ಕೆಲವೊಂದು ಯೋಚನೆಗಳು ಯೋಜನೆಗಳಾಗಿ ಮಾರ್ಪಾಡಾಗಲುಓಡಾಟ,ಅಲೆದಾಟ, ಒಂಟಿತನ, ಸಿಟ್ಟು, ಹಟ ಎಲ್ಲದರ ರುಚಿಯನ್ನು ಅನುಭವಿಸಿದ ಮೇಲೆಯೇ ಸಫಲಗೊಳ್ಳುತ್ತದೆ.
ಇಂದೋರ್ ನಲ್ಲಿ ಹುಟ್ಟಿದ ಪ್ರಫುಲ್ ಬಿಲ್ಲೋರೆ ಓದಿನಲ್ಲಿ ಹಿಂದೆ ಬೀಳದ ಚತುರ. ಕಲಿಯಬೇಕು, ಬೆಳೆಯಬೇಕೆನ್ನುವ ತಂದೆ-ತಾಯಿಯ ಆಸೆಯಂತೆ ಪ್ರಫುಲ್ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಾರೆ. ಹೀಗೆ ಸಾಗಿದ ಇವರ ಹರೆಯ ಮುಂದೆ ಎಂ.ಬಿ.ಎ ಮಾಡಬೇಕೆನ್ನುವ ಇರಾದೆಯಿಂದ ಕ್ಯಾಟ್ (CAT) ಪರೀಕ್ಷೆಯ ತಯಾರಿಗೆ ಸಿದ್ಧರಾಗುತ್ತಾರೆ. ಸದಾ ಓದಿನ ಮಗ್ನತೆಯಲ್ಲಿ ಮುಳಗಿದ ಪ್ರಫುಲ್ ಈ ಓದಿನ ಜಂಜಾಟದಿಂದ ಹೊರಗೆ ಬರುತ್ತಾರೆ. ಅಪ್ಪನ ಬಳಿ ತನಗೆ ಈ ಓದಿನ ಒತ್ತಡ ಸಹಿಸಲು ಆಗದು ಎಂದು, ಸೀದಾ ಊರು ಸುತ್ತಲು, ನೆಮ್ಮದಿ ನೆರಳನ್ನು ಬಯಸಿ ಬೆಂಗಳೂರು, ಹೈದರಾಬಾದ್, ಚೆನ್ನೈ ಹೀಗೆ ನಾನಾ ಕಡೆ ಸುತ್ತುವ ಪ್ರಫುಲ್ ಗೆ ಏನಾದ್ರು ಮಾಡಬೇಕು ಎನ್ನುವ ಯೋಚನೆ ಕಾಡಲು ಆರಂಭಿಸಿದಾಗ ಬಂದು ನೆಲೆ ನಿಂತದ್ದು ಅಹಮದಾಬಾದ್ ನಲ್ಲಿ.
ಖಾಲಿ ಕಿಸೆ, ಖಯಾಲಿ ಮನಸ್ಸು. ಪಾಠ ಕಲಿತುಕೊಳ್ಳಲು ಬದುಕಿಗಿಷ್ಟು ಸಾಕು. ಪ್ರಫುಲ್ ಹೊಟೇಲ್ ಒಂದರಲ್ಲಿ ವೇಟರ್ ಆಗಿ, ಕ್ಯಾಶರ್ ಆಗಿ ಕೆಲಸ ಮಾಡುವಂತೆ ಅವರ ಶರೀರ ಒಗ್ಗಿಕೊಂಡು ಬಿಡುತ್ತದೆ. ಪ್ರಫುಲ್ ಈ ಕೆಲಸದಿಂದ ಹೊರ ಬಂದು, ಬೇರೆ ಏನಾದ್ರು ಮಾಡಬೇಕು ಎನ್ನುವ ಆಲೋಚನೆಯಿಂದ, ನಾನಾ ಕೆಲಸದ ಕುರಿತು ಯೋಚಿಸುತ್ತಾ, ಕೊನೆಗೆ ಚಹಾ ಸ್ಟಾಲ್ ವೊಂದನ್ನು ಮಾಡಲು ದಿಟ್ಟತನದಿಂದ ಮುನ್ನಡೆದು, ಕೆಲಸ ಮಾಡುತ್ತಿದ್ದ ಹೊಟೇಲ್ ಆವರಣದ ಮುಂಭಾಗದಲ್ಲಿದ್ದ ಪಾತ್ರೆಗಳ ಅಂಗಡಿಯಲ್ಲಿ ಚಹಾಕ್ಕೆ ಬೇಕಾದ ಪಾತ್ರೆ ಪಗಡೆಗಳ ಬೆಲೆ ಕೇಳಿ, ಹಣದ ಅವಶ್ಯಕತೆಗಾಗಿ ತಂದೆಯ ಬಳಿ, ಕೋರ್ಸ್ ವೊಂದನ್ನು ಮಾಡುತ್ತೇನೆ ಎನ್ನುವ ನೆಪದಿಂದ ಹದಿನೈದು ಸಾವಿರ ರೂಪಾಯಿಗಳನ್ನು ಪಡೆದು ಅಹಮದಾಬಾದ್ ನ ಒಂದು ರಸ್ತೆ ಬದಿಯಲ್ಲಿ ಚಹಾದ ಸ್ಟಾಲ್ ವೊಂದನ್ನು ಹಾಕಿಯೇ ಬಿಡುತ್ತಾರೆ.
