ಚುಮು ಚುಮು ಚಳಿ. ಸುತ್ತಲೂ ಹಿಮದ ರಾಶಿ. ಬೆಳೆದು ನಿಂತಿರುವ ಬೆಟ್ಟಗಳ ಸಾಲು. ಅದೇ ಹಿಮಾಚಲ ಪ್ರದೇಶದ ಸುಂದರ ತಾಣ ಮನಾಲಿಯಾಗಿತ್ತು. ಎಂದೂ ಕಂಡಿರದ ಆ ದೃಶ್ಯವನ್ನು ಕಂಡೊಡನೆ ಎಷ್ಟೇ ಚಳಿಯಿಂದ ನಡುಗುತ್ತಿದ್ದರೂ ಒಳಗೊಳಗೆ ಖುಷಿ. ಕಾಲೇಜಿನಿಂದ ಹೊರಟ ನಮ್ಮ ಹನ್ನೆರಡು ಮಂದಿಯ ಕನಸಿನ ತಾಣ ಅದಾಗಿತ್ತು. ಬಿಸಿ ಬಿಸಿ ಚಹಾ ಕುಡಿದು ನಮ್ಮ ಪಯಣ ಶಿಲ್ಲಾಂಗ್‌ನತ್ತ ಹೊರಟಿತು.
ಚಳಿಯಿಂದ ನಮ್ಮನ್ನು ಕಾಪಾಡಿಕೊಳ್ಳಲು ದಪ್ಪ ದಪ್ಪದ ಉಡುಗೆಯನ್ನು ಅಲ್ಲಿಯ ಹೆಂಗಸರು ತೊಡಿಸಿದ್ದರು. ಆ ಬಟ್ಟೆಯನ್ನು ಧರಿಸಿದಾಗ ಬಾಹ್ಯಾಕಾಶ ಯಾತ್ರಿಗಳಂತೆ ಅನಿಸತೊಡಗಿತು. ನಿದ್ದೆಯಿಂದ ಎದ್ದಾಗ ಈ ಬೆಟ್ಟಗಳ ರಾಶಿಗೆ ಎರಡೇ ಹೆಜ್ಜೆ ಬಾಕಿಯಿತ್ತು. ನಿದ್ದೆಯಿಂದ ಮಂಕಾಗಿದ್ದ ನನಗೆ ಇದೆಲ್ಲ ಬಿಟ್ಟು ಗಾಡಿಯಲ್ಲಿ ಮಲಗುವುದೇ ಒಳ್ಳೆಯದೆಂದೆನಿಸಿತು. ಆದರೂ ಉದಾಸೀನತೆಯ ಮನಸ್ಸಿನೊಂದಿಗೆ ಗೆಳೆಯ-ಗೆಳತಿಯರ ಜೊತೆ ಹೆಜ್ಜೆ ಹಾಕಿದೆ. ಎಲ್ಲಿಗೆ? ಯಾತಕ್ಕೆ? ಹೋಗುತ್ತಿದ್ದೇವೆ ಎಂಬ ಸಣ್ಣ ಅರಿವೇ ಇರಲಿಲ್ಲ. ಅಷ್ಟರಮಟ್ಟಿಗೆ ನಿದ್ದೆ ಆವರಿಸಿತ್ತು. ನಡೆಯುತ್ತ ಹೋಗುತ್ತ ಇದ್ದ ಹಾಗೆ ಸುಸ್ತಾಗತೊಡಗಿತು. ನಿದ್ರಾದೇವಿ ನನ್ನ ಜೊತೆ ನಡೆಯಲಾಗದೆ ದೂರ ಸರಿದಳು. ಹನ್ನೆರಡು ಸಹಪಾಠಿಗಳಲ್ಲಿ ಕೆಲವರು ನಡೆಯಲಾಗದೆ ಹಿಂದೆ ಉಳಿದರು. ಅಷ್ಟೊಂದು ಉತ್ತಮ ಆರೋಗ್ಯವನ್ನು ಹೊಂದಿಲ್ಲದ ನನಗೆ ಈ ಟ್ರಕ್ಕಿಂಗ್ ಎಲ್ಲಾ ಅಸಾಧ್ಯ ಎನಿಸಿತು. ಒಂದು ಬಂಡೆಕಲ್ಲಿನ ಮೇಲೆ ಕೂತುಬಿಟ್ಟೆ. ಉಳಿದವರೆಲ್ಲ ನನ್ನ ಬಿಟ್ಟು ಅದಾಗಲೇ ಬಹಳಷ್ಟು ಎತ್ತರದಲ್ಲಿದ್ದರು. ನನ್ನ ಆರೋಗ್ಯದ ಮೇಲೆ ನನಗೆ ಸಿಟ್ಟು ಬಂತು. ಉಳುಕಿದ ಕಾಲು, ಆಕ್ಸಿಜನ್ ಕೊರತೆಯಿಂದ ತಣ್ಣಗೆ ಆಗಿದ್ದ ನರಗಳು, ನೀರಿನ ಕೊರತೆಯಿಂದ ಬಾಡಿಹೋಗಿದ್ದ ಹೊಟ್ಟೆ, ತುಂಬಾ ಬೇಸರವಾಯಿತು.
