Advertisement

“ಮೇಕ್ ಎ ವಿಶ್” ಸಂಸ್ಥೆ ಹುಟ್ಟಿಗೆ ರಕ್ತದ ಕ್ಯಾನ್ಸರ್ ರೋಗಿಯ ಕೊನೆಯ ಆಸೆಯೇ ಪ್ರೇರಣೆ

09:34 AM Sep 12, 2019 | Suhan S |

ಜೀವನದಲ್ಲಿ ‌ಕನಸುಗಳು ಎಲ್ಲರಿಗೂ ಇರುತ್ತವೆ. ಆದರೆ ಎಲ್ಲಾ ಕನಸಿಗೆ ನನಸಾಗುವ ಅದೃಷ್ಟ ಇರಲ್ಲ ಅಷ್ಟೇ.ವಿಶ್ವದಾದ್ಯಂತ ‘ಮೇಕ್ ಎ ವಿಶ್ ‘ ಅನ್ನುವ  ಹೆಸರಿನಲ್ಲಿ ಲಕ್ಷಾಂತರ ‌ಮಕ್ಕಳ ಅಂತಿಮ ಆಸೆಗಳನ್ನು ನೆರವೇರಿಸಿ ಖುಷಿಯ ಕ್ಷಣಗಳನ್ನುಕೊಟ್ಟು ಸಂಗ್ರಹಿಸಿ ಇಡುತ್ತಿರುವ ಸಂಸ್ಥೆಯೊಂದರ ಪಯಣ ಇದು..

Advertisement

ಒಬ್ಬನ ಆಸೆ ಲಕ್ಷಾಂತರ ಮಂದಿಗೆ ಆಸರೆ ಆಯಿತು :

1980 ರ ಹೊತ್ತಿನಲ್ಲಿ ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಕ್ರಿಸ್ ಗ್ರೀಸಿಯಸ್ ಎನ್ನುವ ಬಾಲಕ ತಾನು ಸಾರ್ವಜನಿಕ ರಕ್ಷಣಾ ಅಧಿಕಾರಿ ಆಗಬೇಕೆಂಬ ಆಸೆಯನ್ನು ತನ್ನ ತಾಯಿ ಲಿಂಡಾಳ ಬಳಿ ಹೇಳಿಕೊಳ್ಳುತ್ತಾನೆ. ತನ್ನ ಮಗ ಇನ್ನು ಸ್ವಲ್ಪ ದಿನ ಮಾತ್ರ ಬದುಕಿರುತ್ತಾನೆ ಅನ್ನುವ ಸತ್ಯವನ್ನು ಅರಿತ ತಾಯಿ ಲಿಂಡಾ ಕಸ್ಟಮ್ಸ್ ಅಧಿಕಾರಿ ಆಗಿದ್ದ ಆಸ್ಟಿನ್ ಟಾಮಿಯ ಜೊತೆ ತನ್ನ ಮಗನ ಆಸೆಯನ್ನು ಹೇಳಿಕೊಳ್ಳುತ್ತಾರೆ. ಟಾಮಿ ಇದನ್ನು ಆಗ ಅರಿಜೋನದ ಸಾರ್ವಜನಿಕ ರಕ್ಷಣೆಯ  ಇಲಾಖೆಯಲ್ಲಿ ‌ಕರ್ತವ್ಯ ನಿಭಾಯಿಸುತ್ತಿದ್ದ ಅಧಿಕಾರಿ ರಾನ್ ಕಾಕ್ಸ್ ಬಳಿ ಹೇಳಿಕೊಳ್ಳುತ್ತಾರೆ.

 

ಟಾಮಿ‌ ಕ್ರಿಸ್ ಜೊತೆ ಆಸ್ಪತ್ರೆಯಲ್ಲಿ ಭೇಟಿಯಾದಾಗ ಆತ ಬೆಡ್ ನಲ್ಲೇ ಕೂತು ತಾನು ಕಳ್ಳರನ್ನು ಹಿಡಿದು,ಬಗ್ಗು ಬಡಿದು ಜೀಪಿನಲ್ಲಿ ಹಾಕಿಕೊಂಡು ಹೋಗಬೇಕು , ಆಪತ್ತಿನಲ್ಲಿರುವ  ಜನರ ರಕ್ಷಣೆ ಮಾಡಬೇಕು ನಾನು ಸಾರ್ವಜನಿಕ ರಕ್ಷಣಾ ಅಧಿಕಾರಿ ಆಗಬೇಕು ಅನ್ನುವ ಆಸೆಯನ್ನು ಮತ್ತೆ ಹೇಳಿಕೊಳ್ಳುತ್ತಾನೆ.ಕ್ರಿಸ್ ಬದುಕಿ ಉಳಿಯುವುದು ಸ್ವಲ್ಪವೇ ದಿನ ಅನ್ನುತ್ತಿದ್ದಂತೆ ಆತನ ಕೊನೆಯ ಆಸೆಯನ್ನು ನೆರವೇರಿಸಲು ಮುಂದಾಗುತ್ತಾರೆ.

Advertisement

ಸಾರ್ಜಜನಿಕ ಇಲಾಖೆಯ ನಿರ್ದೇಶಕ ಮಿಲ್ಸ್ಟೆಡ್ ಇಲಾಖೆಯ ಮುಖ್ಯಸ್ಥನ ಆಲನ್ ಸ್ಮಿತ್ ಅವರಿಗೆ ಕ್ರಿಸ್ ವಿಷಯ ತಿಳಿಸಿದಾಗ ಸ್ಮಿತ್ ಕ್ರಿಸ್ ಆಸೆಯನ್ನು ನೆರವೇರಿಸಲು ಮುಂದಾಗುತ್ತಾರೆ. ಮರುದಿನ ದಿಂದ ಕ್ರಿಸ್  ಆಸೆಯನ್ನು ಪೂರ್ತಿಗೊಳಿಸಲು ಇಲಾಖೆಯ ಎಲ್ಲಾ ಅಧಿಕಾರಿಗಳು ಶ್ರಮವಹಿಸುತ್ತಾರೆ. ಮೊದಲು ಕ್ರಿಸ್ ಗಾತ್ರಕ್ಕೆ ಅನುಗುಣವಾಗಿ ಸಾರ್ವಜನಿಕ ರಕ್ಷಣಾ ಇಲಾಖೆಯ ಸಮವಸ್ತ್ರವನ್ನು ತಯಾರು ಮಾಡುತ್ತಾರೆ.

ಕ್ರಿಸ್ ತಾನು ಪೊಲೀಸ್ ಅಧಿಕಾರಿಯಾಗುವ ಆಸೆಯನ್ನು ಅಧಿಕಾರಿಗಳು ಪೂರ್ತಿಗೊಳಿಸುತ್ತಾರೆ. ಒಬ್ಬ ಉನ್ನತ ಅಧಿಕಾರಿಯ ಹಾಗೆ ಕ್ರಿಸ್ ಪೊಲೀಸ್ ರೊಂದಿಗೆ ಹೆಲಿ ಕಾಪ್ಟರ್ ಹತ್ತಿ  ಪಯಣ ಬೆಳೆಸುತ್ತಾನೆ. ಅಧಿಕಾರಿಗಳ ಹಾಗೆ ಹೆಲ್ಮೆಟ್ ಹಾಕಿ ಜೀಪಿನಲ್ಲಿ ಕೂತು ತನ್ನ ಅಧಿಕಾರವನ್ನು ಚಲಾಯಿಸುವ ಖುಷಿಯನ್ನು ಅನುಭವಿಸುತ್ತಾನೆ. ತನ್ನ ಜೀವನದ ಅತಿ ದೊಡ್ಡ ಆಸೆಯನ್ನು ನನಸಾಗಿಸಿದ ಕ್ರಿಸ್ ಗ್ರೀಸಿಯಸ್ ರಕ್ತದ ಕ್ಯಾನ್ಸರ್ ನಿಂದ ಸಣ್ಣ ವಯಸ್ಸಿನಲ್ಲೇ ಇಹಲೋಕವನ್ನು ತ್ಯಜಿಸುತ್ತಾನೆ.