ಅದೇ ವೇಳೆಯಲ್ಲಿ, ಪ್ರಫುಲ್ ರಿಗೆ ತಂದೆಯ ಕರೆ ಬಂದು, ಏನು ಮಾಡ್ತಾ ಇದ್ದೀಯಾ ಮಗನೇ, ನಿನ್ನ ಎಂ.ಬಿ.ಎ. ಕಲಿಕೆ ಏನಾಯಿತು ಎಂದು ಕೇಳುತ್ತಾರೆ. ಅಪ್ಪನ ಮಾತಿಗೆ ತನ್ನ ಚಹಾ ಸ್ಟಾಲ್ ರಹಸ್ಯ ಬಿಟ್ಟು ಕೊಡದೆ, ಐವತ್ತು ಸಾವಿರ ಕೇಳಿ ಸ್ಥಳೀಯ ಕಾಲೇಜಿನಲ್ಲಿ ಎಂ.ಬಿ.ಎ. ತರಗತಿಗೆ ಸೇರಿಕೊಳ್ಳುತ್ತಾರೆ. ಸೇರಿಕೊಂಡ ಒಂದೇ ವಾರದ ಒಳಗೆ ಮನಸ್ಸು ಚಹಾದ ಬಗ್ಗೆ ಯೋಚಿಸುತ್ತಾ, ನಡೆಯುತ್ತಿರುವ ತರಗತಿಯಿಂದ ಸೀದಾ ಹೊರಗೆ ಬಂದ ತನ್ನ ಚಹಾ ಸ್ಟಾಲ್ ಗೆ ಬರುತ್ತಾರೆ. ಪ್ರಫುಲ್ ಚಹಾ ಸ್ಟಾಲ್ ದಿನ ಕಳೆದಂತೆ ಬೆಳೆಯುತ್ತದೆ. ಬೆಳೆಯುತ್ತಿರುವ ಏಳಿಗೆಯನ್ನು ಸಹಿಸದ ಕೆಲ ಸ್ಥಳೀಯರು ಪ್ರಫುಲ್ ರ ಅಂಗಡಿಯನ್ನು ಬಲವಂತವಾಗಿ ತೆರವುಗೊಳಿಸುತ್ತಾರೆ.
ಪ್ರಫುಲ್ ಮತ್ತೆ ಒಂಟಿಯಾಗುತ್ತಾರೆ. ನಿದ್ದೆಯ ಮಂಪರಿನಲ್ಲಿ ಚಹಾ ಸ್ಟಾಲ್ ಬಗ್ಗೆ ಯೋಚನೆಗಳು ಬಂದು ಕಾಡುತ್ತವೆ. ಕೆಲವೇ ದಿನಗಳ ಬಳಿಕ, ಪ್ರಫುಲ್ ಅಹಮದಾಬಾದ್ ನಲ್ಲೇ ಸ್ಥಳೀಯ ಆಸ್ಪತ್ರೆಯ ಹೊರಗೆ ಚಹಾ ಸ್ಟಾಲ್ ವೊಂದನ್ನು ಹಾಕಲು ವೈದ್ಯರೊಬ್ಬರ ಬಳಿ ಕೋರಿಕೆಯನ್ನು ಕೇಳಿ, ಯಶಸ್ವಿ ಆಗುತ್ತಾನೆ. ಆಸ್ಪತ್ರೆಯ ಹೊರಗೆ ಹಾಕಿದ ಸ್ಟಾಲ್ ಗೆ ಹಿಂದೆ ಬರುತ್ತಿದ್ದ ಗ್ರಾಹಕರ ದಂಡು ಮತ್ತೆ ಹರಿದು ಬರುತ್ತದೆ. ಪ್ರಫುಲ್ ಬರೀ ಚಹಾವನ್ನು ಮಾತ್ರ ಮಾರಾಟ ಮಾಡಲ್ಲ, ಜನ ಮನವನ್ನು ಅರಿಯಲು, ವಿನೂತನವಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸೂಚನ ಫಲಕವೊಂದನ್ನು ಹಾಕುತ್ತಾರೆ. ಇದು ಜನಪ್ರಿಯ ಆಗುತ್ತದೆ. ಜನ ಪ್ರಫುಲ್ ಚಹಾ ಸ್ಟಾಲ್ ಗೆ ಮುಗಿಬೀಳುತ್ತಾರೆ.