ಆದರೂ ಅದ್ಯಾವುದೋ ಸಣ್ಣ ಛಲ ನನ್ನ ಬಡಿದೆಬ್ಬಿಸಿತು. ನಡೆಯಲು ಪ್ರಾರಂಭಿಸಿದೆ. ಒಬ್ಬಳಿಗೆ ನಡೆಯಲು ಕಷ್ಟ ಎನಿಸಿತು. ಆಗ ಒಬ್ಬ ಗೆಳೆಯ ನನ್ನ ಮುಂದೆ ನಡೆಯುತ್ತಿದ್ದ. ಅವನ ಸಹಾಯ ಪಡೆದೆ. ಉಳಿದ ಆರು ಮಂದಿಯನ್ನು ನಾವು ತಲುಪಿದೆವು. ನಂತರ ನಾವೆಲ್ಲರೂ ಜೊತೆ ಜೊತೆಯಾಗಿ ನಡೆದೆವು. ಸ್ವಲ್ಪ ದೂರ ಹೋಗಿ ನಾವೆಲ್ಲ ಕುಳಿತುಕೊಂಡೆವು. ನಾನು ಆಕಾಶ ನೋಡುತ್ತ ಮಲಗಿದೆ. ಇದ್ದಕ್ಕಿದ್ದ ಹಾಗೆ ಒಬ್ಬರು ಬಂದು ನನ್ನ ಮುಖದ ಮೇಲೆ ಹಿಮದ ರಾಶಿಯನ್ನು ಹಾಕಿದರು. ಬಾಡಿದ ನನ್ನ ಮುಖ ಹಿಮದ ತಂಪಿಗೆ ಅರಳಿತು. ಮುಂದೆ ಹಿಮ ನಮ್ಮ ಆಟದ ಸಾಮಗ್ರಿಯಾಗಿತ್ತು. ಒಬ್ಬರಿಗೊಬ್ಬರು ಹಿಮದ ಬಾಲ್‌ನ್ನು ಎಸೆಯುತ್ತ, ಮುಂದೆ ನಡೆದೆವು. ಅದಾಗಲೇ ಬಹಳಷ್ಟು ಎತ್ತರ ಸಾಗಿದ್ದೆವು. ಮುಂದೆ ಹೋಗುವುದು ಬೇಕೋ ಬೇಡವೋ ಎಂಬ ಚರ್ಚೆಯಾಯಿತು. ಏಕೆಂದರೆ ಅಲ್ಲಿ ತಂತಿಬೇಲಿ ಹಾಕಿದ್ದರು. ಯಾರೂ ಇರಲಿಲ್ಲ. ಎಷ್ಟೇ ಚಳಿಯಾದರೂ ಹದಿಹರೆಯದ ಬಿಸಿರಕ್ತವು ಗುರಿಮುಟ್ಟುವಂತೆ ಸೂಚಿಸಿತು. ಒಬ್ಬರಿಗೊಬ್ಬರು ಸಹಾಯಹಸ್ತ ಚಾಚುತ್ತ ಸಾಗಿದೆವು. ಮಂಜುಗಡ್ಡೆಯಿಂದ ಆವೃತ್ತವಾಗಿದ್ದ ಕಲ್ಲಿನ ಮೇಲೆ ಕಾಲಿಟ್ಟು ನಾನು ಬಿದ್ದೆ. ತಲೆಗೆ ಸ್ವಲ್ಪ ಏಟಾಯಿತು. ಆದರೂ ಅದನ್ನ ಲೆಕ್ಕಿಸದೆ, ಸ್ನೇಹಿತರ ಸಹಾಯದಿಂದ ಮುಂದೆ ನಡೆದೆ. ಹಿಮದ ಹಾಸಿಗೆಯ ಮೇಲೆ ನಾವೆಲ್ಲ ಎದ್ದುಬಿದ್ದು ಆಡಿದೆವು. ಯಾರೋ ಬಂದು ಅಮೃತದಂತಹ ಬಿಸಿಬಿಸಿ ಚಹಾ ನೀಡಿದರು. ಇನ್ನೂ ಶಕ್ತಿ ಬಂತು. ಆದಷ್ಟು ತುದಿ ತಲುಪಿದ್ದೆವು ನಾವು ಆರು ಮಂದಿ!
ನನಗೆ ಇಳಿಯುವುದು ಶೇ. ನೂರು ಪ್ರತಿಶತ ಅಸಾಧ್ಯವಾಯಿತು. ಹತ್ತಲು ಸಹಾಯ ಹಸ್ತ ನೀಡಿದ ಸ್ನೇಹಿತರು ಇಳಿಯಲೂ ಸಹಕರಿಸಿದರು. ಹಿಮದಲ್ಲಿ ಜಾರುವಾಗ, ಕಲ್ಲಲ್ಲಿ ನಡೆಯುವಾಗ ಕ್ಷಣ ಕ್ಷಣಕ್ಕೂ ಕೈನೀಡಿ, ತಂದೆ-ತಾಯಿ ಮಗುವನ್ನು ಹೇಗೆ ಬೀಳಲು ಬಿಡುವುದಿಲ್ಲವೋ ಹಾಗೆಯೇ ಗೆಳೆಯರು ಪ್ರತಿ ಹೆಜ್ಜೆಯಲ್ಲೂ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡರು. ನಮ್ಮ ಆರು ಮಂದಿಯಲ್ಲೂ ಏನೋ ಸಾಧನೆ ಮಾಡಿದ ಖುಷಿ. ಸಂತೋಷದಲ್ಲೂ ಕಷ್ಟದಲ್ಲೂ ಜೊತೆಯಾಗಿರುವವರು ನಿಜವಾದ ಸ್ನೇಹಿತರು ಎಂಬುದನ್ನು ತೋರಿಸಿಕೊಟ್ಟರು. ಬಾಡಿದ ಮೊಗದಲ್ಲಿ ಸಾಧಿಸಿದ ನಗುಮೂಡಿಸಿದ ಆಪ್ತಮಿತ್ರರು. ಅದನ್ನು ನೆನೆಸಿಕೊಂಡಾಗ ಮುಖ ಅರಳುತ್ತದೆ. ಮನಸ್ಸಿಗೆ ನೆಮ್ಮದಿಯಾಗುತ್ತದೆ. ಈ ಸುಂದರ ಅನುಭವದಲ್ಲಿ ನನ್ನ ಕೈ ಹಿಡಿದು ಸಹಕರಿಸಿದ ಸ್ನೇಹಿತರಿಗೆ ನಾನೆಂದೂ ಚಿರಋಣಿ.
ಅನ್ವಿತಾ ಎಸ್. ಡಿ.
ಪ್ರಥಮ ಇಂಜಿನಿಯರಿಂಗ್
ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು, ಅಡ್ಯಾರ್, ಮಂಗಳೂರು