ಹೀಗೆ ಒಂದು ಆಸೆಯನ್ನು ಪೂರ್ತಿಗೊಳಿಸುವ ನಿಟ್ಟಿನಲ್ಲಿ ಪ್ರಾರಂಭವಾದ ಪೊಲೀಸ್ ಅಧಿಕಾರಿಗಳ ಪ್ರಯತ್ನವೇ ಮುಂದೆ ಇಡೀ ಜಗತ್ತಿನ ಎದುರು “ಮೇಕ್ ಎ ವಿಶ್ “ ಸ್ವಯಂ ಸೇವಾ ಸಂಸ್ಥೆ ಆಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆದು ನಿಲ್ಲುತ್ತದೆ. ಮೇಕ್ ಎ ವಿಶ್  ಸಂಸ್ಥೆ ಅಧಿಕೃತವಾಗಿ 1993 ರಂದು ಅಸ್ತಿತ್ವಕ್ಕೆ ಬರುತ್ತದೆ.

ಸಾಯುವ ಮುನ್ನ ಸಾಹಸಿ ಆಗುವ ಆಸೆ : ಬಾಪ್ಸಿ ಸಲಾಜರ್ ಎನ್ನುವ ಏಳು ವರ್ಷದ ಬಾಲಕ ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿರುತ್ತಾನೆ. ಆತನಿಗೆ ತಾನು ಅಗ್ನಿ ಶಾಮಕ ಅಧಿಕಾರಿ ಆಗಬೇಕು ಜೊತೆ ಡಿಸ್ನಿ ಲ್ಯಾಂಡ್ ನಲ್ಲಿ ಬೃಹತ್ ಬಲೂನ್ ನಲ್ಲಿ ಪಯಣ ಮಾಡಬೇಕು ಅನ್ನುವ ಆಸೆಯಿರುತ್ತದೆ. ಮೇಕ್ ಎ ವಿಶ್ ಪೌಂಡೇಷನ್ ಬಾಪ್ಸಿ ಆಸೆಯನ್ನು ನೆರವೇರಿಸಲು ಮುಂದಾಗುತ್ತದೆ. ಫೈಯರ್ ಮ್ಯಾನ್ ಆಗುವ ಬಾಪ್ಸಿಯ ಆಸೆಗೆ ಮೇಕ್ ಎ ವಿಶ್ ರೆಕ್ಕೆ ಆಗುತ್ತದೆ. ಅಗ್ನಿಶಾಮಕ ತಂಡದೊಂದಿಗೆ ಇಲಾಖಾ ಯೂನಿಫಾರಂ ಧರಿಸಿಕೊಂಡು ಪುಟ್ಟ ಹುಡುಗ ಬಾಪ್ಸಿ ಜೀಪು ಹತ್ತಿ ಸೈರನ್ ಹಾಕಿಕೊಂಡು ಸಂಭ್ರಮ ಪಡುತ್ತಾನೆ. ಜೊತೆಗೆ ತನ್ನ ಅಪ್ಪ ಅಮ್ಮನೊಂದಿಗೆ  ಡಿಸ್ನಿಲ್ಯಾಂಡ್ ಬೃಹತ್ ಬಲೂನ್ ನಲ್ಲಿ ಆಗಸದೆತ್ತರಕ್ಕೆ ಹಾರುತ್ತಾನೆ. ತನ್ನ ಬದುಕಿನ ಅತ್ಯಂತ ಖುಷಿಯ ಕ್ಷಣಗಳನ್ನು ಬಾಪ್ಪಿ ತಾನು ಸಾಯುವ ಮುನ್ನ ಕೆಲವೇ ದಿನಗಳ ಮೊದಲು ಅನುಭವಿಸುತ್ತಾನೆ.

ಆಸೆಯ ನೆರವೇರಿಕೆ ನಿರಂತರ : ಮೇಕ್ ಎ ವಿಶ್ ಇಂದು ಪ್ರತಿ 34 ನಾಲ್ಕು ನಿಮಿಷಗಳಿಗೆ ಒಂದು ಮಗುವಿನ ಆಸೆಯನ್ನು ನೆರವೇರಿಸುತ್ತಾ ಇದೆ. ಸ್ಥಾಪನೆ ಆದ ದಿನದಿಂದ ಇವತ್ತಿನವರೆಗೆ ಸುಮಾರು 3 ಲಕ್ಷಕ್ಕೂ ಅಧಿಕ ಮಕ್ಕಳು ಅಮೇರಿಕಾ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶದಿಂದ 16 ಸಾವಿರಕ್ಕೂ ಅಧಿಕ ಆಸೆಗಳನ್ನು ಪೂರ್ತಿಗೊಳಿಸಿದೆ. 3 ರಿಂದ 18 ವರ್ಷದೊಳಗಿನ ಗಂಭೀರವಾಗಿ ಅನಾರೋಗ್ಯ ಪೀಡಿತರಾಗಿರುವ ಮಕ್ಕಳ ಆಸೆಗಳನ್ನು ಮೇಕ್ ಎ ವಿಶ್ ಸಂಸ್ಥೆ ಪೂರ್ತಿಗೊಳಿಸುತ್ತದೆ.

