಯಿಂದ ಹಿಂದೆ ಉಳಿಯುತ್ತಿದ್ದೇವೆ ಅಷ್ಟೇ.
ಅವಕಾಶಗಳನ್ನು ಸೃಷ್ಟಿಸಿಕೊಂಡು ಪ್ರತಿಭೆಯನ್ನು ತೋರಿಸಿಕೊಳ್ಳಲು, ಇಂದಿನ ಕಾಲದಲ್ಲಿ ಸಾಮಾಜಿಕ ಜಾಲತಾಣಗಳೇ ವೇದಿಕೆಯಾಗಿವೆ. ಇಂಥ ವೇದಿಕೆಯನ್ನು ಬಳಸಿಕೊಂಡು ನಮ್ಮ ಗ್ರಾಮೀಣ ಭಾಗದಿಂದ ಬೆಳಕಿಗೆ ಬರುತ್ತಿರುವ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕಾದ ಅನಿವಾರ್ಯತೆಯ ಕೊರತೆ ನಮ್ಮಲ್ಲಿ ಇದೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ‘ವಕೀಲ್ ಸಾಬ್ ‘ ಚಿತ್ರದ ಸಾಹಸದ ದೃಶ್ಯವನ್ನು ಮಕ್ಕಳ ಮೂಲಕ ಮರುಸೃಷ್ಟಿಸಿದ್ದನ್ನು ನೀವು ನೋಡಿರಬಹದು. ಥೇಟ್ ಸಿನಿಮಾದ ಹಾಗೆಯೇ ಕಾಣುವ ದೃಶ್ಯದಲ್ಲಿ ಹೀರೋ ಆಗಿ ಕಾಣುವುದು ಒಬ್ಬ ಹದಿಹರೆಯದ ಹುಡುಗ, ವಿಲನ್ ಗಳಾಗಿ ಅಬ್ಬರಿಸಿ, ಹೀರೋನ ಹೊಡೆತಕ್ಕೆ ಮಗುಚಿ ಬೀಳುವುದು ಕೂಡ ಅರ್ಧ ಮೀಸೆ ಚಿಗುರುತ್ತಿರುವ ಹದಿಹರೆಯದ ಹುಡುಗರೇ. ಕೇವಲ ಒಂದೇ ವಾರದೊಳಗೆ ಈ ವೀಡಿಯೋ ಯೂಟ್ಯೂಬ್ ವೊಂದರಲ್ಲೇ 3 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದಿದೆ.
ಅಂದಹಾಗೆ ಸಿನಿಮಾದ ಸಾಹಸಮಯ ದೃಶ್ಯಗಳನ್ನು ರೀ ಕ್ರಿಯೇಟ್ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಮಿಂಚುತ್ತಿರುವ ಈ ತಂಡದ ಹೆಸರು ‘ನೆಲ್ಲೂರು ಕುರ್ಲಲ್. ನೆಲ್ಲೂರು ಆಂಧ್ರ ಪ್ರದೇಶದ ಒಂದು ಜಿಲ್ಲೆ.
ಈ ತಂಡದ ಪಯಣ ಶುರುವಾಗುವುದು ವರ್ಷದ ಹಿಂದೆ ಬಂದ ಲಾಕ್ ಡೌನ್ ಅವಧಿಯಲ್ಲಿ. ಬಾಲ್ಯದ ಗೆಳಯರಾಗಿರುವ ಕಿರಣ್ ಹಾಗೂ ಲಾಯಿಕ್ ಶೇಕ್ ಊರಿನಲ್ಲೇ ಸಣ್ಣ ಕೆಲಸ ಮಾಡಿಕೊಂಡು, ಬಿಡುವಿನ ವೇಳೆಯಲ್ಲಿ ತಮ್ಮ ತಲೆಯೊಳಗಿನ ಯೋಜನೆಗಳನ್ನು ಚರ್ಚಿಸಿ, ಕ್ರಿಯೇಟಿವ್ ಆಗಿ ಏನಾದರೂ ಮಾಡಬೇಕೆನ್ನುವುದನ್ನು ಸಂಜೆ ಮುಳುಗುವ ಸೂರ್ಯನಿಗೂ ಕೇಳಿಸಿ, ರಾತ್ರಿ ಕಾಣುವ ಚಂದ್ರನಿಗೂ ಕೇಳಿಸುವಂತೆ ಚರ್ಚಿಸುತ್ತಿದ್ದರು, ಎಷ್ಟೋ ಬಾರಿ ಚರ್ಚೆ ಚರ್ಚೆಗೆಯೇ ಸೀಮಿತವಾಗಿ ಬಿಡುತ್ತಿತ್ತು.