ದಿನ ಕಳೆದಂತೆ ಚಹಾದ ರುಚಿಯ ಜೊತೆಗೆ, ಜನರ ಆಸಕ್ತಿಯೂ ಪ್ರಫುಲ್ ಸ್ಟಾಲ್ ಕಡೆ ಹರಿದು ಬರುತ್ತದೆ. ಚಹಾ ಸ್ಟಾಲ್ ಗೆ ‘ಎಂ.ಬಿ.ಎ ಚಾಯಿವಾಲಾ’ ( ಮಿಸ್ಟರ್. ಬಿಲ್ಲೋರೆ ಅಹಮದಾಬಾದ್) ಎಂದು ನಾಮಕರಣ ಮಾಡುತ್ತಾರೆ. ಕೆಲ ಜನ ಎಂ.ಬಿ.ಎ. ಹುಡುಗನ ಈ ಸಾಹಸ ನೋಡಿ ನಗುತ್ತಾರೆ. ಆದರೆ ಪ್ರಫುಲ್ ಇಷ್ಟಕ್ಕೆ ಮಾತ್ರ ನಿಲ್ಲಲಿಲ್ಲ. ದಿನಕ್ಕೆ ಅಷ್ಟು ಇಷ್ಟು ಆಗುತ್ತಿದ್ದ ಹಣ ಗಳಿಕೆಗೆ ಮಾತ್ರ ಮಹತ್ವ ಕೊಡದೆ, ನಗರದಲ್ಲಿ, ಅನ್ಯ ರಾಜ್ಯದಲ್ಲಿ ನಡೆಯುವ ನಾನಾ ಸಂಗೀತ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳು, ಪಾರ್ಟಿಗಳಿಗೆ ಹೋಗಿ ತನ್ನ ಚಹಾದ ಸ್ಟಾಲ್ ಅನ್ನು ಹಾಕುತ್ತಾರೆ. ಅಲ್ಲೂ ಎಂ.ಬಿ.ಎ. ಚಾಯಿವಾಲಾ ಜನಪ್ರಿಯನಾಗುತ್ತದೆ. ಇದಲ್ಲದೆ ಪ್ರವಾಹ ಪೀಡಿತ ಪ್ರದೇಶದಲ್ಲಿ ಚಹಾದ ಸ್ಟಾಲನ್ನಿಟ್ಟು ಅದರಿಂದ ಬರುವ ಲಾಭವನ್ನು ಸಂತ್ರಸ್ತರಿಗೆ ನೀಡುತ್ತಾರೆ.
ಕಾಲೇಜು ಕ್ಯಾಂಪಸ್, ಎನ್.ಜಿ.ಓ, ಹೀಗೆ ನಾನಾ ಕಡೆಯ ವೇದಿಕೆಗೆ ಹೋಗಿ ಇಂದು ಪ್ರಫುಲ್ ಬಿಲ್ಲೋರೆ ತಾನು ನಡೆದು, ಮುನ್ನಡೆದ ದಾರಿಯ ಬಗ್ಗೆ ಹಂಚಿಕೊಳ್ಳುತ್ತಾರೆ. ಸಾಮಾಜಿಕ ಸೇವೆಯಲ್ಲೂ ಪ್ರಫುಲ್ ಮುಂದು. ಎಂ.ಬಿ.ಎ. ಚಾಹೀವಾಲ ಎಷ್ಟು ಜನಪ್ರಿಯ ಅಂದ್ರೆ ಭಾರತದಲ್ಲಿ ಚಹಾದ ಹೆಸರಿನಲ್ಲಿ ಹೆಸರು ಗಳಿಸಿದ ದ್ವಿತೀಯ ವ್ಯಕ್ತಿ ಆಗಿದ್ದಾರೆ.
ಅವರ ಒಂದು ಯಶಸ್ಸಿನ ಹಾದಿಯಲ್ಲಿ ಸದಾ ಎದ್ದು ಕಾಣುತ್ತದೆ “ ಯಾರನ್ನು ಇಷ್ಟ ಪಡ್ತೀರೋ ಅವರನ್ನೇ ಮದುವೆಯಾಗಿ ಅಥವಾ ಯಾರನ್ನು ಮದುವೆಯಾಗ್ತೀರೋ ಅವರನ್ನೇ ಇಷ್ಟಪಡಿ”.
-ಸುಹಾನ್ ಶೇಕ್