ಮೇಕ್ ಎ ವಿಶ್ ಪೌಂಡೇಷನ್ ಕಾರ್ಯಕ್ಕೆ ನೂರಾರು ಬಗೆಯಲ್ಲಿ ಸೆಲೆಬ್ರೆಟಿಗಳು, ಗಣ್ಯರೆಲ್ಲಾ ಜೊತೆಗೂಡಿ ಕೈ ಜೋಡಿಸಿದ್ದಾರೆ. ಅಮೇರಿಕಾದ ಖ್ಯಾತ ಕುಸ್ತಿಪಟು ಡಬ್ಲ್ಯು ಡಬ್ಲ್ಯುಇ ಖ್ಯಾತಿಯ ಜಾನ್ ಸೀನ ಮೇಕ್ ಎ ವಿಶ್ ಪೌಂಡೇಷನ್ ಜೊತೆ 580 ಕ್ಕೂ ಹೆಚ್ಚು ಮಕ್ಕಳ ಆಸೆಯನ್ನು ನೆರವೇರಿಸಿದ್ದಾರೆ. ಹಾಲಿವುಡ್ ನಟ –ನಟಿಯರು ಖ್ಯಾತ ಪಾಪ್ ಗಾಯಕರು,ಕಾರ್ಟೂನ್ ಸಂಸ್ಥೆ, ಪ್ರಖ್ಯಾತ  ಚಲನಚಿತ್ರದ  ಪಾತ್ರ ಎಲ್ಲವೂ ಮೇಕ್ ಎ ವಿಶ್ ಪೌಂಡೇಷನ್ ಅಡಿಯಲ್ಲಿ ಕೈ ಜೋಡಿಸಿದ್ದಾರೆ.

ಮೇಕ್ ವಿಶ್ ಸಂಸ್ಥೆ ಇಂದು 50 ಕ್ಕೂ ಹೆಚ್ಚಿನ ದೇಶಗಳಲ್ಲಿ ಖುಷಿಯನ್ನು ಪೂರ್ತಿಗೊಳಿಸುವ ಕಾರ್ಯವನ್ನು ಮಾಡುತ್ತಿದೆ.

ಭಾರತದಲ್ಲಿ ಮೇಕ್ ವಿಶ್ :

ಮೇಕ್ ವಿಶ್  ಭಾರತದಲ್ಲೂ ಇಂದು ತನ್ನ ಕಚೇರಿಯನ್ನು ಹೊಂದಿದೆ. ಭಾರತದಲ್ಲಿ ಇದನ್ನು ಸ್ಥಾಪಿಸಿದವರು ಉದಯ್ ಜೋಷಿ ಹಾಗೂ ಗೀತಾ ಜೋಷಿ ದಂಪತಿ. ತನ್ನ ಸ್ವಂತ ಅನುಭವ ಇವರನ್ನು ಈ ಸಂಸ್ಥೆಯನ್ನು ಭಾರತದಲ್ಲಿ ಸ್ಥಾಪಿಸಲು ಪ್ರೇರೆಪಿಸಿತು.