ತಮ್ಮಲ್ಲಿರುವ ಮೊಬೈಲ್ ನಲ್ಲಿ ಡ್ಯಾನ್ಸ್ ಮಾಡುವ ವಿಡೀಯೋವನ್ನು ಚಿತ್ರೀಕರಿಸಿ, ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಳ್ಳುವುದು ಇಬ್ಬರು ಗೆಳಯರ ಅಪರೂಪದ ದಿನಚರಿ ಆಗಿತ್ತು.
ಬಹುದಿನದಿಂದ ಟಾಲಿವುಡ್ ನಟ ಮಹೇಶ್ ಬಾಬು ಹುಟ್ಟುಹಬ್ಬಕ್ಕೆ ಏನಾದ್ರು ಕೊಡುಗೆ ನೀಡಬೇಕೆಂದುಕೊಂಡಿದ್ದ ಕಿರಣ್ ಹಾಗೂ ಲಾಯಿಕ್, ಮಹೇಶ್ ಬಾಬು ಹುಟ್ಟುಹಬ್ಬಕ್ಕೆ ತಮ್ಮ ಕಡೆಯಿಂದ ಒಂದು ವೀಡಿಯೊ ಮೂಲಕ ಗೌರವ ನೀಡುವ ಯೋಚನೆಯನ್ನು ಯೋಜಿಸಲು ಶುರು ಮಾಡುತ್ತಾರೆ.
ವಿಡಿಯೋ ಮಾಡಲು ಮೊಬೈಲ್, ಎಡಿಟಿಂಗ್ ಮಾಡಲು ಮೊಬೈಲ್, ಆದರೆ ನಟಸಿಲು ಯಾರೆನ್ನುವುದು ಅವರ ಪ್ರಶ್ನೆಯಾಗಿತ್ತು. ದೊಡ್ಡವರನ್ನು ಓಲೈಸುವುದು ಕಷ್ಟವೆಂದುಕೊಂಡು ಗೆಳೆಯರಿಬ್ಬರು, ನಟನೆಗೆ ಆಯ್ದುಕೊಂಡದ್ದು, ತಮ್ಮ ಗ್ರಾಮದ ಶಾಲಾ ಹುಡುಗರನ್ನು.!
ಲಾಕ್ ಡೌನ್ ನಿಂದ ಮನೆಯಲ್ಲೇ ಇದ್ದ ಊರ ಮಕ್ಕಳನ್ನು ಒಂದುಗೂಡಿಸಿ ಶೂಟಿಂಗ್ ಮಾಡುವುದು ಒಂದು ಕಷ್ಟದ ಸಾಹಸವಾಗಿತ್ತು. ಒಟ್ಟು ಸೇರಿರುವ ಯಾರಲ್ಲೂ ನಟನೆ, ಹಾವ- ಭಾವದ ಗಂಧ ಗಾಳಿ ಅರಿಯದವರೇ ಆಗಿದ್ದರು. ಒಂದಿಷ್ಟು ಸಿನಿಮಾ ಹಾಗೂ ಕಿರುಚಿತ್ರವನ್ನು ನೋಡಿಕೊಂಡು, ಬಣ್ಣದ ಲೋಕದ ಬಗ್ಗೆ ಬಹುದೂರದಿಂದ ಕನಸು ಕಾಣುತ್ತಿದ್ದ ಕಿರಣ್, ಲಾಯಿಕ್ ಮಾತ್ರ ಯಾವ ನಿರೀಕ್ಷೆಯೂ ಇಲ್ಲದೆ, ಯಾವ ತಯಾರಿಯೂ ಇಲ್ಲದ ಮಕ್ಕಳಿಗೆ ಶೂಟ್ ಮಾಡುವ ದೃಶ್ಯವನ್ನು ಹೇಳಿಕೊಡುತ್ತಿದ್ದರು.