ಗೀತಾ ದಂಪತಿಯ 10 ವರ್ಷದ ಮಗ ಗಾಂಧರ್ ಮೂಳೆ ಸಂಬಂಧಿತ ಕಾಯಿಲೆಯಿಂದ ಬಳತ್ತಿರುವಾಗ ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ಅಮೇರಿಕಾದ ಖಾಸಗಿ ಆಸ್ಪತ್ರೆಯ ಚಿಕಿತ್ಸಾ ಕ್ರಮ ಅಗತ್ಯವಾಗಿರುತ್ತದೆ. ಆದರೆ ಗಾಂಧರ್ ತನಗೆ ಅಮೇರಿಕಾದಲ್ಲಿ ಡಿಸ್ನಿ ಲ್ಯಾಂಡ್ ಗೆ ಕರೆದುಕೊಂಡು ಹೋದರೆ ಮಾತ್ರ ತಾನು ಬರುತ್ತೇನೆ ಅನ್ನುತ್ತಾನೆ. ಇದನ್ನು ಒಪ್ಪಿದ ಪೋಷಕರು ಆತನನ್ನು ಅಮೇರಿಕಾದ ಆಸ್ಪತ್ರೆಯಲ್ಲಿ ದುಬಾರಿ ಚಿಕಿತ್ಸೆ ನೀಡುತ್ತಾರೆ. ಆರು ದಿನದ ನಂತರ ಮೇಕ್ ಎ ಪೌಂಡೇಷನ್ ತಂಡ ಗಾಂಧರ್ ನನ್ನು ಡಿಸ್ನಿ ಲ್ಯಾಂಡ್ ಪಯಣವನ್ನು ಮಾಡಿಸುತ್ತಾರೆ.ಕೆಲವು ದಿನಗಳ ನಂತರ ಗಾಂಧರ್ ಸಾವನೂಪ್ಪುತ್ತಾನೆ.

ಗೀತಾ ಹಾಗೂ ಅವರ ಗಂಡ ಉದಯ್ ಭಾರತದಲ್ಲಿ ಮೇಕ್ ಎ ವಿಶ್ ಸಂಸ್ಥೆಯನ್ನು ಸ್ಥಾಪಿಸಲು ಹೊರಡುತ್ತಾರೆ. 1996 ರಲ್ಲಿ ಅಧಿಕೃತವಾಗಿ ಮೇಕ್ ಎ ವಿಶ್ ಭಾರತದಲ್ಲಿ ಅಸ್ತಿತ್ವಕ್ಕೆ ಬರುತ್ತದೆ.

ಸಾಯುವ ಮುನ್ನ ಕಣ್ತುಂಬ ಸಂತೋಷ ಕಂಡಳು :  ಜಾಹ್ನವಿ  ಕಾರ್ಕೇರಿ ಎನ್ನುವ 8 ವರ್ಷದ ಬಾಲಕಿ ಹೊಟ್ಟೆಯ ಕ್ಯಾನ್ಸರ್ ನಿಂದ ಬಳಲುತ್ತಿರುತ್ತಾಳೆ. ಅವಳು ಬದುಕುವುದು ಅನುಮಾನ ಎಂದು ವೈಧ್ಯರು ಜಾಹನ್ನಿ ತಾಯಿಯಲ್ಲಿ ಹೇಳಿರುತ್ತಾರೆ.ಜಾಹ್ನವಿಗೆ ಗೊಂಬೆ ಗಳಂದ್ರೆ ಪ್ರಿಯ. ತನ್ನ ತಾಯಿಯ ಬಳಿ ತನಗೆ ತುಂಬಾ ಬಾರ್ಬಿ ಗೊಂಬೆಗಳು ಬೇಕೆಂದು ಹೇಳುತ್ತಾಳೆ. ಮೇಕ್ ಎ ವಿಶ್ ಸಂಸ್ಥೆ ಜಾಹ್ನವಿಯ ಈ ಆಸೆಯನ್ನು ಪೂರ್ತಿಗೊಳಿಸುತ್ತದೆ. ಜಾಹ್ನಿವಿಗೆ ಬಾರ್ಬಿ ಗೊಂಬೆಗಳನ್ನು ಉಡುಗೊರೆಯಾಗಿ ನೀಡುತ್ತದೆ. ಬಾರ್ಬಿ ಗೊಂಬೆಗಳೊಂದಿಗೆ ಆಡುತ್ತಾ ಆಡುತ್ತಾ ತನ್ನ ಅಂತಿಮ ಕ್ಷಣಗಳನ್ನು ಜಾಹ್ನವಿ ಖುಷಿಯಿಂದಲೇ ಕಳೆಯುತ್ತಾಳೆ.

ಎಂಟು ವರ್ಷದ ಬಾಲಕ ಪೊಲೀಸ್ ಕಮೀಷನರ್ ಆದ.! : ಹೈದರಬಾದ್ ನ ಎಂಟು ವರ್ಷದ ರೂಪ್ ಅರೋನಾ ಸಣ್ಣ ವಯಸ್ಸಿನಿಂದಲೇ ಥಲಸ್ಸೆಮಿಯಾ ಅನ್ನುವ ಮಾರಕ ರೋಗದಿಂದ ತತ್ತರಿಸುತ್ತಿರುತ್ತಾನೆ. ರೂಪ್ ಹೆಚ್ಚು ದಿನ ಬದುಕಲ್ಲ ಅನ್ನುವ ಸತ್ಯ ಎಲ್ಲರಿಗೂ ತಿಳಿದಿರುತ್ತದೆ. ರೂಪ್ ತಾನು ಪೊಲೀಸ್ ಕಮೀಷನರ್ ಆಗಬೇಕೆಂಬ ಕನಸು ಹೊಂದಿರುತ್ತಾನೆ. ಮೇಕ್ ವಿಶ್ ಪೌಂಡೇಷನ್ ಸಂಯೋಗದಲ್ಲಿ ಹೈದಾರಬಾದ್ ಪೊಲೀಸ್ ಇಲಾಖೆ ರೂಪ್ ಆಸೆಗೆ ರೆಕ್ಕೆ ಆಗುತ್ತಾರೆ. ರೂಪ್ ನ ಗಾತ್ರಕ್ಕೆ ತಕ್ಕ ಪೊಲೀಸ್ ಯೂನಿಫಾರಂ ಹೊಲಿಸಿ ರೂಪ್ ಒಂದು ದಿನದ ಮಟ್ಟಿಗೆ ಪೊಲೀಸ್ ಕಮೀಷನರ್ ಆಗಿ ಎಲ್ಲಾ ಗೌರವನ್ನು ಪಡೆದುಕೊಳ್ಳುತ್ತಾನೆ.

ಭಾರತದಲ್ಲೂ ಮೇಕ್ ವಿಶ್ ಸಂಸ್ಥಯ ಜಿತೆ ಹಲವಾರು ಗಣ್ಯರು ಕೈ ಜೋಡಿಸಿದ್ದಾರೆ. ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಸೇರಿದಂತೆ ಸಿನಿಮಾ ತಾರೆಯರು ಸಹ ಜೊತೆಯಾಗಿ ಮಕ್ಕಳ ನಗುವಿನಲ್ಲಿ ಲೀನರಾಗಿದ್ದಾರೆ. ಭಾರತದಲ್ಲಿ ಅಹಮದಬಾದ್, ಬೆಂಗಳೂರು, ಚೆನ್ನೈ, ಹೈದರಬಾದ್ ಮುಂಬಯಿ ಸೇರಿದಂತೆ ಒಟ್ಟು 8 ರಾಜ್ಯಗಳಲ್ಲಿ 11 ವಿಭಾಗಗಳನ್ನು ಹೊಂದಿದೆ. ಇದುವರೆಗೆ ಭಾರತದಲ್ಲಿ ಮೇಕ್ ಎ ವಿಶ್  50 ಸಾವಿರಕ್ಕೂ ಹೆಚ್ಚು ವಿಶ್ ಗಳನ್ನು ಪೂರ್ತಿಗೊಳಿಸಿದೆ.

ಇತ್ತೀಚಿಗೆ ಮೊನ್ನೆ ಬೆಂಗಳೂರಲ್ಲಿ ಐದು ಜನ ಅನಾರೋಗ್ಯ ಪೀಡಿತ ಮಕ್ಕಳ ಆಸೆಯಂತೆ ಒಂದು ದಿನದ ಮಟ್ಟಿಗೆ ಪೊಲೀಸ್ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುವ ಆಸೆಯನ್ನು ಮೇಕ್ ಎ ವಿಶ್ ಪೂರ್ತಿ ಗೊಳಿಸಿತ್ತು.

 

ಸುಹಾನ್ ಶೇಕ್

Advertisement

Udayavani is now on Telegram. Click here to join our channel and stay updated with the latest news.

Next