ಮಹೇಶ್ ಬಾಬು ಅಭಿನಯದ ‘sarileru neekevvaru’ ಚಿತ್ರದ ಸಾಹಸದ ದೃಶ್ಯವನ್ನು ಹೇಗೆ ಚಿತ್ರೀಕರಿಸಬೇಕು, ಕ್ಯಾಮಾರ ಯಾವ ಆ್ಯಂಗಲ್ ನಲ್ಲಿ ಇಟ್ಟುಕೊಳ್ಳಬೇಕು, ಹೇಗೆ ಹೊಡೆತ ಬೀಳಬೇಕು, ಹೀಗೆ ನೂರು ಚರ್ಚೆಯ ಬಳಿಕ ಚಿತ್ರೀಕರಿಸಿದ ದೃಶ್ಯವನ್ನು, ಥೇಟ್ ಸಿನಿಮಾದಲ್ಲಿ ಬಳಸಿದ ಅದೇ ಸಂಭಾಷಣೆಯನ್ನು, ಅದೇ ಹಾವ-ಭಾವದಿಂದ ಎಡಿಟಿಂಗ್ ಮಾಡಿ, ತಮ್ಮ ಯೂಟ್ಯೂಬ್ ಚಾನೆಲ್ ಗೆ ಹರಿಯ ಬಿಡುತ್ತಾರೆ.
ಕೆಲವೇ ದಿನಗಳಲ್ಲಿ ಮಕ್ಕಳ ಪ್ರತಿಭೆಗೆ ಊಹಿಸಲಾಗದ, ಪ್ರೋತ್ಸಾಹ, ಚಪ್ಪಳೆ, ಬೆಂಬಲದ ಬಲ ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬರುತ್ತದೆ. ಸ್ವತಃ ಸಿನಿಮಾದ ನಿರ್ದೇಶಕ ಅನಿಲ್ ರವಿಪುಡಿ ಗ್ರಾಮೀಣ ಪ್ರತಿಭೆಯ ವಿಡಿಯೋ ತುಣುಕನ್ನು ಹಂಚಿಕೊಂಡು, ಪ್ರಶಂಸೆಯ ಮಾತುಗಳನ್ನಾಡುತ್ತಾರೆ. ಯೂಟ್ಯಬ್ ನಲ್ಲಿ ಈ ವಿಡಿಯೋವನ್ನು 8 ಮಿಲಿಯನ್ ಗೂ ಅಧಿಕ ಜನ ವೀಕ್ಷಿಸಿದ್ದಾರೆ.
ನೆಲ್ಲೂರು ಕುರ್ಲಲ್ ಯೂಟ್ಯೂಬ್ ಚಾನೆಲ್ ಗೆ 3 ಲಕ್ಷಕ್ಕೂ ಅಧಿಕ ಸಬ್ ಸ್ಕ್ರಬರ್ಸ್ ಇದ್ದಾರೆ. ಬಿಡುವಿನ ವೇಳೆಯಲ್ಲಿ 14 ಮಕ್ಕಳನ್ನೇ ಕಲಾವಿದರನ್ನಾಗಿ ಮಾಡಿ, ಜನಪ್ರಿಯ ಸಿನಿಮಾಗಳ ಸಾಹಸದ ದೃಶ್ಯವನ್ನು ಮರು ಸೃಷ್ಟಿಸುವ ಈ ಯುವ ಪ್ರತಿಭೆಗಳು ಇದುವರೆಗೆ ಪವನ್ ಕಲ್ಯಾನ್ ಅಭಿನಯದ katamarayudu, ವಿಜಯ್ ಅವರ ‘ಸರ್ಕಾರ್’ , ಪ್ರಭಾಸ್ ಅವರ ‘ಮಿರ್ಚಿ’, ನಿತಿನ್ ಅಭಿಯನದ ಭೀಷ್ಮಾ , ರಾಮ್ ಚರಣ್ ಅವರ ‘ರಂಗಸ್ಥಳಂ’, ರವಿತೇಜಾ ಅವರ ‘ಕ್ರ್ಯಾಕ್’ ಹೀಗೆ ಹತ್ತು ಹಲವರು, ತಮಿಳು ಹಾಗೂ ತೆಲುಗು ಭಾಷಾ ಸಿನಿಮಾಗಳ ಸಾಹಸಮಯ ದೃಶ್ಯಗಳನ್ನು ಮರು ಸೃಷ್ಟಿಸಿ, ಒಂದು ಅನುಭವಸ್ಥರ ಚಿತ್ರ ತಂಡವೇ ಶೂಟ್ ಮಾಡಿ,ಎಡಿಟ್ ಮಾಡಿದಾಗೆ ಮಾಡುತ್ತಾರೆ.
ಕ್ಯಾಮಾರದಲ್ಲಿಯೇ ಚಿತ್ರೀಕರಿಸಿದ ಹಾಗೆ ಕಾಣುವ ಇವರ ವಿಡಿಯೋಗಳು ಅಸಲಿಗೆ ಶೂಟ್ ಆಗುವುದು ದಿನ ಬಳಸುವ ಮೊಬೈಲ್ ನಿಂದ, ಹಾಗೂ ಅದೇ ಮೊಬೈಲ್ ನಿಂದ ಎಡಿಟಿಂಗ್.
14 ಮಕ್ಕಳಲ್ಲಿ ಹೆಚ್ಚು ಬೆಳಕಿಗೆ ಬರುವುದು, ಬಹುತೇಕ ಎಲ್ಲಾ ವಿಡಿಯೋದಲ್ಲಿ ಹೀರೋ ಆಗಿ ಕಾಣಿಸಿಕೊಳ್ಳುವ ಮುನ್ನಾ. ಮುನ್ನಾನನ್ನು ಎಲ್ಲರೂ ಊರಿನಲ್ಲಿ ಕಪ್ಪು ಬಣ್ಣದವ ಎಂದು ಅವಮಾನಿಸಿದ್ದು ಇದೆ. ಆದರೆ ಮುನ್ನಾನ ಪ್ರಕಾರ ಪ್ರತಿಭೆಗೆ ಬಣ್ಣಗಿಂತ, ಆತ್ಮವಿಶ್ವಾಸ ಮುಖ್ಯ ವೆನ್ನುತ್ತಾರೆ.
ಅಂದ ಹಾಗೆ ಇತ್ತೀಚೆಗೆ ಬಿಡುಗಡೆ ಆಗಿರುವ ವಕೀಲ್ ಸಾಬ್ ಚಿತ್ರದ ಸಾಹದ ದೃಶ್ಯವೊಂದನ್ನು ಈ ತಂಡ ಮರು ಸೃಷ್ಟಿಸಿದ್ದು, ಒಂದು ಸಿನಿಮಾವನ್ನೇ ನೋಡುತ್ತಿದ್ದೇವೇನೋ ಎನ್ನುವಷ್ಟು ಫರ್ಪೆಕ್ಟ್ ಆಗಿ ಮಾಡಿರುವ ಈ ವಿಡಿಯೋ ಈಗಾಗಲೇ ಎಲ್ಲೆಡೆ ವೈರಲ್ ಆಗಿದೆ.
ಇಂಥ ವಿಡಿಯೋಗಳನ್ನು ಕ್ರಿಯೇಟ್ ಮಾಡುವ ಕಿರಣ್ ಗೆ ಮುಂದೆ ನಿರ್ದೇಶಕನಾಗುವ ಕನಸಿದೆ ಅಂತೆ. ಸಿನಿಮಾವನ್ನೇ ತೋರಿಸುವ ಹಾಗೆ ಎಡಿಟ್ ಮಾಡುವ ಲಾಯಿಕ್ ಗೆ ಎಡಿಟರ್ ಆಗುವ ಕನಸು ದೂರದಿಂದಲೇ ಮೂಡಿದೆ.
-ಸುಹಾನ್ ಶೇಕ್